ಮುಂಡಗೋಡ; ತಾಲೂಕಿನ ಮಳಗಿ ಧರ್ಮಾ ಜಲಾಶಯದ ಅಂಗಳದಲ್ಲಿ ನಡೆಯಬಾರದ ರಾಬರಿ ನಡೆದು ಹೋಗಿದೆ. ದೂರದ ಬೆಳಗಾವಿಯ ಚಿಕ್ಕೋಡಿಯಿಂದ ಬಂದಿದ್ದ ಆ ಇಬ್ಬರೂ ಬರೋಬ್ಬರಿ 28 ಲಕ್ಷ ರೂ. ಅನಾಮತ್ತಾಗಿ ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ ಮುಂಡಗೋಡ ಪೊಲೀಸ್ರು ಎಲ್ಲಾ ಆಯಾಮಗಳಲ್ಲೂ ತನಿಖೆಗಿಳಿದಿದ್ದಾರೆ. ಅದ್ರಂತೆ, ದಾಸನಕೊಪ್ಪ ಭಾಗದ ಕೆಲವರನ್ನ ಪೊಲೀಸ್ರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರಂತೆ. ಇದು ಈ ಕ್ಷಣದವರೆಗೆ ನಡೆದಿರೋ ಅಪಡೇಟ್ಸ್..!
ಆದ್ರೆ, ಶುಕ್ರವಾರ ಅಂತಹದ್ದೊಂದು ಘಟನೆ ನಡೆದು ಹೋಯ್ತು ಅಂತಾ ಇನ್ನಿಲ್ಲದ ಊಹಾಪೋಹಗಳು, ಕತೆಗಳು ಹುಟ್ಟಿಕೊಂಡಿದ್ದವು. ಗೋಡಂಬಿ ಬೀಜ ಖರೀಧಿಯ ನಾಟಕದಿಂದ ಹಿಡಿದು ಲಾಂಗು, ಮಚ್ಚು, ಆ್ಯಸಿಡ್ಡು ಅದು, ಇದು ಅಂತೇಲ್ಲ, ಖುದ್ದು ಖಾಕಿಗಳೇ ಕಂಗಾಲಾಗುವಂತ ಸಿನೀಮಿಯ ಕತೆ ಹೆಣೆಯಲಾಗಿತ್ತು. ಆದ್ರೆ ಆ ಘಟನೆಯ ಒಳನೋಟಗಳೇ ಬೇರೆಯದ್ದಿದೆ. ಒಳಸುಳಿಗಳೇ ವಿಚಿತ್ರ ಮತ್ತು ಆಘಾತಕಾರಿಯಾಗಿವೆ. ಹಾಗಂತ ಅಲ್ಲಿನ ಮಂದಿ ಮಾತಾಡಿಕೊಳ್ತಿದಾರೆ. ನಿಜ, ಆ ಘಟನೆ ಪೊಲೀಸರಿಗಷ್ಟೇ ಅಲ್ಲ ಸಾರ್ವಜನಿಕರಿಗೂ ಸಾಕಷ್ಟು ಪ್ರಶ್ನೆಗಳು ಏಳುವಂತೆ ಮಾಡಿದೆ. ಹೀಗಾಗಿ, ಆ ಎಲ್ಲ ಪ್ರಶ್ನೆಗಳ ಬಗ್ಗೆ ಇಲ್ಲಿ ಒಂದಿಷ್ಟು ಚರ್ಚಿಸಲೇ ಬೇಕಿದೆ.
ಅದಕ್ಕೂ ಮೊದಲು, ಶುಕ್ರವಾರ ಮಳಗಿ ಧರ್ಮಾಜಲಾಶಯದ ಅಂಗಳದಲ್ಲಿ ನಡೆದದ್ದಾದ್ರೂ ಏನು ಅನ್ನೋದನ್ನ ಸಂಕ್ಷಿಪ್ತವಾಗಿ ಹೇಳ್ತಿವಿ ನೋಡಿ.
ಆತ ಶಿವನಗೌಡ ಪಾಟೀಲ್..!
