ಮುಂಡಗೋಡಿನಲ್ಲಿ ರವಿವಾರ ಭೀಕರ ಹತ್ಯೆಯಾಗಿದೆ. ಯುವಕನೋರ್ವನ ಪ್ರಾಣ, ಹಂತಕರ ರಕ್ತದಾಹಕ್ಕೆ ಬಲಿಯಾಗಿದೆ. ಪೊಲೀಸರೂ ಒಂದರ್ಥದಲ್ಲಿ ದಿಗಿಲಿಗೆ ಬೀಳುವಂತಾಗಿದೆ. ಅಸಲು, ಮುಂಡಗೋಡಿನ ಪರಿಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟು ಹೋಯ್ತಾ..? ಈ ಪ್ರಶ್ನೆ ತಾಲೂಕಿನ ಪ್ರತಿಯೊಬ್ಬ ನಾಗರೀಕನಿಗೂ ಆತಂಕ ತಂದಿಟ್ಟಿದೆ.
ಅದ್ಯಾಕೋ ಗೊತ್ತಿಲ್ಲ, ನಂಗೆ ಈ ಕ್ರೈಂ ವರದಿ ಮಾಡೋಕೆ ಮನಸ್ಸೇ ಬರ್ಲಿಲ್ಲ.. ಈ ಮರ್ಡರ್ ವಿಷಯವಾಗಿ ಏನೂ ಬರಿಯೋದೇ ಬೇಡ ಅಂತಾ ಅನಕೊಂಡಿದ್ದೆ, ಯಾಕ್ ಗೊತ್ತಾ..? ಒಂದು ಕಾಲದಲ್ಲಿ ಮುಂಡಗೋಡ ತಾಲೂಕು ಹೇಗಿತ್ತು..? ಈಗ ಹೇಗಾಗಿದೆ..? ಅಯ್ಯೋ, ನೆನಪಿಸಿಕೊಂಡ್ರೆ ಇನ್ನಿಲ್ಲದ ಆತಂಕ ಹುಟ್ಟಿಸಿದೆ. ಮೊನ್ನೆಯಿಂದಲೂ ಹತ್ತಾರು ಪೋನ್ ಕಾಲ್ ಗಳು..! ಏನ್ರಿ ಇದೇಲ್ಲ..? ಏನಾಗಿದೆ ನಮ್ಮ ಮುಂಡಗೋಡಿಗೆ..? ಹಿಂಗ್ಯಾಕೆ ಹೆಣಗಳು ಉರುಳ್ತಿವೆ..? ರೌಡಿಸಂ ಅನ್ನೋದರ ಗಂಧ ಗಾಳಿಯೂ ಗೊತ್ತಿರದ ಮುಂಡಗೋಡಿನ ಮಂದಿಯ ಬಾಯಲ್ಲಿ, ಮನಸಲ್ಲಿ ಬರೀ ಆತಂಕ.. ಆತಂಕ.. ಆತಂಕ…
ಆತ್ಮಹತ್ಯೆ ಸುದ್ದಿಗೇ ಹೆದ್ರೊ ಜನ ನಾವು..!
ನಿಜಾ ರೀ, ಅಲ್ಯಾವನೋ ಒಬ್ಬ ನೇಣು ಬಿಗಿದೋ, ವಿಷ ಕುಡಿದೋ ಆತ್ಮಹತ್ಯೆ ಮಾಡಿಕೊಂಡ ಅಂತಾ ಸುದ್ದಿ ತಿಳಿದ್ರೆನೇ ಹುಬ್ಬೇರಿಸಿ ನೋಡೋ ಮುಂಡಗೋಡಿನ ಶಾಂತ ಸ್ವಭಾವದ ಮಂದಿ ನಾವು. ಇನ್ನು ಕೊಲೆ, ಪಾತಕದ ಸುದ್ದಿ ಕೇಳಿದ್ರೆ ಏನಾಗಬೇಡ..? ಅಡ್ಡಡ್ಡ ಮಲಗಿಸಿ ಕತ್ತು ಕೊಯ್ದು ಬೀಕರವಾಗಿ ಕೊಂದು ಬೀಸಾಡಿದ್ದ ಹೆಣ ನೋಡಿದ್ರೆ ಹೇಗಾಗಿರಬೇಡ..? ಯಸ್, ಅಕ್ಷರಶಃ ಆತಂಕದಲ್ಲಿದೆ ಮುಂಡಗೋಡ..
