ಇದು ಮುಂಡಗೋಡ ಕಾಂಗ್ರೆಸ್ ಹಕೀಕತ್ತು..! ಯುವ ಪಡೆಗೆ “ಗದ್ದುಗೆ” ಪ್ರಿಯರದ್ದೇ ಆಪತ್ತು..! ಇನ್ನಾದ್ರೂ ಎದ್ದೇಳತ್ತಾ “ಕೈ” ಪಡೆ..?

ಮುಂಡಗೋಡ ತಾಲೂಕಿನಲ್ಲಿ ಕಾಂಗ್ರೆಸ್ ಇನ್ನೂ ಉಸಿರಾಡ್ತಿದೆಯಾ..? ಇಂತಹದ್ದೊಂದು ಪ್ರಶ್ನೆ ಬಹುತೇಕ ಕ್ಷೇತ್ರದ ಜನರಲ್ಲಿದೆ. ಯಾಕಂದ್ರೆ, ಯಾವಾಗ, ಶಿವರಾಮ್ ಹೆಬ್ಬಾರ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಬಾವುಟ ಹಿಡಿದ್ರೊ, ಆ ಕ್ಷಣದಿಂದಲೇ ಇಡೀ ಮುಂಡಗೋಡ ತಾಲೂಕಿನ “ಕೈ” ಪಡೆಯ ಜಂಘಾಬಲವೇ ಕುಗ್ಗಿಹೋಯ್ತು, ಇನ್ನೇನು ತಾಲೂಕಿನಲ್ಲಿ ಕಾಂಗ್ರೆಸ್ ಖತಂ ಆಯ್ತು ಅನ್ನೋ ವಾತಾವರಣ ಇತ್ತು.

ಇದು ಇತಿಹಾಸ..!
ಹಾಗೆ ನೋಡಿದ್ರೆ, ಇದುವರೆಗೂ ತಾಲೂಕಿನ ಮೂರೂ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪ್ರಭಲವಾಗಿಯೇ ಇತ್ತು. ಬಿಜೆಪಿ ಯಾವುದೇ ಒಂದು ಕ್ಷೇತ್ರದಲ್ಲೂ ಇದುವರೆಗೂ ಗೆದ್ದ ಇತಿಹಾಸವೇ ಇಲ್ಲ‌. ತಾಲೂಕಿನಲ್ಲಿ ಬಿಜೆಪಿ ಆಡಳಿತವಿದ್ದು, ವಿ.ಎಸ್.ಪಾಟೀಲ್ ಶಾಸಕಾರಾಗಿದ್ದಾಗಲೂ ಇಲ್ಲಿ ಬಿಜೆಪಿ ವರ್ಕೌಟ್ ಮಾಡಿಕೊಳ್ಳಲು ಸಾಧ್ಯವಾಗಿರಲೇ ಇಲ್ಲ. ಇದಕ್ಕೆ ಕಾರಣ, ಕಾಂಗ್ರೆಸ್ ನಲ್ಲಿದ್ದ ಸ್ಥಳೀಯ ಗಟ್ಟಿನಾಯಕರು. ದೇಶಪಾಂಡೆ, ಹೆಬ್ಬಾರ್ ರಂತವರ ಗಟ್ಟಿ ಮುಂದಾಳತ್ವ ಕಾಂಗ್ರೆಸ್ ತಳಮಟ್ಟದಲ್ಲಿ ಬದ್ರವಾಗುವಂತೆ ಮಾಡಿತ್ತು. ಆದ್ರೆ ಯಲ್ಲಾಪುರ ಕ್ಷೇತ್ರದಲ್ಲಿ ಯಾವಾಗ ರಾಜಕೀಯ ಬದಲಾವಣೆ ಗಾಳಿ ಬೀಸಿ ಹೆಬ್ಬಾರ್ ಕಾಂಗ್ರೆಸ್ ತೊರೆದರೋ ಆ ಕ್ಷಣದಿಂದಲೇ ಇಲ್ಲಿನ ಕಾಂಗ್ರೆಸ್ ಮತ್ತೆ ಮೇಲೆ ಏಳಲು ಸಾಧ್ಯವಾಗಲೇ ಇಲ್ಲ. ಯಾಕಂದ್ರೆ ಸಾಲು ಸಾಲು ಗಟ್ಟಿ ನಾಯಕರು ಹೆಬ್ಬಾರ್ ಜೊತೆ ಹೆಜ್ಜೆ ಹಾಕಿಬಿಟ್ರು. ಆನಂತರ ತಾಲೂಕಿನಲ್ಲಿ ಹೇಳಿಕೊಳ್ಳುವಂತ ಬಲಿಷ್ಟ ಕಾರ್ಯಪಡೆ ಕಾಂಗ್ರೆಸ್ ಗೆ ದೊರಕಲೇ ಇಲ್ಲ‌.