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಮಳಗಿ ಧರ್ಮಾ ಜಲಾಶಯದ ಅಂಗಳದಲ್ಲಿ ಬಂದು ಹಣ ಕಳೆದುಕೊಂಡವನ ಹೆಸ್ರು ಶಿವನಗೌಡ ಪಾಟೀಲ್, ಮತ್ತೊಬ್ಬ ಅಸ್ಲಾಂ ನದಾಫ್..! ತಮ್ಮ ಮಹಾರಾಷ್ಟ್ರ ನೊಂದಣಿ ಹೊಂದಿರೋ ವೈಟ್ ಆಂಡ್ ವೈಟ್ ಸ್ವಿಪ್ಟ್ ಕಾರಲ್ಲಿ ಬಂದವರು, ಅನಾಮತ್ತಾಗಿ ಬರೋಬ್ಬರಿ 28 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ನೀವೇ ಯೋಚಿಸಿ, ಗೋಡಂಬಿ ಬೀಜ ಖರೀಧಿಗಾಗಿ ಬಂದಿದ್ದವರಾ ಇವ್ರು..? ಅಸಲು, ಆ 28 ಲಕ್ಷ ಹಣದಲ್ಲಿ ಅದೇಷ್ಟು ಲಾರಿ ಗೋಡಂಬಿ ಬೀಜ ಖರೀಧಿಸ್ತಿದ್ರೋ ಏನೋ..? ಈ ಮಾತು ಕೇಳಿದ್ರೆ ಅದೇಲ್ಲಿಂದ ನಗಬೇಕೋ ಅರ್ಥವೇ ಅಗ್ತಿಲ್ಲ ಅಂತಾ ಮಳಗಿಯ ಮಂದಿ ಮುಸಿ ಮುಸಿ ನಕ್ಕಿದ್ದರಂತೆ. ಹೀಗಾಗಿ, “ಇದೇಲ್ಲ ಗೋಡಂಬಿ ಕತೆ ಬೇಡ,” ಏನ್ ನಡೀತು ಖರೇ ಹೇಳ್ರಿ” ಅಂತಾ ಮುಂಡಗೋಡಿನ ಖಡಕ್ ಪೊಲೀಸರ ಅಸಲೀ ದಾಟಿಗೆ, ಹಣ ಕಳೆದುಕೊಂಡಿದ್ದವನ ನಿಜ ಬಣ್ಣವೂ ಬಯಲಾಗಿ ಹೋಗಿದೆ. ನಿಜ ಅಂದ್ರೆ ಹಾಗೆ ಹಣ ಕಳೆದುಕೊಂಡವರು “ಸಸ್ತಾ” ಸಂಗ ಮಾಡಿ “ಚೀಪ್ ರೇಟ್ ಚಿನ್ನ”ಕ್ಕಾಗಿ ಬರ್ಬಾದು ಆಗಿದ್ದಾರೆ. ಇದು ಫ್ಯಾಕ್ಟು.. ಹಾಗಂತ, ಪೊಲೀಸ್ರಿಗೂ ಅರ್ಥವಾಗಿದೆ ಅನಿಸತ್ತೆ.
ಏನಿದು “ಚೀಪ್ ರೇಟ್ ಚಿನ್ನ” ?
ಬಂಗಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಈಗ ಗಗನಕ್ಕೇರಿರೋ ಚಿನ್ನದ ಬೆಲೆಯಲ್ಲಿ ಒಂದು ಗ್ರಾಂ ಚಿನ್ನ ಖರೀಧಿಸೋಕೇ ಪರದಾಡೋ ಜನರಿದ್ದಾರೆ. ಆದ್ರೆ, ಹಾಪ್ ರೇಟ್, ಚೀಪ್ ರೇಟ್ ಅಂತಾ ಚಿನ್ನ ಕೊಡ್ತಿವಿ ಅಂದ್ರೆ ಯಾರು ತಾನೆ ಓಡಿ ಬರಲ್ಲ..? ಯಸ್, ಇಂತದ್ದೇ ಕಾನ್ಸೆಪ್ಟು ಈ ಖತರ್ನಾಕ ಗ್ಯಾಂಗ್ ನ ಕತೆ, ಚಿತ್ರಕತೆ, ನಿರ್ದೇಶನ, ಸ್ಕ್ರಿಪ್ಟು, ಸ್ಕ್ರೀನ್ ಪ್ಲೇ…
ನಮ್ಮ ಹತ್ರ ಕೇಜಿಗಟ್ಟಲೇ ಬಂಗಾರ ಸಿಕ್ಕಿದೆ. ಅದನ್ನ ನಾವು ಅರ್ದ ರೇಟಿಗೆ ಮಾರ್ತಿವಿ ಯಾವುದಾದ್ರೂ ಪಾರ್ಟಿ ಇದ್ರೆ ನೋಡ್ರಿ ಅಂತಾ ಶುರುವಾಗೋ ಪೋನ್ ಕಾಲ್ ಸಂಭಾಷಣೆಗಳು, ಸಂಪರ್ಕಕ್ಕೆ ಸಿಕ್ಕ ವ್ಯಕ್ತಿ ತಮ್ಮ ಆಸ್ತಿ ಮಾರಿಯಾದ್ರೂ ಹಣ ತರಬೇಕು ಅಲ್ಲಿವರೆಗೂ ಬಿಡೋದೇ ಇಲ್ಲ. ಅಷ್ಟೊಂದು ವ್ಯವಸ್ಥಿತ ಪ್ಲಾನ್ ಆ ಖತರ್ನಾಕ ಕಿಲಾಡಿಗಳು ಮಾಡಿ ಬಿಡ್ತಾರೆ. ಅಸಲು, ಮಳಗಿ ಧರ್ಮಾ ಜಲಾಶಯದವರೆಗೂ ಚಿಕ್ಕೋಡಿಯಿಂದ ಬಂದಿದ್ದ ಅಸಾಮಿಗಳೂ ಕೂಡ ಇಂತದ್ದೇ ಸಂಚಿನಲ್ಲಿ ಸಿಲುಕಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.
ಅದೊಂದು ಗ್ಯಾಂಗ್..?
ಏನಪ್ಪಾ ವಿಷ್ಯಾ ಅಂದ್ರೆ, ಶಿರಸಿ ತಾಲೂಕಿನ ದಾಸನಕೊಪ್ಪ ಮಳಗಿ ಭಾಗದಲ್ಲಿ ಅದೊಂದು ಖತರ್ನಾಕ ಗ್ಯಾಂಗ್ ಇವತ್ತಿಗೂ ಆ್ಯಕ್ಟಿವ್ ಆಗಿದೆ.. ಬಹುತೇಕ ಹೈ ಫೈ ಮಸಲತ್ತುಗಳನ್ನೇ ಮಾಡಿಕೊಂಡು ಬಿಂದಾಸ್ ಬದುಕು ನಡಿಸ್ತಿರೋ ಆ ಗ್ಯಾಂಗ್ ಇವತ್ತಿನವರೆಗೂ ಇಂತಹ ಹಲವು ಖತರ್ನಾಕ ದಗಲ್ಬಾಜಿ ವ್ಯವಹಾರಗಳನ್ನ ಮಾಡಿಕೊಂಡೇ ಮಜಾ ಮಾಡ್ತಿದೆ. ಈ ಗ್ಯಾಂಗ್ “ಚೀಪ್ ರೇಟ್ ಚಿನ್ನ” ಕ್ಕಾಗಿ ಇದ್ದ ಬದ್ದ ಆಸ್ತಿ ಮಾರಿ ಬೀದಿಗೆ ಬಿದ್ದವರೂ ಇದ್ದಾರೆ.
“ಛಬ್ಬಿ ಕ್ರಾಸ್” ರಾಬರಿ ಲಿಂಕ್..?
