ಮುಂಡಗೋಡ: ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಸದ್ಯ ಟಿಕೆಟ್ ಪೈಪೋಟಿ ತಾರ್ಕಿಕ ಅಂತ್ಯಕ್ಕೆ ಬಂದಾಯ್ತಾ..? ಇಂತಹದ್ದೊಂದು ಪ್ರಶ್ನೆ ಮತ್ತು ಅನುಮಾನ ಸದ್ಯದ ಕೆಲ ಬೆಳವಣಿಗೆಗಳನ್ನು ನೋಡಿದ್ರೆ ಎಂತವರಿಗೂ ಅನಿಸದೇ ಇರಲ್ಲ. ಯಾಕಂದ್ರೆ, ಮೊದ ಮೊದಲು ಮೂವರ ನಡುವೆ ಟಿಕೆಟ್ ಗುದ್ದಾಟ ಇತ್ತು. ಅದ್ರಲ್ಲಿ, ಕೆಂಜೋಡಿ ಗಲಬಿ, ಸಿದ್ದು ಹಡಪದ ಹಾಗೂ ರವಿಗೌಡ ಪಾಟೀಲರ ನಡುವೆ ಟಿಕೆಟ್ ಫೈಟ್ ನಡೆದಿತ್ತು, ಆ ನಂತರದಲ್ಲಿ ಬಸನೂ ನಡುವಿನಮನಿ ಅನ್ನೊ ಯುವಕ ನಾನೂ ಒಂದು ಕೈ ನೋಡೇ ಬಿಡ್ತಿನಿ ಅಂತಾ ಬಿಜೆಪಿಯ ಟಿಕೆಟ್ ಕಣದಲ್ಲಿ ಸೆಡ್ಡು ಹೊಡೆದು ಬಿಟ್ಟರು. ಅವಾಗಲೇ ಇಂದೂರು ಕ್ಷೇತ್ರದ ಕಣ ರೋಚಕತೆಯ ಘಟ್ಟಕ್ಕೆ ಬಂದು ನಿಂತಿತ್ತು. ಆದ್ರೆ, ಇವತ್ತಿನ ಮತ್ತೊಂದು ಆಕಾಂಕ್ಷಿಯ ಸೇರ್ಪಡೆ ನಿಜಕ್ಕೂ ಕ್ಷೇತ್ರದಲ್ಲಿ ಸಂಚಲನ ತರುವಂತಿದೆ.
ಗಟ್ಟಿ ನಿರ್ಧಾರ..!
ಕಾಂಗ್ರೆಸ್ ನಿಂದ “ಜಂಪಿಂಗ್” ಮಾಡಿ ಬಿಜೆಪಿಯ ಕಮಲ ಮುಡಿದಿದ್ದ ಎಲ್ಟಿ ಪಾಟೀಲರಿಗೆ ಬಹುಶಃ ನಸೀಬು ನೆಟ್ಟಗಿರಲಿಲ್ಲವೇನೋ. ಯಾಕಂದ್ರೆ, ಬದಲಾದ ರಾಜಕೀಯ ಸನ್ನಿವೇಶಗಳ ಸುಳಿಗೆ ಸಿಕ್ಕು ವಿಲ ವಿಲ ಒದ್ದಾಡಿರೋ ಪಾಟೀಲರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೀಗಾಗಿನೇ ಒಂದಿಷ್ಟು ಗಟ್ಟಿ ನಿರ್ಧಾರಗಳ ಬೆನ್ನತ್ತಿದ್ದಾರೆ ಪಾಟೀಲ್ರು.
ಎಮ್ಮೆಲ್ಸಿಯಾಗೋ ಗುರಿ..?
