ಹಾವೇರಿ: ಕೊರೋನಾ ಹಿನ್ನೆಲೆಯಲ್ಲಿ ಸದ್ಯ ವಿದ್ಯಾರ್ಥಿಗಳಿಗೆ ಎಲ್ಲೆಡೆಯೂ ಆನ್ ಲೈನ್ ಕ್ಲಾಸ್ ಗಳು ಚಾಲ್ತಿಯಲ್ಲಿವೆ. ಹೀಗಾಗಿ, ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ರೆ ಹಾಗೆ ಮೊಬೈಲ್ ಕೊಡುವ ಮುನ್ನ ಎಚ್ಚರಿಕೆ ವಹಿಸೋದು ತುಂಬಾ ಮುಖ್ಯ, ಯಾಕಂದ್ರೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಇಂದು ನಡೆದಿರೋ ಈ ಘಟನೆ ನಿಜಕ್ಕೂ ಭಯಾನಕ.
ಏನದು ಘಟನೆ..?
ಕೊರೋನಾ ಕಾಟದಿಂದ ಶಾಲೆಗಳು ತೆರೆಯದೇ ಇರೋ ಕಾರಣ ಆ ಬಾಲಕ ಮನೆಯಲ್ಲಿ ಹಾಯಾಗಿ ಎಲ್ಲಾ ಮಕ್ಕಳೊಂದಿಗೆ ಖುಷಿಯಾಗಿದ್ದ. ರಸ್ತೆಯಲ್ಲಿ ಯಾವುದೊ ಹಳೆಯ ವಸ್ತು ಸಿಕ್ಕಿತು ಅಂತಾ ಅದರೊಂದಿಗೆ ಬಾಲಕ ಆಟವಾಡ್ತಿದ್ದ ಅಷ್ಟೇ, ಕಣ್ಬಿಡುವಷ್ಟರಲ್ಲಿ ಕೈಯಲ್ಲಿದ್ದ ಹಳೆಯ ಮೊಬೈಲ್ ಬ್ಯಾಟರಿ ಸಿಡಿದು ಆ ಬಾಲಕ ಇದೀಗ ಆಸ್ಪತ್ರೆಯಲ್ಲಿ ನರಳುವಂತೆ ಮಾಡಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಅಂದಹಾಗೆ, ಆ ಬಾಲಕನ ಹೆಸರು ಕಾರ್ತಿಕ್ ಕಲಾದಗಿ ಅಂತಾ. ಈತನ ಈ ಸ್ಥಿತಿಗೆ ದಾರಿಯಲ್ಲಿ ಯಾರೊ ಬಿಸಾಡಿದ್ದ ಮೊಬೈಲ್ ಬ್ಯಾಟರಿ. ಹೌದು ರಸ್ತೆಯಲ್ಲಿ ಸಿಕ್ಕಿತು ಅಂತಾ ಆಟವಾಡೊಕೆ ಮನೆಗೆ ತಂದಿದ್ದ ಬ್ಯಾಟರಿ ಬ್ಲಾಸ್ಟ್ ಆಗಿದೆ. ಕೈಯಲ್ಲಿ ಹಿಡಿದುಕೊಂಡಿದ್ದ ಬಾಲಕ ಕಾರ್ತಿಕ್ ತಕ್ಷಣವೇ ಕಿರುಚಾಡಿದ್ದಾನೆ. ತೀವ್ರ ಅಸ್ವಸ್ಥನಾಗಿ ಒದ್ದಾಡುತ್ತಿದ್ದ ಬಾಲಕನನ್ನು ತಕ್ಷಣ ಸವಣೂರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.
ಹಳೆಯ ಬ್ಯಾಟರಿ ಬ್ಲಾಸ್ಟ್..! ಏಕಾ ಏಕಿ ಸಿಡಿದ ಮೊಬೈಲ್ ಬ್ಯಾಟರಿ ಐ ಟೆಲ್ ಕಂಪನಿಯದು ಎಂದು ಗುರುತಿಸಲಾಗಿದೆ. ಇದರಿಂದ ಮನೆಯೊಳಗೆ ಆಟವಾಡುವಾಡುವಾಗ ವೈಯರ್ ತೆಗೆದುಕೊಂಡು ಒಂದಕ್ಕೊಂದು ಕೂಡಿಸಿದ್ದರಿಂದ ಈ ರೀತಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಇನ್ನೂ ತೀವ್ರವಾಗಿ ಗಾಯಗೊಂಡ ಬಾಲಕನ ಮುಖ, ಎದೆ, ಕಣ್ಣು ಹಾಗೂ ಬೆರಳುಗಳಿಗೆ ಗಂಭೀರ ಗಾಯಗಳಾಗಿವೆ. ಅದಲ್ಲದೆ ಬಲಗೈನ ಮೂರು ಬೆರಳುಗಳು ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿದ್ದು, ಅವುಗಳನ್ನು ಸರ್ಜರಿ ಮಾಡಿ ಕಟ್ ಮಾಡಿ ತೆಗೆಯಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ ಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪೋಷಕರೇ ಗಮನವಿರಲಿ..! ಮನೆಯಲ್ಲಿ ಪೋಷಕರು ಮಕ್ಕಳ ಮೇಲೆ ನಿಗಾ ಇಡದಿದ್ದರೆ ಈ ರೀತಿಯ ದುರಂತಗಳು ನಡೆಯುತ್ತವೆ ಎನ್ನುವದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಅದೇನೆ ಕೆಲಸ ಇರಲಿ, ಮೊದಲು ಮನೆಯ ಪುಟ್ಟ ಮಕ್ಕಳ ಕಡೆ ಒಂದಿಷ್ಟು ಗಮನ ಇರಲಿ.