12 ಯುವಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿ ಮಾಜಿ ಪೊಲೀಸಪ್ಪ ಅಂದರ್..!

ಮುಂಡಗೋಡ: ಪೊಲೀಸ್ ಇಲಾಖೆಯಲ್ಲಿ ನೌಕರಿ ಕೊಡಿಸ್ತಿನಿ ಅಂತಾ ನಂಬಿಸಿ, 12 ಜನ ಯುವಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿಯನ್ನ ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಷರಶಃ ಭೂಗತನಾಗಿ ತಲೆಮರೆಸಿಕೊಂಡಿದ್ದ ಬಂಧಿತ, ವಂಚನೆಯ ಆರೋಪಿ ಸಂತೋಷ ಗುದಗಿಯನ್ನು ಮುಂಡಗೋಡ ಪೊಲೀಸರು ಬಂಧಿಸಿ ಇನ್ನೇನು ಸಂಜೆಯಷ್ಟೊತ್ತಿಗೆ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಇನ್ನು ಈ ವಂಚಕ ಆರೋಪಿಯನ್ನ ಮುಂಡಗೋಡ ಪೊಲೀಸರು ಬಂಧಿಸಿದ್ದೇ ರೋಚಕ ಕಣ್ರಿ..

ನಿನ್ನೆಯ ಕತೆ ಮುಂದುವರಿದ ಭಾಗ..!
ಅದು ಕಳೆದ ಮಂಗಳವಾರ, ಮುಂಡಗೋಡ ಪೊಲೀಸರು, ವಂಚನೆಗೊಳಗಾದ ಯುವಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಎಳೆದು ತರೋಕೆ ಅಂತಾ ಆತನ ಊರು ಬ್ಯಾಡಗಿಗೆ ಹೋಗ್ತಾರೆ. ಅಲ್ಲಿ, ಆತನ ಪತ್ನಿ ಅರಿಯದೇ ನೀಡಿದ ಸಣ್ಣದೊಂದು ಸುಳಿವಿನ ಮೂಲಕ, ಬೆಳಗಾವಿಯ KLE ಅಂಗಳಕ್ಕೆ ಬಂದು ನಿಲ್ತಾರೆ ನಮ್ಮ ಪೊಲೀಸರು. ಬೆಳಗಾವಿಯ ಅದೊಂದು ವಿಶ್ರಾಂತಿ ಗೃಹದಲ್ಲಿ ವಂಚನೆಯ ಆರೋಪಿ ಸಂತೋಷನ ಎದುರು ಮುಂಡಗೋಡ ಪೊಲೀಸರು ನಿಂತಾಗ ಸುಖದ ನಿದ್ದೆಯಲ್ಲಿದ್ದ. ಹೀಗಾಗಿ, ಅಲ್ಲಿ ಏನು ನಡಿತಿದೆ ಅಂತಾನೇ ಅವನಿಗೆ ಗೊತ್ತಾಗುವಷ್ಟರಲ್ಲಿ ಆತ ಖಾಕಿಗಳ ಖೆಡ್ಡಾದಲ್ಲಿ ಅಕ್ಷರಶಃ ಬಕಬೊರಲು ಬಿದ್ದಿದ್ದ. ಅಲ್ಲಿಂದ, ಎತ್ತಾಕೊಂಡು ಬಂದ ಮುಂಡಗೋಡ ಪೊಲೀಸರು, ತಮ್ಮ ಪೊಲೀಸ್ ಭಾಷೆಯಲ್ಲೇ ವಿಚಾರಿಸಿದ್ದಾರೆ. ತನಿಖೆ ಇನ್ನೂ ಚಾಲ್ತಿಯಲ್ಲಿದೆ.

ಡ್ರಾಮಾ ಮಾಡ್ತಾನೆ..!
ಇನ್ನು, ಬೆಳಗಾವಿಯಿಂದ ಎತ್ತಾಕೊಂಡು ಬಂದ ಆರೋಪಿಯನ್ನ ಮುಂಡಗೋಡ ಪೊಲೀಸ್ರು ಇವತ್ತು ಕೋರ್ಟ್ ಗೆ ಹಾಜರು ಪಡಿಸ್ತಿದ್ದಾರೆ. ಈ ನಡುವೆ, ಬಂಧಿತನಾಗಿರೋ ವಂಚನೆಯ ಆರೋಪಿ, ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಥರಹೇವಾರಿ ಡ್ರಾಮಾ ಮಾಡೋಕೆ ಶುರು ಮಾಡಿದ್ದಾನೆ. ನಂಗೆ ಹಾರ್ಟ್ ಆಪರೇಶನ್ ಆಗಿದೆ ಅಂತಾ ಹೇಳಿದ್ದಾನೆ. ಹೀಗಾಗಿ ಅದರ ದಾಖಲೆಗಳು ನಮ್ಮ ಊರಲ್ಲಿವೆ. ನನ್ನ ಹೆಂಡತಿ ಜೊತೆ ನಾನು ಮಾತಾಡಬೇಕು ಪೋನ್ ಕೊಡಿ ಅಂತಾ ಕೇಳಿದ್ದಾನೆ. ಹೀಗಾಗಿ, ಪೊಲೀಸರು ಪೋನ್ ಕೊಟ್ಟಾಗ ಆತ ತಾನು ಅರೆಸ್ಟ್ ಆಗಿರೋ ವಿಷಯ ಮನೆಗೆ ಮುಟ್ಟಿಸಿದ್ದಾನೆ.