ನಿಜ ಅಂದ್ರೆ, ಪಾಟೀಲರ ಪರಮ ಗುರಿ ಇರೋದು ಎಮ್ಮೆಲ್ಸಿ ಖುರ್ಚಿಯ ಮೇಲೆ. ಅದು ಅವ್ರಿಗೆ ಈಗ ಅನಿವಾರ್ಯವೂ ಹೌದು. ಯಾಕಂದ್ರೆ, ಎಲ್ಟಿ ಪಾಟೀಲರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇ ಶಾಸಕನಾಗೋ ಮಹದಾಸೆಯಿಂದ. ಆದ್ರೆ, ಅದು ಬದಲಾದ ರಾಜಕೀಯ ಸನ್ನಿವೇಶಗಳಿಂದ ಆ ಆಸೆಗೆ ತಣ್ಣೀರು ಬಿದ್ದಂತಾಗಿದೆ. ಹೀಗಾಗಿ, ಅವ್ರಿಗೆ ಈಗ ಉಳಿದಿರೋ ಏಕೈಕ ದಾರಿ ಅಂದ್ರೆ ಅದು ಎಮ್ಮೆಲ್ಸಿ ಸ್ಥಾನ. ಈಗಾಗಲೇ, ಎಲ್ಟಿ ಪಾಟೀಲರು ನಂಗೆ ಈ ಬಾರಿ ಎಮ್ಮೆಲ್ಸಿ ಮಾಡಲೇಬೇಕು ಅಂತಾ ಸಂಬಂಧಪಟ್ಟವರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪಕ್ಷದ ಅಷ್ಟೂ ಶಾಸಕರನ್ನೂ ಸಂಪರ್ಕಿಸಿದ್ದಾರೆ. ಆದ್ರೆ, ಅಲ್ಲೂ ಕೂಡ ಅವ್ರಿಗೆ ಅಂತಹದ್ದೊಂದು ಗಟ್ಟಿ ಭರವಸೆ ಸಿಗುತ್ತಲೇ ಇಲ್ಲ. ಯಾಕಂದ್ರೆ, ಅದೇ ಎಮ್ಮೆಲ್ಸಿ ಸ್ಥಾನಕ್ಕೆ ಮಾಜಿ ಶಾಸಕ ವಿ.ಎಸ್.ಪಾಟೀಲರನ್ನು ಸೆಟ್ ಮಾಡಲು ಈಗಾಗಲೇ ರಾಜ್ಯ ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಅದರ ಭಾಗವಾಗೇ ಸದ್ಯ ಕಳೆದ ಮೂರು ದಿನದಿಂದ ವಿ.ಎಸ್.ಪಾಟೀಲರು ಬೆಂಗಳೂರಿನ ಶಾಸಕರ ಭವನದಲ್ಲಿ ಬೀಡು ಬಿಟ್ಟಿದ್ದಾರೆ.
ಹೈಕಮಾಂಡ್ ಲೆಕ್ಕಾಚಾರ..!
ನಿಜ, ಕಳೆದ ಮೂರು ದಿನಗಳ ಹಿಂದೆ ಮಾಜಿ ಶಾಸಕ ವಿ.ಎಸ್.ಪಾಟೀಲರನ್ನು ಬೆಂಗಳೂರಿಗೆ ಕರೆಸಿಕೊಂಡಿದೆ ರಾಜ್ಯ ಬಿಜೆಪಿ. ಹೇಗಾದ್ರೂ ಮಾಡಿ ವಿಎಸ್ ಪಾಟೀಲರಿಗೆ ಎಮ್ಮೆಲ್ಸಿ ಮಾಡಿ ಮುಂಬರುವ ಚುನಾವಣೆಗೆ ಹೆಬ್ಬಾರ್ ಸಾಹೇಬ್ರ ಹಾದಿ ಸುಗಮಗೊಳಿಸುವ ಪ್ಲಾನ್ ಹಾಕಲಾಗಿದೆ. ಅದು ಹೆಬ್ಬಾರ್ ಸಾಹೇಬ್ರ ರಣತಂತ್ರವೂ ಹೌದು. ಅದ್ರೆ, ಮೌನಿಯಾಗಿದ್ರೂ ಚಾಣಾಕ್ಷ ರಾಜಕಾರಣಿಯಾಗಿರೋ ವಿ.ಎಸ್.