ಬಿಜೆಪಿ ನಾಯಕತ್ವ “ಬದಲೀ” ಆಟದಲ್ಲಿ, ಸೇಫ್ ಆಗ್ತಾರಾ ಹೆಬ್ಬಾರ್..?

ಯಲ್ಲಾಪುರ ಕ್ಷೇತ್ರಕ್ಕೂ ತಾಗತ್ತಾ ಸಿಎಂ ಬದಲಾವಣೆ ಬಿಸಿ..? ಇಂತಹದ್ದೊಂದು ಆತಂಕ ಈಗಾಗಲೇ ಬಹುತೇಕ ವಲಸಿಗ ಸಚಿವರುಗಳ ಕ್ಷೇತ್ರದಲ್ಲಿ ಒಳಗೊಳಗೇ ಹೊಗೆಯಾಡ್ತಿದೆ. ಅದ್ರಂತೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲೂ ಅಂತಹ ಆತಂಕ ಬಹುಶಃ ಒಳಗೊಳಗೇ ತಲ್ಲಣಗೊಳಿಸಿದೆಯಾ.? ಹೌದು, ಅನ್ನುತ್ತಿವೆ ಬಲ್ಲ ಮೂಲಗಳು‌.

ಬದಲಾವಣೆ ಪಕ್ಕಾ..!
ಸಿಎಂ ಯಡಿಯೂರಪ್ಪ ಈಗಷ್ಟೇ ರಾಜೀನಾಮೆ ನೀಡುವ ಸುಳಿವು ನೀಡಿ ಆಗಿದೆ. ಹೈಕಮಾಂಡ್ ಹೇಗ್ ಹೇಳತ್ತೋ ಹಾಗೆ ಕೇಳ್ಕೊಂಡು ಇರ್ತಿನಿ ಅನ್ನೋ ಸಂದೇಶ ರವಾನಿಸಿಯೂ ಆಗಿದೆ. ಜುಲೈ 25 ಕ್ಕೆ ಹೈಕಮಾಂಡ್ ನಾಯಕರಿಂದ ಬರೋ ಅದೇಶಕ್ಕಾಗಿ ಎಲ್ರೂ ಕಾಯ್ತಿವಿ, ಆ ಆದೇಶ ಅದೇನೇ ಬಂದ್ರೂ ಅದ್ರಂತೆ ನಡ್ಕೋತಿವಿ ಅನ್ನೋ ಸ್ಪಷ್ಟ ಸಂದೇಶ ಯಡಿಯೂರಪ್ಪನವರೂ ರವಾನಿಸಿದ್ದಾರೆ. ಇದ್ರೊಂದಿಗೆ ಜುಲೈ 25 ರ ಆದೇಶ ಅದೇನಾಗತ್ತೊ ಅನ್ನೋ ಹಲವು ಆಯಾಮಗಳ ಲೆಕ್ಕಾಚಾರ ಗರಿಗೆದರಿದೆ. ಒಟ್ನಲ್ಲಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಕ್ಕಾ ಅನ್ನಲಾಗ್ತಿದೆ.

ವಲಸಿಗರ ಚಿಂತೆ..!
ಯಾವಾಗ, ಯಡಿಯೂರಪ್ಪನವರ ಖುರ್ಚಿ ಬದಲಾಗತ್ತೆ ಅನ್ನೋ ಸ್ಪಷ್ಟ ಸಂದೇಶ ರಾಜ್ಯ ರಾಜಕೀಯ ಅಂಗಳದಲ್ಲಿ ಚರ್ಚೆಯಾಗತೊಡಗಿತೋ, ಅದ್ರ ಜೊತೆ ಜೊತೆಗೆ ವಲಸಿಗರ ಭವಿಷ್ಯವೇನು ಅನ್ನೋ ಚಿಂತೆಯೂ ಖುದ್ದು ವಲಸಿಗರಿಗೆ ಕಾಡುತ್ತಿದೆ. ಹೀಗಾಗಿನೇ “ಬಾಂಬೇ ಟೀಂ” ಮತ್ತೊಮ್ಮೆ ಪರಸ್ಪರ ಒಂದಾಗುವಂತೆ ಮಾಡಿದೆ. ಅಂದಹಾಗೆ, ಅದ್ಯಾಕೋ ಏನೋ ಇತ್ತಿಚೆಗೆ ಬಾಂಬೆ ಟೀಂ ನಲ್ಲಿ ಒಂದಷ್ಟು ಬಿರುಕು ಎದ್ದು ಕಂಡಿತ್ತು. ರಮೇಶ್ ಜಾರಕಿಹೊಳಿ ಸಿಡಿ ಕೇಸ್ ನಂತರದಲ್ಲಿ ಬಾಂಬೇ ಟೀಂ ನಲ್ಲಿ “ನಮ್ಮಷ್ಟಕ್ಕೆ ನಾವು” ಅನ್ನೋ ಜಾಯಮಾನ ಪ್ರತಿಯೊಬ್ಬ ಸದಸ್ಯರಲ್ಲೂ ಮನೆಮಾಡಿತ್ತು. ಆ ಕುರಿತು ಈಗಾಗಲೇ ಬಾಂಬೆ ಟೀಂ ನವರೇ ಆಗಿದ್ದ ಎಚ್.ವಿಶ್ವನಾಥ್ ಬಹಿರಂಗಗೊಳಿಸಿದ್ದರು. ಅದಿರಲಿ. ಈಗ ನಾಯಕತ್ವ ಬದಲಾವಣೆಯ ಅಂಚಿಗೆ ಬಂದು ನಿಂತಿರೋ ಸಂದರ್ಭದಲ್ಲಿ ನಮ್ಮ ಭವಿಷ್ಯ ಏನು ಅನ್ನೋ “ಕಾಮೆನ್ ಸೆನ್ಸ್” ಆ ಎಲ್ಲಾ ಟೀಂ ಗೆ ಮತ್ತೊಮ್ಮೆ ಬಾಧಿಸುತ್ತಿದೆ.

