ಇಂದೂರು ಕ್ಷೇತ್ರಕ್ಕೆ ಮತ್ತೊಂದು ಹೊಸಮುಖ..! ಠಕ್ಕರ್ ಕೊಡೋಕೆ ರೆಡಿಯಾಗ್ತಿದೆ “ಯುವ ಪಡೆ”

ರಾಜಕಾರಣ ಅಂದ್ರೆನೇ ಹಾಗೆ, ಇಲ್ಲಿ ಯಾವಾಗ ಯಾರು, ಯಾರ್ ಕಾಲ್ ಎಳಿತಾರೋ ಗೊತ್ತೇ ಆಗಲ್ಲ. ಎದುರು ಆಡೋ ಮಾತು ಒಂದಾದ್ರೆ, ತಲೇಲಿ ತಿರುಗಿಸೋ ಲೆಕ್ಕಾಚಾರವೇ ಮತ್ತೊಂದಿರತ್ತೆ. ಇಲ್ಲಿ ಬೆಳಿಗ್ಗೆ ಹೀರೋ ಅನ್ನಿಸಿಕೊಂಡವನು, ಸಂಜೆಯಾಗ್ತಿದ್ದಂತೆ ಜೀರೋ ಆಗಿರ್ತಾನೆ. ಹಾಗೇ, ಜೀರೋ ಆಗಿದ್ದವನು ಏಕಾಏಕಿ ಹೀರೋ ಆಗಿ ಪಟ್ಟಕ್ಕೇರಿರ್ತಾನೆ. ಇಲ್ಲಿ ಎಲ್ಲವೂ ಅವರವರ ಬೌದ್ದಿಕ ತಾಕತ್ತಿನ ಮೇಲೆಯೇ ಡಿಸೈಡ್ ಆಗತ್ತೆ. ಅದಿರಲಿ.

ಮತ್ತಷ್ಟು ಟೈಮ್ ಸಿಕ್ತು..!
ಸದ್ಯ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಚುನಾವಣೆ ಕಾವು ಏರತೊಡಗಿದೆ. ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಡಿಸೆಂಬರ್ ವರೆಗೂ ಚುನಾವಣೆ ನಡೆಸಲ್ಲ ಅಂತಾ ರಾಜ್ಯ ಸರ್ಕಾರ ಖಡಾ ಖಂಡಿತವಾದ ತೀರ್ಮಾನ ಮಾಡಿ ಆಗಿದೆ. ಆದ್ರೂ ಚುನಾವಣೆಯ ಬಿರುಸಿಗೆ ಏನ್ ಅಂದ್ರೆ ಏನೂ ಫರಕ್ ಆಗಿಲ್ಲ. ಒಳಗೊಳಗೇ ನಡೆಯುತ್ತಿರೋ ಮಸಲತ್ತುಗಳೇನು ಕಡಿಮೆಯಾಗಿಲ್ಲ. ಮತ್ತಷ್ಟು ಟೈಮ್ ಸಿಕ್ತು ಅಂತಾ ಹುರಿಯಾಳುಗಳು ಹುಲಿಯಂತೆ ಘರ್ಜಿಸುತ್ತಿದ್ದಾರೆ.

ಇಂದೂರು ಕ್ಷೇತ್ರದ್ದೇ ಪೀಕಲಾಟ..!ಮುಂಡಗೋಡ ತಾಲೂಕಿನ ಮಟ್ಟಿಗೆ ಜಿಪಂ ಚುನಾವಣೆ ಹೈ ವೋಲ್ಟೇಜ್ ಕಣ ಅಂದ್ರೆ ಅದು ಇಂದೂರು ಕ್ಷೇತ್ರ. ಈಗಾಗಲೇ ಈ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಹಗ್ಗ ಜಗ್ಗಾಟಗಳು ಚಾಲ್ತಿ ಪಡೆದುಕೊಂಡು, ಒಳಗೊಳಗೇ ಇನ್ನಿಲ್ಲದ ಪೀಕಲಾಟಕ್ಕೆ ತಂದು ನಿಲ್ಲಿಸಿದೆ. ನಾನೊಲ್ಲೆ, ನಾನೊಲ್ಲೆ ಅಂತಲೇ ರವಿಗೌಡ ಪಾಟೀಲರು ಮತ್ತೊಮ್ಮೆ ಕಣದಲ್ಲಿ ಸೆಡ್ಡು ಹೊಡಿಯೋ ಕಸರತ್ತು ಶುರುವಿಟ್ಟಿದ್ದಾರೆ ಅನ್ನೋ ಸಂಗತಿ ಕ್ಷೇತ್ರದಲ್ಲಿ ಗುಲ್ಲು ಎಬ್ಬಿಸಿದೆ.

