“ನಾನು ಬಿಜೆಪಿಗೆ ಬಂದು ತಪ್ಪು ಮಾಡಿಬಿಟ್ನಾ..?” ಇಂತಹದ್ದೊಂದು ಪ್ರಶ್ನೆ ಬಹುಶಃ ಆ ನಾಯಕನಿಗೆ ಅನ್ನಿಸಿದೆಯೆನೋ.. ಯಾಕಂದ್ರೆ, ಮುಂಡಗೋಡ ತಾಲೂಕಿನ ಒಂದು ಪ್ರಬಲ ಸಮುದಾಯದ ನಾಯಕ ಈಗ ದಾರಿ ಕಾಣದಂತಾಗಿದ್ದಾರೆ. ಒಂದುವೇಳೆ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಇಷ್ಟೋತ್ತಿಗಾಗಲೇ ಇಡೀ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಹುಶಃ ಕಾಂಗ್ರೆಸ್ MLA ಅಭ್ಯರ್ಥಿ ಅಂತಾ ಪತಾಕೆ ಹಾರಿಸ್ತಿದ್ದರೇನೋ…! ಅಂತವರು ಈಗ ಬಿಜೆಪಿಯಲ್ಲಿ ಎಲ್ಲೊ ಒಂದು ಕಡೆ ಸೈಡ್ ಲೈನ್ ಆಗ್ತಿದಾರಾ..? ಈ ಪ್ರಶ್ನೆ ಸದ್ಯದ ಬಲು ಚರ್ಚಿತ ವಿಷಯ.
ಅದೊಂದು ಕಾಲವಿತ್ತು..!
ನಿಜ, ಮುಂಡಗೋಡ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ಪಾಟೀಲರದ್ದೇ ಒಂದು ಪ್ರಾಬಲ್ಯದ ಪರಿಸರ ಇವತ್ತಿಗೂ ಇದೆ. ದೇಶಪಾಂಡೆಯವರ ಗರಡಿಯಲ್ಲಿ ಪಳಗಿರೋ ಎಲ್.ಟಿ.ಪಾಟೀಲರು ಕಾಂಗ್ರೆಸ್ ನಲ್ಲಿ ತಮ್ಮದೇ ಆದ ವರ್ಚಸ್ಸು ಇವತ್ತಿಗೂ ಉಳಿಸಿಕೊಂಡೇ ಬಂದವರು. ಕಳೆದ 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕನಾಗೋ ಕನಸು ಹೊತ್ತು ಕಮಲ ಮುಡಿದ ಪಾಟೀಲರಿಗೆ ಅದ್ಯಾಕೋ ಏನೋ ಬಿಜೆಪಿಯಲ್ಲಿ ಆ ಮಟ್ಟಿಗಿನ ಒಲವು ತೋರಿಸಲೇ ಇಲ್ಲ. ಒಂದುವೇಳೆ ಆ ಚುನಾವಣೆಯಲ್ಲಿ ಬಿಜೆಪಿಯಿಂದ ಪಾಟೀಲರಿಗೆ ಟಿಕೆಟ್ ಕೊಟ್ಟಿದ್ದೇ ಆಗಿದ್ದಿದ್ರೆ ಕಣದಲ್ಲಿ ಪ್ರಬಲ ಠಕ್ಕರ್ ಕೊಡ್ತಿದ್ರು ಅಂತಾ ಇವತ್ತಿಗೂ ಜನ ಮಾತಾಡ್ತಿದಾರೆ. ಆದ್ರೆ ಅಂತವರು ಈಗ ಮತ್ತೆ ಮೂಲೆಗುಂಪಾಗ್ತಿದಾರಾ..? ಅಥವಾ ಅವರನ್ನು ಮೂಲೆ ಗುಂಪು ಮಾಡಲಾಗ್ತಿದೆಯಾ..? ಇದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.