ನಿಮಗೆ ನೆನಪಿದೆಯಾ, ಈಗ್ಗೆ ನಾಲ್ಕೈದು ತಿಂಗಳ ಹಿಂದೆ ಹುಬ್ಬಳ್ಳಿ ಸಮೀಪದ ಛಬ್ಬಿ ಕ್ರಾಸ್ ಬಳಿ ಇಂತದ್ದೇ ಒಂದು ಭಯಾನಕ ರಾಬರಿ ನಡೆದಿತ್ತು. ಅವತ್ತೂ ಕೂಡ, ಒಬ್ಬ “ಕುರಿ ಬಾಂಡ್” ಸಿಕ್ಕ ಖುಶಿಯಲ್ಲಿ ಬರೋಬ್ಬರಿ 48 ಲಕ್ಷ ಹಣ ಲಪಟಾಯಿಸಲಾಗಿತ್ತು. ಆದ್ರೆ, ಹುಬ್ಬಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಅವತ್ತು ಸುಮಾರು 7 ಜನ ಆರೋಪಿಗಳು ಬಲೆಗೆ ಬಿದ್ದಿದ್ರು. ಅಸಲು, ಅವತ್ತು ಸಿಕ್ಕ ಆರೋಪಿಗಳ ಪೈಕಿ ಅರ್ದದಷ್ಟು ಜನ ಇದೇ ಏರಿಯಾದವರು.. ಅಂದ್ರೆ ದಾಸನಕೊಪ್ಪ ಭಾಗದಲ್ಲಿ ಭರ್ಜರಿಯಾಗಿ ಫಿಲ್ಡಿಗೆ ಇಳಿದಿರೋ ಖತರ್ನಾಕ ಖದೀಮರು. ಇದನ್ನೇಲ್ಲ ಇಲ್ಲಿ ಯಾಕೆ ಹೇಳ್ತಿದಿನಿ ಅಂದ್ರೆ, ಶುಕ್ರವಾರದ ಮಟ ಮಟ ಮದ್ಯಾಹ್ನ ಧರ್ಮಾ ಜಲಾಶಯದ ಹಸಿರು ರಾಶಿಯ ಮದ್ಯೆ ನಡೆದ ರಾಬರಿಯ ರುವಾರಿಗಳೂ ಅವ್ರೇನಾ..? ಅನ್ನೋ ಬಲವಾದ ಅನುಮಾನ ಪೊಲೀಸ್ರಿಗೆ ಬಂದಿದೆ.
ಹೀಗಾಗಿ, ಈಗಾಗಲೇ ಪೊಲೀಸ್ರು ದಾಸನಕೊಪ್ಪದ ಇಬ್ಬರನ್ನ ಕರೆದು ವರ್ಕೌಟ್ ಮಾಡ್ತಿದಾರಂತೆ.
ಸಾವಿರ ಅಲ್ಲ, ಲಕ್ಷ ಲಕ್ಷದ ಲೆಕ್ಕ..!
ಅಸಲು, ದಾಸನಕೊಪ್ಪ ಭಾಗದಲ್ಲಿ ಫುಲ್ ಆ್ಯಕ್ಟಿವ್ ಆಗಿರೋ ಆ ಗ್ಯಾಂಗ್ ಬಲು ಚಾಲಾಕಿ ಐಡಿಯಾಗಳಿಂದಲೇ ಫಿಲ್ಡಿಗಿಳಿಯತ್ತೆ. ಇವರು ಮಾಡೋ ಹಗಲು ರಾಬರಿ ಸಾವಿರ ಲೆಕ್ಕದಲ್ಲಿ ಇರೋದೇ ಇಲ್ಲ. ಬದಲಾಗಿ ಲಕ್ಷ ಲಕ್ಷದ ಲೆಕ್ಕದಲ್ಲಿ. ಒಮ್ಮೆ ಸರಿಯಾಗಿ ಪ್ಲಾನ್ ಮಾಡಿ ಸ್ಕೆಚ್ ಹಾಕಿದ್ರೆ ಮುಗೀತು, ಅಲ್ಲಿ ಲಕ್ಷ ಲಕ್ಷ ಎಣಿಸೋದು ಗ್ಯಾರಂಟಿ. ಹೀಗಾಗಿ, ಒಂದು ರಾಬರಿ ಲೆಕ್ಕಕ್ಕೆ ಇವ್ರು ತೆಗೆದುಕೊಳ್ಳೊ ಟೈಮ್ ಕನಿಷ್ಟ ನಾಲ್ಕು ತಿಂಗಳು.
ಹೇಗೆ ಸ್ಕೆಚ್ ಹಾಕ್ತಾರೆ ಗೊತ್ತಾ.?