ಇತ್ತ ಎರಡೆರಡು ಬಾರಿ ಪಕ್ಷೇತರನಾಗಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಕೂದಲೆಳೆ ಅಂತರದಿಂದ ಸೋತಿದ್ದ ಸಿದ್ದು ಹಡಪದ್ ಏನಾದ್ರೂ ಆಗ್ಲಿ ಈ ಸಾರಿ “ಕಪ್ ನಮ್ದೇ” ಅಂತಾ ಟಿಕೆಟ್ ಪಡೆಯಲು ಜಿದ್ದಿಗೆ ಬಿದ್ದಿದ್ದಾರೆ. ಇನ್ನು ಬಹುತೇಕ ನಾನೇ ಬಿಜೆಪಿ ಅಭ್ಯರ್ಥಿಯಾಗೋದು ಅಂತಾ ತೀವ್ರ ಆಸೆಯಿಟ್ಟು ಕುಳಿತಿದ್ದ ಕೆಂಜೋಡಿ ಗಲಬಿ ಅದ್ಯಾಕೋ ಏನೋ ಒಳಗೊಳಗೇ ಕುದಿಯುತ್ತಿದ್ದಾರೆ. ಆದ್ರೆ ಇದೇಲ್ಲದರ ನಡುವೆ ಕ್ಷೇತ್ರಕ್ಕೆ ಬಿಜೆಪಿಯಿಂದಲೇ ಮತ್ತೊಂದು “ಹೊಸಮುಖ” ಫಿಲ್ಡಿಗೆ ಇಳಿಯಲು ಸಜ್ಜಾಗಿದೆ ಅನ್ನೋ ಮಾತುಗಳೂ ಕೇಳಿ ಬಂದಿದೆ. ಈ ಸಾರಿ ನಾನೂ ಒಂದು ಕೈ ನೋಡಿಯೇ ಬಿಡ್ತಿನಿ ಅಂತಾ ಆ ಯುವಕ ಪಣ ತೊಟ್ಟು ನಿಂತಿದ್ದಾರಂತೆ, ಹಾಗಾದ್ರೆ ಯಾರದು..?

ಬಸನೂ ನಡುವಿನಮನಿ..!
ಯಸ್, ಈ ಹೆಸ್ರು ಬಹುಶಃ ಕ್ಷೇತ್ರಕ್ಕೆ ಹೊಸತು ಅನಿಸತ್ತೆ. ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಯುವಕ, ಅಪ್ಪಟ ಬಿಜೆಪಿ ಕಾರ್ಯಕರ್ತನಾಗಿ ಆ್ಯಕ್ಟಿವ್ ಆಗಿದ್ದಾರೆ. ನಂದಿಕಟ್ಟಾ ಗ್ರಾಮ ಪಂಚಾಯತಿ ಉಪಾಧ್ಯಕ್ಷರೂ ಆಗಿರೋ ಇವ್ರು ಭವಿಷ್ಯದ ರಾಜಕೀಯದಲ್ಲಿ ಗಟ್ಟಿಗೊಳ್ಳಲು ಬೇಕಾದ ಎಲ್ಲಾ ತಯಾರಿ ಶುರುವಿಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ.