ವೇದಿಕೆಗಷ್ಟೇ..!
ಇನ್ನು ಕಾಂಗ್ರೆಸ್ಸಿನಲ್ಲಿ ಹಳಬರು, ಮುತ್ಸದ್ದಿಗಳು ಅಂತಾ ಕರೆಸಿಕೊಳ್ಳುವ ಕೆಲವು “ನಾಯಕ” ರುಗಳು ಕೇವಲ ವೇದಿಕೆ ಮೇಲೆ ಕುಳಿತುಕೊಂಡು ಪೋಸು ಕೊಡೋಕಷ್ಟೇ ಸೀಮಿತರಾದ್ರು. ಬಿಟ್ರೆ, ಯುವ ಪಡೆಯನ್ನು ಗಟ್ಟಿಗೊಳಿಸುವುದಿರಲಿ, ತಾವೂ ಗಟ್ಟಿಗೊಳ್ಳಲಿಲ್ಲ. ಬದಲಾಗಿ, ಅದೇನೇ ಆದ್ರೂ ನಾವು ಕುಣಿದಂಗೆ ಕುಣಿಬೇಕು ಅನ್ನೋ ಜಾಯಮಾನಕ್ಕೆ ಒಗ್ಗಿಕೊಂಡು, ಇಡೀ ಪಕ್ಷವನ್ನೇ ಇವತ್ತು ನಿಸ್ತೇಜ ಸ್ಥಿತಿಗೆ ತಂದಿದ್ದಾರೆ ಅಂತಾ ಹೆಸರು ಹೇಳಲು ಇಚ್ಚಿಸದ ಕಾಂಗ್ರೆಸ್ ಯುವ ಮುಖಂಡರು ಅಳಲು ತೋಡಿಕೊಳ್ತಿದಾರೆ.

ಯುವ ಪಡೆ ಖುರ್ಚಿ ಹಾಕಲು ಮಾತ್ರನಾ..?
ಅಂದಹಾಗೆ, ತಾಲೂಕಿನಲ್ಲಿ ಕಾಂಗ್ರೆಸ್ ಗೆ ಇವತ್ತಿಗೂ ಸಾಂಪ್ರದಾಯಿಕ ಮತಗಳು ಉಳಿದುಕೊಂಡಿವೆ. ಜೊತೆಗೆ ಅಲ್ಪಸಂಖ್ಯಾತರ ಮತಗಳಿವೆ, ಹೀಗಿದ್ರೂ ಇಲ್ಲಿನ “ವೇದಿಕೆ ನಾಯಕ” ರುಗಳ ಬೇಜವಾಬ್ದಾರಿ, ಅದನ್ನೇಲ್ಲ ಬಳಸಿಕೊಳ್ಳಲು ಯಾವೊಂದೂ ಸಾಹಸ ಮಾಡಲು ರೆಡಿಯಾಗುತ್ತಲೇ ಇಲ್ಲ‌. ಅದೂ ಹೋಗ್ಲಿ, ಇವತ್ತಿಗೂ ತಾಲೂಕಿನ ಕಾಂಗ್ರೆಸ್ ನಲ್ಲಿ ಅಂತಾದ್ದೊಂದು ಬಲಿಷ್ಟ ಯುವ ಪಡೆ ಇದ್ದೇ ಇದೆ‌. ಆದ್ರೆ ಆ ಯುವ ಪಡೆಗೆ ಒಂದಿಷ್ಟು ಬೆನ್ನು ತಟ್ಟಿ ಪ್ರೋತ್ಸಾಹಿಸಿ, ಬೆಳೆಸುವ ದೊಡ್ಡ ಗುಣ ಬಹುಶಃ “ವೇದಿಕೆ ನಾಯಕ” ರುಗಳಿಗೆ ಬರಲೇ ಇಲ್ಲ. ಯುವ ಪಡೆಯನ್ನು ಕೇವಲ ಖುರ್ಚಿ ಹಾಕಲು ಮಾತ್ರ ಬಳಸುತ್ತಿದ್ದಾರೆ. ಖುರ್ಚಿ ಮೇಲೆ ಕೂರಲು ಬಿಡ್ತಿಲ್ಲ ಅನ್ನೋ ಮೂಕ ರೋಧನ ಇಲ್ಲಿನ ಕೆಲ ಉತ್ಸಾಹಿ ಯುವ ಪಡೆಯಲ್ಲಿದೆ. ಹಾಗಂತ ಆ ಯುವ ಪಡೆ “ಪಬ್ಲಿಕ್ ಫಸ್ಟ್ ನ್ಯೂಸ್” ಎದುರು ಅಳಲು ತೋಡಿಕೊಂಡಿದೆ.