ಅಂದಹಾಗೆ, ಇಂತಹದ್ದೊಂದು ಖತರ್ನಾಕ ಗ್ಯಾಂಗ್ ನಲ್ಲಿ ಬಹುತೇಕರು ಮಾಸ್ಟರ್ ಮೈಂಡ್ ಗಳೇ.. ಒಮ್ಮೆ ಕೈಗೆ ಬಂದ ಹಣ ಖಾಲಿಯಾಗೋವರೆಗೂ ಸಿಕ್ಕ ಸಿಕ್ಕಲ್ಲಿ ಮಜಾ ಉಡಾಯಿಸೋ ಇವ್ರು ಫುಲ್ ಹೈ ಪೈ ಲೈಫು ಲೀಡ್ ಮಾಡ್ತಾರೆ. ಯಾವಾಗ, ಜೇಬಿನಲ್ಲಿ ಹಣ ಖಾಲಿಯಾಗತ್ತೋ ಅವಾಗ್ಲೆ ಮತ್ತೊಂದು ಸ್ಕೆಚ್ ರೆಡಿ ಮಾಡಿರ್ತಾರೆ. ಥೇಟು “ಇರಾನಿ ಗ್ಯಾಂಗ್” ತರಹ..
ಪ್ರವಾಸದಲ್ಲೇ ಪ್ಲಾನ್..!
ಯಸ್, ಈ ಗ್ಯಾಂಗ್ ತಮ್ಮ ರಾಬರಿ ಪ್ಲಾನ್ ಗೆ ಸ್ಕೆಚ್ ಹಾಕೋದೇ ಒಂಥರಾ ವಿಚಿತ್ರ. ಬಹುತೇಕ ಧಾರ್ಮಿಕ ಕ್ಷೇತ್ರಗಳಲ್ಲೇ ಪ್ಲಾನ್ ಗಳಿಗೆ ಜೀವ ತುಂಬೋ ಇವ್ರು, ಧರ್ಮಸ್ಥಳ, ಹೊರನಾಡು, ಶೃಂಗೇರಿ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳ್ತಾರೆ. ಅಲ್ಲಿ ದೇವರ ದರ್ಶನಕ್ಕಾಗಿ ಸಾಲು ಹಚ್ಚಿ ನಿಂತವರ ಪಕ್ಕವೇ ನಿಂತು, ಪರಿಚಯಿಸಿಕೊಳ್ತಾರೆ, ಮಾತಲ್ಲೇ ಮರಳು ಮಾಡಿ ಮೊಬೈಲ್ ನಂಬರ್ ಪಡ್ಕೊತಾರೆ. ಅಷ್ಟೇ ಮುಗೀತು. ತೋಳ ಹಳ್ಳಕ್ಕೆ ಬಿತ್ತು ಅಂತಲೇ ಅರ್ಥ.
ಪಾಪ, ಇತ್ತೀಚೆಗಷ್ಟೇ, ದಾಸನಕೊಪ್ಪ ಸಮೀಪದ ಸಮ್ಮಸಗಿ ಬಳಿ ಬೆಂಗಳೂರಿನಿಂದ “ಚೀಪ್ ರೇಟ್ ಚಿನ್ನ” ಕ್ಕಾಗಿ ಬಂದಿದ್ದ ವ್ಯಕ್ತಿಯೊಬ್ಬ ಇಂತವರದ್ದೇ ಗ್ಯಾಂಗ್ ನಿಂದ ಒಂದೂವರೇ ಲಕ್ಷ ಕಳೆದುಕೊಂಡು ಗೋಳಾಡಿ ಅತ್ತು ಹೋಗಿದ್ದ. ಅಸಲು, ಅವನ ಪರಿಚಯವಾಗಿದ್ದೂ ಕೂಡ ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರದಲ್ಲೇ ಅಂತೆ.