ಈ ಕತೆ ಹೇಳಲೇ ಬೇಕು..!
ಹಾಗೆ ನೋಡಿದ್ರೆ, ಎಲ್.ಟಿ.ಪಾಟೀಲ್ ಬಿಜೆಪಿಗೆ ಬಂದಿದ್ದೇ ಒಂದು ರೋಚಕ ಘಟ್ಟದಲ್ಲಿ. ಅವತ್ತಿನ ಮಟ್ಟಿಗೆ ಮುಂಡಗೋಡ ತಾಲೂಕಿನಲ್ಲಿ ಬಿಜೆಪಿ ಪ್ರಬಲವಾಗಿಯೇ ಇತ್ತು. ವಿ.ಎಸ್. ಪಾಟೀಲ್ ಕ್ಷೇತ್ರದಲ್ಲಿ ಒಂದಿಷ್ಟು ಬಿರುಸಿನಿಂದಲೇ ಓಡಾಡಿಕೊಂಡಿದ್ರು. ಅದು 2008 ರ ಚುನಾವಣೆ. ಸ್ವಯಂಕೃತ ಅಪರಾಧವೋ ಏನೋ ಗೊತ್ತಿಲ್ಲ, ಆ ಚುನಾವಣೆಯಲ್ಲಿ ಕಾಂಗ್ರೆಸ್ಸಿನಲ್ಲಿದ್ದ ಶಿವರಾಮ್ ಹೆಬ್ಬಾರ್ ಏಟಿಗೆ ವಿಎಸ್ಪಿ ಮಕಾಡೆ ಮಲಗಿಬಿಟ್ರು. ಹೀಗಾಗಿ, ಅವತ್ತೇ ಕ್ಷೇತ್ರದಲ್ಲಿ ಬಿಜೆಪಿ ಅನ್ನೋದು ಕೋಮಾ ಸ್ಥಿತಿಗೆ ತಲುಪಿಬಿಟ್ಟಿತ್ತು. ಅನಂತಣ್ಣನ ಪಡೆ ಒಂದೆಡೆ, ವಿಎಸ್ ಪಾಟೀಲರ ಪಡೆ ಮತ್ತೊಂದೆಡೆ ನಿಂತು ಕ್ಷೇತ್ರದಲ್ಲಿ ಕಮಲದ ದಳಗಳನ್ನೇಲ್ಲ ಉದುರಿಸಿ ಬಿಟ್ಟಿದ್ರು. ವಿ.ಎಸ್.ಪಾಟೀಲ್ ಬಿಜೆಪಿಯಲ್ಲಿನ ಅನಂತಕುಮಾರ್ ಬೆಂಬಲಿಗರನ್ನ ಒಂದರ್ಥದಲ್ಲಿ ತುಳಿದು ಹಾಕಿದ್ರು ಅನ್ನೋ ಆರೋಪ ಕೇಳಿ ಬಂದಿತ್ತು. ಅನಂತಣ್ಣನ ಕಟ್ಟಾ ಬೆಂಬಲಿಗರಾಗಿದ್ದ ಫಣಿರಾಜ್ ಹದಳಗಿ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ವಿ.ಎಸ್.ಪಾಟೀಲ್ರ ಶಾಸಕಗಿರಿಯಲ್ಲಿ ಅಕ್ಷರಶಃ ಹತ್ತಿಕ್ಕುವ ಪ್ರಯತ್ನಗಳು ನಡೆದಿತ್ತಂತೆ. ಅಂತಹದ್ದೊಂದು ಮುನಿಸು ಅನಂತಣ್ಣನ ಗರಡಿಯ ಹುಲಿಗಳು ಘರ್ಜಿಸುವಂತೆ ಮಾಡಿತ್ತು. ವಿ.ಎಸ್.ಪಾಟೀಲ್ ವಿರುದ್ಧ ಸಿಡಿದೇಳುವಂತೆ ಮಾಡಿತ್ತು.