ಶಿವರಾಂ ಹೆಬ್ಬಾರ್ ಗತಿ ಏನು..?
ನಿಜ, ಕಾರ್ಮಿಕ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ, ಅದಕ್ಕೂ ಮೊದಲು ಯಲ್ಲಾಪುರ ಕ್ಷೇತ್ರದ ಶಾಸಕರಾಗಿ ಶಿವರಾಂ ಹೆಬ್ಬಾರ್ ಇಡೀ ಜಿಲ್ಲೆಯ ಜನರ ಮನಸ್ಸು ಗೆದ್ದಿದ್ದಾರೆ. ಅಸಲು, ಹೆಬ್ಬಾರ್ ಸಚಿವರಾದ ಮೇಲೆ ಇಡೀ ಕ್ಷೇತ್ರದ ಜನಕ್ಕೆ ಅಂತಹದ್ದೊಂದು ಭರವಸೆಯ ಬೆಳಕು ನೀಡಿದ್ದಾರೆ. ಪ್ರತಿಕ್ಷಣವೂ ಕ್ಷೇತ್ರದ ಜನರ ಸಂಕಷ್ಟಗಳೊಂದಿಗೆ ಸ್ಪಂಧಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಇಡೀ ಜಿಲ್ಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಿ, ಏನು ಬೇಕೊ ಅದೇಲ್ಲ ವ್ಯವಸ್ಥೆ ಮಾಡಿದ್ದಾರೆ. ಒಂದರ್ಥದಲ್ಲಿ ಕ್ಷೇತ್ರದ ಮನೆ ಮಾತಾಗಿದ್ದಾರೆ. ಹೀಗಿದ್ದಾಗ ಈಗ ರಾಜ್ಯ ರಾಜಕಾರಣದ ದಿಕ್ಕು ಬದಲಾಗೋ ವೇಳೆ ಶಿವರಾಂ ಹೆಬ್ಬಾರ್ ಗೆ ಅದರ ಎಫೆಕ್ಟ್ ತಾಗತ್ತಾ..? ಹಾಗಾದ್ರೆ ಹೆಬ್ಬಾರ್ ಸಾಹೇಬ್ರ ಗತಿಯೇನು..? ಸಚಿವ ಸ್ಥಾನಕ್ಕೆ ಕುತ್ತು ಬರತ್ತಾ..? ಇಂತೇಲ್ಲ ಥರಾವರೀ ಮಾತುಗಳು, ಪ್ರಶ್ನೆಗಳು ಇಡೀ ಕ್ಷೇತ್ರದ ಮಂದಿಗೆ ಒಂದಿಷ್ಟು ಆತಂಕ ತಂದಿಟ್ಟಿದೆ.

ಏನಾಗಬಹುದು..?
ಹಾಗೇನಾದ್ರೂ, ರಾಜ್ಯ ರಾಜಕೀಯದಲ್ಲಿ ಬದಲಾವಣೆ ಅನ್ನೋದು ಫಿಕ್ಸ್ ಅನ್ನೊದಾದ್ರೆ, ರಾಜ್ಯ ರಾಜಕಾರಣದ ದಿಕ್ಕು ಬದಲಾಗೋದ್ರಲ್ಲಿ ಎರಡು ಮಾತಿಲ್ಲ. ಯಡಿಯೂರಪ್ಪರ ನಂತರ ಯಾರು ಸಿಎಂ ಪಟ್ಟಕ್ಕೇರುತ್ತಾರೆ ಅನ್ನೋ ಕುತೂಹಲ ಒಂದೆಡೆಯಾದ್ರೆ, ಹೊಸ ನಾಯಕತ್ವ ವಲಸಿಗರಿಗೆ ಅದೇಷ್ಟರ ಮಟ್ಟಿಗೆ ಪ್ರಾಧಾನ್ಯತೆ ನೀಡತ್ತೆ ಅನ್ನೋ ಪ್ರಶ್ನೆಯೂ ಎದ್ದಿದೆ. ಹೀಗಾಗಿ, ವಲಸಿಗರಲ್ಲಿ ಒಂದಷ್ಟು ತಳಮಳ ತಂದಿಟ್ಟಿದೆ. ಈಗ ನೀಡಿರೋ ಸ್ಥಾನಮಾನಗಳು ಮುಂದುವರಿಯತ್ತಾ ಅನ್ನೊ ಪ್ರಶ್ನೆ ವಲಸಿಗರಿಗೆ ಇನ್ನಿಲ್ಲದಂತೆ ಕಾಡಿದೆ‌, ಕಾಡುತ್ತಿದೆ.

ಅಷ್ಟಕ್ಕೂ ಹೆಬ್ಬಾರ್ ವಲಸಿಗರಲ್ಲ..!
ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಹೇಳೋದಾದ್ರೆ, ಶಿವರಾಂ ಹೆಬ್ಬಾರ್ ವಲಸಿಗರು ಅಲ್ಲವೇ ಅಲ್ಲ.. ಯಾಕಂದ್ರೆ, ಜಿಲ್ಲೆಯಲ್ಲಿ ಬಿಜೆಪಿ ಕಮಲ ಇನ್ನೂ “ಮೊಗ್ಗಿನ” ಕಾಲದಲ್ಲಿತ್ತು, ಅವಾಗ್ಲೇ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯ ಗಲ್ಲಿ ಗಲ್ಲಿಗಳಿಗೂ ತಿರುಗಿ ಕಮಲ ಅರಳುವಂತೆ ಮಾಡಲು ಶ್ರಮ ಹಾಕಿದ್ದವರಲ್ಲಿ ಹೆಬ್ಬಾರ್ ಕೂಡ ಒಬ್ರು. ಹೀಗಾಗಿ, ಸದ್ಯ ಜಿಲ್ಲೆಯ ಬಿಜೆಪಿ ಮಟ್ಟಿಗೆ ಹೆಬ್ಬಾರ್ ವಲಸಿಗರು ಅಂತಾ ಹೇಳಲು ಸಾಧ್ಯವೇ ಇಲ್ಲ. ಬಹುತೇಕ ಮೂಲ, ತಳಮಟ್ಟದ ಕಾರ್ಯಕರ್ತರು ಹೆಬ್ಬಾರ್ ಸಾಹೇಬ್ರು ಕಾಂಗ್ರೆಸ್ ನಲ್ಲಿ ಇದ್ದಾವಾಗಲೂ “ನಮ್ಮವರು” ಅನ್ನೊ ಅಕ್ಕರೆ ಇಟ್ಟುಕೊಂಡಿದ್ದರು. ಅದು ಎಲ್ಲರಿಗೂ ಗೊತ್ತು. ಅಲ್ದೆ, ಇತ್ತಿಚೆಗೆ ಕಾಂಗ್ರೆಸ್ ತೊರೆದು ಮಾತೃಪಕ್ಷಕ್ಕೆ ವಾಪಸ್ ಬಂದ ನಂತರವೂ ಹೆಬ್ಬಾರ್, ಯಾವತ್ತಿಗೂ ಇವ್ರು ಹಳಬರು, ಇವ್ರು ಹೊಸಬರು ಅನ್ನೋ ಯಾವೊಂದೂ ಬೇಧ ಭಾವನೆಗಳಿಂದ ಯಾರನ್ನೂ ನೋಡಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿ ಕೋನದಲ್ಲಿ ಪ್ರೀತಿ ತೋರಿದ್ದಾರೆ. ನಾವೇಲ್ಲ ಬಿಜೆಪಿಯ ಕುಟುಂಬದವರು ಅಂತಲೇ ಮೈದಡವಿ ಮಾತಾಡಿಸಿದ್ದಾರೆ. ಜೊತೆಯಾಗಿ ಕರೆದುಕೊಂಡು ಹೆಜ್ಜೆಯಿಟ್ಟಿದ್ದಾರೆ. ಹಾಗಂತ ಈ ಮಾತನ್ನು ನಾವು ಹೇಳ್ತಿಲ್ಲ. ಬದಲಾಗಿ ಕ್ಷೇತ್ರದ ಪ್ರತೀ ಕಾರ್ಯಕರ್ತರ ಮನದಾಳದ ಮಾತಿದು.