ಕೃಷ್ಣ ಹಿರೇಹಳ್ಳಿ

ಪಾಪ ಕೃಷ್ಣ ಹಿರೇಹಳ್ಳಿ..!
ಅಸಲಿಗೆ, ಕಾಂಗ್ರೆಸ್ ಇನ್ನೂ ಸ್ವಲ್ಪ ತಾಲೂಕಿನಲ್ಲಿ ಉಸಿರಾಡ್ತಿದೆ ಅಂದ್ರೆ ಅದಕ್ಕೆ ಬಹುಶಃ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಎಂ.ಎನ್.ದುಂಡಸಿ, ಮಹ್ಮದ್ ಗೌಸ್ ಮಖಾನದಾರ್ ಹಾಗೂ ಅವ್ರ ಜೊತೆಗೆ ಸಾಥ್ ಕೊಟ್ಟ ಕೆಲ ಉತ್ಸಾಹಿ ಯುವಕರು ಕಾರಣ.. ಆದ್ರೆ, ಕೆಲವು ಮುತ್ಸದ್ದಿ ಅಂತಾ ಅನ್ನಿಸಿಕೊಂಡು ಟ್ರೀಟು ಪಡಿಯೋ ನಾಯಕರುಗಳು ಕೇವಲ “ಆರ್ಡರ್” ಗಳಿಗಷ್ಟೇ ಸೀಮಿತವಾಗಿ ದರ್ಬಾರು ಮಾಡೋದು ಬಿಟ್ರೆ ಬೇರೆನೂ ಕಡೆದು ಗುಡ್ಡೆ ಹಾಕಿಲ್ಲ ಅನ್ನೋ ಆರೋಪವೂ ಇದೆ‌.

