ಮುಂಡಗೋಡ: ತಾಲೂಕಿನ ನಂದಿಕಟ್ಟಾ ತಾಲೂಕಾ ಪಂಚಾಯತಿ ಮತಕ್ಷೇತ್ರ ಬಿರುಸುಗೊಂಡಿದೆ. ಇನ್ನೂ ಚುನಾವಣೆಯೇ ಘೋಷಣೆಯಾಗಿಲ್ಲ, ಮೀಸಲಾತಿ ಪ್ರಕಟವಾಗ್ತಿದ್ದಂತೆ ರಾಜಕೀಯ ಚದುರಂಗದಾಟಗಳು ತೆರೆಮರೆಯಲ್ಲೇ ಚಾಲ್ತಿ ಪಡೆದುಕೊಂಡಿವೆ.
ಬಿಜೆಪಿ ತಲೆಬಿಸಿ..!
ಅಂದಹಾಗೆ, ನಂದಿಕಟ್ಟಾ ತಾಪಂ ಕ್ಷೇತ್ರಕ್ಕೆ ” ಸಾಮಾನ್ಯ” ಮೀಸಲಾತಿ ಪ್ರಕಟಗೊಂಡಿದೆ. ಹೀಗಾಗಿ, ಇಲ್ಲಿನ ಬಿಜೆಪಿಯಲ್ಲಿ ಈಗಾಗಲೇ
ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತುಗಳು ಜಾರಿಯಲ್ಲಿವೆ. ಹಾಗೆ ಆಕಾಂಕ್ಷಿತರ ಪಟ್ಟಿ ಹನುಂಮತನ ಬಾಲದಂಗಿದೆ. ಈ ಸಾರಿ ನಾನೂ ಒಂದು ಕೈ ನೋಡೇ ಬಿಡ್ತಿನಿ ಅಂತಾ ಆಕಾಂಕ್ಷಿಗಳು ತೋಳು ಏರಿಸಿಕೊಂಡು ಸನ್ನದ್ದವಾಗಿದ್ದಾರೆ. ಆದ್ರೆ ಆ ಇಬ್ಬರು ಆಕಾಂಕ್ಷಿಗಳ ನಡುವೆ ಮಾತ್ರ ಕೊಂಚ ಜಾಸ್ತಿ ಪೈಪೋಟಿ ಏರ್ಪಟ್ಟಿದ್ದು, ಆ ಇಬ್ಬರಲ್ಲಿ, ಒಬ್ಬರಿಗೆ ಟಿಕೆಟ್ ಪಕ್ಕಾ ಅನ್ನಲಾಗ್ತಿದೆ.
ಕಲ್ಲನಗೌಡ್ರು ಕಣಕ್ಕಿಳಿತಾರಾ..?
ನಂದಿಕಟ್ಟಾ ಗ್ರಾಮ ಪಂಚಾಯತಿಗೆ ಎರಡೆರಡು ಬಾರಿ ನಿಂತು ಜಯಭೇರಿ ಬಾರಿಸಿದ್ದ ಕಲ್ಲನಗೌಡ ಬಸನಗೌಡ್ರು ಅದ್ಯಾಕೋ ಏನೋ ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿ ಮಕಾಡೆ ಮಲಗಿದ್ರು. ಯಾಕೋ ಗೊತ್ತಿಲ್ಲ, ನಂದಿಕಟ್ಟಾ ಗ್ರಾಮದಲ್ಲಿ ಅವ್ರ ವಾರ್ಡಿನ ಜನ ಅವರನ್ನ ಬೆಂಬಲಿಸಲೇ ಇಲ್ಲ. ಮನೆಲ್ಲಿ ಕೂತಿರಿ ಅಂತಾ ಸೋಲಿಸಿಬಿಟ್ರು. ಆದ್ರೂ ಅವ್ರು ಮಾತ್ರ ಮನೆಲಿ ಕೂರಲಿಲ್ಲ. ಬದಲಾಗಿ, ನಂದಿಕಟ್ಟಾ ಗ್ರಾಮದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ ಅಂತಾ ಜನ ಮಾತಾಡ್ತಿದಾರೆ. ಬಿಜೆಪಿಯ ಅದ್ಯಾವುದೇ ಕಾರ್ಯಕ್ರಮ ಇದ್ರೂ ಕಲ್ಲನಗೌಡ್ರೇ ಮುಂದಿರ್ತಾರೆ. ಹೀಗಾಗಿ, ಇವ್ರಿಗೆ ತಾಪಂ ಕ್ಷೇತ್ರಕ್ಕೆ ಬಿಜೆಪಿ ಮಣೆ ಹಾಕತ್ತಾ..? ಕಾದು ನೋಡಬೇಕಿದೆ.
ವಿಷ್ಣು ದಾದಾ..
ಇನ್ನು ಕಳೆದ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಷ್ಣು ನಿಂಬೋಜಿ, ಅವತ್ತು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡಿದ್ರು. ಆದ್ರೆ ಬಿಜೆಪಿಯಲ್ಲೂ ವಿಷ್ಣು ನಿಂಬೋಜಿಯವರಿಗೆ ಟಿಕೆಟ್ ನಿರಾಕರಣೆ ಮಾಡಲಾಯ್ತು. ಇವ್ರ ಬದಲಿಗೆ ಅವತ್ತು ಗ್ರಾಮದಲ್ಲಿ ಬಿಜೆಪಿ ಪ್ರಭಾವಿ ಮುಖಂಡರಾಗಿದ್ದ ಬಿ.ಎನ್.ಕೊಟಗುಣಿಸಿಯವ್ರಿಗೆ ಪಕ್ಷ ಮಣೆ ಹಾಕಿತ್ತು. ಆದ್ರೆ ಆಗಷ್ಟೆ ಬಿಜೆಪಿ ಸೇರಿ ಟಿಕೆಟ್ ಗೆ ಬೇಡಿಕೆಯಿಟ್ಟಿದ್ದ ವಿಷ್ಣು ನಿಂಬೋಜಿ ಅಲ್ಲೂ ಕಾಲೂರಲಿಲ್ಲ, ಬದಲಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದೇ ಬಿಟ್ಟಿದ್ರು. ಹೀಗಾಗಿ, ಬಿಜೆಪಿ ಅಭ್ಯರ್ಥಿ ಆ ಚುನಾವಣೆಲಿ ಸೋಲು ಒಪ್ಪಿಕೊಳ್ಳಬೇಕಾಯ್ತು. ಇಬ್ಬರ ಕಾದಾಟದಲ್ಲಿ ಮೂರನೇಯವ್ರು ಗೆದ್ದು ಬಂದ್ರು.
ವಿಷ್ಣು ನಿಂಬೋಜಿಗೆ ಅನುಕಂಪದ ಅಲೆ ಇದೆಯಾ.?
ಯಸ್, ಹಾಗಂತ, ಸದ್ಯ ನಂದಿಕಟ್ಟಾ ತಾಪಂ ಕ್ಷೇತ್ರದಲ್ಲಿ ಚರ್ಚೆಯಾಗ್ತಿದೆ. ಎರಡೆರಡು ಬಾರಿ ಸೋತಿರೋ ವಿಷ್ಣು ನಿಂಬೋಜಿಯವರಿಗೆ ಈ ಬಾರಿ ಅಲ್ಲಿನ ಮತದಾರ ಕೈ ಹಿಡಿಯಬಹುದು ಅನ್ನೋ ಅಂದಾಜಿದೆ. ಆದ್ರೆ ಪಕ್ಷ ಅದೇನು ತೀರ್ಮಾನಿಸತ್ತೋ ಕಾದು ನೋಡಬೇಕಿದೆ.
ಇವ್ರಿಗೂ ಟಿಕೆಟ್ ಬೇಕಂತೆ..!
ಇನ್ನು ಬಿಜೆಪಿಯಲ್ಲಿ ಟಿಕೆಟ್ ಗಾಗಿ ಮಂಜುನಾಥ ಮೋರೆ ಕೂಡ ಸೆಡ್ಡು ಹೊಡಿಯಲು ರೆಡಿಯಾಗಿದ್ದಾರೆ. ಈ ಬಾರಿ ನನಗೇ ಟಿಕೆಟ್ ಬೇಕು ಅಂದ್ರೆ ಬೇಕು ಅಂತಾ ಜಿದ್ದಿಗೆ ಬಿದ್ದಿರೋ ಇವ್ರಿಗೆ, ಟಿಕೆಟ್ ಕೈ ತಪ್ಪಿದ್ರೆ ಪಕ್ಷೇತರನಾಗಿ ಕಣಕ್ಕಿಳಿಯೋದು ಗ್ಯಾರಂಟಿ ಅಂತಾ ಹೇಳಲಾಗ್ತಿದೆ. ಹಾಗೇನಾದ್ರೂ ಪಕ್ಷೇತರನಾಗಿ ಕಣಕ್ಕಿಳಿದ್ರೆ ಬಿಜೆಪಿ ಓಟಕ್ಕೆ ಬ್ರೇಕ್ ಗ್ಯಾರಂಟಿ.
