ಹುನಗುಂದ ತಾಪಂ ಕ್ಷೇತ್ರ: ಬಿಜೆಪಿಯಲ್ಲಿ “ಹಳೇ” ಕಲಿಗಳ ಮದ್ಯೆ ಟಿಕೆಟ್ ಫೈಟ್..! “ಕೈ” ಅಂಗಳದಲ್ಲಿ ಎಲ್ಲವೂ ಸೀಕ್ರೆಟ್..!!

ಮುಂಡಗೋಡ: ತಾಲೂಕಿನಲ್ಲಿ ಈಗ ಬರೀ ರಾಜಕೀಯದ್ದೇ ಹವಾ. ಇನ್ನೇನು ತಾಲೂಕಾ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕು, ಮೀಸಲಾತಿಗಳೂ ಪ್ರಕಟವಾಗಿದೆ‌. ಹೀಗಾಗಿ, ಎಲ್ಲೇಲ್ಲೂ ರಾಜಕೀಯ ಚರ್ಚೆ ಶುರುವಾಗಿದೆ. ಅದ್ರಂತೆ ಇವತ್ತು ನಾವು ಹುನಗುಂದ ತಾಪಂ ಕ್ಷೇತ್ರದ ಹಕೀಕತ್ತು ನಿಮ್ಮ ಮುಂದೆ ಇಡ್ತಿದಿವಿ.

ಇದು ಹುನಗುಂದ ಕ್ಷೇತ್ರ..!
ಅಂದಹಾಗೆ, ಹುನಗುಂದ ತಾಪಂ ಕ್ಷೇತ್ರ ಹುನಗುಂದ, ಅಗಡಿ, ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳನ್ನು ಒಳಗೊಂಡಿದೆ. ಗ್ರಾಮ ಪಂಚಾಯತಿ ಆಡಳಿತ ಸಧ್ಯ ಕಾಂಗ್ರೆಸ್ ಬೆಂಬಲಿತರ “ಕೈ” ಯಲ್ಲಿದೆ. ಹೀಗಿದ್ದಾಗಲೂ ಇಲ್ಲಿ ಬಿಜೆಪಿ ಪ್ರಭಾವ ತುಸು ಜಾಸ್ತಿನೇ ಇದೆ. ಆದ್ರೆ ಸ್ಥಳೀಯ ಮಟ್ಟದ ಆಂತರಿಕ ಬೇಗುದಿ ಅನ್ನೋದು, ಬಹುಶಃ ಇಲ್ಲಿನ ಬಿಜೆಪಿಗೆ ಒಂದಿಷ್ಟು ಹಿನ್ನಡೆ ತಂದಿದೆ. ಇದು ಇತ್ತಿಚೆಗಷ್ಟೇ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಗಜ್ಜಾಹೀರಾಗಿದೆ. ಎಡಗೈಯನ್ನ ಬಲಗೈ, ಬಲಗೈಯನ್ನ ಎಡಗೈ ನಂಬದ ಸ್ಥಿತಿಯಲ್ಲಿ ಬಿಜೆಪಿ ಪರದಾಡಿದೆ ಈ ಕಾರಣಕ್ಕಾಗೇ, ಅನಾಯಾಸವಾಗಿ ದಕ್ಕಬೇಕಿದ್ದ ಗ್ರಾಮ ಪಂಚಾಯತಿ ಆಡಳಿತ ಇಲ್ಲಿನ ಬಿಜೆಪಿಗರಿಗೆ ಕೈತಪ್ಪಿ ಹೋಗಿದೆ.

