ಮುಂಡಗೋಡ ಬಿಜೆಪಿಯಲ್ಲೀಗ “ಜಂಪಿಂಗ್” ಪರ್ವ ಶುರು..! ಒಳಗೊಳಗೇ ನಡೀತಿದೆ ಭಾರೀ ಮಸಲತ್ತು..!!

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಸ್ಪೋಟಕ ಬದಲಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಆಗೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಕಳಾಹೀನವಾಗಿರೋ “ಕೈ” ಪಾಳಯಕ್ಕೆ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಘಟಾನುಘಟಿಗಳೇ ಹಾರಲು ತುದಿಗಾಲಲ್ಲಿ ನಿಂತಿದ್ದಾರೆ. ಅಂತಹದ್ದೊಂದು ಬಾತ್ಮಿ ಕ್ಷೇತ್ರದ ಬಿಜೆಪಿ ಪಾಲಿಗೆ ಖಂಡಿತ ಪೂರಕವಾಗಿಲ್ಲ. ಬದಲಾಗಿ ಇಲ್ಲಿನ ಬಿಜೆಪಿಗೆ “ಅದೇನೋ ಕಾದಿದೆ” ಅನ್ನೋ ಸ್ಪಷ್ಟ ಸೂಚನೆಗಳು ಕಾಣಸಿಗ್ತಿವೆ.

ಆಂತರಿಕ ಕುದಿ…
ನಿಜ, ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ. ಇಡೀ ಕ್ಷೇತ್ರದಲ್ಲಿ ಆಂತರಿಕ ಬೆಗುದಿ ಅನ್ನೋದು ಬಹುಶಃ ಯಾರೂ ನಿರೀಕ್ಷಿಸದ ಮಟ್ಟಿಗೆ ಕುದಿಯುತ್ತಿದೆ. ಮತ್ತದೇ ಹಳಬರು, ಹೊಸಬರ ನಡುವೆ ಇನ್ನಿಲ್ಲದ ಪೀಕಲಾಟಗಳು ಚಾಲ್ತಿಯಲ್ಲಿವೆ. “ಸದ್ಯ ಬಿಜೆಪಿಯಲ್ಲಿ ಹಳಬರಿಗೆ ಅಷ್ಟಕ್ಕಷ್ಟೇ ರೀ, ನಮಗೇಲ್ಲ ಯಾರೂ ಮಾತಾಡಿಸಲ್ಲ” ಅನ್ನೋ ಕಾಮನ್ ಆಕ್ರೋಶಗಳು ಒಳಗೊಳಗೇ ಬೇಯುತ್ತಿವೆ. ಅದೇಲ್ಲ ಯಾವಾಗ ಸ್ಪೋಟಗೊಳ್ಳತ್ತೋ ಗೊತ್ತಿಲ್ಲ. ಆದ್ರೆ, ಸ್ಪೋಟಗೊಳಿಸಲು ಬೇಕಾದ ಎಲ್ಲಾ ತಯಾರಿ, ಆ ಅತೃಪ್ತರಿಂದ ವ್ಯವಸ್ಥಿತವಾಗೇ ಚಾಲ್ತಿ ಪಡೆದುಕೊಂಡಿದೆ.