ಬೇರು ಬಿಡ್ತಾ ರೌಡಿಸಂ..?
ರವಿವಾರ ಬೆಳ್ಳಂ ಬೆಳಿಗ್ಗೆ ನ್ಯಾಸರ್ಗಿ ರಸ್ತೆಯಲ್ಲಿ ಓರ್ವ ಯುವಕನ ಹೆಣ ಬಿದ್ದಿದೆ ಅನ್ನೋ ಸುದ್ದಿ ಹೊರ ಬೀಳ್ತಿದ್ದಂತೆ ತಾಲೂಕಿನಾಧ್ಯಂತ ದುಗುಡ ಶುರುವಾಗಿದೆ. ಇನ್ನು ಯಾವುದೋ ಕೌಟುಂಬಿಕ ಕಲಹಕ್ಕೊ, ಆಸ್ತಿ ವ್ಯಾಜ್ಯಕ್ಕೋ ಕೊಲೆಯಾದ್ರೆ ಆ ಮಾತೇ ಬೇರೆ, ಆದ್ರೆ ಇಲ್ಲಿ ಆಗ್ತಿರೋದೇನು..? ಥೇಟು ಸಿನಿಮಾ ಸ್ಟೈಲ್ ನಲ್ಲೇ ಮರ್ಡರ್ ಗಳು ಆಗ್ತಿವೆಯಲ್ಲ..? ಹಾಗಾದ್ರೆ ಮುಂಡಗೋಡ ತಾಲೂಕಿನಲ್ಲಿ ರೌಡಿಸಂ ಅನ್ನೋದು ಬೇರು ಬಿಟ್ಟು ಆಯ್ತಾ..? ಪಾತಕಲೋಕ ಮುಂಡಗೋಡ ತಾಲೂಕಿಗೆ ಎಂಟ್ರಿ ಆಗೇ ಹೋಯ್ತಾ..? ಇಂತಹದ್ದೊಂದು ಆತಂಕದ ಪ್ರಶ್ನೆ ಇಡೀ ಮುಂಡಗೋಡ ತಾಲೂಕಿನ ಜನರು ಬೆಚ್ಚಿ ಬೀಳುವಂತೆ ಮಾಡ್ತಿದೆ. ಅಂದಹಾಗೆ, ಇದು ಮೂರು ತಿಂಗಳ ಅಂತರದಲ್ಲಿ ನಡೆದಿರೋ ಎರಡನೇ ಭೀಕರ ಹತ್ಯೆ.
ರಿವೇಂಜ್ ಮರ್ಡರ್..?
ಕಳೆದ ಎಪ್ರಿಲ್ 29 ರಂದು ಹರ್ಷ ಬೆಂದ್ರಾಳೆ ಭೀಕರವಾಗಿ ಕೊಲೆಯಾಗಿದ್ರು. ಆ ಘಟನೆಯ ರಕ್ತದ ಕಲೆಗಳು ಬಹುಶಃ ಇನ್ನೂ ಮಾಸೇ ಇಲ್ಲವೆನೋ, ಆದ್ರೆ, ಅಷ್ಟರಲ್ಲೇ ಅದೇ ಮಾದರಿಯ ಮತ್ತೊಂದು ಭೀಕರ ಹತ್ಯೆ ನಡೆದು ಹೋಗಿದೆ. ಅಷ್ಟಕ್ಕೂ ನಿನ್ನೆ ರವಿವಾರ ನಡೆದಿರೋ ಹತ್ಯೆ, ಅದ್ಯಾವ ಆ್ಯಂಗಲ್ ನಿಂದ ನೋಡಿದ್ರೂ ಥೇಟು ರಿವೇಂಜ್ ಮರ್ಡರ್ ಥರಾನೇ ಕಾಣ್ತಿದೆ. ಹಾಗಂತ ಕೊಲೆಯಾದ ಹುಡುಗನ ಹೆಣ ನೋಡಿದ ಎಂಥವರಿಗೂ ಅರ್ಥ ಆಗ್ತಿದೆ. ಆದ್ರೆ, ಪೊಲೀಸ್ರ ತನಿಖೆ ನಂತ್ರ ಸತ್ಯ ಹೊರಬರಲಿದೆ.