ಜಿಪಂ ಗೆ ಅಭ್ಯರ್ಥಿಯಾಗಲು ತಯಾರಿ..!
ಸದ್ಯ ಹೈ ವೋಲ್ಟೇಜ್ ಕಣವಾಗಿ ಮಾರ್ಪಡುತ್ತಿರೋ ಇಂದೂರು ಜಿಪಂ ಕ್ಷೇತ್ರದಲ್ಲಿ ನಾನೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿತಿನಿ ಅಂತಾ ಜಿದ್ದಿಗೆ ಬಿದ್ದಿರೋ ಈ ಯುವಕ, ಈಗಾಗಲೇ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದಾರಂತೆ. ಬಲಿಷ್ಟವಾಗಿರೋ ಯುವ ಪಡೆಯೆ ಇವ್ರ ಬೆನ್ನಿಗೆ ನಿಂತು ಎಲೆಕ್ಷನ್ ಗೆ ಬೇಕಾದ ಎಲ್ಲಾ ಏರ್ಪಾಡು ಮಾಡಿಕೊಳ್ತಿದೆಯಂತೆ, ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶ ಏನ್ ಗೊತ್ತಾ..? ಆ ಯುವ ಆಕಾಂಕ್ಷಿಯ ಜೊತೆಗಿದ್ದು ಬಹುತೇಕ ಅವ್ರನ್ನ ಗಟ್ಟಿಗೊಳಿಸ್ತಿರೋ ಟೀಂ ಬೇರೆ ಯಾರೂ ಅಲ್ಲ, ಈ ಹಿಂದೆ ರವಿಗೌಡ ಪಾಟೀಲರ ಪಡೆಯಲ್ಲಿ ಇದುವರೆಗೂ ಜಯಕಾರ ಹಾಕ್ತಿದ್ದವರೇ ಅನ್ನೋದು ವಿಚಿತ್ರ ಸತ್ಯ.
ಅಂದಹಾಗೆ, ಈ ಸಾರಿ ಬಿಜೆಪಿ, ಯುವಕರಿಗೆ ಆದ್ಯತೆ ನೀಡತ್ತೆ ಅನ್ನೋ ಭರವಸೆಯಲ್ಲಿದ್ದಾರೆ ಈ ಯುವ ಪಡೆ. ಹೀಗಾಗಿ, ಈಗಾಗಲೇ ಸಚಿವ ಶಿವರಾಮ್ ಹೆಬ್ಬಾರ್ ಬಳಿ, ನನಗೂ ಒಂದು ಅವಕಾಶ ಕೊಡಿ ಅಂತಾ ಕೇಳಿಕೊಂಡಿರೋ ಬಸವರಾಜ್, ಆ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಯುವಕರಿಗೆ ಆದ್ಯತೆ ಸಿಗಲಿ ಅಂತಿದಾರೆ..!
ಸದ್ಯ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಆ ಇಬ್ಬರ ನಡುವೆ ತೀವ್ರ ಪೈಪೋಟಿ ಈಗಾಗಲೇ ರಣರೋಚಕವಾಗಿದೆ. ರವಿಗೌಡ ಪಾಟೀಲ್ ಹಾಗೂ ಸಿದ್ದು ಹಡಪದ್ ನಡುವಿನ ಟಿಕೆಟ್ ಕದನ ಹೆಬ್ಬಾರ್ ಅಂಗಳದಲ್ಲಿದೆ. ಈ ಸಾರಿ ನಾನು ಸ್ಪರ್ಧಿಸಲ್ಲ ಅಂತಾ ಈಗಾಗಲೇ ಸಾರ್ವಜನಿಕವಾಗಿ ಹೇಳಿಕೊಂಡಿರೋ ರವಿಗೌಡ ಪಾಟೀಲರು, ಈ ಸಾರಿ ಯುವಕರು, ಹೊಸಮುಖಗಳಿಗೆ ಅವಕಾಶ ಕೊಡೋಣ ಅಂದಿದ್ದಾರಂತೆ. ಇದೇ ಮಾತಿನ ಮೇಲೆ ಯುವಕ ಬಸವರಾಜ್ ನನಗೇ ಟಿಕೆಟ್ ಕೊಡಿ ಗೆದ್ದು ಬರ್ತಿನಿ ಅಂತಾ ಸೆಲ್ಪಿ ವಿಡಿಯೋದಲ್ಲಿ ಮನವಿ ಮಾಡ್ಕೊಂಡಿದ್ದಾರೆ.