ಪಾಟೀಲರು ಎಮ್ಮೆಲ್ಸಿ ಸ್ಥಾನ ಒಪ್ಕೊತಾರಾ..? ಒಟ್ನಲ್ಲಿ ಒಪ್ಪಿಸೋ ಹಕೀಕತ್ತುಗಳು ಮಾತ್ರ ಚಾಲ್ತಿಯಲ್ಲಿವೆ. ಹಾಗೊಂದುವೇಳೆ, ವಿ.ಎಸ್.ಪಾಟೀಲರು ಎಮ್ಮೆಲ್ಸಿ ಸ್ಥಾನ ನಂಗೆ ಬೇಡವೇ ಬೇಡ ಅಂತಾ ಕಡ್ಡಿ ಮುರಿದು ಬಿಟ್ರೆ ಮುಗೀತು, ಅದರ ಲಾಭ ಪಡಿಯೋಕೆ ಎಲ್ಟಿ ಪಾಟೀಲರು ಜಾತಕ ಪಕ್ಷಿಯಂತೆ ಕಾಯ್ತಾ ಕುಳಿತಿದ್ದಾರೆ. ಈ ಕಾರಣಕ್ಕಾಗೇ, ಬಹುಶಃ ನಾಳೆ, ಅಥವಾ ನಾಡಿದ್ದು ಅನಂತಣ್ಣನ ಬಳಿ “ಅಣ್ಣಾ ನಂಗೆ ದಾರಿ ತೋರಿಸಿ” ಅಂತಾ ಕೇಳಿ ಬರೋಕೆ ಹೊರಟಿದ್ದಾರಂತೆ ಎಲ್ಟಿ ಪಾಟೀಲರು.
ಇಂದೂರು ಕ್ಷೇತ್ರಕ್ಕೆ ಎಂಟ್ರಿ..?
ಇದೇಲ್ಲದರ ಹೊರತಾಗಿಯೂ, ಇಂದೂರು ಜಿಪಂ ಕ್ಷೇತ್ರಕ್ಕೆ ಎಲ್ಟಿ ಪಾಟೀಲ್ ಎಂಟ್ರಿ ಕೊಡ್ತಿದಾರಂತೆ. ಹಾಗಂತ ನಾವು ಹೇಳ್ತಿಲ್ಲ, ಖುದ್ದು ಪಾಟೀಲರ ಪರಮಾಪ್ತ ಬಳಗದಿಂದಲೇ ಇಂತಹದ್ದೊಂದು ಸುದ್ದಿ ಹೊರಬಿದ್ದಿದೆ. ಎಮ್ಮೆಲ್ಸಿ ಸ್ಥಾನದ ಫೈಟ್ ನಲ್ಲಿ ಎಡರು ತೊಡರು ಆದ್ರೆ ಖಂಡಿತವಾಗಿ ಇಂದೂರು ಕ್ಷೇತ್ರಕ್ಕೆ ಎಂಟ್ರಿ ಕೊಡುವ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ ಎಲ್.ಟಿ.ಪಾಟೀಲ್. ಹೇಗಿದ್ರೂ, ಜಿಪಂ ತಾಪಂ ಚುನಾವಣೆ ನಡಿಯೋಕೆ ಇನ್ನೂ ಆರು ತಿಂಗಳ ಟೈಮ್ ಇದೆ. ಅಷ್ಟರೊಳಗಾಗೇ ಎಮ್ಮೆಲ್ಸಿ ಕನಸಿಗೊಂದು ಸ್ಪಷ್ಟತೆ ಸಿಗತ್ತೆ. ಆನಂತರದಲ್ಲಿ ಮುಂದಿನ ತೀರ್ಮಾನ ಮಾಡೋ ಯೋಚನೆಯಲ್ಲಿದ್ದಾರೆ ಎಲ್ಟಿ. ಆ ಬಗ್ಗೆ ಸೂಚ್ಯವಾಗಿ ಸಚಿವ ಹೆಬ್ಬಾರ್ ಗಮನಕ್ಕೂ ತಂದಿದ್ದಾರಂತೆ. ಇಂದೂರು ಕ್ಷೇತ್ರದಲ್ಲಿ ಹೇರಳವಾಗಿರೋ ಮರಾಠಾ ಮತಗಳು ನನ್ನ ಕೈ ಬಿಡಲ್ಲ ಅನ್ನೊ ಗಟ್ಟಿ ನಂಬಿಕೆಯೊಂದಿಗೆ ಅಂತಹ ತೀರ್ಮಾನಕ್ಕೆ ಬಂದಿದ್ದಾರಂತೆ. ಅದು ಅವ್ರಿಗೆ ಅನಿವಾರ್ಯವೂ ಆಗಿದೆ. ಅಂದಹಾಗೆ, ಇದು ಹೆಬ್ಬಾರ್ ಸಾಹೇಬ್ರಿಗೆ ಮತ್ತೊಂದು ತಲೆನೋವಾಗುವ ಎಲ್ಲಾ ಲಕ್ಷಣಗಳೂ ಕಾಣ್ತಿವೆ.