ಹಾಗೆ, ಧಾರ್ಮಿಕ ಕ್ಷೇತ್ರಗಳಲ್ಲಿ ಪಡೆದುಕೊಂಡ ನಂಬರುಗಳನ್ನೇಲ್ಲ, ಒಬ್ಬೊಬ್ರಂತೆ ಒಂದಿಷ್ಟು ದಿನ ಅದು ಇದು ಅಂತೇಲ್ಲ ಮಾತಾಡ್ತಾರೆ. ಯಾವಾಗ, ಕಾಲ್ ಮಾಡಿದಾಗ ಸಂಪೂರ್ಣ ನಂಬಿಕೆ ಇಟ್ಟ ವ್ಯಕ್ತಿ ಬಲೆಗೆ ಬಿಳೋದು ಪಕ್ಕಾ ಅನ್ನೋ ಫೀಲ್ ಬರತ್ತೋ ಆವಾಗ್ಲೇ ಶುರುವಾಗತ್ತೆ ಇವ್ರ ಅಸಲಿ ಆಟ.
“ನನ್ನ ಹತ್ರ ಓಲ್ಡ್ ಗೋಲ್ಡ್ ಇದೆ”
ಯಸ್, ಹಾಗೆ ಕಾಲ್ ಮಾಡಿ ಮಾತಾಡ್ತಿದ್ದವನ ಸಂಪೂರ್ಣ ಜಾತಕ ತಿಳಿದುಕೊಂಡು ಆತನ ಎದುರು “ಚೀಪ್ ರೇಟ್ ಚಿನ್ನದ” ದಂಧೆ ಬಗ್ಗೆ ಮಾತಾಡೋಕೆ ಶುರು ಮಾಡ್ತಾರೆ. ನಮ್ಮ ಹತ್ರ “ಓಲ್ಡ್ ಗೋಲ್ಡ್” ಇದೆ. ನಮಗೆ ಗದ್ದೆಯಲ್ಲಿ ಕೇಜಿಗಟ್ಟಲೇ ಸಿಕ್ಕಿದೆ, ಅದನ್ನ ಈಗ ಮಾರಾಟ ಮಾಡ್ತಿದಿವಿ. ತುಂಬಾ ಕಡಿಮೆ ರೇಟಿಗೆ ಕೊಡ್ತಿವಿ ಅಂತಾ ಮಾತಲ್ಲೇ ಮನೆ ಕಟ್ಟಿ ನಂಬಿಸಿ ಬಿಡ್ತಾರೆ. ಅಷ್ಟೆ, ಮುಂದೆ ಆಗೋದೇಲ್ಲ ಭಾರೀ ಥ್ರಿಲ್ಲಿಂಗ್ ಡೀಲ್.. ಪೋನಲ್ಲೇ ರೇಟು ಫಿಕ್ಸ್ ಆಗತ್ತೆ, ಮಾಲು ಹೇಗೆ ತಲುಪಿಸೋದು ಅನ್ನೋ ಚರ್ಚೆ ಆಗತ್ತೆ, ವಿಶೇಷ ಅಂದ್ರೆ, ಖತರ್ನಾಕ ಗ್ಯಾಂಗ್ ಯಾವತ್ತೂ ಗಿರಾಕಿ ಕರೆದಲ್ಲಿಗೆ ಹೋಗಲ್ಲ. ಬದಲಾಗಿ, ಬಲೆಗೆ ಬಿದ್ದ ಗಿರಾಕಿಯೇ ಇವ್ರು ಹೇಳಿದ್ದಲ್ಲಿ ಬರಬೇಕಾಗತ್ತೆ. ಅಂತಹದ್ದೊಂದು ವ್ಯವಸ್ಥಿತ ಪ್ಲಾನ್ ಮಾಡಿಕೊಂಡೇ ಫಿಲ್ಡಿಗಿಳಿಯೊ ಗ್ಯಾಂಗು ಕಂತೆ ಕಂತೆ ಹಣ ಕೈಸೇರೋವರೆಗೂ ಸಣ್ಣದೊಂದು ಸುಳಿವೂ ಬಿಟ್ಟು ಕೊಡಲ್ಲ. ಯಾವಾಗ ಕೈಗೆ ಹಣದ ಕಟ್ಟು ಬಂದು ಸೇರತ್ತೋ ಆ ಕ್ಷಣವೇ ಖೇಲ್ ಖತಂ..! ಇದು, ಶಿರಸಿ ತಾಲೂಕಿನ ದಾಸನಕೊಪ್ಪ ಭಾಗದಲ್ಲಿ ಆ್ಯಕ್ಟಿವ್ ಆಗಿರೋ ಗ್ಯಾಂಗ್ ನ ಹಕೀಕತ್ತು ಅಂತಾ ಹೇಳಲಾಗ್ತಿದೆ.