ತಾಪಂ ಕಣದಲ್ಲಿ ಯಾರಾಗ್ತಾರೆ ಕಮಲ ಕಲಿ..?
ಅಂದಹಾಗೆ, ಹುನಗುಂದ ತಾಪಂ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಇವ್ರಿಗೇ ಟಿಕೆಟ್ ನೀಡಿ ಅಂತಾ ಓರ್ವ ಅಭ್ಯರ್ಥಿಯನ್ನು ರೆಡಿ ಮಾಡಿಕೊಂಡಿದೆ. ಧರಣೇಂದ್ರ ಹೊಂಡದಕಟ್ಟಿ ಯವರಿಗೆ ತಾಪಂ ಕ್ಷೇತ್ರದ ಟಿಕೆಟ್ ಕೊಡಿಸಿ ಒಮ್ಮತದಿಂದ ಕಣಕ್ಕಿಳಿಸೋ ಪ್ಲಾನ್ ರೆಡಿಯಾಗಿದೆ. ಆ ಬಗ್ಗೆ ಈಗಾಗಲೇ ಸಚಿವ ಶಿವರಾಮ್ ಹೆಬ್ಬಾರ್ ಗಮನಕ್ಕೂ ತರಲಾಗಿದೆಯಂತೆ. ಇಲ್ಲಿನ ಬಿಜೆಪಿ ಮುಖಂಡ ಹಾಗೂ ಇಂದೂರು ಜಿಪಂ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿದ್ದು ಹಡಪದ, ಧರಣೇಂದ್ರ ಹೊ‌ಂಡದಕಟ್ಟಿಯವರ ಬೆನ್ನಿಗೆ ನಿಂತಿದ್ದಾರಂತೆ.

ಸಿದ್ದು ನಡಮನಿಗೂ ಚಾನ್ಸ್ ಇದೆಯಾ..?
ಇನ್ನು, ಹುನಗುಂದ ಭಾಗದಲ್ಲಿ ಒಂದು ಕಾಲದಲ್ಲಿ “ದೊಡ್ಡವರ” ದರ್ಬಾರ್ ಇತ್ತು. ಆ ವೇಳೆ ಆನೆ ನಡೆದದ್ದೇ ದಾರಿ ಅನ್ನೋ ವ್ಯವಸ್ಥೆ ಇತ್ತು. ಆ ಸಮಯದಲ್ಲೂ ಕೂಡ ಸಾಕಷ್ಟು ವಿರೋಧಗಳ ನಡುವೆಯೂ ಹುನಗುಂದಕ್ಕೆ ಬಿಜೆಪಿಯ ಕಮಲವನ್ನು ಅರಳುವಂತೆ ಮಾಡಲಾಗಿತ್ತು. ಅಂದಹಾಗೆ ಅವತ್ತು ಅನಂತಕುಮಾರ್ ಹೆಗಡೆಯವರನ್ನು ಗ್ರಾಮಕ್ಕೆ ಕರೆದು ಕೇಸರಿ ಕಹಳೆ ಊದುವಂತೆ ಮಾಡಲಾಗಿತ್ತು. ಹಾಗೆ ಅವತ್ತಿನ ಕೆಲವೇ ಕೆಲವು ಬಿಜೆಪಿ ಯುವಕರು ಗಟ್ಟಿಯಾಗಿ ನಿಂತಿದ್ರು. ಅವತ್ತು ಹಾಗೆ ಎದೆತಟ್ಟಿ ನಿಂತಿದ್ದ ಕಾರ್ಯಕರ್ತರಲ್ಲಿ ನಾಗೇಶ್ ದೈವಜ್ಞ, ನೀಲಪ್ಪ ಮಡಿವಾಳರ್, ಧರಣೇಂದ್ರ ಹೊಂಡದಕಟ್ಟಿ ಹಾಗೆ ಸಿದ್ದಪ್ಪ ನಡಮನಿ ಮೊದಲಿಗರು ಅನ್ನೋ ಮಾತಿದೆ. ಬಿಜೆಪಿ ಅಂದ್ರೆ ಏನು ಅಂತಾ ಗೊತ್ತಿರದ ಸಂದರ್ಭದಲ್ಲೇ ಗ್ರಾಮದಲ್ಲಿ ಬಿಜೆಪಿ ತಳವೂರಲು ಆ ಹೊತ್ತಲ್ಲಿ ಶ್ರಮಿಸಿದ್ದರು ಅನ್ನೋ ಚರ್ಚೆ ಇದೆ. ಹೀಗಾಗಿ, ಸಿದ್ದಪ್ಪ ನಡಮನಿಗೂ ಈ ಬಾರಿ ತಾಪಂ ಚುನಾವಣೆಗೆ ಟಿಕೆಟ್ ನೀಡಬೇಕು ಅಂತಾ ಕೆಲವರು ದನಿ ಎತ್ತಿದ್ದಾರೆ.