ಮುಂಡಗೋಡ ಬಿಜೆಪಿ ತಳಮಳ..
ಹಾಗೆ ನೋಡಿದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಗಟ್ಟಿಯಾಗಿದೆ ಅಂದ್ರೆ ಅದಕ್ಕೆ ಕಾರಣ ಇಲ್ಲಿನ ಕೆಲವು ಗಟ್ಟಿ ನಾಯಕರು. ಅಂತವರೇಲ್ಲ ಹೈಕಮಾಂಡಿನ ಇಶಾರೆಗೆ ತಲೆದೂಗಿ ಯಾವತ್ತೂ ಬಿಜೆಪಿಯ ಕಮಲದ ದಳಗಳಿಗೆ ಕಿಂಚಿತ್ತೂ ಧಕ್ಕೆ ತಂದವರೇ ಅಲ್ಲ. ಬದಲಾಗಿ, ಸಂದರ್ಭ ಬಂದಾಗ ಎಂತದ್ದೇ ತ್ಯಾಗಕ್ಕೂ ಸಿದ್ದರಾಗಿದ್ದವರು. ನೀವೇ ಯೋಚಿಸಿ, ಮುಂಡಗೋಡ ತಾಲೂಕಿನಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿದ ಸಾಕಷ್ಟು ಮೂಲ ಬಿಜೆಪಿಗರು ಇವತ್ತಿಗೂ ಯಾವುದೇ ಅಧಿಕಾರದ ಹತ್ತಿರಕ್ಕೂ ಸುಳಿದಿಲ್ಲ. ಇಲ್ಲಿ, ಸುಳಿದಿಲ್ಲ ಅನ್ನೋದಕ್ಕಿಂತ, ಅಂತವರನ್ನೇಲ್ಲ ಜಸ್ಟ್ ಟೈಮ್ ಬಂದಾಗ ಬಳಸಿಕೊಂಡು ಬೀಸಾಕಲಾಗಿದೆ ಅನ್ನೋ ನೋವು, ಆಕ್ರೋಶ ಕೆಲವ್ರ ಮನಸಲ್ಲಿ ದಿನದಿಂದ ದಿನಕ್ಕೆ ಬೆಗುದಿಯ ಬೆಂಕಿಗೆ ತುಪ್ಪ ಸುರಿತಿದೆ.

ವಿ.ಎಸ್.ಪಾಟೀಲರೂ..ಮತ್ತವರ ಮೌನ..!
ನಿಜ, ಮಾಜಿ ಶಾಸಕ ಸದ್ಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲರಿಗೂ ಬಿಜೆಪಿಯ ಸಹವಾಸ ಸಾಕಾಗಿದೆಯಂತೆ. ಬಹುತೇಕ ಪಕ್ಷದ ದೊಡ್ಡವರ ಇಶಾರೆಗಳಿಗೆ ಬೆಪ್ಪಗೆ ಒಪ್ಪಿಗೆ ನೀಡಿ ಈಗಾಗಲೇ ತಮ್ಮ ಕ್ಷೇತ್ರವನ್ನೇ ತ್ಯಾಗ ಮಾಡಿದ್ದಾರೆ ಪಾಟೀಲರು. ಆದ್ರೆ, ಮುಂದೇನು..? ಅನ್ನೋ ದಿಗಿಲು ಪಾಟೀಲರ ಪಡಸಾಲೆಯಲ್ಲಿ ನಿತ್ಯವೂ ಚರ್ಚೆಯಾಗ್ತಿದೆ.
ವಲಸಿಗರಿಗಾಗಿ ದೊಡ್ಡವರ ಆದೇಶದಂತೆ, ತಮ್ಮ ತಮ್ಮ ಕ್ಷೇತ್ರಗಳನ್ನೇ ತ್ಯಾಗ ಮಾಡಿ ಬಕ್ಕಾ ಬೋಳವಾಗಿ ಕುಳಿತಿರೋ ರಾಜ್ಯದ ಒಟ್ಟೂ ಹದಿನೇಳು ಮಂದಿಗೆ ಇನ್ನೂ ಸಂತೈಸಲಾಗಿಲ್ಲ. ಹಾಗೇ ಮಾಡಿರೋ ತ್ಯಾಗಕ್ಕೆ ರಾಜ್ಯ ಬಿಜೆಪಿಯ ದೊಡ್ಡವರು, ಇದುವರೆಗೂ ಹೇಳಿಕೊಳ್ಳುವ ಮಟ್ಟಿಗೆ ಬೆಲೆ ಕೊಟ್ಟೇ ಇಲ್ಲ. ಹಾಗಾಗಿ, ಆ ಕೊರಗು ಅವ್ರಿಗೇಲ್ಲ ಇನ್ನಿಲ್ಲದಂತೆ ತಳಮಳ ತಂದಿಟ್ಟಿದೆ. ಹೀಗಾಗಿ, ಅವ್ರೇಲ್ಲ ಅನಿವಾರ್ಯವಾಗಿ ತಮ್ಮ ನೆಲೆ ಕಂಡುಕೊಳ್ಳಲೇಬೇಕಾದ ಸಂದಿಗ್ದತೆಗೆ ಸಿಲುಕಿದ್ದಾರೆ. ಅದ್ರಲ್ಲಿ, ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲರೂ ಹೊರತಾಗಿಲ್ಲ‌. ಇನ್ನೇನು ಕೆಲವೇ ದಿನಗಳಲ್ಲಿ ಪಾಟೀಲರು ಅಂತಹದ್ದೊಂದು ತೀರ್ಮಾನ ಕೈಗೊಳ್ಳಲು ರೆಡಿಯಾಗಿರೋ ಮಾಹಿತಿ ಇದೆ‌.