ಬೇಗುದಿ ಬಳಸಿಕೊಂಡಿದ್ದು ಹೆಬ್ಬಾರ್..!
ಈ ಕಾರಣಕ್ಕಾಗೇ ವಿ.ಎಸ್.ಪಾಟೀಲ್ ಅದೇಷ್ಟೇ ತಿಣುಕಾಡಿದ್ರೂ ಗೆಲುವಿನ ದಡಕ್ಕೆ ಬಂದು ಸೇರಲೇ ಇಲ್ಲ. ಬದಲಾಗಿ ಎರಡೆರಡು ಬಾರಿ ಅಖಾಡದಲ್ಲಿ ಮಕಾಡೆ ಮಲಗುವಂತಾಯ್ತು.. ಅವತ್ತು ವಿಎಸ್ಪಿ ಹಾಗೆ ಸೋಲುವ ಹಿಂದೆ ಬಿಜೆಪಿಯ “ಬೇಗುದಿ” ಕೆಲಸ ಮಾಡಿತ್ತು ಅನ್ನೋದು ಗುಟ್ಟಾಗಿ ಉಳಿದೇ ಇಲ್ಲ. ಅದು ಬೇರೆ ಮಾತು. ಆದ್ರೆ ಅವತ್ತಿನ ಬಿಜೆಪಿಯ ಗರಮಾ ಗರಂ ಸನ್ನಿವೇಶವನ್ನು ತಮ್ಮ ಗೆಲುವಿನ ಹಾದಿಗೆ ಪೂರಕವಾಗಿ ಬಳಸಿಕೊಂಡವರೇ ಶಿವರಾಮ್ ಹೆಬ್ಬಾರ್.
“ಕೈ” ಹಿಡಿಯಲಿಲ್ಲ ಕಾಂಗ್ರೆಸ್..!
ಅದಿರಲಿ, 2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಟಿಕೆಟ್ ಪಡೆಯಲು ಎಲ್.ಟಿ.ಪಾಟೀಲ್ ಕೊನೆ ಕ್ಷಣದವರೆಗೂ ಯತ್ನಿಸಿದ್ರು. ದೆಹಲಿ ನಾಯಕರ ಬಾಗಿಲು ತಟ್ಟಿ ಹೇಗಾದ್ರೂ ಸರಿ ಟಿಕೆಟ್ ತರಲೇ ಬೇಕು ಅಂತಾ ಜಿದ್ದಿಗೆ ಬಿದ್ದಿದ್ರು. ಆದ್ರೆ ಕಾಂಗ್ರೆಸ್ ಮಾತ್ರ ಜಪ್ಪಯ್ಯ ಅಂದ್ರೂ ಎಲ್ಟಿ ಪಾಟೀಲರಿಗೆ ಮಣೆ ಹಾಕಲೇ ಇಲ್ಲ. ಹೆಬ್ಬಾರ್ ಅಭ್ಯರ್ಥಿಯಾದ್ರು. ಗೆದ್ದೂ ಬಂದ್ರು. ಆದ್ರೆ ಯಾವಾಗ, ಕೈ ಪಡೆಯಲ್ಲಿ ತನಗೆ ಟಿಕೆಟ್ ಸಿಗಲಿಲ್ಲವೋ ಎಲ್.ಟಿ. ಪಾಟೀಲರು ಒಂದು ಹೆಜ್ಜೆ ಕಾಂಗ್ರೆಸ್ ನಿಂದ ಹೊರಗಿಟ್ಟು ಬಿಟ್ರು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯೊ ಸಾಹಸವನ್ನೂ ಮಾಡಿದ್ರು. ಆದ್ರೆ, ತನ್ನ ರಾಜಕೀಯ ಗುರು ದೇಶಪಾಂಡೆಯವರ ಕಟ್ಟಾಜ್ಞೆಗೆ ಜೋತು ಬಿದ್ದು ತಣ್ಣಗಾದ್ರು ಎನ್ನಾಲಗಿತ್ತು, ಮತ್ತೊಂದೆಡೆ “ಹೆಬ್ಬಾರ್” ಸಾಹೇಬ್ರೇ ಎಲ್ಟಿ ಯವರಿಗೆ ಮಾತನಾಡಿ ತಣ್ಣಗೆ ಮಾಡಿದ್ರು ಅನ್ನೋ ಮಾತುಗಳೂ ಕೇಳಿ ಬಂದಿತ್ತು.
