ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಇವತ್ತು ಭಯಾನಕ ಘಟನೆಯೊಂದು ನಡೆದು ಹೋಗಿದೆ. ಅಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೇ ವರ್ಷದ ಪುಟ್ಟ ಕಂದಮ್ಮ ಕೊಳಚೆ ತುಂಬಿದ್ದ ಗಟಾರಿನಲ್ಲಿ ಬಿದ್ದು ಒದ್ದಾಡಿದೆ‌. ಅದೃಷ್ಟವಶಾತ್ ಹಾಗೆ ಬಿದ್ದ ಪುಟ್ಟ ಮಗುವನ್ನು ತಕ್ಷಣವೇ ಅಜ್ಜಿ ಮೇಲಕ್ಕೆತ್ತಿದ್ದಾರೆ. ಇಲ್ಲವಾಗಿದ್ದರೆ, ಪುಟ್ಟ ಮಗು ಈಗ ನೆನಪಾಗಿ ಉಳಿಯುತ್ತಿತ್ತು ಅಷ್ಟೆ.

ಮಗು ಬದುಕಿದ್ದೇ ಪುಣ್ಯ..!
ಹೌದು, ನಂದಿಕಟ್ಟಾ ಗ್ರಾಮದ ಮಕ್ಬುಲ್ ಖಾನ್ ಶಾಹಪುರ್ ಎಂಬುವರ, ಒಂದೂವರೇ ವರ್ಷದ ಪುಟ್ಟ ಬಾಲಕಿ ಇವತ್ತು ಮದ್ಯಾಹ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮನೆಯ ಮುಂದೆ ಇರೋ ಗಟಾರಿನಲ್ಲಿ ಬಿದ್ದು ಬಿಟ್ಟಿದೆ ಕಂದಮ್ಮ. ಸಂಪೂರ್ಣ ಕೊಳಚೆ ನೀರು ತುಂಬಿಕೊಂಡಿರೋ ಗಟಾರದಲ್ಲಿ ಇನ್ನೇನು ಮುಳುಗುವ ಹಂತದಲ್ಲಿದ್ದ ಪುಟ್ಟ ಮಗುವಿನ ಚೀರಾಟ ಮನೆಯೊಳಗೆ ಇದ್ದ ಅಜ್ಜಿಗೆ ಕೇಳಿಸಿದೆ‌. ತಕ್ಷಣವೇ ಧಾವಿಸಿ ಬಂದ ಅಜ್ಜಿ ತನ್ನ ಮೊಮ್ಮಗುವನ್ನು ಎತ್ತಿಕೊಂಡಿದ್ದಾರೆ‌. ಹೀಗಾಗಿ, ಕೊಳಚೆ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದ ಬಾಲಕಿ, ಇನ್ನೇನು ನಿಸ್ತೇಜ ಸ್ಥಿತಿಗೆ ಬರುವ ಹಂತದಲ್ಲಿತ್ತು. ತಕ್ಷಣವೇ ಮಗುವನ್ನು ನೀರಿನಿಂದ ಎತ್ತಿಕೊಂಡ ಕಾರಣಕ್ಕಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದೆ‌. ನಂತರ, ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮಗು ಈಗ ಚೇತರಿಸಿಕೊಂಡಿದೆ.

ಗ್ರಾಮ ಪಂಚಾಯತಿ ನಿರ್ಲಕ್ಷ..!
ಅಂದಹಾಗೆ, ನಂದಿಕಟ್ಟಾ ಗ್ರಾಮ ಪಂಚಾಯತಿಯ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ಗ್ರಾಮದಲ್ಲಿ ಇದುವರೆಗೂ ಗಟಾರಗಳ ಸಮರ್ಪಕ ಹೂಳೆತ್ತುವ ಕೆಲಸ ಮಾಡಿಲ್ಲ. ಕೆಲವು ಕಡೆ ಗಟಾರಗಳು ಕೊಳಚೆ ನೀರಿನಿಂದ ತುಂಬಿಕೊಂಡು ಗಬ್ಬೇದ್ದು ಹೋಗಿವೆ. ಇನ್ನು ಹಲವೆಡೆ ಗಟಾರಗಳೇ ಇಲ್ಲದೇ ಅಲ್ಲಿನ ನಿವಾಸಿಗಳು ಕೊಳಚೆಯಲ್ಲೇ ಬದುಕುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