ತಂದೆ ಬಿಜೆಪಿ, ಮಗ ಕಾಂಗ್ರೆಸ್..!
ಬಹುಶಃ, ಮುಂಡಗೋಡ ತಾಲೂಕಿನಲ್ಲಿ ವಿ.ಎಸ್.ಪಾಟೀಲರ ಪ್ರಭಾವ ಮತ್ತು ಚಾರ್ಮು ಅದೇಷ್ಟರ ಮಟ್ಟಿಗೆ ಇನ್ನೂ ಜೀವಂತವಿದೆಯೋ ಗೊತ್ತಿಲ್ಲ. ಆದ್ರೆ ಅವ್ರ ಪುತ್ರ ಬಾಪುಗೌಡ ಪಾಟೀಲ್ ಮಾತ್ರ ಕಾಂಗ್ರೆಸ್ ನಲ್ಲಿ ಬಲಿಷ್ಟವಾಗಿ ಬೆಳಿತೀದಾರೆ. ಆರ್ವಿ ದೇಶಪಾಂಡೆಯವರ ಗರಡಿಯಲ್ಲಿ ರಾಜಕೀಯ ಬಲಿಷ್ಟ ಒಳ ಮಜಲುಗಳನ್ನೇಲ್ಲ ಕರಗತ ಮಾಡಿಕೊಳ್ತಿದಾರೆ. ಹೀಗಿರೋ ಬಾಪುಗೌಡರು, ಈ ಮೊದಲು ತಮ್ಮ ತಂದೆಯ ಜೊತೆ ಒಂದಿಷ್ಟು ಮನಸ್ತಾಪಗೊಂಡು ದೂರ ಉಳಿದಿದ್ದರು. ಆದ್ರೆ ಈಗ ತಂದೆ-ಮಗ ಒಂದಾಗಿದ್ದಾರೆ. ಇದರ ಅರ್ಥ ನೇರವಾಗಿ ವಿ.ಎಸ್.ಪಾಟೀಲರ ಮುಂದಿನ ನಡೆಗಳಲ್ಲಿ ಬಹುತೇಕ ಬಾಪುಗೌಡರೂ ಸಾಥ್ ನೀಡೇ ನಿಡ್ತಾರೆ ಅನ್ನೋದು ಮೇಲ್ನೋಟಕ್ಕೆ ಎಂತವರಿಗೂ ಅರ್ಥವಾಗತ್ತೆ.

“ಕೈ” ಹಿಡಿಯೋದು ಪಕ್ಕಾನಾ..?
ಪಬ್ಲಿಕ ಫಸ್ಟ್ ಗೆ ಸಿಕ್ಕಿರೋ ಪಕ್ಕಾ ಮಾಹಿತಿಯ ಪ್ರಕಾರ, ಮುಂಡಗೋಡ ಬಿಜೆಪಿಯ ಡಜನ್ನುಗಟ್ಟಲೇ ನಾಯಕರು ಈಗಾಗಲೇ ಕಾಂಗ್ರೆಸ್ ಅಂಗಳಕ್ಕೆ ಬಂದು ನಿಂತಿದ್ದಾರೆ. ಒಳಗೊಳಗೆ ಅದಕ್ಕೆ ಬೇಕಾದ ಎಲ್ಲಾ ಮಾತುಕತೆಗಳೂ ಮುಗಿಯುವ ಹಂತಕ್ಕೆ ಬಂದಿವೆ. ಅವ್ರೇಲ್ಲ ಅಂದುಕೊಂಡಂತೆ ಆದ್ರೆ ಇನ್ನೇನು ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ ಸಮೀಪದಲ್ಲಿರುವಾಗಲೇ ಕಾಂಗ್ರೆಸ್ ಸೇರೋದು ಪಕ್ಕಾ ಎನ್ನಲಾಗ್ತಿದೆ‌.