ಅಲರ್ಟ್ ಆಯ್ತು ಆತನ “ರಕ್ಷಕ” ಟೀಂ..!
ಅಸಲು, ಆತನ ಆಪರೇಶನ್ ಆಗಿದೆಯೋ ಇಲ್ವೋ ಗೊತ್ತಿಲ್ಲ‌. ಈ ಹಿಂದೆ ಬೈಕ್ ಮೇಲಿಂದ ಬಿದ್ದು ಕೈಗೆ ಪೆಟ್ಟಾಗಿತ್ತು. ಆ ನಂತರದಲ್ಲಿ ಅದ್ಯಾವಾಗ ಹಾರ್ಟ್ ಸಮಸ್ಯೆ ಆಯ್ತೋ ಏನೋ ಗೊತ್ತಿಲ್ಲವಂತೆ. ಹಾಗಂತ ಹೇಳ್ತಿವೆ ಆತನ ಖಾಸಾಗಳು. ಅದು ಬೇರೆ ಮಾತು. ಆದ್ರೆ, ಅ ಹಾಗೆ ಪೊಲೀಸರ ಪೋನ್ ಮೂಲಕ ತಾನು ಆರೆಸ್ಟ್ ಆಗಿರೋ ಸುದ್ದಿಯನ್ನ ಮನೆಗೆ ಮುಟ್ಟಿಸಿದ ಈತ, ಬ್ಯಾಡಗಿಯಲ್ಲಿರೋ ಆತನ ಕೆಲವು ಪ್ರಭಾವಿ ಗೆಳೆಯರಿಗೆ ಸೂಕ್ಷ್ಮ ಸಂದೇಶ ಕಳಿಸಿದ್ದಾನೆ. ಅಷ್ಟೇ ತಡ, ಬ್ಯಾಡಗಿಯಲ್ಲಿ, ಈತನ ಪರವಾಗಿ ಅದೋಂದು ಟೀಂ ಹೇಗಾದ್ರೂ ಮಾಡಿ ಬಚಾವ್ ಮಾಡಲೇ ಬೇಕು ಅಂತಾ ಓಡಾಡ್ತಿದೆ.

ವಶಕ್ಕೆ ಪಡೆದ ದಿನ ಹೇಗಾದ್ರೂ ಸರಿ ಪೊಲೀಸರನ್ನೇ ಬುಟ್ಟಿಗೆ ಹಾಕಿಕೊಳ್ಳೊ ಪ್ಲಾನ್ ಮಾಡ್ತಾರೆ. ಅದಕ್ಕಾಗಿ, ಓರ್ವ ಕಾಂಗ್ರೆಸ್ ಲೀಡರ್ ಮೂಲಕ ಪ್ರಭಾವ ಬೀರಿಸೋ ಕೆಲಸ ಮಾಡಲು ಎಲ್ಲಾ ತಯಾರಿನೂ ಆಗಿರತ್ತೆ.
ಆದ್ರೆ, ನಮ್ಮ ಮುಂಡಗೋಡಿನ ಖಡಕ್ ಪಿಐ ಪ್ರಭುಗೌಡ ಮತ್ತವರ ತಂಡದ ಎದುರು ಅದೇಲ್ಲ ನಡಿಯಲ್ಲ ಅನ್ನೊ ಸುಳಿವು ಸಿಕ್ಕ ಕೂಡಲೇ ಅವ್ರು ಅಲ್ಲೇ ಗಪ್ ಚುಪ್ ಆಗ್ತಾರೆ. ಆ ವಿಷಯ ನಮ್ಮ ಪೊಲೀಸರ ಎದುರು ಬರೋದೇ ಇಲ್ಲ. ಹೀಗಾಗಿ, ಸಧ್ಯ ಮುಂಡಗೋಡ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಉತ್ತರ ಕನ್ನಡ SP ಪ್ರಕಾಶ್ ದೇವರಾಜು ಮಾರ್ಗದರ್ಶನದಲ್ಲಿ ಮುಂಡಗೋಡಿನ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯವೇ ಸರಿ. ಅಂದಹಾಗೆ, ಈತನಿಂದ ವಂಚನೆಗೊಳದವರು ಇನ್ನೂ ಯಾರಾದ್ರೂ ಇದ್ರೆ, ತಕ್ಷಣವೇ ಬಂದು ಪೊಲೀಸರಲ್ಲಿ ದೂರು ನೀಡಲು ಎಸ್ಪಿ ಮನವಿ ಮಾಡಿದ್ದಾರೆ.

 

error: Content is protected !!