ಎಲ್ಲಿ ಹೋಯ್ತು ಸುವ್ಯವಸ್ಥೆ ಮಾತು..?
ಇದು ಮುಂಡಗೋಡ ತಾಲೂಕಿನ ಪ್ರತೀ ನಾಗರೀಕನ ಪ್ರಶ್ನೆ. ಅಂದಹಾಗೆ, ತಾಲೂಕಿನಲ್ಲಿ ಮಟ್ಕಾ ಅನ್ನೋದು ಮನೆ ಮಾತಾಗಿದೆ. ಈಗೀಗ ತಾಲೂಕಿನ ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲೂ ಸರಾಯಿ ಸೇಲ್ ಆಗ್ತಿದೆಯಾ ಅನ್ನೋವಷ್ಟು ವಿಸ್ತರಿಸಿಕೊಂಡಿದೆ. ತೀರ ಅನ್ನುವಷ್ಟರ ಮಟ್ಟಿಗೆ ಯುವಕರು ನಶೆಯ ದಾಸರಾಗ್ತಿದಾರೆ. ನಶೆಯಲ್ಲೇ ಥರಾವರೀ ಕ್ರೈಂ ಗಳು ನಡೆದು ಹೋಗ್ತಿವೆ. ಇದೇಲ್ಲದರ ಅರಿವಿದ್ದರೂ ಕೆಲವು ಸಾರಿ ಪೊಲೀಸರಿಗೂ ಏನೂ ಮಾಡಲಾಗದ ಸ್ಥಿತಿ. ಯಾಕಂದ್ರೆ ಎಲ್ಲದಕ್ಕೂ ರಾಜಕೀಯ “ಪೋನ್ ಕಾಲ್” ಗಳ ಕಾಟ. “ಸಾಹೇಬ್ರೆ ಅವನು ನಮ್ಮ ಹುಡುಗ” ಅಂತಾ ಖಾಕಿಗಳನ್ನೂ ಕೈ ಕಟ್ಟಿ ಹಾಕಲಾಗ್ತಿದೆಯಂತೆ. ಹೀಗಾದಾಗ, ನಮಗೇಲ್ಲ ಏನ್ರಿ ಮಾಡೋಕೆ ಆಗತ್ತೆ ಅಂತಾ ಅಳಲು ತೋಡಿಕೊಳ್ತಾರೆ ಕೆಲವ್ರು.
ನಶೆಯಲ್ಲೇ ಕ್ರೈಂ..?
ಇದನ್ನ ಇಲ್ಲಿ ಹೇಳಲೇಬೇಕಿದೆ. ಮುಂಡಗೋಡಿನಲ್ಲಿ ಈಗೀಗ ಹೇರಳವಾಗಿ ಎಲ್ಲೆಂದರಲ್ಲಿ ಸರಾಯಿ ಸಿಗ್ತಿದೆ. ಅಧಿಕೃತ ವೈನ್ ಶಾಪ್ ಗಳಲ್ಲೇ ಮದ್ಯ ಖರೀಧಿಸಬೇಕೆಂದಿಲ್ಲ. ಕೆಲವು ಹೊಟೇಲು, ದಾಬಾಗಳಲ್ಲಿ ಕುಳಿತು ನಿಮಗೆ ಯಾವ ಬ್ರ್ಯಾಂಡ್ ಬೇಕೋ ಆ ಬ್ರ್ಯಾಂಡ್ ಸರಾಯಿ ಆರ್ಡರ್ ಕೊಡಬಹುದು.
