ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲ ನಿವಾಸಿಗಳು ಇಂದು ಸಿಡಿದೆದ್ದಿದ್ದಾರೆ. ತಮಗೆ ಸರ್ಕಾರ ನೀಡಿದ್ದ ನಿವೇಶನಗಳನ್ನು ವಾಪಸ್ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ತಹಶೀಲ್ದಾರರಿಗೆ ಮತ್ತೊಮ್ಮೆ ಮನವಿ ನೀಡಿದ್ದಾರೆ.
ಬಡವರ ಸೂರು ಕಸಿದುಕೊಂಡ್ರಾ.?
ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51ರಲ್ಲಿ 16 ನಿವೇಶನಗಳನ್ನ ಹಂಚಿತ್ತು. ಹಾಗೆ ಹಂಚಿದ್ದ ನಿವೇಶನಗಳನ್ನು ಪಕ್ಕದ ಜಮೀನು ಅಂದ್ರೆ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ ಅಲ್ಲಿನ ನಿವಾಸಿಗಳು ಮನವಿಯಲ್ಲಿ ಆರೋಪಿಸಿದ್ದಾರೆ.
ಹಾಗೇ, ಹಂಚಿಕೆ ಮಾಡಿದ್ದ ನಿವೇಶನಗಳನ್ನು ಅತಿಕ್ರಮಣ ಮಾಡಿಕೊಂಡಿದ್ದನ್ನು ಬಿಟ್ಟುಕೊಡಿ ಅಂತಾ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಅವ್ರು ಕ್ಯಾರೇ ಅಂತಿಲ್ಲವಂತೆ, ಅಲ್ದೇ ಹಾಗೆ ಕೇಳಿದ್ರೆ ಮಚ್ಚು, ಕೊಡಲಿಗಳನ್ನ ತಂದು ಹಲ್ಲೆಗೆ ಬರ್ತಾರೆ ಅಂತಾ ಮನವಿಯಲ್ಲಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಇನ್ನು ಇಂತಹದ್ದೊಂದು ಅತಿಕ್ರಮಣ ಆರೋಪ ಮಾಡಿ ಈಗಾಗಲೇ ಮುಂಡಗೋಡ ತಹಶೀಲ್ದಾರರಿಗೆ ಅಲ್ಲಿನ ನಿವಾಸಿಗಳು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು. ಆನಂತರ ಶಿರಸಿ ಉಪವಿಭಾಗಾಧಿಕಾರಿಗಳಿಗೂ ಮನವಿ ಮಾಡಿದ್ರು. ಈಗ ಮತ್ತೆ ತಹಶೀಲ್ದಾರರಿಗೆ ಮನವಿ ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನು, ಮನವಿ ಸ್ವೀಕರಿಸಿದ ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸನವಳ್ಳಿ ಗ್ರಾಮದ ಬೈರಪ್ಪ ಹನಕನಳ್ಳಿ, ಫಕ್ಕೀರಪ್ಪ ಕೆರಿಹೊಲದವರ್, ಅಶೋಕ ಮಟ್ಟಿಮನಿ, ಶಿವಮೂರ್ತಯ್ಯ ಹಿರೇಮಠ, ಗಂಗಪ್ಪ ಕೆರಿಹೊಲದವರ್, ಶಂಭು ಕೆರಿಹೊಲದವರ್, ಹಸನ್ ಸಾಬ್ ಸಿದ್ಧಿ, ನಾಗಪ್ಪ ಯಲ್ಲಾಪುರ, ತಿರಕಪ್ಪ ಸುಣಗಾರ್ ಹಾಗೂ ಭಾಷಾಸಾಬ್ ಸಿದ್ದಿ ಸೇರಿದಂತೆ ಹಲವರು ಈ ಪ್ರತಿಭಟನೆ ನೇತೃತ್ವ ವಹಿಸಿದ್ರು.