ಅನಂತಣ್ಣನ ನಂಬಿ..!
ಇನ್ನು, ಕಾಂಗ್ರೆಸ್ ನಲ್ಲಿ ಇದ್ರೆ ನಂಗಿನ್ನು ಭವಿಷ್ಯ ಇಲ್ಲ ಅಂತಾ ಅದಾಗಲೇ ತೀರ್ಮಾನಿಸಿದ್ದ ಎಲ್ಟಿ ಪಾಟೀಲ್, ನೇರವಾಗಿ ಸಂಸದ ಅನಂತಕುಮಾರ್ ಹೆಗಡೆ ಅಂಗಳಕ್ಕೆ ಬಂದು ನಿಂತಿದ್ರು. ಅವತ್ತು ಅನಂತಣ್ಣನ ಮುಖಾಂತರವೇ ಬಿಜೆಪಿಗೆ ಸೇರುವ ಎಲ್ಲಾ ತಯಾರಿ ಮಾಡಿಕೊಂಡ್ರು, ಹೇಗೂ ವಿ.ಎಸ್.ಪಾಟೀಲ್ ಸೋತು ಮನೆ ಹಿಡಿದಿದ್ದಾರೆ. ಪಕ್ಷ ಆಂತರಿಕ ಬೇಗುದಿಯಲ್ಲಿ ಸಿಕ್ಕು ನರಳುತ್ತಿದೆ. ಇಲ್ಲಿ ವಿಎಸ್ಪಿ ಸ್ಥಾನ ನಾನು ಭರ್ತಿ ಮಾಡಬಹುದು ಅಂತಾ ಎಲ್ಟಿ ಪಾಟೀಲ್ ಬಿಜೆಪಿ ಸೇರಿಯೂ ಆಯ್ತು. ಅಷ್ಟೊತ್ತಿಗಾಗಲೇ ಬಂದು ನಿಂತಿದ್ದ 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಇನ್ನಿಲ್ಲದ ಪ್ರಯತ್ನ ಮಾಡಿದ್ರು. ಆದ್ರೆ, ಬಿಜೆಪಿ ಹೈಕಮಾಂಡ್ ಕೊನೆ ಗಳಿಗೆಯಲ್ಲಿ ಮತ್ತೊಮ್ಮೆ ವಿ.ಎಸ್. ಪಾಟೀಲರೇ ನಮ್ಮ ಅಭ್ಯರ್ಥಿ ಅಂತಾ ಘೋಷಣೆ ಮಾಡಿ, ಅಲ್ಲೂ ಕೂಡ ಎಲ್ಟಿ ಪಾಟೀಲರನ್ನ ಸೈಡಿಗೆ ಸರಿಸಿಬಿಡ್ತು. ಅನಂತಣ್ಣ ಕೂಡ ಏನೂ ಮಾಡದ ಸ್ಥಿತಿಯಲ್ಲಿದ್ರು. ಪರಿಣಾಮ, ಮತ್ತೊಮ್ಮೆ ಶಿವರಾಮ್ ಹೆಬ್ಬಾರ್ ಗೆಲುವು ಸಾಧಿಸಿದ್ರು. ವಿ.ಎಸ್.ಪಾಟೀಲ್ ಎರಡನೇ ಬಾರಿ ಸೋತು ಸ್ತಬ್ದವಾದ್ರು.