ಅದೇ ಗ್ಯಾಂಗಾ..?
ಹಾಗಾದ್ರೆ, ಮಳಗಿ ಧರ್ಮಾ ಜಲಾಶಯದ ಅಂಗಳದಲ್ಲಿ ಶುಕ್ರವಾರ ನಡೆದ 28 ಲಕ್ಷ ರೂ. ಹಣ ಎತ್ತುವಳಿ ಮಾಡಿದ್ದು ಅದೇ ಗ್ಯಾಂಗಾ..? ಇಂತಹದ್ದೊಂದು ಅನುಮಾನ ಮುಂಡಗೋಡ ಪೊಲೀಸರಿಗೆ ಬಂದಿರಲೂಬಹುದು. ಆ ಕಾರಣಕ್ಕಾಗೇ ಪೊಲೀಸ್ರೂ ನೇರವಾಗಿ ದಾಸನಕೊಪ್ಪದ ಗಲ್ಲಿಯೆಡೆಗೇ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ಒಂದಿಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿಯಾಗಿದೆ. ಹಾಗಂತ, ಬಲ್ಲ ಮೂಲಗಳ ಬಾತ್ಮಿ ಇದೆ. ಅಂದಹಾಗೆ, ಈ “ಚಿನ್ನದ” ಗ್ಯಾಂಗ್ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಬಳ್ಳಾರಿಯ ಹರಪನಹಳ್ಳಿ ತಾಲೂಕು, ಶಿರಸಿ ತಾಲೂಕು ಸೇರಿ ಕೆಲವೇ ಕೆಲವು ಕಡೆ ಇವತ್ತಿಗೂ ಫುಲ್ ಆ್ಯಕ್ಟಿವ್ ಇದೆ.
ಪೊಲೀಸರು ಫುಲ್ ಅಲರ್ಟ್..!
ಇನ್ನು ಘಟನೆ ನಡೆದ ಮಾಹಿತಿ ತಿಳಿಯುತ್ತಿದ್ದಂತೆ ಫುಲ್ ಅಲರ್ಟ್ ಆಗಿರೋ ಪೊಲೀಸ್ರು, ತಕ್ಷಣವೇ ಆರೋಪಿಗಳ ಪತ್ತೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿದ್ರು. ಆರೋಪಿಗಳು ಬಿಟ್ಟು ಹೋದ ಪಾದರಕ್ಷೆಗಳ ವಾಸನೆ ಹಿಡಿದ ಶ್ವಾನ ಬದನಗೋಡ ರಸ್ತೆಯ ಎರಡು ಕಿಮೀ ದೂರ ಹೋಗಿ ನಿಂತಿದೆ.
ಹಾಗೇಯೇ, ಶಿರಸಿ, ಮುಂಡಗೋಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಂಟಿಯಾಗಿ ಫಿಲ್ಡಿಗಿಳಿದಿದ್ದಾರೆ. ಈಗಾಗಲೇ ಮೂರ್ನಾಲ್ಕು ತಂಡಗಳಾಗಿ ಆರೋಪಿಗಳ ಹೆಡೆಮುರಿ ಕಟ್ಟಲು ಬಲೆ ಬೀಸಲಾಗಿದೆ.
ಶಿರಸಿ ಡಿವೈಎಸ್‌ಪಿ ರವಿ ನಾಯ್ಕ ಹಾಗೂ ಮುಂಡಗೋಡ ಕ್ರೈಂ ಪಿಎಸ್ಐ ಎನ್.ಡಿ.ಜಕ್ಕಣ್ಣವರ ಸೇರಿ ದಕ್ಷ ಪೊಲೀಸ್ ಪಡೆ ಕಾರ್ಯಾಚರಣೆಯಲ್ಲಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಆರೋಪಿಗಳು ಅಂದರ್ ಆಗೋದ್ರಲ್ಲಿ ಅನುಮಾನವೇ ಇಲ್ಲ.