ಎಂ.ಎನ್ ದುಂಢಸಿ

ಇನ್ನು ತಾಲೂಕಿನ ಕಾಂಗ್ರೆಸ್, ಹೆಬ್ಬಾರ್ ಪಡೆ ಬಿಜೆಪಿ ಸೇರ್ಪಡೆಯ ಜೊತೆಗೆ ಯಾವಾಗ ಖಾಲಿ ಖಾಲಿಯಾಯ್ತೊ, ಆ ಕ್ಷಣದಿಂದಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಎಂ.ಎನ್.ದುಂಢಸಿ, ಮಹ್ಮದ್ ಗೌಸ್ ಮಖಾನದಾರ್ ಸೇರಿ ಕೆಲವೇ ಕೆಲವು ಬೆರಳೆಣಿಕೆಯ ಗಟ್ಟಿ ಕಾಂಗ್ರೆಸ್ಸಿಗರು ಹಳ್ಳಿ ಗಳ್ಳಿಗೂ ತಿರುಗಿದ್ರು. ಬಹುತೇಕ ಕೋಮಾಗೆ ಜಾರಿದ್ದ ಕಾಂಗ್ರೆಸ್ ಗೆ ಆಕ್ಸಿಜನ್ ಕೊಟ್ಟು ಒಂದಿಷ್ಟು ಉಸಿರಾಡುವಂತೆ ಮಾಡಿದ್ರು. ಆದ್ರೆ ಹಾಗೆ ಪಕ್ಷದಲ್ಲಿ ಈ ಹಿಂದೆ ಸಾಕಷ್ಟು ಅಧಿಕಾರ ಅನುಭವಿಸಿದ್ದ ನಾಯಕರುಗಳು ಯಾರೂ ಬೆನ್ನು ತಟ್ಟಲೇ ಇಲ್ಲ. ಅಂತದ್ದೊಂದು ನೋವು ಪಾಪ, ಕೃಷ್ಣ ಹಿರೇಹಳ್ಳಿಯವ್ರಿಗೆ ಕ್ಷಣ ಕ್ಷಣಕ್ಕೂ ಕಾಡ್ತಿದೆ.

ಸಂತೋಷ “ಲಾಡು” ಹಂಚಿದ್ರು..!
ಅಂದಹಾಗೆ, ಕಳೆದ ಗ್ರಾಮ ಪಂಚಾಯತಿ ಚುನಾವಣೆಯ ಸಂದರ್ಭ ಅಕ್ಷರಶಃ ಮಖಾಡೆ ಮಲಗಿದ್ದ ಕಾಂಗ್ರೆಸ್ ಏನೂ ಮಾಡದ ಸ್ಥಿತಿಯಲ್ಲಿತ್ತು. ಆದ್ರೂ, ತಾಲೂಕಿನ 16 ಗ್ರಾಮ ಪಂಚಾಯತಿಗಳ ಪೈಕಿ 7 ಪಂಚಾಯತಿಗಳಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಿದೆ. ಇದಕ್ಕೇಲ್ಲ ಕಾರಣವಾಗಿದ್ದು ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಿದ್ದು. ನಿಜ, ಗ್ರಾಮ ಪಂಚಾಯತಿ ಚುನಾವಣೆ ವೇಳೆ, ಇಡೀ ತಾಲೂಕಿನಾಧ್ಯಂತ ಗ್ರಾಮ ಗ್ರಾಮಗಳಿಗೂ ತೆರಳಿ ಪ್ರಚಾರ ನಡೆಸಿ ಹೋಗಿದ್ದರು ಸಂತೋಷ ಲಾಡ್. ಆ ಕಾರಣಕ್ಕಾಗೇ ಅಕ್ಷರಶಃ ಉಸಿರನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್ ಬೆಂಬಲಿತರೇ ತಾಲೂಕಿನ ಹುನಗುಂದ, ಬಾಚಣಕಿ, ಕಾತೂರು, ಚಿಗಳ್ಳಿ, ಮಳಗಿ, ನಾಗನೂರು, ಪಾಳಾ ಸೇರಿ 7 ಗ್ರಾಮ ಪಂಚಾಯತಿಗಳಲ್ಲಿ ಅಧಿಕಾರದ ಪಟ್ಟಕ್ಕೇರಿದ್ರು, ಇನ್ನು ಗುಂಜಾವತಿ ಗ್ರಾಮ ಪಂಚಾಯತಿಯಲ್ಲಿ, ದೋಸ್ತಿ ಮಾಡಿಕೊಂಡು ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಉಳಿಸಿಕೊಂಡಿತ್ತು. ಕಾಂಗ್ರೆಸ್ ಕಟ್ಟಾಳುಗಳೇ ಹೇಳೋ ಪ್ರಕಾರ ಇದೇಲ್ಲ ಸಾಧ್ಯವಾಗಿದ್ದು ಮತ್ತದೇ ಸಂತೋಷ ಲಾಡ್ ಹೆಜ್ಜೆ ಇಟ್ಟು ಹೋದ ಕಾರಣಕ್ಕಾಗಿ. ಹೆಬ್ಬಾರ್ ಅಲೆಯ ನಡುವೆಯೂ “ಲಾಡ್” ಕಾಂಗ್ರೆಸ್ ಪಾಲಿಗೆ ಒಂದಿಷ್ಟು “ಸಂತೋಷ” ಹಂಚಿಕೊಂಡು ಉತ್ತೇಜಿಸಿದ್ರು.

