ಕೊಪ್ಪಳ: ಆ ಒಂದು ಗ್ರಾಮದ ಮೊಹರಂ ಹಬ್ಬಕ್ಕೆ ಇಡೀ ರಾಜ್ಯದ ಕೆಲ ಜಿಲ್ಲೆಗಳು ಸಾಕ್ಷಿಯಾಗುತ್ತವೆ. ಆ ಒಂದು ದೃಶ್ಯವನ್ನು ಕಣ್ಣತುಂಬಿಕೊಳ್ಳಲು ಗ್ರಾಮದ ಜನರು ಕಾತುರದಿಂದ ಕಾಯುತ್ತಾರೆ. ಆ ಗ್ರಾಮದ ಹನುಮಪ್ಪ ಹೂವು ಕೊಟ್ಟರೆ ಪೀರ್ ದೇವರು ಹೊತ್ತ ದೈವಭಕ್ತ ದರ್ಶನ ಪಡೆದು ಮುಂದೆ ಸಾಗುತ್ತಾರೆ. ನಂತರವೇ ಮೊಹರಂ ಹಬ್ಬ ಆಚರಿಸಲಾಗುತ್ತದೆ.
ಹೌದು, ಹೀಗೆ ಪೀರ್ ದೇವರು ಹೊತ್ತ ಮುಸ್ಲಿಂ ದೈವ ಭಕ್ತನಿಗೆ, ಹೂವು ಕೊಟ್ಟು ಆಶೀರ್ವಾದ ಮಾಡುತ್ತಿರುವ ಹನುಮಪ್ಪ ದೇವರು. ದೇವಸ್ಥಾನದೊಳಗೆ ಬಂದು ಭಕ್ತಿಪೂರಕವಾಗಿ ಹನುಮನ ದರ್ಶನ ಪಡೆಯುತ್ತಿರುವ ಪೀರ್ ದೇವರು ಹೊತ್ತ ದೈಭಕ್ತ. ಭಕ್ತಿಗೆ ಮೆಚ್ಚಿ ಹೂವುಕೊಡುತ್ತಿರುವ ಹನುಮಪ್ಪ ದೇವರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕವಲೂರು ಗ್ರಾಮದಲ್ಲಿ. ಈ ಗ್ರಾಮದಲ್ಲಿ ಮುಸ್ಲಿಮರಿಗಿಂತ ಹಿಂದುಗಳು ಹೆಚ್ಚಾಗಿದ್ದಾರೆ. ಆದರೆ ಮೊಹರಂ ಹಬ್ಬಕ್ಕೆ ಈ ಕವಲೂರು ಗ್ರಾಮ ಭಾವೈಕ್ಯತೆಯನ್ನು ಇಡೀ ದೇಶ ತಿರುಗಿ ನೋಡುವಂತೆ ಮಾಡಿದೆ. ಯಾವುದೇ ಧರ್ಮ, ಜಾತಿ ಭೇದಭಾವ ಇಲ್ಲದೆ ಈ ಗ್ರಾಮದಲ್ಲಿ ಮೊಹರಂ ಹಬ್ಬ ನಡೆಯುತ್ತಿದೆ. ವಿಶೇಷವಾಗಿ ಈ ಗ್ರಾಮದ ಪೀರ್ ದೇವರು, ಹನುಮಪ್ಪನ ಆಶೀರ್ವಾದ ಪಡೆಯದೆ ಮುಂದೆ ಸಾಗುವುದಿಲ್ಲ. ಗರ್ಭಗುಡಿಯೊಳಗೆ ಬಂದು ಹನುಮಪ್ಪನಿಂದ ಪುಷ್ಪದ ಆಶೀರ್ವಾದ ಪಡೆದ ನಂತರವೇ ಮುಂದಕ್ಕೆ ಸಾಗುವುದು ಈ ಗ್ರಾಮದಲ್ಲಿ ನಡೆದುಕೊಂಡು ಬಂದ ಸಂಪ್ರದಾಯ.
ಪ್ರತಿ ವರ್ಷ ಮೊಹರಂ ಹಬ್ಬದ ಹಿಂದಿನ ದಿನ ರಾತ್ರಿ ಹೂವು ಕೊಡುವ ಒಂದು ಪವಾಡ ನಡೆಯುತ್ತದೆ.ಇದನ್ನು ಕಣ್ಣತುಂಬಿಕೊಳ್ಳಲು ದೂರದ ಮಹಾರಾಷ್ಟ್ರ, ಆಂಧ್ರಪ್ರದೇಶದ ಹಾಗೂ ಕರ್ನಾಟಕದ ಬೆಳಗಾವಿ, ಬಳ್ಳಾರಿ, ರಾಯಚೂರು ಇನ್ನಿತರ ಜಿಲ್ಲೆಗಳಿಂದ ಜನರು ಬರುತ್ತಾರೆ. ಒಂದು ರೀತಿ ಅಂದು ಕವಲೂರು ಗ್ರಾಮದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಜಾತ್ರೆಯಂತೆ ಈ ಪೀರ್ ದೇವರು ಹನುಮಪ್ಪನಿಂದ ಹೂವು ಪಡೆಯುವ ಕ್ಷಣವನ್ನು ನೋಡಲು ಭಕ್ತರು ಸೇರಿರುತ್ತಾರೆ. ಈ ವರ್ಷ ಕೋವಿಡ್ ಇರುವುದರಿಂದ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿ ಕಡಿಮೆ ಜನರನ್ನು ಸೇರಿಸಿದೆ. ಆದ್ರೆ ಸಂಪ್ರದಾಯ ಬದ್ಧವಾಗಿ ಮೊಹರಂನ್ನು ಹಿಂದು ಮುಸ್ಲಿಂರು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.
ಒಟ್ಟಾರೆ ಕಲ್ಯಾಣ ಕರ್ನಾಟಕದಲ್ಲಿ ಮೊಹರಂ ಹಬ್ಬ ಎನ್ನುವುದೇ ಒಂದು ಭಾವೈಕ್ಯತೆಗೆ ಸಾಕ್ಷಿ. ಅದರಲ್ಲೂ ಕೊಪ್ಪಳದಲ್ಲಿ ಹಿಂದು-ಮುಸ್ಲಿಂರು ಸೇರಿ ಆಚರಿಸುವುದು ಒಂದು ವಿಶೇಷ ಇದರಲ್ಲಿ ಕವಲೂರು ಗ್ರಾಮ ಮತ್ತಷ್ಟು ವಿಶೇಷವಾಗಿದ್ದು ಗ್ರಾಮಗಳಲ್ಲಿ ಭಾವೈಕ್ಯತೆಯನ್ನು ಇಂದು ಕಾಪಾಡಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ.