ಬೆಳಗಾವಿ: ಪೊಲೀಸರಿಗೆ ಇಂಥಾ ದೈನೇಸಿ ಸ್ಥಿತಿ ಬಂತಾ ರಾಜ್ಯದಲ್ಲಿ..? ಬೆಳಗಾವಿ ಜಿಲ್ಲೆಯ ಕಿತ್ತೂರಿನ ಈ ಖಾಕಿಗಳ ವರ್ತನೆ ನೋಡಿದ್ರೆ ಈ ಪ್ರಶ್ನೆ ಸಹಜವಾಗೇ ಹುಟ್ಟತ್ತೆ. ಈ ಖಾಕಿಗಳಿಗೆ ಕನಿಷ್ಟ ಪಕ್ಷ ತಮ್ಮ ಮೈಮೇಲಿನ ಪವಿತ್ರ ಯೂನಿಫಾರ್ಮ ಬಗ್ಗೆನೂ ಖಬರು ಇಲ್ವಾ..? ಥೂ ಇವ್ರ ಜನ್ಮಕ್ಕಿಷ್ಟು.. ಹೀಗೇಲ್ಲ ಛೀ.. ಥೂ ಅಂತಿದ್ದಾರೆ ಜನ. ಯಾಕಂದ್ರೆ, ಅದ್ಯಾವನೋ ರಾಜಕಾರಣಿಯ ಹುಟ್ಟು ಹಬ್ಬ ಅಂದ್ರೆ ಈ ಪೊಲೀಸರೇಲ್ಲ ಹೂ ಮಳೆ ಸುರಿಸ್ತಿದಾರೆ.
ಹೌದು, ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು ಶಾಸಕರನ್ನು ಹಾಗೂ ಅವರ ಪತ್ನಿಯನ್ನು ರಾಜ-ರಾಣಿಯಂತೆ ಕೂರಿಸಿ ಅವರ ಮೇಲೆ ಹೂಮಳೆಗರೆದ ಘಟನೆ ಇನ್ನಿಲ್ಲದ ವಿವಾದಕ್ಕೆ ಕಾರಣವಾಗಿದೆ.
ಆಗಿದ್ದಿಷ್ಟು..!
ಶಾಸಕ ಮಹಾಂತೇಶ್ ದೊಡ್ಡಗೌಡರ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿದ್ದ ಬೈಲಹೊಂಗಲ ಡಿಎಸ್ ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಪೊಲೀಸ್ ಠಾಣೆ ಪಿಎಸ್ ಐ ಶೀಗಿಹಳ್ಳಿ, ಎಸ್ಐ ವಿಶ್ವನಾಥ್ ಮಲ್ಲಣ್ಣವರ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಾಸಕರು ಹಾಗೂ ಅವರ ಪತ್ನಿಯನ್ನು ಕೂರಿಸಿ ಇಬ್ಬರ ಮೇಲೆ ಹೂವಿನ ಮಳೆಗರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಶಾಸಕರ ಹಾಗೂ ಪೊಲೀಸ್ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖೆ ನಿಯಮದ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಘಟನೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.