ಅಗಡಿಯಿಂದ “ರಾಮಣ್ಣ” ?
ಇನ್ನು ಹುನಗುಂದ ಬಿಜೆಪಿ ಪಡಸಾಲೆಯಲ್ಲಿ ಇಷ್ಟೇಲ್ಲ ಚರ್ಚೆಗಳು ನಡೆಯುತ್ತಿದ್ರೆ. ಇದರ ನಡುವೆಯೇ ಅಗಡಿಯ ಬಿಜೆಪಿ ಹುಲಿ ರಾಮಣ್ಣ ಲಮಾಣಿ ಗಪ್ ಚುಪ್ ಆಗಿ ಒಂದಿಷ್ಟು ಕಾರ್ಯತಂತ್ರ ರೂಪಿಸ್ತಿದಾರೆ. ಸಾಮಾನ್ಯ ಕ್ಷೇತ್ರವಾಗಿರೋ ಕಾರಣಕ್ಕೆ ರಾಮಣ್ಣ ಲಮಾಣಿ,  ನನಗೂ ಟಿಕೆಟ್ ಕೊಡಿ, ಅಂತಾ ಟಿಕೆಟ್ ಕದನದಲ್ಲಿ ಠಕ್ಕರ್ ಕೊಡಲು ಪ್ಲಾನ್ ಹಾಕಿಕೊಂಡಿರೋ ಗುಸು ಗುಸು ಎದ್ದಿದೆ. ಹೀಗಾಗಿ ಈ ವಿಚಾರ ಬಹುಶಃ ಹುನಗುಂದ ಆಕಾಂಕ್ಷಿಗಳಿಗೆ ಒಂದಿಷ್ಟು ತಲೆಬಿಸಿ ತರೋದಂತೂ ಸತ್ಯ.

ಅಚ್ಚರಿಯ ಅಭ್ಯರ್ಥಿಯಾ..?
ಇದೇಲ್ಲ ಚರ್ಚೆಗಳ ನಡುವೆ ಹುನಗುಂದ ತಾಪಂ ಕ್ಷೇತ್ರಕ್ಕೆ ಈಗಾಗಲೇ ಸಚಿವರ ಅಂಗಳದಲ್ಲಿ ಬೇರೆಯದ್ದೇ ಚರ್ಚೆಯಾಗಿದೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಅದ್ಯಾರು, ಅದೇನೆ ತಿಪ್ಪರಲಾಗ ಹಾಕಿದ್ರು ಆ ಒಬ್ಬ ಅಚ್ಚರಿಯ ಅಭ್ಯರ್ಥಿಗೆ ಮಣೆ ಹಾಕೋದು ಗ್ಯಾರಂಟಿ ಅನ್ನಲಾಗ್ತಿದೆ. ಹಾಗಾದ್ರೆ, ಹುನಗುಂದ ಮಟ್ಟಿಗಿನ ಆ ಅಚ್ಚರಿಯ ಅಭ್ಯರ್ಥಿ ಯಾರು ಅನ್ನೋದು ಮಾತ್ರ ಇಲ್ಲಿ ಯಾರಿಗೂ ಗೊತ್ತಿಲ್ಲ. ಆದ್ರೆ ಆ ಅಚ್ಚರಿಯ ಅಭ್ಯರ್ಥಿಗೆ ಪಟ್ಟ ಕಟ್ಟಲೇ ಬೇಕು ಅಂತಾ ಹೆಬ್ಬಾರ್ ಅಂಗಳದಲ್ಲಿ ಚರ್ಚೆಯಾಗಿದೆ ಅನ್ನೋದು ಗಪ್ ಚುಪ್ ವಿಚಾರ. ಅದರ ಮೇಲೂ “ಕುಚ್ ಪಾನೆ ಕೇ ಲಿಯೆ ಕುಚ್ ಕೊನಾ ಹೀ ಪಡತಾ ಹೈ” ಅನ್ನೋ ಮಾತು ಇಲ್ಲಿ ಮತ್ತೊಂದು ಆಯಾಮದಲ್ಲಿ ವರ್ಕೌಟ್ ಆಗೋ ಸಾಧ್ಯತೆಗಳೂ ಇದೆ ಎನ್ನಲಾಗ್ತಿದೆ‌.