ಇದು ಹಕೀಕತ್ತು..!
ಹಾಗೊಂದು ವೇಳೆ ಎಲ್ಟಿ ಪಾಟೀಲರು ಇಂದೂರು ಜಿಪಂ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿ ಅನ್ನೋ ಅರ್ಜಿ ಹಾಕಿಬಿಟ್ರೆ ಖಂಡಿತ ಟಿಕೆಟ್ ಹಗ್ಗಜಗ್ಗಾಟ ಮತ್ತಷ್ಟು ಜಠಿಲವಾಗೋದ್ರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ, ಬಹುತೇಕ ಈ ಕ್ಷೇತ್ರದಲ್ಲಿ ಗಟ್ಟಿಗೊಂಡಿರೋ ರವಿಗೌಡ ಪಾಟೀಲರು ಕ್ಷೇತ್ರ ಬಿಟ್ಟು ಕೊಡ್ತಾರಾ..? ಟಿಕೆಟ್ ಪೈಟ್ನಲ್ಲಿ ಪ್ರಬಲ ಪೈಪೋಟಿಗೆ ಇಳಿದು ಈಗಾಗಲೇ ಟೊಂಕಕಟ್ಟಿ ನಿಂತಿರೋ ಸಿದ್ದು ಹಡಪದ ಸುಮ್ಮನಾಗ್ತಾರಾ..? ಹೊಸತನದ ಹಂಬಲದಲ್ಲಿರೋ ಬಸನೂ ನಡುವಿನಮನಿ ಸೈಲೆಂಟಾಗ್ತಾರಾ..? ಇವೇಲ್ಲ ಪ್ರಶ್ನೆಗಳು ಸಹಜವಾಗೇ ಕಣದಲ್ಲಿ ಬಿಸಿಗಾಳಿ ಏಳಿಸುತ್ತಿವೆ.
ಹೆಬ್ಬಾರ್ ಚಾಣಾಕ್ಷ ನಡೆ..!
ಅಂದಹಾಗೆ, ಸದ್ಯ ಇಂದೂರು ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಆಗ್ತಿನಿ ಅಂತಾ ನಾಲ್ವರು ಫಿಲ್ಡಿನಲ್ಲಿದ್ದಾರೆ. ಈಗಾಗಲೇ ಈ ಕುರಿತು ಹೆಬ್ಬಾರ್ ಸಾಹೇಬ್ರ ಗಮನ ಸೆಳೆಯಲು ಬಲ ಪ್ರದರ್ಶನಗಳೂ ನಡೆದಿವೆ. ಆದ್ರೆ, ಯಾರೇ ಬಂದು ಅದೇನೇ ತಿಪ್ಪರಲಾಗ ಹಾಕಿದ್ರೂ ಸಚಿವ ಶಿವರಾಮ್ ಹೆಬ್ಬಾರ್ ಮಾತ್ರ “ಜನಾಭಿಪ್ರಾಯ ಸಂಗ್ರಹಿಸಿ ತೀರ್ಮಾನಿಸೋಣ” ಅನ್ನೊ ಜಾಣ್ಮೆಯ ಮಾತು ಹೇಳಿ ಕಳಿಸ್ತಿದಾರೆ. ಯಾಕಂದ್ರೆ ಅಲ್ಲಿ ಆ ಮಾತಿನ ಹಿಂದೆ ಇದ್ದ ಲೆಕ್ಕಾಚಾರವೇ ಬೇರೆಯದ್ದಿದೆ. ಬಹುಶಃ ಈಗ ಆ ಲೆಕ್ಕಾಚಾರ ಎಲ್ರಿಗೂ ಅರ್ಥವಾಗಿದೆ. ಮುಂಡಗೋಡ ತಾಲೂಕಿನಲ್ಲೇ ಹೈ ವೋಲ್ಟೇಜ್ ಕಣವಾಗಿರೋ ಇಂದೂರು