ಅನಂತಣ್ಣನ ಜೊತೆ..!
ಇನ್ನು ಅನಂತಕುಮಾರ್ ಹೆಗಡೆ ಹಾಗೂ ಹೆಬ್ಬಾರ್ ಜೊತೆ ಜೊತೆಯಾಗೇ ಹೆಜ್ಜೆ ಹಾಕಿದ್ದೋರು, ಅದು 1996 ರ ಹೊತ್ತು, ಅವಾಗಿಂದಲೇ ಅನಂತಕುಮಾರ್ ಹೆಗಡೆ ಇಡೀ ರಾಜ್ಯದ ಹಿಂದೂ ಹುಡುಗರ ಹೃದಯ ಗೆದ್ದು, ಹಿಂದೂ ಹುಲಿ ಅನ್ನಿಸಿಕೊಂಡಿದ್ದ ಸಮಯವದು. ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಅದೇಷ್ಟು ಶ್ರಮ ಹಾಕಿದ್ದಾರೋ ಅಷ್ಟೇ ಶ್ರಮ ಅನಂತಕುಮಾರ್ ಹೆಗಡೆಯವರೂ ಹಾಕಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಘರ್ಜಿಸಿದ್ದ ಹುಲಿಯ ಅರ್ಭಟ ಇನ್ನೂ ನಿಂತಿಲ್ಲ. ಯಾರ ಹಂಗೂ ಇಲ್ಲದೇ, ಇವತ್ತಿಗೂ ಅಂತಹದ್ದೊಂದು ಛಾರ್ಮು ಉಳಿಸಿಕೊಂಡು ಬಂದಿದ್ದವರು ಅನಂತಣ್ಣ. ಹೀಗಾಗಿನೇ ಇಡೀ ರಾಜ್ಯದ ತುಂಬಾ ಇವತ್ತಿಗೂ ಅನಂತಣ್ಣನನ್ನು ಆರಾಧಿಸೋ ಅಸಂಖ್ಯಾತ ಹುಡುಗರಿದ್ದಾರೆ. ಹೀಗಿರೋ ಅನಂತಣ್ಣನ ಜೊತೆ ಅವತ್ತಿನಿಂದಲೂ ಹೆಜ್ಜೆ ಹಾಕಿದ್ದವರು ಶಿವರಾಂ ಹೆಬ್ಬಾರ್. ಆದ್ರೆ ನಡುವೆ ಅದ್ಯಾಕೋ ಏನೋ 2002 ನಂತರ ಕೈ ಪಾಳಯಕ್ಕೆ ಹೆಜ್ಜೆ ಇಟ್ಟು, ಕೊನೆಯದಾಗಿ ಮತ್ತೆ ಮಾತೃ ಪಕ್ಷಕ್ಕೆ ಮರಳಿದ್ದು ಈಗ ಇತಿಹಾಸ. ಹೀಗಿದ್ದಾಗ, ಅದು ಹೇಗೆ ಹೆಬ್ಬಾರ್ ವಲಸಿಗರಾಗೋಕೆ ಸಾಧ್ಯ..?