ಬದಲಾಯ್ತು ಲೆಕ್ಕಾಚಾರ..!
ಇಷ್ಟೇಲ್ಲ ನಡೆದ ಮೇಲೂ ಎಲ್ಟಿ ಪಾಟೀಲರಿಗೆ ಮತ್ತೊಂದು ಛಾನ್ಸ್ ಇದ್ದೇ ಇತ್ತು. ಎರಡೆರಡು ಸಾರಿ ಸೋಲು ಅಭವಿಸಿದ್ದ ವಿ.ಎಸ್.ಪಾಟೀಲರಿಗೆ ಮುಂದಿನ ಚುನಾವಣೆಲಿ ಟಿಕೆಟ್ ಸಿಗೋದೇ ಇಲ್ಲ, ನಂಗೇ ಸಿಗತ್ತೆ ಅನ್ನೋ ಕನಸು ಹೊತ್ತು ಎಲ್ಟಿ ಪಾಟೀಲ್ ಮತ್ತೊಮ್ಮೆ ಬಿಜೆಪಿಯಲ್ಲಿ ಒಂದಿಷ್ಟು ಹುರುಪಿನಿಂದಲೇ ಓಡಾಡಿಕೊಂಡಿದ್ರು. ಆದ್ರೆ, ಯಾವಾಗ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿ, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ರೋ ಆ ಕ್ಷಣವೇ ಎಲ್ಟಿ ಪಾಟೀಲರ ಬಿಜೆಪಿ MLA ಆಗೋ ಕನಸಿಗೆ ಮತ್ತೊಮ್ಮೆ ತಣ್ಣೀರು ಎರಚಿದಂತಾಯ್ತು. ಮುಂದೆ ಉಪಚುನಾವಣೆ ಬಂತು, ಹೆಬ್ಬಾರ್ ಬಿಜೆಪಿ ಅಭ್ಯರ್ಥಿಯಾದ್ರು. ಜಯಭೇರಿ ಬಾರಿಸಿದ್ರು. ಸಚಿವರೂ ಆದ್ರು.
ಎರಡು ಬಣ..!
ಸದ್ಯ ಮುಂಡಗೋಡ ಬಿಜೆಪಿ ಮಟ್ಟಿಗೆ ಹೇಳೋದಾದ್ರೆ, ಯಾವಾಗ ಹೆಬ್ಬಾರ ಪಡೆ ಬಿಜೆಪಿ ಅಂಗಳದಲ್ಲಿ ಕಾಲಿಟ್ಟಿತ್ತೊ ಆ ಕ್ಷಣದಿಂದಲೇ ಒಂದಿಷ್ಟು ಹಳಬರಿಗೆ ಇನ್ನಿಲ್ಲದ ತಳಮಳ ಶುರುವಾಗಿತ್ತು. ಹೆಬ್ಬಾರ್ ಜೊತೆಗೆ ಕಾಂಗ್ರೆಸ್ ಮನೆಯಲ್ಲಿದ್ದ ಬಹುತೇಕ ಬೆಂಬಲಿಗರೂ ಸಾಲು ಸಾಲಾಗಿ ಹೆಬ್ಬಾರ್ ಜೊತೆಗೇ ಹಿಂಬಾಲಿಸಿ ಬಂದ್ರು. ಹೀಗಾಗಿ, ಬಿಜೆಪಿ ಪಡಸಾಲೆಯಲ್ಲಿದ್ದ ಬಿಜೆಪಿ ಮೂಲ ಕಲಿಗಳಿಗೆ ನುಂಗಲಾರದ ತುತ್ತಾಗಿ ಬಿಡ್ತು.
ಸ್ಥಳೀಯ ಗುದ್ದಾಟ..?