ಅವೈಜ್ಞಾನಿಕ ಗಟಾರುಗಳು..!
ಎಷ್ಟೋ ವರ್ಷಗಳಾಯ್ತು ಇಲ್ಲಿನ. ಪಕ್ಕಾ ಗಟಾರಗಳನ್ನು ಗ್ರಾಮ ಪಂಚಾಯತಿಯ ಯಾವೊಬ್ಬ ಅಧಿಕಾರಿಯೂ ಕಣ್ಣೆತ್ತಿಯೂ ನೋಡಿಲ್ಲ. ಕೆಲವು ಕಡೆ ಅವೈಜ್ಞಾನಿಕವಾಗಿ ಪಕ್ಕಾ ಗಟಾರಗಳನ್ನು ನಿರ್ಮಿಸಿರೋ ಕಾರಣಕ್ಕೆ ನೀರು ಸರಾಗವಾಗಿ ಹರಿದು ಹೋಗದೇ ಹಾಗೇ ನಿಂತಿರತ್ತೆ. ಇನ್ನು ಮಳೆ ಬಂದಾಗಲಂತೂ ಇಲ್ಲಿ‌ನ ಅವ್ಯವಸ್ಥೆ ನೋಡುವ ಹಾಗಿಲ್ಲ. ಯಾಕಂದ್ರೆ ಗಟಾರದಿಂದ, ಮಳೆಯ ನೀರು ಮನೆಗಳಿಗೆ ನುಗ್ಗಿ ಇನ್ನಿಲ್ಲದ ಪರದಾಟ ತಂದಿರತ್ತೆ.

ಏನ್ ಮಾಡ್ತಿದ್ದಾರೆ ಪಿಡಿಓ..?
ಇನ್ನು, ಗ್ರಾಮದ ಕೊಳಚೆ ಗಟಾರಗಳ ಬಗ್ಗೆ ಇಲ್ಲಿನ ನಿವಾಸಿಗಳು ಸಾಕಷ್ಟು ಬಾರಿ ಇಲ್ಲಿನ ಗ್ರಾಮ ಪಂಚಾಯತಿ ಪಿಡಿಓ ರವರ ಗಮನಕ್ಕೆ ತಂದಿದ್ದಾರೆ. ಆದ್ರೆ ಪಿಡಿಓ ಸಾಹೇಬ್ರು ಮಾತ್ರ ಈ ಕಡೆ ತಿರುಗಿಯೂ ನೋಡುತ್ತಿಲ್ಲ ಅನ್ನೋದು ನಿವಾಸಿಗಳ ಆರೋಪ. ಅಷ್ಟೇ ಅಲ್ಲದೇ ಪಿಡಿಓ ಸಾಹೇಬ್ರು ನಂದಿಕಟ್ಟಾ ಗ್ರಾಮ ಪಂಚಾಯತಿಯಲ್ಲಿ ಸಿಗೋದೇ ಅಪರೂಪ ಅನ್ನೋ ಆರೋಪಗಳೂ ಕೇಳಿ ಬರ್ತಿವೆ. ಪಾಪ, ಪಿಡಿಓ ಸಾಹೇಬ್ರು ವಾರಕ್ಕೊಮ್ಮೆಯಾದ್ರೂ ಬಂದು ಇಲ್ಲಿನ ಜನರ ಸಂಕಷ್ಟಕ್ಕೆ ಸ್ಪಂಧಿಸಲಿ ಎನ್ನುತ್ತಿದ್ದಾರೆ ಇಲ್ಲಿನ ಜನ. ಈ ಕಾರಣಕ್ಕಾಗಿ ನಂದಿಕಟ್ಟಾ ಗ್ರಾಮದಲ್ಲಿ ಗ್ರಾಮ ಪಂಚಾಯತ ಸದಸ್ಯರು ಕೆಲಸ ನಿರ್ವಹಿಸಲು ಉತ್ಸುಕರಾಗಿದ್ದರೂ ಪಿಡಿಓ ಮಾತ್ರ ಕೈಗ ಸಿಗುತ್ತಿಲ್ಲವಂತೆ. ಹೀಗಾಗಿ, ಗಟಾರಗಳ ಪರಿಸ್ತಿತಿ ಚಿಂತಾಜನಕವಾಗಿದೆ‌.