ಕ್ಷೇತ್ರಕ್ಕೆ ಆ “ಪ್ರಭಾವಿ” ಯೇ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗೋದು ಬಹುತೇಕ ಪಿಕ್ಸ್ ಆಗಿದೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಅದು ಈಗಲ್ಲ, ಯಾವಾಗ ಜಿಪಂ, ತಾಪಂ ಚುನಾವಣೆ ಇನ್ನೇನು ನಡಿಯತ್ತೆ ಅಂತಾ ಸುದ್ದಿ ಹೊರಬಿತ್ತೋ ಆ ಹೊತ್ತಿನಲ್ಲೇ ಅಂತಹದ್ದೊಂದು ತೀರ್ಮಾನ ಮಾಡಿ ಆಗಿದೆ ಅಂತಾ ಖುದ್ದು ಹೆಬ್ಬಾರ್ ಗರಡಿಯ “ಗಳಸ್ಯ” ಮೂಲಗಳೇ ಹೇಳಿಯಾಗಿದೆ. ಅಂತಹದ್ದೊಂದು ಪಕ್ಕಾ ಜಾಣ್ಮೆಯ ಹೆಜ್ಜೆಯನ್ನು ಖುದ್ದು ಹೆಬ್ಬಾರ್ ಸಾಹೇಬ್ರೇ ಇಟ್ಟು ಆಗಿದೆಯಂತೆ. ಅದು ಕೊನೆ ಕ್ಷಣದಲ್ಲಿ ಒಮ್ಮೆಲೇ “ಘೋಷಣೆ”ಯೊಂದೇ ಬಾಕಿ ಅನ್ನುವ ತೀರ್ಮಾನ ಆಗಲೂಬಹುದು ಅನ್ನೋ ಮಾತಿದೆ. ಆದ್ರೆ ಅದು ಎಷ್ಟು ಸತ್ಯವೋ ಗೊತ್ತಿಲ್ಲ.
ಇದನ್ನೂ ಗಮನಿಸಲೇ ಬೇಕು..!
ಅಂದಹಾಗೆ, ಇನ್ನೇನು ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತಿ ಚುನಾವಣೆ ಕೆಲವೇ ತಿಂಗಳಲ್ಲಿ ಎದುರಾಗುತ್ತೆ ಅನ್ನುವ ಹಾಗಿಲ್ಲ. ಅಸಲು, ರಾಜ್ಯ ಸರ್ಕಾರಕ್ಕೆ ಸದ್ಯ ಜಿಪಂ ತಾಪಂ ಚುನಾವಣೆ ನಡೆಯಲೇಬೇಕು ಅನ್ನೋ ಆಸೆ ಖಂಡಿತ ಇಲ್ಲ. ಯಾಕಂದ್ರೆ, ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಇನ್ನೇನು ಘೋಷಣೆಯಾಗತ್ತೆ. ಆ ಎರಡೂ ಕ್ಷೇತ್ರಗಳ ಉಪಚುನಾವಣೆ ಗೆಲ್ಲಲೇ ಬೇಕಿರೋ ಅನಿವಾರ್ಯತೆ ಖುದ್ದು ಸಿಎಂ ಬಸವರಾಜ್ ಬೊಮ್ಮಾಯಿಗೆ ಇದೆ. ಹೀಗಾಗಿ, ಒಂದು ವೇಳೆ ಉಪಚುನಾವಣೆಗೂ ಮುನ್ನವೇ ಜಿಪಂ ಹಾಗೂ ತಾಪಂ ಚುನಾವಣೆ ಘೋಷಣೆಯಾದ್ರೆ ಖಂಡಿತ ರಾಜ್ಯ ಬಿಜೆಪಿಗೆ ಬಲಿಷ್ಟವಾಗಿ ಎದುರಿಸಿ, ಗೆಲ್ಲುವ ಭರವಸೆಯಿಲ್ಲ. ಸದ್ಯ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿದೆ, ಕಾಂಗ್ರೆಸ್ ನಿದ್ದೆಗೆಟ್ಟು ರಾಜ್ಯಾದ್ಯಂತ ಇನ್ನಿಲ್ಲದಂತೆ ಸಂಘಟನೆಯಲ್ಲಿ ತೊಡಗಿದೆ. ಅಲ್ಲದೇ, ಬಿಜೆಪಿಯೊಳಗಿನ ಆಂತರಿಕ ಬೆಗುದಿ ಖಂಡಿತವಾಗಿ ಆ ಚುನಾವಣೆಗಳ ಮೇಲೆ ಪ್ರಭಾವ ಬೀರೇ ಬೀರತ್ತೆ. ಹೀಗಾಗಿ, ಆ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿಸಿದ ಮಟ್ಟಿಗಿನ ಗೆಲುವು ಖಂಡಿತ ದೊರಕಲಾರದು ಅನ್ನೋ ಲೆಕ್ಕಾಚಾರ ರಾಜಕೀಯ ವಲಯದಲ್ಲಿದೆ.
ಹೀಗಾಗಿನೇ, ಉಪಚುನಾವಣೆ ಮೇಲೆ ಜಿಪಂ ಹಾಗೂ ತಾಪಂ ಚುನಾವಣೆಯ ಗಾಳಿ ಬೀಸಿ ಏರುಪೇರಾದ್ರೆ ಖಂಡಿತ ಅದು ರಾಜ್ಯ ಬಿಜೆಪಿಗೆ, ಅದ್ರಲ್ಲೂ ಸಿಎಂ ಬೊಮ್ಮಾಯಿಗೆ ತೀವ್ರ ಮುಜುಗರಕ್ಕೆ ಕಾರಣವಾಗಬಹುದು. ಹೀಗಾಗಿ, ಮೀಸಲಾತಿ ಹಾಗೂ ಕೋವಿಡ್ ನೆಪದೊಂದಿಗೆ ಕೋರ್ಟ್ ಮೆಟ್ಟಿಲೇರಿ ಹೇಗಾದ್ರೂ ಸರಿ ಚುನಾವಣೆ ಮುಂದೂಡಲು ಒಂದೊಳ್ಳೆ ಪ್ಲಾನ್ ಮಾಡಿಕೊಂಡಿದೆ ಸರ್ಕಾರ.
ಈ ಕಾರಣಕ್ಕಾಗೇ, ಎಲ್ಟಿ ಪಾಟೀಲರಿಗೆ ಪೂರಕವೆನೋ ಎನ್ನುವಂತೆ ಜಿಪಂ ಚುನಾವಣೆಗೆ ಒಂದಿಷ್ಟು ಹೆಚ್ಚಿನ ಟೈಮ್ ಸಿಗೋ ಚಾನ್ಸ್ ಇದೆ. ಹೀಗಾಗಿ, ಹಾಗೆ ಸಿಕ್ಕಿರೋ ಹೆಚ್ಚಿನ ಸಮಯವನ್ನು ಅವ್ರು ನಾಜೂಕಾಗೇ ಬಳಸಿಕೊಳ್ಳೊಕೆ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ., ಈ ಮೂಲಕ ಎಲ್ಟಿ ಪಾಟೀಲರ ರಾಜಕೀಯ ಮತ್ತೊಂದು ಮಗ್ಗಲಿಗೆ ಹೊರಳಿಕೊಳ್ಳುವ ಸ್ಪಷ್ಟ ಸಂದೇಶವಂತೂ ರವಾನೆಯಾಗಿದೆ.