ಕಾಂಗ್ರೆಸ್ ಕತೆಯೇನು..?
ಹಾಗೆ ನೋಡಿದ್ರೆ ನಂದಿಕಟ್ಟಾ ತಾಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿಯೇ ಇದೆ. ಕ್ಷೇತ್ರದಲ್ಲಿ ಇವತ್ತಿಗೂ ಪಾರಂಪರಿಕ ಮತಗಳು, ಅಲ್ಪಸಂಖ್ಯಾತರು ಬಹುತೇಕ ಕಾಂಗ್ರೆಸ್ ಜೊತೆಗೇ ಇದ್ದಾರೆ. ಹೀಗಾಗಿ, ಈ ಬಾರಿ ಕಾಂಗ್ರೆಸ್ ಕೂಡ ಬಿಜೆಪಿಗೆ ಠಕ್ಕರ್ ಕೊಡೋದ್ರಲ್ಲಿ ಎರಡು ಮಾತಿಲ್ಲ.
ಆದ್ರೆ, ತಾಪಂ ಚುನಾವಣಾ ಅಖಾಡಕ್ಕೆಯಾರು ಇಳಿತಾರೆ ಅನ್ನೋ ಚರ್ಚೆಗಳು ಪ್ರಾರಂಭವಾಗಿವೆ. ಕ್ಷೇತ್ರದಲ್ಲಿ ಒಂದಿಷ್ಟು ಯುವ ಪಡೆ ಕಟ್ಟಿಕೊಂಡು ಕಾಂಗ್ರೆಸ್ ಬಲಪಡಿಸಲು ಶ್ರಮಿಸ್ತಿರೋ ಸುನಿಲ್ ಕೊಟಗುಣಸಿ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿಯಾಗೋದು ಪಕ್ಕಾ ಎನ್ನಲಾಗ್ತಿದೆ. ಸತ್ಯ ಅಂದ್ರೆ, ಬದಲಾದ ರಾಜಕೀಯ ಸನ್ನಿವೇಶದ ಹೊಡೆತಕ್ಕೆ ಇಲ್ಲಿನ ಕಾಂಗ್ರೆಸ್ ಕೂಡ ವಿಲ ವಿಲ ಒದ್ದಾಡಿದೆ. ಹೀಗಾಗಿ, ಪಕ್ಷಕ್ಕೆ ಯುವ ಪಡೆಯ ಅವಶ್ಯಕತೆಯಿದೆ. ಹೀಗಾಗಿ, ಅಂತಹದ್ದೊಂದು ಸಂಘಟನೆ ಈಗಾಗಲೇ ಇಲ್ಲಿನ ಹಲವು ಯುವಕರು ಮಾಡುತ್ತಿದ್ದಾರೆ. ಅದ್ಯಾರೇ ಅಭ್ಯರ್ಥಿಯಾದ್ರೂ ಬಿಜೆಪಿಗೆ ಮಾತ್ರ ಠಕ್ಕರ್ ಕೊಡುವಷ್ಟು ಕಾಂಗ್ರೆಸ್ ಬಲಿಷ್ಟವಾಗಿರೋದು ಪಕ್ಕಾ.
ಒಟ್ನಲ್ಲಿ, ನಂದಿಕಟ್ಟಾ ತಾಪಂ ಕ್ಷೇತ್ರ ಈ ಬಾರಿ ಬಿರುಸಿನ ಸ್ಪರ್ಧೆಗೆ ಕಾರಣವಾಗಲಿದೆ. ಬಿಜೆಪಿಗೆ ಟಿಕೆಟ್ ಆಕಾಂಕ್ಷಿತರ ಬಂಡಾಯದ ಬಿಸಿ ತಟ್ಟೋ ಚಾನ್ಸ್ ಇದೆ. ಒಂದು ವೇಳೆ ಬಿಜೆಪಿಯಲ್ಲಿ ಬಂಡಾಯ ಬುಗಿಲೆದ್ರೆ, ಆ ಬಂಡಾಯದ ಬಿಸಿ ಕಾಂಗ್ರೆಸ್ ಪಾಲಿಗೆ ವರದಾನ ಆಗೋದ್ರಲ್ಲಿ ಎರಡು ಮಾತಿಲ್ಲ.