ಬಿಲ್ ಕುಲ್ ಸೇಫ್..!
ಯಸ್, ಹಾಗೇನಾದ್ರೂ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಿ, ಹೊಸ ಸಿಎಂ ಪಟ್ಟಕ್ಕೇರಿದ್ರೂ, ಅದ್ಯಾರೇ ಸಿಎಂ ಆಗಿ ಬಂದ್ರೂ ಶಿವರಾಂ ಹೆಬ್ಬಾರ್ ಗೆ ಯಾವೊಂದೂ ವ್ಯತ್ಯಾಸವೇ ಆಗಲ್ಲ ಅಂತಿವೆ ಉನ್ನತ ಮೂಲಗಳು. ಯಾಕಂದ್ರೆ, ರಾಜ್ಯ ಸಚಿವ ಸಂಪುಟದಲ್ಲಿ ಅಂತಹದ್ದೊಂದು ಛಾರ್ಮು ಈ ಕ್ಷಣಕ್ಕೂ ಉಳಿಸಿಕೊಂಡು ಬಂದಿದ್ದಾರೆ ಹೆಬ್ಬಾರ್. ಯಾವೊಂದೂ ಕಪ್ಪು ಚುಕ್ಕೆ ಹೊಂದಿಲ್ಲದ ಸಚಿವರಾಗಿ, ತಮಗೆ ನೀಡಿದ್ದ ಖಾತೆಯಲ್ಲಿ ನಿರೀಕ್ಷೆಗೂ ಮೀರಿ ಕಾರ್ಯ ಮಾಡಿ ತೋರಿಸಿದ್ದು ಹೈಕಮಾಂಡ್ ನಾಯಕರಿಗೂ ಮನದಟ್ಟಾಗಿದೆ. ಅದಲ್ಲದೇ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಕಾರಣವಾಗಿದ್ದ 17 ಜನರ ಪೈಕಿ ಹೆಬ್ಬಾರ್ ಕೂಡ ಒಬ್ರು. ಹೀಗಾಗಿ, ಯಡಿಯೂರಪ್ಪನವ್ರು ತಾವು ಆ ಸ್ಥಾನದಿಂದ ಇಳಿಯೊ ಹೊತ್ತಲ್ಲಿ, ಹೈಕಮಾಂಡ್ ಎದುರು ಪ್ರಮುಖವಾಗಿ ಪ್ರಸ್ತಾಪಿಸೋ ಅಂಶವೇ ಇವ್ರೇಲ್ಲರ “ಸ್ಥಾನಮಾನ”ದ ಕುರಿತು. ಹೀಗಿದ್ದಾಗ, ಹೈಕಮಾಂಡ್ ಹೇಗೆ ತಾನೆ ಕಡೆಗಣಿಸಲು ಸಾಧ್ಯ..? ಹಾಗಂತ, ಬಿಜೆಪಿ ಪಡಸಾಲೆಯಲ್ಲಿ ಗಟ್ಟಿ ಚರ್ಚೆಗಳು ನಡೆಯುತ್ತಿವೆ.

ನೋ ಡೌಟ್..!
ಒಟ್ನಲ್ಲಿ, ರಾಜ್ಯ ರಾಜಕಾರಣ ಅದ್ಯಾವ ದಿಕ್ಕಿಗೆ ಹೊರಳಿದ್ರೂ ಹೆಬ್ಬಾರ್ ಸ್ಥಾನಕ್ಕೆ ಯಾವೊಂದೂ ಕಂಟಕ ಬರೋಕೆ ಛಾನ್ಸೇ ಇಲ್ಲ. ಅಂತಹದ್ದೊ‌ಂದು ಗಟ್ಟಿ‌ ನಂಬಿಕೆ ಹೆಬ್ಬಾರ್ ಅಂಗಳದಲ್ಲಿ ಖಾತ್ರಿಯಾಗಿದೆ. ಈ ಕಾರಣಕ್ಕಾಗೇ ಮೊನ್ನೆ ಮಾದ್ಯಮದೊಂದಿಗೆ ಮಾತನಾಡುತ್ತಿದ್ದ ಹೆಬ್ಬಾರ್ “ನಾವು ಹುಟ್ಟುವಾಗಲೇ ಮಂತ್ರಿಗಳಾಗಿ ಹುಟ್ಟಿ ಬಂದಿಲ್ಲ” ಅಂದಿದ್ರು. ಆ ಮೂಲಕ ತಮ್ಮ ರಾಜಕೀಯ ಸಂಘರ್ಷದ ಸುಧೀರ್ಘ ಹಾದಿಯ ಕತೆಯನ್ನು ಒಂದೇ ಮಾತಲ್ಲಿ ವ್ಯಾಖ್ಯಾನಿಸಿದ್ರು. ಹೀಗಾಗಿ, ಬಹುತೇಕ ಗಟ್ಟಿ ಆತ್ಮವಿಶ್ವಾಸದೊಂದಿಗೆ ಇರೋ ಹೆಬ್ಬಾರ್ ಸ್ಥಾನಕ್ಕೆ ಯಾವ ಕಂಟಕವೂ ಇಲ್ಲ ಅನ್ನೋದ್ರಲ್ಲಿ ನೋ ಡೌಟ್..! ಅಂದಹಾಗೆ, ಇದು ಬಿಜೆಪಿ ಅಂಗಳದಲ್ಲಿನ ಈ ಕ್ಷಣದ ಅಪಡೇಟ್..

error: Content is protected !!