ಅದೇನು ಹುಡುಗಾಟಾನಾ..?
ನಿಜ, ಯಾವಾಗ ಆ ಹುಡುಗನೊಬ್ಬ ನಂಗೂ ಜಿಪಂ ಚುನಾವಣೆಗೆ ಸ್ಪರ್ಧಿಸೋ ಅರ್ಹತೆ ಇದೆ, ನಂಗೇ ಛಾನ್ಸ್ ಕೊಡಿ ಅಂತಾ ಸಣ್ಣಗೇ ದನಿ ಎಬ್ಬಿಸಿದ್ರೊ ಅವಾಗ್ಲೇ ಕೆಲವು ನಾಯಕರುಗಳಿಗೆ ಚೇಳು ಬಿಟ್ಟಂತಾಗಿದೆಯಂತೆ.. ಏನ್ರಿ ಅದೇನು ಹುಡುಗಾಟಾನಾ..? ನಂದಿಕಟ್ಟಾ, ಹುಲಿಹೊಂಡ, ಬಸಾಪುರದಲ್ಲಿ ಒಂದಿಷ್ಟು ಹವಾ ಮೇಂಟೇನ್ ಮಾಡಿಬಿಟ್ರೆ ಮುಗಿತಾ..? ಕ್ಷೇತ್ರದ ವ್ಯಾಪ್ತಿ ದೊಡ್ಡದಿದೆ. ಆ ಹುಡುಗನಿಗೆ ನಿಭಾಯಿಸೋಕೆ ಸಾಧ್ಯಾನಾ..? ಅಂತೇಲ್ಲ ಒಳಗೊಳಗೆ ಬಿಸಿ ಏರಿಸಿಕೊಳ್ತಿದಾರಂತೆ. ಹಾಗಂತ, ಆ ನಾಯಕರುಗಳ ಮಾತು ತಳ್ಳಿ ಹಾಕೋಕೂ ಆಗಲ್ಲ. ಯಾಕಂದ್ರೆ ಇಡೀ ಇಂದೂರು ಜಿಪಂ ಕ್ಷೇತ್ರದ ಮತದಾರ ಪ್ರಬುದ್ಧನಿದ್ದಾನೆ. ಇಲ್ಲಿ ಅಳೆದು ತೂಗಿ ಬೆಂಬಲಿಸುವಷ್ಟು ಮತದಾರ ಪ್ರಬುದ್ಧನಾಗಿದ್ದಾನೆ. ಹಣ, ಹೆಂಡಕ್ಕೆ ಮಾರಿಕೊಳ್ಳೊ ಮನಸ್ಥಿತಿ ಕಳೆದ ಚುನಾವಣೆ ಹೊತ್ತಲ್ಲೇ ಮುಗಿದು ಹೋಗಿದೆ.

ಹಣಬಲ‌ ನಡಿಯಲ್ಲ..!
ಇನ್ನು ಹಣದ ಹೊಳೆಯಲ್ಲಿ ಈಸಬಲ್ಲೆ ಅನ್ನೋ ಹುಂಬತನವೂ ಇಲ್ಲಿ ವರ್ಕೌಟ್ ಆಗೋದು ಬಹುತೇಕ ಡೌಟೇ. ಯಾಕಂದ್ರೆ, ಅದೇಲ್ಲ “ಕತ್ತಲ ರಾತ್ರಿ”ಗಷ್ಟೇ ಸೀಮಿತವಾಗಿ ಹೋಗಿದೆ. ನೋಟುಗಳು ಮತಗಳಾಗಿ ಕನ್ವರ್ಟ್ ಆಗೋಕೆ ಛಾನ್ಸೇ ಇಲ್ಲ.. ಹೀಗಿದ್ದಾಗ, ಈಗಷ್ಟೇ ರಾಜಕೀಯದಲ್ಲಿ ಕಣ್ಣು ತೆರೆದಿರೋ ಹುಡುಗನಿಗೆ ಅಂತಹದ್ದೊಂದು ಅವಕಾಶ ಕೊಟ್ರೆ ಅದೇನು ಕಡಿದು ಗುಡ್ಡೆ ಹಾಕೋಕೆ ಆಗತ್ತೆ..? ಹಾಗಂತಾ ಉರಿದು ಬೀಳ್ತಿದ್ದಾರಂತೆ ಕೆಲವ್ರು. ಹೀಗಾಗಿ, ಈ ಯುವ‌ಪಡೆಯ ಟಿಕೆಟ್ ಕದನ ರೋಚಕವಾಗೋ ಚಾನ್ಸ್ ಇದೆ.