ಇನ್ನು “ಕೈ” ಕತೆ ಏನು..?
ಹುನಗುಂದ ಗ್ರಾಮ ಪಂಚಾಯತಿ ಸದ್ಯ ಕಾಂಗ್ರೆಸ್ ಬೆಂಬಲಿತರ ಆಡಳಿತದಲ್ಲಿದೆ. ಬಿಜೆಪಿಯ ಒಳ ಜಗಳ, ತಿಕ್ಕಾಟ, ಒಣಪ್ರತಿಷ್ಟೆಗಳ ಫಲವಾಗಿಯೋ ಏನೊ ಕಾಂಗ್ರೆಸ್ ಗೆ ಇಲ್ಲಿ ಒಂದಿಷ್ಟು ಫಸಲು ಹುಲುಸಾಗಿ ಬೆಳೆಯಲು ಕಾರಣವಾಗಿತ್ತು. ಹೀಗಾಗಿನೇ, ಸದ್ಯ ಹುನಗುಂದ ತಾಪಂ ಕ್ಷೇತ್ರದಲ್ಲಿ ಮೂವರು ಕಾಂಗ್ರೆಸ್ ಅಭ್ಯರ್ಥಿಯಾಗಲು ಕಸರತ್ತು ನಡೆಸಿದ್ದಾರೆ.

