ಯಲ್ಲಾಪುರ: ಭಾರೀ ಮಳೆಯಿಂದ ಪ್ರವಾಹದ ಸಂಕಷ್ಟದಲ್ಲಿ ಸಿಲುಕಿದ್ದ ಉತ್ತರ ಕನ್ನಡ ಜಿಲ್ಲೆಗೆ ಇಂದು ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದ್ದಾರೆ.
ಭಾರೀ ಮಳೆಯಿಂದ ಯಲ್ಲಾಪುರ ತಾಲೂಕಿನ ಹಲವು ಕಡೆ ತೀವ್ರ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಸಾಕಷ್ಟು ಹಾನಿ ಸಂಭವಿಸಿತ್ತು. ಅದ್ರಂತೆ ಯಲ್ಲಾಪುರ ತಾಲೂಕಿನ ಅರಬೈಲು ಘಟ್ಟ ಪ್ರದೇಶದಲ್ಲಿ ಜುಲೈ 23 ರಂದು ಹೆದ್ದಾರಿ ಕುಸಿತವಾಗಿತ್ತು. ಹೀಗಾಗಿ, ಗುಡ್ಡ ಕುಸಿತವಾದ ಪ್ರದೇಶವನ್ನು ಸಿಎಂ ಬಸವರಾಜ್ ಬೊಮ್ಮಾಯಿ ವೀಕ್ಷಿಸಿದ್ರು.
ಅಂದಹಾಗೆ, ಅರಬೈಲು ಘಟ್ಟದಲ್ಲಿ ಸುಮಾರು 10 ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತವಾಗಿತ್ತು. ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಗುಡ್ಡ ಕುಸಿತವಾಗಿ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ಪ್ರತಿ ವರ್ಷವೂ ಮಳೆ ಬಂತು ಅಂದ್ರೆ ಈ ಪ್ರದೇಶದಲ್ಲಿ ಇದೇ ಸಮಸ್ಯೆ ಸೃಷ್ಟಿಯಾಗೋ ಕಾರಣಕ್ಕೆ ಶಾಶ್ವತ ಪರಿಹಾರದ ವ್ಯವಸ್ಥೆ ಮಾಡಬೇಕಿದೆ ಅಂತಾ ಸಿಎಂ ಜೊತೆ ಪ್ರವಾಹದ ಸಂಪೂರ್ಣ ಮಾಹಿತಿ ಒದಗಿಸುತ್ತಿದ್ದ ಮಾಜಿ ಸಚಿವ ಶಿವರಾಮ್ ಹೆಬ್ಬಾರ್, ಸಿಎಂ ಗೆ ಮನವರಿಕೆ ಮಾಡಿದ್ರು.
ಅಲ್ಲದೆ, ಇದೇ ವೇಳೆ ಶಾಶ್ವತ ಕಾಮಗಾರಿಗೆ ಸುಮಾರು 70 ಕೋಟಿಗೂ ಅಧಿಕ ಅನುದಾನ ಬೇಕಾಗಿದೆ ಅಂತಾ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಿಎಂ ಬಸವರಾಜ್ ಬೊಮ್ಮಾಯಿ ಗಮನ ಸೆಳೆದ್ರು.