ಜನಪ್ರತಿನಿಧಿಗಳಿಗೂ ಕಾಣ್ತಿಲ್ವಾ..?
ಅಂದಹಾಗೆ, ಗ್ರಾಮದ ಗಟಾರಗಳು ಗಬ್ಬೇದ್ದು ಹೋಗಿವೆ, ಈ ಕಡೆ ಸ್ವಲ್ಪ ಲಕ್ಷ ಕೊಡಿ ಅಂತಾ ಸಾಕಷ್ಟು ಬಾರಿ ಮನವಿ ಮಾಡಿಕೊಂಡ್ರೂ ಇಲ್ಲಿನ ಜನಪ್ರತಿನಿಧಿಗಳೂ ಕ್ಯಾರೇ ಅಂತಿಲ್ಲವಂತೆ. ಆದ್ರೆ, ಸದ್ಯ ನಂದಿಕಟ್ಟಾ ಗ್ರಾಮ ಪಂಚಾಯತಿಯಲ್ಲಿ ಬಹುತೇಕ ಯುವ ಸದಸ್ಯರೇ ಆಡಳಿತದ ಚುಕ್ಕಾಣಿ ಹಿಡಿದಿದ್ದು ಸಮರ್ಥವಾಗಿ ಕಾರ್ಯ ನಿರ್ವಹಿಸುವ ಛಲದಲ್ಲಿದ್ದಾರೆ. ಹೀಗಾಗಿ, ಅವರಾದರೂ ಈ ಬಗ್ಗೆ ಗಮನ ಹರಿಸ್ತಾರಾ..? ಕಾದು ನೋಡಬೇಕಿದೆ‌.

ಹೊಣೆ ಯಾರು..?
ಗ್ರಾಮ ಪಂಚಾಯತಿಯ ದಿವ್ಯ ನಿರ್ಲಕ್ಷದಿಂದಾಗಿಯೇ ಸಂಪೂರ್ಣ ಗಬ್ಬೇದ್ದು ಹೋಗಿರೋ ಗ್ರಾಮದ ಗಟಾರಗಳಲ್ಲಿ ಇಂತಹ ಅನಾಹುತಗಳು ಸಂಭವಿಸುತ್ತಿವೆ. ಅಲ್ದೆ, ಇಂತಹ ಕೊಳಚೆ ನೀರು ಗಟಾರಗಳಲ್ಲಿ ನಿಂತು ಸಾಂಕ್ರಾಮಿಕ ರೋಗಗಳ ಆತಂಕವೂ ಶುರುವಾಗಿದೆ. ಹೀಗಾಗಿ, ತಕ್ಷಣವೇ ಗಟಾರುಗಳಲ್ಲಿ ತುಂಬಿಕೊಂಡಿರೋ ಹೂಳು ಸ್ವಚ್ಛಗೊಳಿಸಬೇಕಿದೆ‌. ಅಲ್ಲದೇ, ಗಟಾರಗಳಿಗೆ ಸಮರ್ಪಕವಾಗಿರೋ ಮುಚ್ಚಳು ಹಾಕಬೇಕಾದ ಅವಶ್ಯಕತೆ ಇದೆ‌. ಅಂದಾಗ ಮಾತ್ರ ಇಂತಹ ದುರಂತಗಳಿಂದ ಮಕ್ಕಳನ್ನು ರಕ್ಷಿಸಬಹುದಾಗಿದೆ.

ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಪಿಡಿಓ ದುರ್ಮರಣ

error: Content is protected !!