ಮುಂಡಗೋಡ: ತಾಲೂಕಿನ ಕಾತೂರು ಸಮೀಪದಲ್ಲಿ ಲಾರಿ ಚಾಲಕನನ್ನು ಅಪಹರಿಸಿ ಅವನಲ್ಲಿದ್ದ 22 ಸಾವಿರ ಹಣ ದೋಚಿಕೊಂಡು ಹೋದ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಅಬ್ದುಲ್ ಪೀರಸಾಬ್ ಶೇಖ್ ಎಂಬುವ ಲಾರಿ ಚಾಲಕನೇ ಹಣ ಕಳೆದುಕೊಂಡವನಾಗಿದ್ದಾನೆ.
ಹುಬ್ಬಳ್ಳಿಯಿಂದಲೇ ಬೊಲೆರೋ ವಾಹನದಲ್ಲಿ ಹಿಂಬಾಲಿಸಿದ್ದ ನಾಲ್ಕು ಜನ ದುಷ್ಕರ್ಮಿಗಳು, ಲಾರಿ ಚಾಲಕ ಮೂತ್ರ ವಿಸರ್ಜನೆಗೆಂದು ಲಾರಿ ನಿಲ್ಲಿಸಿದಾಗ ಏಕಾಏಕಿ ಬಂದು ಅಟ್ಯಾಕ್ ಮಾಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ತಮ್ಮ ಬೊಲೆರೋ ವಾಹನದಲ್ಲೇ ಲಾರಿ ಚಾಲಕನನ್ನು ಹೊತ್ತೊಯ್ದಿದ್ದಾರೆ. ನಂತರ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ಒಯ್ದು ಹಣ ಕಿತ್ತುಕೊಂಡಿದ್ದಾರೆ. ಬಳಿಕ ಲಾರಿ ಚಾಲಕನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಹಾಗಂತ, ಲಾರಿ ಚಾಲಕ ಮುಂಡಗೋಡ ಪೊಲೀಸರಿಗೆ ದೂರು ನೀಡಿದ್ದಾನೆ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.