ಹೀಗೆ, ಎಲ್ಲೆಂದರಲ್ಲಿ ಮದ್ಯ ಸಿಗ್ತಿರೋ ಕಾರಣಕ್ಕೇ ಯುವಕರು ನಶೆಯ ದಾಸರಾಗ್ತಿದಾರಾ..? ಅಂತಹ ನಶೆಯ ಗುಂಗಿನಲ್ಲೇ ಕ್ರೈಂ ಗಳು ನಡೆದು ಹೋಗ್ತಿವೆಯಾ..? ಪಾತಕಲೋಕದತ್ತ ಯುವಕರ ಸೆಳೆತ ಶುರುವಾಗ್ತಿದೆಯಾ..? ಇಂತಹದ್ದೊಂದು ಆತಂಕ ತಾಲೂಕಿನ ಬಹುತೇಕ ತಂದೆ ತಾಯಿಗಳದ್ದು. ಹೀಗಾಗಿನೇ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಮದ್ಯ ಮಾರಾಟದ ವಿರುದ್ಧ ಮಹಿಳೆಯರೇ ಸಿಡಿದು ನಿಂತಿದ್ರು.
ಅಸಲು ದಕ್ಷರಿದ್ದಾರೆ..!
ನಿಜ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಮೂವರೂ ದಕ್ಷ ಅಧಿಕಾರಿಗಳೇ ಇದ್ದಾರೆ. ಪಿಐ ಪ್ರಭುಗೌಡ, ಕ್ರೈಂ ಪಿಎಸ್ ಐ ಜಕ್ಕಣ್ಣವರ್, ಇನ್ನೋರ್ವ ಪಿಎಸ್ ಐ ಬಸವರಾಜ್ ಮಬನೂರು ಸೇರಿ ಸಾಕಷ್ಟು ಶ್ರಮಿಸ್ತಿದಾರೆ. ಆದ್ರೆ ವ್ಯವಸ್ಥೆ ಅನ್ನೋದೇ ಹಾಗೆ ನಡೀತಿರೋವಾಗ ಅವ್ರಾದ್ರೂ ಏನ್ ಮಾಡೋಕೆ ಸಾದ್ಯ ಅಲ್ವಾ..? ನಾವೇಲ್ಲ ಪೊಲೀಸರಿಗೂ ಸಾಥ್ ನೀಡಬೇಕಾದ ಅವಶ್ಯಕತೆ ಇದೆ ತಾನೆ..? ಅದ್ರಲ್ಲೂ ಸಣ್ಣ ಸಣ್ಣ ವಿಷಯಕ್ಕೂ ಪೋನ್ ಕಾಲ್ ಮೂಲಕ “ಅವ್ರು ನಮ್ಮವರು ಬಿಟ್ಟಬಿಡಿ” ಅನ್ನೋ ಜಾಯಮಾನ ಬದಲಾಗಬೇಕಿದೆ. ಪೊಲೀಸರ ಕೈ ಕಟ್ಟದೇ, ಅವ್ರದ್ದೇ ಆದ ಕ್ರಮಗಳನ್ನ ಜರುಗಿಸಲು ತೊಡರಾಗುವುದನ್ನು ನಿಲ್ಲಿಸಬೇಕಿದೆ. ಅಂದಾಗ ಮಾತ್ರ ಮುಂಡಗೋಡ “ನಮ್ಮ” ದಾಗಿ ಉಳಿಸಿಕೊಳ್ಳೊಕೆ ಸಾಧ್ಯವಾಗಬಹುದು. ಅದೇನೇ ಆಗ್ಲಿ ನಂಬಿಕೆ ಇಟ್ಟುಕೊಳ್ಳೊದು ನಮ್ಮ ಅನಿವಾರ್ಯ..!
ಆದಷ್ಟು ಬೇಗ ನಮ್ಮ ಮುಂಡಗೋಡ ಮೊದಲಿನಂತಾಗಲಿ, ಯಾರ್ಯಾರದ್ದೋ ದುಶ್ಮನಿಗಾಗಿ, ಇನ್ಯಾರದ್ದೋ ಬಡಜೀವಗಳು ಬಲಿಯಾಗದಿರಲಿ.. ಇದು ತಾಲೂಕಿನ ಪ್ರತಿಯೊಬ್ಬ ಪ್ರಜೆಯ ಹಂಬಲ..!