ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗಿಶಗೌಡ ಕೊಲೆ ಕೇಸ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಕೊಲೆ‌ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದ ವ್ಯಕ್ತಿಯೇ ಈಗ ಖುದ್ದು ವಿನಯ ಕುಲಕರ್ಣಿ ವಿರುದ್ಧವೇ ಪರೋಕ್ಷ ಹೇಳಿಕೆ ನೀಡಿದ್ದು, ಇಷ್ಟು ದಿನ ಹೇಳದೇ‌ ಇರೋ ಸತ್ಯಗಳನ್ನೆಲ್ಲ ಇನ್ನು ಮುಂದೆ ಹೇಳುವೆ ಅಂತಾ ಹೇಳಿದ್ದಾನೆ. ಮತ್ತೊಂದು ಕಡೆ ನಿನ್ನೆಯಷ್ಟೇ ಸಿಬಿಐ ಬಂಧಿಸಿದ್ದ ಸೋಮು ನ್ಯಾಮಗೌಡನಿಗೆ ಇವತ್ತು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ.

2016ರ ಜೂನ್ 15ರಂದು ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಕೊಲೆ ಕೇಸ್‌ನ ಪೊಲೀಸ್ ತನಿಖೆಯಲ್ಲಿ ಮೊದಲ ಆರೋಪಿಯಾಗಿದ್ದ ಬಸವರಾಜ ಮುತ್ತಗಿ ಹಾಗೂ ಮುತ್ತಗಿಯ ಐವರು ಸ್ನೇಹಿತರು, ಇಷ್ಟು ದಿನ ಸಿಬಿಐ ವಿಚಾರಣೆ ಎದುರಿಸುತ್ತಲೇ ಬಂದಿದ್ದರು. ಈಗ ಏಕಾಏಕಿಯಾಗಿ ರಾಜಕೀಯಕ್ಕೆ ಯೋಗೀಶಗೌಡ ಹತ್ಯೆಯಾಗಿದೆ ಎನ್ನುವುದು ಸಿಬಿಐ ತನಿಖೆಯಿಂದ ಎಲ್ಲರಿಗೂ ಬಯಲಾಗಿದೆ. ಹೀಗಾಗಿ ನಾವು ಹಾಗೂ ನಮ್ಮ ಜೊತೆ ಇರುವವರೆಲ್ಲ ಬಡ ಹುಡುಗರು, ಅವರನ್ನು ಬಲಿ ಪಶು ಮಾಡಲು, ಬಳಸಿಕೊಂಡಿದ್ದಾರೆ ಎಂದು ಮುತ್ತಗಿ ಆರೋಪಿಸಿದ್ದಾರೆ. ಇನ್ನು ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಸಿಬಿಐ ತನಿಖೆಯ ತಡೆ ಸಂಬಂಧಿತವಾಗಿ ಸುಪ್ರೀಂ ಕೋರ್ಟ್ ನಲ್ಲಿರೋ ಕೇಸ್‌ನಲ್ಲಿ ಮುತ್ತಗಿ ಪರ ಕಪಿಲ್ ಸಿಬಲ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನು ಮುತ್ತಗಿ ಸಹ ಖಚಿತ ಪಡಿಸಿದ್ದಾರೆ.

ಇನ್ನು ನಿನ್ನೆ ಬಂಧನಕ್ಕೆ ಒಳಗಾಗಿರುವ ವಿನಯ ಕುಲಕರ್ಣಿ ಮಾಜಿ ಆಪ್ತ ಕಾರ್ಯದರ್ಶಿ ಸೋಮು ನ್ಯಾಮಗೌಡರಿಗೆ ಸಿಬಿಐ ಸಂಜೆಯವರೆಗೂ ಡ್ರಿಲ್ ನಡೆಸಿ ಬಳಿಕ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜೊತೆಗೆ ವಿನಯ ಕುಲಕರ್ಣಿ ದೂರದ ಸಂಬಂಧಿಯಾಗಿರುವ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪತಿ ಕೆಂಪೇಗೌಡ, ಯೋಗಿಶಗೌಡ ಜಿಮ್ ಟ್ರೇನರ್ ವಿವೇಕ್, ಯೋಗೀಶಗೌಡ ಪತ್ನಿ ಮಲ್ಲಮ್ಮ ಹಾಗೂ ಬಸವರಾಜ ಮತ್ತಗಿ ಸಿಬಿಐ ವಿಚಾರಣೆ ಎದುರಿಸಿದರು.
ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಯೋಗೀಶಗೌಡ ಹತ್ಯೆಯ ಕೇಸ್ ಹೊಸ ಹೊಸ ತಿರುವುಗಳನ್ನೇ ಪಡೆದುಕೊಳ್ಳುತ್ತಿದ್ದು, ಮುತ್ತಗಿ ಸಿಬಿಐ ಮುಂದೆ ಹೇಳಿದ ಸತ್ಯ ವಿಚಾರ ಏನು? ಅದರಿಂದ ಇನ್ನು ಯಾರ ಯಾರಿಗೆ ಗಂಡಾಂತರ ಕಾದಿದೆ? ಹಾಗೂ ಇದರಿಂದ ಮುತ್ತಗಿ ಆ್ಯಂಡ್ ಗ್ಯಾಂಗ್ ಸೇಫ್ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

error: Content is protected !!