ಶಿಗ್ಗಾವಿ : ವೀರರಾಣಿ ಕಿತ್ತೂರ ಚನ್ನಮ್ಮಾಜಿಯವರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ ವ್ಯಕ್ತಿಯ ವಿರುದ್ದ ಶಿಗ್ಗಾವಿ ನಿಯೋಜಿತ ಚನ್ನಮ್ಮ ಸರ್ಕಲ್‌ನಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಚನ್ನಮ್ಮ ಅಭಿಮಾನಿ ಬಳಗದ ವತಿಯಿಂದ ಪ್ರತಿಭಟಿಸಿ, ನಿಂದಿಸಿದ ವ್ಯಕ್ತಿಯ ಪ್ರತಿಕೃತಿ ದಹನ ಮಾಡಿ ಗಡಿಪಾರಿಗೆ ಅಗ್ರಹಿಸಿದ ಘಟನೆ ಸೋಮವಾರ ಜರುಗಿತು.
ಶಿಗ್ಗಾವಿಯ ವೈದ್ಯ ಡಾ. ಕುಮಾರಗೌಡ ಪಾಟೀಲ ಅವರೇ ಚನ್ನಮ್ಮನವರ ಬಗ್ಗೆ ನಿಂದಿಸಿದ ವ್ಯಕ್ತಿ ಎಂದು ಹೇಳಲಾಗಿದ್ದು ಶಿಗ್ಗಾವಿ ಪಂಚಮಸಾಲಿ ಸಮಾಜದ ಅದ್ಯಕ್ಷ ಶಿವಾನಂದ ಬಾಗೂರ ಅವರು ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಸೋಮವಾರ ಬೆಳಿಗ್ಗೆ ನಿಯೋಜಿತ ಚನ್ನಮ್ಮ ಸರ್ಕಲ್‌ನಲ್ಲಿ ನಿರ್ಮಾಣವಾಗುತ್ತಿರುವ ಕಿತ್ತೂರ ಚನ್ನಮ್ಮಾಜಿ ಅವರ ಪುತ್ಥಳಿ ನಿರ್ಮಾಣ ಕಾಮಗಾರಿ ಸ್ಥಳದ ಹತ್ತಿರ ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಈಶ್ವರಗೌಡ ಪಾಟೀಲ, ನಾಗಪ್ಪ ಅಣ್ಣಿಗೇರಿ, ಬಸವರಾಜ ಲಂಗೋಟಿ ಚಂದ್ರು ಹೆಬ್ಬಾಳ ಅವರುಗಳು ಸೇರಿದಂತೆ ಸಮಾಜದ ಮುಖಂಡರು ಕಾಮಗಾರಿ ವೀಕ್ಷೀಸುತ್ತಿದ್ದಾಗ ಅದೇ ಮಾರ್ಗದಲ್ಲಿ ಬಂದ ಡಾ. ಕುಮಾರಗೌಡ ಪಾಟೀಲ ಚನ್ನಮ್ಮನ ಘೋರಿ ಯಾವಾಗ ಮುಗಿಸುತ್ತೀರಿ ಎಂದು ಅವಹೇಳನಕಾರಿಯಾಗಿ ಪದೇ ಪದೇ ಘೋರಿ, ಘೋರಿ ಎಂದು ಪದ ಬಳಕೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಭಂದಿಸಿದಂತೆ ಪಂಚಮಾಸಾಲಿ ಸಮಾಜದ ಮುಖಂಡರು ಸಭೆ ಸೇರಿ ಪ್ರತಿಭಟನೆಯ ಹೋರಾಟಕ್ಕೆ ಮುಂದಾಗಿದ್ದಾರೆ.
ಭ್ರೀಟೀಷರ ವಿರುದ್ದ ಹೋರಾಡಿದ ವೀರ ಮಾತೆ ಚನ್ನಮ್ಮ ತಾಯಿಗೆ ಅವಮಾನ ಪಡಿಸಿದ್ದಲ್ಲದೆ ಇದು ದೇಶ ದ್ರೋಹದ ಕಾರ್ಯವಾಗಿದೆ ಆದ್ದರಿಂದ ಕೂಡಲೇ ಕಾನೂನು ಕ್ರಮದ ಜೊತೆಗೆ ದೇಶದಿಂದ ಗಡಿಪಾರು ಮಾಡುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಲವಾರು ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಕಿತ್ತೂರಾಣಿ ಚನ್ನಮ್ಮನವರ ಅಭಿಮಾನಿ ಬಳಗದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.