ಇನ್ನು, ಬದಲಾದ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡು ಹೆಜ್ಜೆ ಹಾಕಿದ ಎಲ್ಟಿ ಪಾಟೀಲರಿಗೆ ಈಗ ಬಿಜೆಪಿಯಲ್ಲಿ ಒಂದಷ್ಟು ಪೀಕಲಾಟಗಳು ಶುರುವಾಗಿವೆ. ಕಾಂಗ್ರೆಸ್ ಅಂಗಳದಿಂದ ಹೆಬ್ಬಾರ್ ಜೊತೆಗೇ ಬಂದ ಮುಖಂಡರುಗಳ ನಡುವೆ ಶೀತಲ ಸಮರ ಏರ್ಪಟ್ಟಿದೆ. ಹೆಬ್ಬಾರ್ ಕಟ್ಟಾ ಬೆಂಬಲಿಗರ ಒಂದು ಬಣ ಎಲ್ಟಿ ಪಾಟೀಲರಿಗೆ ಒಳಗೊಳಗೇ ಗುದ್ದಾಟ ಶುರುವಿಟ್ಟಿದೆ ಅನ್ನೋ ಮಾತುಗಳೂ ಇವೆ. ಇದರ ಪರಿಣಾಮ, ತಾಲೂಕಿನ ಬಿಜೆಪಿಯಲ್ಲಿ ಸದ್ಯ ಎರಡು ಬಣವಾಗಿ ಮುಸುಕಿನಲ್ಲೇ ಕತ್ತಿ ಮಸಿಯೋ ಪ್ರಸಂಗಗಳೂ ನಡೀತಿವೆ ಅನ್ನೋದು ಬಿಜೆಪಿಗರೇ ಹೇಳೋ ಮಾತು.
ಜಿಪಂ ಕ್ಷೇತ್ರಕ್ಕೂ ಕೊಕ್ಕೆ..?
ಇನ್ನು, ಎಲ್ಟಿ ಪಾಟೀಲರು ಖಾಯಂ ಆಗಿ ಸ್ಪರ್ಧಿಸುತ್ತಿದ್ದ ಮೈನಳ್ಳಿ(ಚಿಗಳ್ಳಿ) ಜಿಲ್ಲಾ ಪಂಚಾಯತ್ ಕ್ಷೇತ್ರ ಈ ಬಾರಿ ದಕ್ಕುವ ಛಾನ್ಸೇ ಇಲ್ಲ. ತಾಲೂಕಿನಲ್ಲಿ ಇದ್ದ ಮೂರು ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರ ಮಾತ್ರ ಸಾಮಾನ್ಯ ವರ್ಗದ ಮೀಸಲಾತಿ ಹೊಂದಿದೆ. ಇನ್ನುಳಿದ ಎರಡು ಕ್ಷೇತ್ರಗಳಲ್ಲಿ ಬೇರೆಯದ್ದೇ ಮೀಸಲಾತಿ ಪ್ರಕಟವಾಗಿದೆ. ಇಲ್ಲಿ, ಬಹುಮುಖ್ಯವಾಗಿ ಚಿಗಳ್ಳಿ ಜಿಪಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಎಲ್ಟಿ ಪಾಟೀಲರಿಗೆ ಮೀಸಲಾತಿಯ ಕೊಕ್ಕೆ ಹಾಕಲಾಗಿದ್ದು, ಏನೂ ಮಾಡಲಾರದ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ ಅನ್ನೋ ಮಾತುಗಳೂ ಕೇಳಿ ಬಂದಿವೆ.
ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಗಳ್ಳಿ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದ ಎಲ್ಟಿ ಪಾಟೀಲರಿಗೆ, ಆ ಚುನಾವಣೆಯಲ್ಲೇ ಸೋಲಿಸುವ ಪ್ಲಾನ್ ಮಾಡಲಾಗಿತ್ತಂತೆ, ಆದ್ರೆ ಅದೇನೇ ತಿಪ್ಪರಲಾಗ ಹಾಕಿದ್ರೂ ಎಲ್ಟಿ ಪಾಟೀಲ್ ಸೋಲಿಸಲು ಸಾಧ್ಯವಾಗಲೇ ಇಲ್ಲ. ಹೀಗಾಗಿ, ಈ ಬಾರಿ ಮೀಸಲಾತಿ ದಾಳ ಉರುಳಿಸಿ, ಪಾಟೀಲರು ಸ್ಪರ್ಧಾ ಕಣದಲ್ಲೇ ಇರದಂತೆ ನೋಡಿಕೊಂಡ್ರಾ..? ಇಂತಹದ್ದೊಂದು ಗುಸು ಗುಸು ಚರ್ಚೆ ಆರಂಭವಾಗಿದೆ.
ಎಮ್ಮೆಲ್ಸಿ ಕನಸು..!
ಇನ್ನೇನು ಆಗಸ್ಟ್ ಹೊತ್ತಿಗೆ ಎಮ್ಮೆಲ್ಸಿ ಚುನಾವಣೆ ಬರೋ ಛಾನ್ಸ್ ಇದೆ. ಆ ಹೊತ್ತಲ್ಲಿ ಹೇಗಾದ್ರೂ ಸರಿ ಎಮ್ಮೆಲ್ಸಿ ಮಾಡಲೇ ಬೇಕು ಅಂತಾ ಎಲ್ಟಿ ಪಾಟೀಲ್ ಸಾಕಷ್ಟು ನಿರೀಕ್ಷೆ ಹೊತ್ತು ಕೂತಿದ್ದಾರೆ. ಅದಕ್ಕೆ ಪೂರಕವಾಗಿ ಈಗಾಗಲೇ ಹಲವು ನಾಯಕರೊಂದಿಗೆ ಚರ್ಚೆ ಮಾಡಿಯೂ ಆಗಿದೆ. ನಾಯಕರುಗಳು ಭರವಸೆಯನ್ನೂ ನೀಡಿದ್ದಾರಂತೆ. ಆದ್ರೆ ಕನಿಷ್ಟ ಪಕ್ಷ ಎಮ್ಮೆಲ್ಸಿ ಆಗೋ ಕನಸಾದ್ರೂ ಈಡೇರತ್ತಾ ಅನ್ನೋ ಆಸೆಗೂ ಬಹುಶಃ ವಿ.ಎಸ್.ಪಾಟೀಲ್ ತೊಡರಾಗೋ ಸಾಧ್ಯತೆ ಇದೆ.
ವಿಎಸ್ಪಿ ಎಮ್ಮೆಲ್ಸಿ..?
ಯಾಕಂದ್ರೆ, ಸದ್ಯ ಕ್ಷೇತ್ರ ಬಿಟ್ಟು ಕೊಟ್ಟು ನಿಗಮ ಮಂಡಳಿಯ ಅಧ್ಯಕ್ಷರಾಗಿ ಕೂತಿರೋ ವಿ.ಎಸ್.ಪಾಟೀಲರಿಗೆ ಮುಂದೆ ಎಮ್ಮೆಲ್ಸಿ ಮಾಡಿ ಸಂತೈಸುವ ಇರಾದೆ ಹೈಕಮಾಂಡ್ ಅಂಗಳದಲ್ಲಿ ಚರ್ಚೆಯಾಗಿದೆಯಂತೆ. ಹೀಗಿದ್ದಾಗ, ಎಲ್ಟಿ ಪಾಟೀಲರ ಗತಿಯೇನು..? ಇತ್ತ ಶಾಸಕ ಸ್ಥಾನವೂ ಇಲ್ಲ, ಎಮ್ಮೆಲ್ಸಿಯೂ ಇಲ್ಲ. ಅದೂ ಹೋಗಲಿ ಜಿಲ್ಲಾ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿ ಅಲ್ಲಾದ್ರೂ ಗೆಲ್ಲೋಣ ಅಂದ್ರೆ ಅಲ್ಲೂ ಮೀಸಲಾತಿಯ ಕೊಕ್ಕೆ..! ಹೀಗಾದ್ರೆ ಹೇಗೆ ಅಂತಾ ಅಕ್ಷರಶಃ ನಲುಗಿ ಹೋಗಿದ್ದಾರೆ ಪಾಟೀಲ್ರು.
