ಮುಂಡಗೋಡ: “ಮೊಹರಂ” ಇದು ಬಹುತೇಕ ಹಿಂದು ಮುಸ್ಲಿಂ ಭಾವೈಕ್ಯತೆಯಿಂದ ಆಚರಿಸಲ್ಪಡೋ ಹಬ್ಬ. ಈ ಹಬ್ಬ ಬಂತು ಅಂದ್ರೆ ಸಾಕು ತಾಲೂಕಿನಲ್ಲಿ ಕೆಲವು ಮೂಢ ನಂಬಿಕೆಗಳೂ ಕೂಡ ಜೊತೆ ಜೊತೆಯಾಗೇ ಜಾರಿಯಾಗುತ್ತಿವೆ. ಪ್ರತೀ ವರ್ಷವೂ ಈ ಹಬ್ಬದಲ್ಲಿ ಅದೊಂದು ಪದ್ದತಿ ನಿಜಕ್ಕೂ ಪ್ರಜ್ಞಾವಂತರಿಗೆ ಒಂದಿಷ್ಟು ಆತಂಕ ಮೂಡಿಸಿದೆ.
ಹುಲಿವೇಷ..!
ಅಸಲು, ಮೊಹರಂ ಬಂತು ಅಂದ್ರೆ ತಾಲೂಕಿನಲ್ಲಿ ಅದೊಂದು ಪದ್ದತಿ ಇವತ್ತಿಗೂ ಜಾರಿಯಲ್ಲಿದೆ. ಪಂಜಾಗಳಿಗೆ ಹರಕೆ ಹೊರುವ ಭಕ್ತರು ಹರಕೆ ಈಡೇರಿದ ಮೇಲೆ ಹುಲಿವೇಷ ಹಾಕುತ್ತಾರೆ. ಮೈಗೇಲ್ಲ ಬಣ್ಣದಿಂದ ಹುಲಿಯ ಚಿತ್ತಾರ ಬಿಡಿಸಿಕೊಂಡು ತಾಲೂಕಿನ ಪ್ರತೀ ಗ್ರಾಮಗಳ ಮನೆ ಮನೆಗಳಿಗೂ ತೆರಳುತ್ತಾರೆ. ಹಾಗೂ ಹಾಗೆ ಮನೆಗಳಿಗೆ ತೆರಳಿದ್ದಾಗ ಮನೆಯವರು ನೀಡುವ ದವಸ ಧಾನ್ಯ, ಹಣ ಇತ್ಯಾದಿಗಳನ್ನು ಶೇಖರಿಸಿಕೊಳ್ಳುತ್ತಾರೆ ನಂತರ ಅದರಿಂದಲೇ ದೇವರಿಗೆ ಹರಕೆ ತೀರಿಸೋ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಂತ, ನಾವು ಅಂತಹ ನಂಬಿಕೆಗಳು, ಸಂಪ್ರದಾಯಗಳಿಗೆ ವಿರೋಧಿಸುವುದಿಲ್ಲ. ಬದಲಾಗಿ, ಗೌರವಿಸ್ತಿವಿ.
ಆದ್ರೆ ಅಂತಹ ನಂಬಿಕೆ ಅನ್ನೋದು ತಾಲೂಕಿನಲ್ಲಿ ಕೆಲವು ಮುಗ್ದ ಮಕ್ಕಳ ಜೀವ ಹಿಂಡುತ್ತಿದೆ. ಏನೂ ಅರಿಯದ ಕಂದಮ್ಮಗಳಿಗೆ ಹರಕೆಯ ನೆಪದಲ್ಲಿ ಇನ್ನಿಲ್ಲದಂತೆ ಹಿಂಸಿಸಲಾಗ್ತಿದೆ. ಪಾಪ, ಆ ಪುಟ್ಟ ಕಂದಮ್ಮಗಳಿಗೆ ಆ ಸಂಪ್ರದಾಯಗಳ ಬಗ್ಗೆ ಏನು ಅಂದ್ರೆ ಏನೂ ಅರಿವಿಲ್ಲ. ಆದ್ರೆ ಅಂತಹ ಮಕ್ಕಳ ಮೇಲೆ ಸಂಪ್ರದಾಯಗಳನ್ನು ಹರಕೆ ನೆಪದಲ್ಲಿ ಹೇರಲಾಗ್ತಿದೆ.
ಮೈಗೇಲ್ಲ ಕೆಮಿಕಲ್ ಬಣ್ಣ..!
