ಅಂಕೋಲಾ: ನೆರೆಯಿಂದ ಹಾನಿಗೊಳಗಾದ ಉತ್ತರ ಕನ್ನಡ ಜಿಲ್ಲೆಯ ರಸ್ತೆಗಳಿಗೆ 200 ಕೋಟಿ ರೂ. ಬಿಡುಗಡೆಗೊಳಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ನೆರೆ ವೀಕ್ಷಣೆ ಬಳಿಕ ಅಂಕೋಲಾದಲ್ಲಿ ಸಭೆ ನಡೆಸಿದ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ರು.
ಪಿಡಬ್ಲುಡಿ ಇಲಾಖೆಯಿಂದ 100 ಕೋಟಿ ರೂ., ಆರ್‌ಡಿಪಿಆರ್ ವತಿಯಿಂದ 100 ಕೋಟಿ ರೂ. ಹಣ ತುರ್ತು ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ.
10 ಸಾವಿರ ತಕ್ಷಣಕ್ಕೆ..!
ಮನೆ ಕಳೆದುಕೊಂಡ ಅತಿಕ್ರಮಣದಾರರೂ ಸೇರಿ, ಮನೆ ಹಾನಿಗೆ ಕಳೆದ ಬಾರಿಯಂತೆ 10 ಸಾವಿರ ಹಣ, ಮನೆಬಳಕೆ ವಸ್ತುಗಳ ಖರೀದಿಗೆ ತುರ್ತು ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ರು.
ಕಳಚೆ ಗ್ರಾಮ ಸ್ಥಳಾಂತರಕ್ಕೆ ಸೂಚನೆ..!
ಇನ್ನು, ನೆರೆಯಿಂದ ತೀವ್ರ ಭೂಕುಸಿತವಾಗಿರುವ ಕಳಚೆ ಗ್ರಾಮ ವೀಕ್ಷಿಸಿದ್ದ ಸಿಎಂ, ತೀವ್ರ ಹಾನಿಗೊಳಗಾಗಿರುವ ಕಳಚೆ ಗ್ರಾಮವನ್ನು ಪೂರ್ಣ ಸ್ಥಳಾಂತರಕ್ಕೆ ಸೂಚನೆ ನೀಡಿದ್ರು. ಭೂಕುಸಿತದಿಂದ ಮನೆ ನಿರ್ಮಾಣ ಸಾಧ್ಯವಿಲ್ಲದ ಹಿನ್ನಲೆ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ಇನ್ನು, ಗ್ರಾಮಕ್ಕೆ ಅಗತ್ಯವಿರುವ ಸುಮಾರು 15 ಎಕರೆ ಪ್ರದೇಶವನ್ನ ಗುರುತಿಸಲು ತಿಳಿಸಲಾಗಿದ್ದು, ತಕ್ಷಣವೇ ಕಾರ್ಯ ಪ್ರವೃತ್ತರಾಗುವಂತೆ ಸಿಎಂ ಸೂಚಿಸಿದ್ದಾರೆ.
ಇನ್ನು, ಹತ್ತಾರು ಕಡೆ ಭೂಕುಸಿತವಾಗಿರುವ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟಕ್ಕೆ 10 ಕೋಟಿ ಬಿಡುಗಡೆಯ ಭರವಸೆ ನೀಡಿರೋ ಸಿಎಂ, ಮೀನುಗಾರರಿಗಾಗಿ ಕರಾವಳಿಯ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 3 ಸಾವಿರ ವ್ಯಾಕ್ಸಿನ್ ನೀಡಲು ಸೂಚಿಸಿದ್ರು.