ಪ್ರತಿನಿತ್ಯ ರಾತ್ರಿ ಮೀಟಿಂಗ್..!
ನಂಗೂ ಟಿಕೆಟ್ ಬೇಕು ಅಂತಾ ಟಿಕೆಟ್ ಗಾಗಿ ಈಗಿಂದಲೇ ತಯಾರಿ ಶುರುವಿಟ್ಟಿರೋ ಆ ಯುವ ಪಡೆ, ಪ್ರತಿದಿನ ರಾತ್ರಿ ಮೀಟಿಂಗ್ ಮಾಡ್ತಿದೆಯಂತೆ.. ಪ್ರತಿ ದಿನವೂ ಇಡೀ ಕ್ಷೇತ್ರದ ಹಳ್ಳಿಗಳ ಯುವ ಟೀಂ ಗೆ ಬುಲಾವ್ ಕೊಟ್ಟು ಗಪ್ ಚುಪ್ ಆಗಿಯೇ ತಮಗೆ ಹೇಗೇಲ್ಲ ಬೇಕೊ ಹಾಗೆ ಸಂಘಟನೆ ಮಾಡಿಕೊಳ್ತಿದೆ. ಅಸಲು, ಈ ಟೀಂ ನಲ್ಲಿ ಬಹುತೇಕ ಪ್ರಬುದ್ಧರು, ವೆಲ್ ಎಜ್ಯುಕೆಟೆಡ್ ಹುಡುಗರೇ ತುಂಬಿಕೊಂಡಿದ್ದಾರಂತೆ. ಹೀಗಾಗಿ, ಈ ಟೀಂ, ಬರುವ ಚುನಾವಣೆಯಲ್ಲಿ ಅಂತಹದ್ದೊಂದು ಠಕ್ಕರ್ ಕೊಡೋಕೆ ಈಗಾಗಲೇ ರೆಡಿಯಾಗ್ತಿದೆ ಅನ್ನೋದು ಗಪ್ ಚುಪ್ ಮಾತು.

ಕಾಂಗ್ರೆಸ್ ನಿಂದಲೂ ಆಫರ್..!
ಇನ್ನು, ಹೀಗೇಲ್ಲ ವ್ಯವಸ್ಥಿತವಾಗಿ ಎಲೆಕ್ಷನ್ ಗೆ ರೆಡಿಯಾಗಿರೋ ಯುವ ಟೀಂ ಮೇಲೆ ಕಾಂಗ್ರೆಸ್ ಕಣ್ಣೂ ಬಿದ್ದಿದೆ ಅನ್ನೋದು ಇನ್ನೊಂದು ಮಗ್ಗಲಿನ ಮಾತು. ಇವ್ರ ಅಂತರಿಕ ಸಂಘಟನೆ ನೋಡಿ, ಖುದ್ದು ಕಾಂಗ್ರೆಸ್ ಮುಖಂಡರಿಂದಲೇ ಅಂತಹದ್ದೊಂದು ಆಫರ್ ಈಗಾಗಲೇ ಬಂದು ಆಗಿದೆಯಂತೆ. ಆದ್ರೆ, ಬಹುತೇಕ‌ ಬಿಜೆಪಿಯನ್ನೇ ಉಸಿರಾಗಿಸಿಕೊಂಡಿರೋ ಈ ಯುವ ಪಡೆ, ಅಂತಹ ಯಾವ ಆಫರ್ ಗೂ ಸೊಪ್ಪು ಹಾಕಿಲ್ಲವಂತೆ. ಈ ನಡುವೆ, ಬಿಜೆಪಿಯ ಅದ್ಯಾವ ಮಟ್ಟಿಗೆ ಯುವಕರಿಗೆ ಆದ್ಯತೆ ನೀಡತ್ತೆ ಅನ್ನೋದು ಸದ್ಯದ ಕುತೂಹಲ.
ಒಟ್ನಲ್ಲಿ, ದಿನದಿಂದ ದಿನಕ್ಕೆ ಇಂದೂರು ಜಿಲ್ಲಾ ಪಂಚಾಯತ ಕ್ಷೇತ್ರದ ಅಖಾಡ ರಂಗೇರುತ್ತಿದೆ.
ಕ್ಷೇತ್ರದಲ್ಲಿ ಗಪ್ ಚುಪ್ ಆಗೇ ಅದೇಷ್ಟೋ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಹೊಸ ಹೊಸ ಮುಖಗಳು ರಾಜಕೀಯ ಅಂಗಳದಲ್ಲಿ ಅರಳಲು ಸಜ್ಜಾಗಿವೆ. ಒಂದರ್ಥದಲ್ಲಿ ಇದು ಮುಂಡಗೋಡ ಮಟ್ಟಿಗೆ ಒಳ್ಳೆಯ ಬೆಳವಣಿಗೆ ಅನಿಸತ್ತೆ. ಯಾಕಂದ್ರೆ ರಾಜಕೀಯಕ್ಕೆ ಯುವ ಪಡೆ ಎಂಟ್ರಿ ಆಗಲೇ ಬೇಕಿರೋದು ಸದ್ಯದ ಅವಶ್ಯಕತೆ.

error: Content is protected !!