ಗದಗ: ಆತ ಪವಾಡ ಪುರುಷನಂತೆ. ಸುಡುವ ಎಣ್ಣೆಯಲ್ಲಿ ಕೈ ಇಟ್ಟರೂ ಆತನ ಕೈ ಸುಡುತ್ತಿರಲಿಲ್ಲ, ಕೊತಕೊತ ಕುದಿಯುವ ಬಿಸಿ ತುಪ್ಪವನ್ನ ಬರಿಗೈಲಿ ಹಿಡಿದು ಎಲ್ಲರ ಹುಬ್ಬೇರಿಸುತ್ತಿದ್ದನಂತೆ. ಇವುಗಳ ಮೂಲಕ ಜನರಿಂದ ಸಾವಿರ ಸಾವಿರ ರೂ. ಹಣ ವಸೂಲಿ ಮಾಡ್ತಿದ್ದನಂತೆ. ಸಾಲದು ಅಂತ ಹಿಂದೂ ದೇವರುಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಅದೇನೋ ಗೊತ್ತಿಲ್ಲ ಇವತ್ತು ಇವನ ಗ್ರಹಚಾರ ನೆಟ್ಟಗಿರಲಿಲ್ಲ.
ಹೊಡಿ ಮಗಾ, ಹೊಡಿ ಮಗಾ..!
ಕಪಾಳಕ್ಕೆ ಹೊಡೆಯುವನು ಒಬ್ಬ, ಇನ್ನೊಬ್ಬ ಎಳೆದು ಒದಿತಿದ್ದ. ಮತ್ತೋರ್ವಳು ಹಾದಿಯೊಳಗೆ ಪಟ ಪಟ ಅಂತ ಮುಖಕ್ಕೆ ಭಾರಿಸುತ್ತಿದ್ದಳು. ಅಯ್ಯೋ ಕೈ ಮುಗಿತಿನಿ ಬಿಟ್ಟು ಬಿಡಿ ಕೈ ಮುಗಿತಿನಿ ಅಂತ ಒದೆತಿನ್ನುತ್ತಿದ್ದ ಬಾಬಾ ಹೇಳ್ತಿದ್ದ.
ಘಟನೆ ಎಲ್ಲಿ..?
ಅಂದಹಾಗೆ ಇವೆಲ್ಲ ದೃಶ್ಯ ಕಂಡು ಬಂದಿದ್ದು ಗದಗನಲ್ಲಿ.. ಹೌದು. ಪವಾಡಗಳ ಹೆಸರಲ್ಲಿ ವಂಚನೆ ಮಾಡುತ್ತಿದ್ದ ನಕಲಿ ಬಾಬಾ ಒಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಘಟನೆ ನಡೆದಿದ್ದು ಡೋಂಗಿ ಬಾಬಾ ಆಸೀಫ್ ಜಾಗಿರದಾರ್ ಎಂಬಾತನಿಗೆ ಥಳಿಸಿದ್ದಾರೆ. ಇಂದು ಹಿಂದೂ ದೇವರುಗಳಿಗೆ ಬೈತಿದ್ದ ಅಂತ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜನ್ರ ಮೈಂಡ್ ವಾಶ್ ಮಾಡಿ ಸಾವಿರಾರು ರೂ. ಹಣ ಲೂಟಿ ಮಾಡುತ್ತಿದ್ದನಂತೆ. ಇಂದು ಡೋಂಗಿ ಬಾಬಾನ ಅಸಲಿ ಮುಖವಾಡ ಗೊತ್ತಾಗುತ್ತಿದ್ದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾನು ಮಾಡಿದ್ದು ಮೋಸ.. ತಪ್ಪಾಗಿದೆ ಕ್ಷಮಿಸಿ ಅಂತಾ ಬೇಡಿಕೊಂಡ್ರೂ ಧರ್ಮದೇಟು ಕೊಟ್ಟಿದ್ದಾರೆ.
ಅದೇ ದಂಧೆ..!
ಈ ಡೋಂಗಿ ಬಾಬಾ ಮೂಲತಃ ವಿಜಯಪುರ ಜಿಲ್ಲೆಯವನಾಗಿದ್ದ ಗದಗ ನಗರದ ಗಂಗಿಮಡಿಯಲ್ಲಿನ ತನ್ನ ಹೆಂಡತಿ ತವರುಮನೆಯಲ್ಲಿಯೇ ತಂಗಿದ್ದ. ಇಲ್ಲಿಯೇ ಹಲವು ವರ್ಷಗಳಿಂದ ಡೋಂಗಿತನದ ಪವಾಡಗಳನ್ನ ಮಾಡಿ ಜನರಿಗೆ ನಂಬಿಸಿದ್ದ. ಕುದಿಯೋ ಎಣ್ಣೆ ಹಾಗೂ ಸುಡು ಸುಡು ತುಪ್ಪದಲ್ಲಿ ಕೈ ಹಾಕುತ್ತಿದ್ದ ಡೋಂಗಿ ಬಾಬಾ, ಏಕಾಏಕಿ ಮೈಮೇಲೆ ದೇವರ ಬಂದಂತೆ ನಟಿಸಿ ಜನರನ್ನ ನಂಬಿಸುತ್ತಿದ್ದ , ನಿಂಬೆಹಣ್ಣು, ಬೂದಿ ಕೊಟ್ಟು ಜನರಿಗೆ ಮೋಸ ಮಾಡುತ್ತಿದ್ದ ಅಂತ ಜನರು ಆರೋಪಿಸಿದ್ದಾರೆ. ಹೀಗಾಗಿ ಈ ಡೋಂಗಿ ಬಾಬಾ ನಂಬಿ ಮೋಸ ಹೋದ ಜನ್ರರು ಇವತ್ತು ರೊಚ್ಚಿಗೆದ್ದಿದ್ದರು.
ಪೊಲೀಸ್ರ ಕೈಯಲ್ಲಿ..!
ಇನ್ನು ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗದಗ ಗ್ರಾಮೀಣ ಠಾಣೆಯ ಪೊಲೀಸರು ಬಾಬಾನನ್ನ ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ನಕಲಿ ಬಾಬಾನ ಅಸಲಿಯತ್ತು ಗೊತ್ತಾದ ಮೋಸ ಹೋದ ಭಕ್ತರು ಆತನಿಗೆ ಹಿಡಿಶಾಪ ಹಾಕ್ತಿದ್ದಾರೆ.