ನಿಜ, ಇದು ಅಕ್ಷರಶಃ ಆತಂಕದ ಸಂಗತಿ, ಯಾಕಂದ್ರೆ ಪುಟ್ಟ ಮಕ್ಕಳಿಗೆ ಹುಲಿ ವೇಷ ತೊಡಲು ಮೈಗೇಲ್ಲ ಬಣ್ಣದಿಂದ ಹುಲಿಯ ಚಿತ್ರ ರಚಿಸಲಾಗತ್ತೆ. ಅಂತಹ ಚಿತ್ರ ಬರೆಯಲು ಮಾರಕ ಕೆಮಿಕಲ್ಸ್ ಹೊಂದಿರೋ ಬಣ್ಣಗಳನ್ಬು ಬಳಸಲಾಗತ್ತೆ. ಆಯಿಲ್ ಪೇಂಟ್ ಬಳಸಿ ವೇಷ ತೊಡಿಸಲಾಗತ್ತೆ. ನೀವೇ ಯೋಚಿಸಿ, ಹಾಗೆ ಕೆಮಿಕಲ್ಸ್ ಮಿಶ್ರಿತ ಬಣ್ಣ ಬಳಸಿದ್ರೆ ಆ ಪುಟ್ಟ ಮಕ್ಕಳು ಎಳೆಯ ಮೈಗೆ ಹೇಗಾಗಬೇಡ..? ದೊಡ್ಡವರೇ ಹಾಗೇ ಮೈಗೆ ಬಣ್ಣ ಹಚ್ಚಿಕೊಂಡಾಗ ವಿಪರೀತ ಅನ್ನುವಷ್ಟು ಒದ್ದಾಡುತ್ತಾರೆ. ಬಿಸಿಲಿನ ಝಳಕ್ಕೆ ಬಣ್ಣ ಬಿಸಿಯಾಗಿ ಸಂಕಟ ಅನುಭವಿಸ್ತಾರೆ. ಹೀಗಿರೋವಾಗ ಪಾಪ ಪುಟ್ಟ ಕಂದಮ್ಮಗಳ ಸ್ಥಿತಿ ಹೇಗಾಗಬೇಡ..? ಚರ್ಮ ರೋಗಗಳಿಗೆ ಆಹ್ವಾನ ನೀಡಿದಂತಲ್ಲವೇ..?
ಭಿಕ್ಷೆಗೆ ತಿರುಗಾಟ..!
ಇನ್ನು, ಪುಟ್ಟ ಕಂದಮ್ಮಗಳಿಗೆ ಹಾಗೆ ಹುಲಿ ವೇಷ ತೊಡಿಸಿ ತಮಟೆ ಮಜಲಿನೊಂದಿಗೆ ಹೆಜ್ಜೆ ಹಾಕಿಸುತ್ತಾರೆ. ಮನೆ ಮನೆಗೆ ತಿರುಗಿ ಭಿಕ್ಷೆ ಬೇಡುತ್ತಾರೆ. ನಿಜ ಅಂದ್ರೆ ಬೆಳಿಗ್ಗೆಯಿಂದ ಸಂಜೆವರೆಗೂ ಆ ಕಂದಮ್ಮಗಳು ಬಿಸಿಲು, ಮಳೆ, ಛಳಿ ಅನ್ನದೇ ಐದು ದಿನಗಳ ಕಾಲ ಹಾಗೆ ತಿರುಗಾಡಲೇ ಬೇಕು. ಹಾಗೆ ತಿರುಗಾಡಿದ ಪುಟ್ಟ ಬಾಲಕರು ಸಂಜೆ ಹೊತ್ತಿಗೆ ನಿಸ್ತೇಜ ಸ್ಥಿತಿಗೆ ತಲುಪಿರತ್ತೆ. ಪಟ್ಟಣದಲ್ಲಿ ಅಂತಹ ಓರ್ವ ಬಾಲಕ ಪಬ್ಲಿಕ್ ಫಸ್ಟ್ ನ್ಯೂಸ್ ಎದುರು ಸಿಕ್ಕಿದ್ದ. ಆತನ ಪಾಲಕರು ಇಡೀ ಪಟ್ಟಣದಲ್ಲಿ ಬಾಲಕನನ್ನು ತಿರುಗಾಡಿಸಿದ್ದರು. ಹೀಗಾಗಿ ಬಾಲಕನಿಗೆ ಮಾತನಾಡಲೂ ಆಗದ ಸ್ಥಿತಿಯಿತ್ತು. ಹೀಗಾಗಿ, ಇದನ್ನು ಪಾಲಕರ ಹುಂಬತನ ಅನ್ನಬೇಕೊ ಅಥವಾ ಕಂದಾಚಾರ ಅನ್ನಬೇಕೊ ಅರ್ಥವೇ ಅಗ್ತಿಲ್ಲ. ಆದ್ರೆ ಅಲ್ಲಿ ದೇವರ ಹೆಸರಲ್ಲಿ ಸಂಕಟ ಅನುಭವಿಸ್ತಿರೋದು ಮಾತ್ರ ಮುಗ್ದ ಮನಸ್ಸಿನ ಕಂದಗಳು.
