ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ನಿನ್ನೆ ಗುರುವಾರ ನಡೆದಿದ್ದ ಪುಟ್ಟ ಬಾಲಕಿ ಗಟಾರಿನಲ್ಲಿ ಬಿದ್ದು ಒದ್ದಾಡಿದ ಘಟನೆಗೆ ಸಂಬಂಧಿಸಿದಂತೆ ಇಂದು ನಂದಿಕಟ್ಟಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದ್ರೆ ಪಿಡಿಓ ಸಾಹೇಬ್ರು ಮಾತ್ರ ಪಂಚಾಯತಿಗೆ ಬಂದರೂ ಘಟನಾ ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ ತೋರಿದ್ದಾರೆ ಅಂತಾ ಕೆಲವ್ರು ಅಸಮಾಧಾನ ಹೊರ ಹಾಕಿದ್ರು.
ಅವೈಜ್ಞಾನಿಕ ಗಟಾರು ನಿರ್ಮಾಣ..!
ಇನ್ನು ಗಟಾರಗಳ ಅವ್ಯವಸ್ಥೆ ಕಣ್ಣಾರೆ ಕಂಡ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ತಕ್ಷಣವೇ ಗಟಾರದ ಅವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದಾರೆ. ಕಳೆದ ವರ್ಷವಷ್ಟೇ 4 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗಿದ್ದ ಪಕ್ಕಾ ಗಟಾರ ಕಾಮಗಾರಿ ಬಹುತೇಕ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರೋದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ ಅಂತಾ ಸದಸ್ಯರು ತಿಳಿಸಿದ್ದಾರೆ. ಹೀಗಾಗಿ ನಾಳೆ ಸಂಬಂಧಪಟ್ಟ ಇಂಜಿನೀಯರ್ ರವರನ್ನು ಕರೆಯಿಸಲು ತೀರ್ಮಾನಿಸಿದ್ದಾರೆ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರೋ ಗಟಾರನ್ನು ಅವಶ್ಯವಿದ್ದಲ್ಲಿ ಅಗೆದು ತೆರವುಗೊಳಿಸಿ ಮತ್ತೊಮ್ಮೆ ನಿರ್ಮಿಸಲು ಮುಂದಾಗಿದ್ದಾರೆ. ಅಂದಹಾಗೆ ಇದು ಪಬ್ಲಿಕ್ ಫಸ್ಟ್ ನ್ಯೂಸ್ ವರದಿಯ ಇಂಪ್ಯಾಕ್ಟ್.
ಯುಥ್ ಟೀಂ..!
ಅಂದಹಾಗೆ, ನಂದಿಕಟ್ಟಾ ಗ್ರಾಮ ಪಂಚಾಯತಿಯಲ್ಲಿ ಸದ್ಯ ಯುವಕರ ಪಡೆಯೇ ಆಡಳಿತದಲ್ಲಿದೆ. ಬಹುತೇಕ ವಿದ್ಯಾವಂತರೇ ಗ್ರಾಮ ಪಂಚಾಯತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮಕ್ಕೆ ಏನಾದ್ರೂ ಹೊಸತನದ ಟಚ್ ಕೊಡಬೇಕು ಅನ್ನೋ ಕನಸು ಹೊತ್ತು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಕ್ಷೆ ಮಾರೆಕ್ಕ ದುರ್ಗ ಮುರ್ಗಿ, ಉಪಾಧ್ಯಕ್ಷ ಬಸವರಾಜ್ ನಡುವಿನಮನಿ, ಸದಸ್ಯರಾದ ರಮೇಶ್ ನೇಮಣ್ಣವರ್, ಕಲಾವತಿ ಕೊಟಗುಣಸಿ, ಶಾಂತವ್ವ ಹರೀಬನವರ್, ಬರಮು ಆಲೂರು, ಸಂತೋಷ ಭೋಸಲೆ, ವಿದ್ಯಾ ಕವಟೆ, ರೇಷ್ಮಾ ಕಲಘಟಗಿ, ಮಹ್ಮದ್ ಕವಲವಾಡ್, ಪರಶುರಾಮ್ ಕಬ್ಬೇರ್, ಯೋಗಾವತಿ, ಸೇರಿ ಎಲ್ರೂ ಅಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ ಇಲ್ಲಿನ ಗ್ರಾಮ ಪಂಚಾಯತಿ ಸದಸ್ಯರಿಗೆ ಪಿಡಿಓ ಮಾತ್ರ ಸ್ಪಂಧನೆ ಕೊಡುತ್ತಿಲ್ಲ ಅನ್ನೋ ಆರೋಪಗಳು ಖುದ್ದು ಗ್ರಾಮ ಪಂಚಾಯತಿ ಸದಸ್ಯರಿಂದಲೇ ಕೇಳಿ ಬರುತ್ತಿವೆ.
ಬರೋದೇ ಅಪರೂಪವಂತೆ ಪಿಡಿಓ..!