ಬಲಿಷ್ಟವಾಗ್ತಿದಾರೆ ಬಾಪುಗೌಡ್ರು..
ನಿಮಗೆ ಈ ಸಂಗತಿ ಹೇಳಲೇಬೇಕಿದೆ, ಮುಂಡಗೋಡ ತಾಲೂಕಿನಲ್ಲಿ ಇವತ್ತಿಗೂ ಅಂತಹದ್ದೊಂದು ಬಲಿಷ್ಟ ಯುವ ಪಡೆ ಬಾಪುಗೌಡರ ಬೆನ್ನಿಗಿದೆ. ಅದು ಕಾಂಗ್ರೆಸ್ಸಿನಲ್ಲಷ್ಟೇ ಅಲ್ಲ, ಬಿಜೆಪಿಯ ಯುವ ಪಡೆಯಲ್ಲಿ ಬಾಪುಗೌಡರ ಇಶಾರೆಗೆಗಳಿಗೆ ಜೈ ಅನ್ನುವ ಅಸಂಖ್ಯ ಯುವಕರಿದ್ದಾರೆ. ತಾಲೂಕಿನ ಪ್ರತೀ ಗ್ರಾಮಗಳಲ್ಲೂ ಬಾಪುಗೌಡರು ಕಾಲಿಟ್ಟರೇ ಸಾಕು, ಅವ್ರು ಕರಿಯದೇ ಇದ್ರೂ ಬಂದು ಸೇರುವ ಯುವ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕಾಗಿನೇ ಕಾಂಗ್ರೆಸ್ಸಿನಲ್ಲಿ ಬಾಪುಗೌಡರಿಗೆ ಖುದ್ದು ದೇಶಪಾಂಡೆಯವರೇ ತಮ್ಮ ಮಗನ ಹಾಗೆ ಟ್ರೀಟು ಮಾಡ್ತಾರೆ.

ಇದು ಮಾತ್ರ ಪಕ್ಕಾ..!
ಬರುವ ಜಿಪಂ, ತಾಪಂ ಚುನಾವಣೆ ಹೊತ್ತಿಗೆ ಯಲ್ಲಾಪುರ ಕ್ಷೇತ್ರದ, ಅದ್ರಲ್ಲೂ ಮುಂಡಗೋಡ ತಾಲೂಕಿನ ಬಿಜೆಪಿಯಲ್ಲಿ ವಿಪರೀತ ಅನ್ನುವಷ್ಟರ ಮಟ್ಟಿಗೆ ಬದಲಾವಣೆ ಆಗೋದು ಪಕ್ಕಾ ಅನ್ನುವಂತಾಗಿದೆ. ಇದುವರೆಗೂ ಹೆಬ್ಬಾರ್ ಸಾಹೇಬ್ರ ಅಕ್ಕಪಕ್ಕದಲ್ಲೇ ಇದ್ದ ಅದೇಷ್ಟೋ ನಾಯಕರು ತಮ್ಮ ಭವಿಷ್ಯ ಕಂಡುಕೊಳ್ಳಲು “ಜಂಪಿಂಗ್” ಆಟಕ್ಕೆ ರೆಡಿಯಾಗಿದ್ದಾರೆ.

ಒಟ್ನಲ್ಲಿ, ಯಲ್ಲಾಪುರ ಕ್ಷೇತ್ರದ ಬಿಜೆಪಿ ಅದ್ಯಾಕೋ ಏನೋ ಮೊದಲಿನಂತೆ ಉಳಿಯುತ್ತಿಲ್ಲ. ಅಸಲು, ಅಧಿಕಾರಕ್ಕಾಗಿ ದಿನಕ್ಕೊಂದು ಬಣ್ಣ ಬದಲಾಯಿಸೋ ಊಸರವಳ್ಳಿ ಜಾತಿಯ ನಾಯಕರು “ಹೋದ್ರೆ ಹೋಗ್ಲಿ ಬಿಡಿ” ಅಂದ್ರೆ ಪರವಾಗಿಲ್ಲ, ಆದ್ರೆ ಪಕ್ಷಕ್ಕಾಗಿ ರಕ್ತ ಬಸೆದವರ ಬಗ್ಗೆ ಕಾಳಜಿ ತೋರಿಸಬೇಕಲ್ಲವೇ..? ಹಾಗಂತ, ನೋವಲ್ಲಿ ಎಲ್ಲರೆದುರೂ ಹೇಳ್ತಿದಾರೆ ಅತೃಪ್ತರು..!

error: Content is protected !!