ಅಧಿಕಾರಿಗಳಿಗೂ ಗೊತ್ತಿದೆ..
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಇದೇಲ್ಲ ಗೊತ್ತಿದೆ.. ಅವ್ರ ಕಣ್ಣೆದುರಲ್ಲೇ ಇದೇಲ್ಲ ನಡಿಯತ್ತೆ. ಆದ್ರೆ, ಅವ್ರೂ ಕೂಡ ಈ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ಹಾಗೆ ಕಂದಾಚಾರಗಳಿಗೆ ಮಕ್ಕಳನ್ನು ಬಳಸಿಕೊಳ್ಳೊ ಪಾಲಕರಿಗೆ ತಿಳುವಳಿಕೆ ನೀಡಿ, ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ತೋರುತ್ತಿಲ್ಲ. ಪುಟ್ಟ ಕಂದಮ್ಮಗಳಿಗೆ ಹುಲಿವೇಷ ತೊಡಿಸಿ ಬೆಳಿಗ್ಗೆಯಿಂದ ಸಂಜೆವರೆಗೂ ಕುಣಿದಾಡಿಸೋ ಮಂದಿಗೆ ಆ ಕಂದಮ್ಮಗಳ ಮನಸ್ಸಿನ ಮೇಲೆ ಅದೇಷ್ಟು ಪರಿಣಾಮ ಬೀರತ್ತೆ ಅನ್ನೋ ಅರಿವು ಮೂಡಿಸಬೇಕಿದೆ.ಅದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಜವಾಬ್ದಾರಿ. ಆದ್ರೆ ಅವ್ರಿಗೆ ಇದನ್ನೇಲ್ಲ ನೋಡೋಕೆ ಪುರುಸೋತ್ತೇ ಇಲ್ಲವೇನೋ..?
ಪೊಲೀಸರ ಕಣ್ಣೇದುರೇ..
ಇನ್ನು, ಮೊಹರಂ ಹಬ್ಬದ ಐದು ದಿನ ಹೀಗೆ ಮಕ್ಕಳಿಗೆ ಹುಲಿವೇಷ ತೊಡಿಸಿ ಹರಕೆ ನೆಪದಲ್ಲಿ ನಡೆಯುವ ಕಂದಾಚಾರ ಪೊಲೀಸರಿಗೂ ಗೊತ್ತಿದೆ. ಪುಟ್ಟ ಮಕ್ಕಳಿಗೆ ಹಾಗೆ ನಡೆಸಿಕೊಳ್ಳುವ ಹುಂಬತನಗಳಿಗೆ ಬಹುಶಃ ಪೊಲೀಸರೂ ಕಡಿವಾಣ ಹಾಕಬಹುದೇನೋ..? ಆದ್ರೆ ಅದಕ್ಕೊಂದು ಇಚ್ಚಾಶಕ್ತಿ ಬೇಕಿದೆ.
ಒಟ್ನಲ್ಲಿ, ಇಲ್ಲಿ ಯಾವುದೇ ಧರ್ಮದವರೇ ಆಗಲಿ, ಆಚರಣೆಗಳ ಹೆಸರಲ್ಲಿ ಪುಟ್ಟ ಕಂದಮ್ಮಗಳ ಮೇಲೆ ಹೀಗೇಲ್ಲ ವಿಕೃತಿ ಮೆರಿಯೋದು ಖಂಡಿತ ತಪ್ಪು. ಇಂತಹ ವಿಕೃತಿಗಳನ್ನು ನಾಗರಿಕ ಸಮಾಜ ಒಪ್ಪಲು ಖಂಡಿತ ಸಾಧ್ಯವಿಲ್ಲ. ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಏನೂ ಅರಿಯದ ಮುಗ್ದ ಕಂದಮ್ಮಗಳ ಮೇಲಿನ ಕಂದಾಚಾರ ಪ್ರಯೋಗಗಳಿಗೆ ಅಂತ್ಯ ಹಾಡಬೇಕಿದೆ.