ಇನ್ನು, ಯುವಕರ ಪಡೆಯನ್ನೇ ಕಟ್ಟಿಕೊಂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾಕಷ್ಟು ಕಾರ್ಯಗಳನ್ನ ಮಾಡಲು ಮುಂದಾಗಿರೋ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಪಿಡಿಓ ರವರೇ ತಲೆನೋವಾಗಿದ್ದಾರೆ ಅನ್ನೋ ಆರೋಪ ಇದೆ. ಕೊರೋನಾ ಸಂದರ್ಭದಲ್ಲೂ ಇಲ್ಲಿನ ಅಷ್ಟೂ ಸದಸ್ಯರು ಪಕ್ಷಾತೀತವಾಗಿ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಇನ್ನಿಲ್ಲದ ಕಾಳಜಿ ವಹಿಸಿದ್ದರು. ಆದ್ರೆ ಪಿಡಿಓ ಸಾಹೇಬ್ರು ಮಾತ್ರ ವಾರಕ್ಕೊಮ್ಮೆಯೂ ದರ್ಶನ ನೀಡ್ತಾ ಇರಲಿಲ್ಲವಂತೆ ಹೀಗಾಗಿ, ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗ್ತಿದೆ ಅನ್ನೋದು ಇಲ್ಲಿನ ಬಹುತೇಕ ಸದಸ್ಯರ ಅಳಲು.
ಗ್ರಾಪಂ ಸಿಬ್ಬಂದಿಗಳದ್ದೂ ಕಿರಿಕ್ಕೂ..!
ಇನ್ನು ಈ ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಹೇಗೆ ಬೇಜವಾಬ್ದಾರಿ ತೋರುತ್ತಾರೋ ಅದರ ಸಂಪೂರ್ಣ ಲಾಭ ಪಡೆದುಕೊಳ್ತಿರೋರು ಅಲ್ಲಿನ ಸಿಬ್ಬಂದಿಗಳು ಅನ್ನೋ ಆರೋಪ ಕೇಳಿ ಬರ್ತಿದೆ. ಸಾರ್ವಜನಿಕರ ನಿತ್ಯದ ಕೆಲಸಗಳಿಗೆ ಇಲ್ಲಿನ ಸಿಬ್ಬಂದಿಗಳು ಹಾರಿಕೆ ಉತ್ತರ ನೀಡಿ ಅಲೆದಾಡಿಸೋ ಚಾಳಿ ಬೆಳೆಸಿಕೊಂಡಿದ್ದಾರೆ. ಅದೇನೆ ಕೆಲಸಕ್ಕೆ ಹೋದ್ರೂ “ಪಿಡಿಓ ಬಂದಿಲ್ಲ ನಾಳೆ ಬನ್ನಿ” ಅನ್ನೋ ರೆಡಿಮೇಡ್ ಉತ್ತರ ಕೊಟ್ಟು ಕಳಿಸುತ್ತಿದ್ದಾರೆ. ಹೀಗಾಗಿ, “ಈ ಸ್ವತ್ತು” ಅರ್ಜಿಗಳು ರಾಶಿ ರಾಶಿಯಾಗಿ ಪಂಚಾಯತಿಯಲ್ಲಿ ಧೂಳು ತಿನ್ನುತ್ತಿವೆ. ಯಾಕಂದ್ರೆ ಇಷ್ಟೇಲ್ಲ ಅರ್ಜಿಗಳು ಬಂದ್ರೂ ಪಿಡಿಓ ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಅಂತಹ ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ತಿಲ್ಲ ಅನ್ನೋದು ಸಾರ್ವಜನಿಕರ ಆರೋಪವಾಗಿದೆ. ಇನ್ನು ಸಣ್ಣ ಸಣ್ಣ ಪ್ರಮಾಣ ಪತ್ರ ಪಡೆಯಲೂ ಸಹ ಇಲ್ಲಿನ ಜನ ವಾರಗಟ್ಟಲೇ ಕಾಯಲೇಬೇಕು. ಹೀಗಾಗಿ ಇಲ್ಲಿನ ಮಂದಿ ನಿತ್ಯವೂ ಅಲೆದಾಟದಲ್ಲೇ ಇದ್ದಾರೆ.
ಅಧಿಕಾರಿಗಳೇ ಗಮನಿಸಿ..!
ನಂದಿಕಟ್ಟಾ ಗ್ರಾಮ ಪಂಚಾಯತಿಯಲ್ಲಿನ ಬೇಜವಾಬ್ದಾರಿ ಮತ್ತು ಪಿಡಿಓ ರವರ ನಿಷ್ಕಾಳಜಿಯಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಕೊಡಬೇಕಿದೆ. ಪಂಚಾಯತಿಗೆ ಯಾವಾಗಾದರೊಮ್ಮೆ, ಹಾಗೆ ಬಂದು ಹೀಗೆ ಹೋಗುವ ಪಿಡಿಓ ಸಾಹೇಬ್ರಿಗೆ ಒಂದಿಷ್ಟು ತಿಳುವಳಿಕೆ ನೀಡಬೇಕಿದೆ. ಅಂದಾಗ ಮಾತ್ರ ನಂದಿಕಟ್ಟಾ ಗ್ರಾಮಸ್ಥರ ಸಂಕಷ್ಟ ಪರಿಹಾರವಾದೀತು. ಅಂದಹಾಗೆ ಇದು ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಷ್ಟೂ ಗ್ರಾಮಗಳ ಒಕ್ಕೊರಲು.