ಬಸವರಾಜ್ ಆಸ್ತಕಟ್ಟಿಗೆ “ಕೈ” ಟಿಕೆಟ್..?
ಇನ್ನು, ಕಾಂಗ್ರೆಸ್ ಪಡಸಾಲೆಯಲ್ಲಿ ಬಸವರಾಜ್ ಆಸ್ತಕಟ್ಟಿಗೆ ಕಾಂಗ್ರೆಸ್ ತಾಪಂ ಟಿಕೆಟ್ ಪಕ್ಕಾ ಅನ್ನೋ ತೀರ್ಮಾನ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲೇ ಫಿಕ್ಸ್ ಮಾಡಲಾಗಿದೆಯಂತೆ. ಹೀಗಾಗಿ, ಬಸವರಾಜ್ ಆಸ್ತಕಟ್ಟಿ ತೆರೆ‌ಮರೆಯಲ್ಲೇ ಕ್ಷೇತ್ರದಲ್ಲಿ ಅಂತಹದ್ದೊಂದು ವ್ಯವಸ್ಥಿತ ಪ್ರಚಾರ ಈಗಾಗಲೇ ಶುರುವಿಟ್ಟಿದ್ದಾರೆ. ಕಟ್ಟಾ ಕಾಂಗ್ರೆಸ್ಸಿಗನಾಗಿ ಅವ್ರ ತಂದೆಯವರ ಕಾಲದಿಂದಲೂ ಪಕ್ಷಕ್ಕಾಗಿ ಹಗಲಿರುಳೂ ದುಡಿದ ಬಸವರಾಜ್ ಆಸ್ತಕಟ್ಟಿ ಇದುವರೆಗೂ ಯಾವುದೇ ಹುದ್ದೆಗಳಲ್ಲಿ ಕೂತಿಲ್ಲ. ಹೀಗಾಗಿ, ಈ ಬಾರಿ ಶತಾಯ ಗತಾಯ ತಾಲೂಕಾ ಪಂಚಾಯತಿ ಸದಸ್ಯ ಆಗಲೇ ಬೇಕು ಅಂತಾ ಪಣತೊಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಅಬ್ದುಲ್ ಮುನಾಫ್ ಸಾಹೇಬ್ರೂ..?
ನಿಜ, ಬಸವರಾಜ್ ಆಸ್ತಕಟ್ಟಿ ಕಾಂಗ್ರೆಸ್ ಟಿಕೆಟ್ ಗಾಗಿ ಈಗಾಗಲೇ ಕನ್ಫರ್ಮ್ ಮಾಡಿಕೊಂಡು ಕಣಕ್ಕಿಳಿಯೋ ಖುಶಿಯಲ್ಲಿದ್ರೆ ಅತ್ತ ಮಾಜಿ ಗ್ರಾಪಂ ಸದಸ್ಯ ಅಬ್ದುಲ್ ಮುನಾಫ್ ಸೋಮಾಪುರ್ ನನಗೂ ಟಿಕೆಟ್ ಬೇಕು ಅಂತಾ “ಕೈ” ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ ಅನ್ನೊ ಹೊಸ ಸುದ್ದಿ ಸ್ಪೋಟಗೊಂಡಿದೆ. ಅದರ ನಡುವೆ ಮತ್ತೊಬ್ಬ ಮುಸ್ಲಿಂ ಯುವಕ ಹನ್ನೆ ಬುಡ್ಡಾ ಘೋರಿ ಕೂಡ ಈ ಸಾರಿ ನಾನೂ ಒಂದು ಕೈ ನೋಡ್ತಿನಿ ಅಂತಾ ಅಂದಿದ್ದಾರಂತೆ. ಹೀಗಾಗಿ, ಇಲ್ಲಿನ ಕೈ ಪಾಳಯದಲ್ಲೂ ಒಂದಿಷ್ಟು ಗೊಂದಲಗಳಿಗೆ ಕಾರಣವಾಗಬಹುದು. ಆದ್ರೆ ಅದೇಲ್ಲವೂ ಸೀಕ್ರೆಟ್ ಆಗಿಯೇ ನಡೆಯುತ್ತಿವೆ. ಹಾಗೆ ನನಗೂ ಟಿಕೆಟ್ ಬೇಕು ಅನ್ನವರ ಹಿಂದೆ ದೊಡ್ಡವರ ಮಸಲತ್ತುಗಳೂ ಅಡಕವಾಗಿವೆ ಅನ್ನೋ ಒಳಸುಳಿ ಎದ್ದಿದೆ.

ಒಟ್ನಲ್ಲಿ, ಹುನಗುಂದ ತಾಲೂಕಾ ಪಂಚಾಯತ ಅಖಾಡ ಬಿಸಿ ಬಿಸಿಯಾಗಿದೆ‌. ಇಲ್ಲಿ ಯಾವ ಕ್ಷಣದಲ್ಲಾದ್ರೂ ಉಲ್ಟಾ ಪಲ್ಟಾ ಆಗಬಹುದು. ಇನ್ನು, ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಬಿಜೆಪಿಯಿಂದ ಹುನಗುಂದ ಸ್ಥಳೀಯ ನಾಯಕ ಸಿದ್ದು ಹಡಪದ್ ಗೆ ಟಿಕೆಟ್ ನೀಡಿದ್ದೇ ಆದ್ರೆ ಇಡೀ ತಾಲೂಕಲ್ಲೇ ಹುನಗುಂದ ಕ್ಷೇತ್ರ ಹೈ ವೋಲ್ಟೇಜ್ ಕಣವಾಗಿ ಮಿಂಚಲಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ..

error: Content is protected !!