ಕಾಂಗ್ರೆಸ್ ದಾರಿ..?
ಇನ್ನು, ಬಿಜೆಪಿಯಲ್ಲಿ ತನ್ನನ್ನು ಒಳಮಸಲತ್ತುಗಳಿಂದ ಮೂಲೆಗುಂಪು ಮಾಡೋ ಹುನ್ನಾರ ನಡೀತಿದೆ ಅಂತಾ ಅರಿತಿರೋ ಎಲ್ಟಿ ಪಾಟೀಲರು ಬಹುಶಃ ಇನ್ನಷ್ಟು ದಿನ ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಾಲಾಗ್ತಿದೆ. ಸಂಸದ ಅನಂತಕುಮಾರ್ ಹೆಗಡೆ, ಪಾಟೀಲರಿಗೆ ಈಗಾಗಲೇ ನೀವು ಯಾವುದಕ್ಕೂ ತಲೆ ಕೆಡಿಸ್ಕೊಬೇಡಿ ನಾನು ನಿಮ್ಮ ಜೊತೆ ಇದ್ದೀನಿ ಅಂತಾ ಭರವಸೆ ನೀಡಿದ್ದಾರಂತೆ. ಇನ್ನು ಮರಳಿ ಕಾಂಗ್ರೆಸ್ ಗೆ ಹೋಗೋಣ ಅಂದ್ರೆ ಈಗಾಗಲೇ ಅಲ್ಲಿಯೂ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಲು ಪ್ರಶಾಂತ್ ದೇಶಪಾಂಡೆ ಟವೆಲ್ಲು ಹಾಕಿ ಕುಳಿತಿದ್ದಾರೆ. ಆದ್ರೂ ಬಿಜೆಪಿಗಿಂತ ಕಾಂಗ್ರೆಸ್ಸೇ ವಾಸಿ ಅನ್ನೋ ಸಲಹೆಗಳೂ ಪಾಟೀಲರ ಪರಮಾಪ್ತರಿಂದ ಬಂದಿವೆಯಂತೆ.
ಅದೇನೇ ಆಗಿರಲಿ, ತಾಲೂಕಿನ ಮಟ್ಟಿಗೆ ದಶಕಗಳಿಂದಲೂ ಅಂತಹದ್ದೊಂದು ಚಾರ್ಮು ಉಳಿಸಿಕೊಂಡು ಘರ್ಜಿಸುತ್ತಿದ್ದ ಪ್ರಬಲ, ಪ್ರಬುದ್ಧ ನಾಯಕನೋರ್ವನಿಗೆ ಈ ರೀತಿ ಆಗಬಾರದಿತ್ತು. ಭಿನ್ನಾಭಿಪ್ರಾಯಗಳು ಅದೇನೇ ಇರಲಿ, ಪಕ್ಷದ ಹಿರಿಯರು ಅಂತಹ ನಾಯಕರುಗಳನ್ನು ಉಳಿಸಿಕೊಂಡು ಮುನ್ನಡೆಯುವ ಜರೂರತ್ತು ಇದೆ. ಇಲ್ಲವಾದಲ್ಲಿ ಜಿಪಂ ಚುನಾವಣೆ ಹೊತ್ತಿಗೆ ಮುಂಡಗೋಡ ಬಿಜೆಪಿಯಲ್ಲಿ ಬದಲಾವಣೆಯ ಪರ್ವ ಶುರುವಾಗೋದ್ರಲ್ಲಿ ಎರಡು ಮಾತಿಲ್ಲ.