ಪ್ರಶಾಂತ್ ವರ್ಸಸ್ ಲಾಡ್..?
ಕಾಂಗ್ರೆಸ್ ದುರಂತ ನೋಡಿ, ಯಾವಾಗ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಂತೋಷ ಲಾಡ್ ಇಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಶುರುಮಾಡಿದ್ರೋ ಅವಾಗ್ಲೇ ಅವ್ರ ವೇಗಕ್ಕೆ ಬ್ರೇಕ್ ಹಾಕಲಾಯ್ತು. ಅಸಲಿಗೆ, ಮುಂಡಗೋಡ ಕಾಂಗ್ರೆಸ್ಸಿನ ಕೆಲವು ನಾಯಕರು ಸಂತೋಷ ಲಾಡ್ ರಲ್ಲಿ ಹೋಗಿ, ಮುಂದಿನ ವಿಧಾನಸಭಾ ಚುನಾವಣೆಗೆ ನೀವೇ ನಮ್ಮ ಕ್ಷೇತ್ರದಿಂದ ಸ್ಪರ್ಧಿಸಬೇಕು ಅಂತಾ ಮನವಿ ಮಾಡಿದ್ರು. ಅವಾಗ ಸಂತೋಷ ಲಾಡ್ ಕೂಡ, ಯಲ್ಲಾಪುರ ಕ್ಷೇತ್ರದಿಂದ ಸ್ಪರ್ಧಿಸೋ ಆಸೆ ವ್ಯಕ್ತ ಪಡಿಸಿದ್ರು. ಯಾಕಂದ್ರೆ, ಸಧ್ಯ ಕಲಘಟಗಿ ಕ್ಷೇತ್ರದಲ್ಲಿ ತಮ್ಮದೇ ಸ್ವಪಕ್ಷದ ನಾಯಕ ನಾಗರಾಜ್ ಛಬ್ಬಿ ನಡುವಿನ ತಕರಾರುಗಳಿಂದ ಬಸವಳಿದು ಹೋಗಿದ್ದ ಸಂತೋಷ ಲಾಡ್ ಬಲಿಷ್ಟವಾಗಿರೋ ಕ್ಷೇತ್ರವೊಂದರ ತಲಾಶ್ ನಲ್ಲಿದ್ರು. ಹೀಗಾಗಿ, ಮರಾಠಾ ಮತಗಳು ಹೇರಳವಾಗಿರೋ ಯಲ್ಲಾಪುರ- ಮುಂಡಗೋಡ ಕ್ಷೇತ್ರ ಒಂದಿಷ್ಟು ಪೂರಕವಾಗಬಹುದು ಅನ್ನೋ ಲೆಕ್ಕಾಚಾರ ಲಾಡ್ ಗೆ ಸಹಜವಾಗೇ ಆಸೆ ಹುಟ್ಟಿಸಿತ್ತು.

ಆ ಕಾರಣಕ್ಕಾಗೇ, ಅವತ್ತು ಭೇಟಿಯಾಗಿದ್ದ ಮುಂಡಗೋಡಿನ ಮುಖಂಡರುಗಳಿಗೆ ನೀವೇಲ್ಲ ಸ್ಥಳೀಯ ಮುಖಂಡರು ಹೈಕಮಾಂಡ್ ನಾಯಕರಿಗೆ ಸೂಚಿಸೋದಾದ್ರೆ “ನಾನು ರೆಡಿ” ಅಂದಿದ್ರು ಸಂತೋಷ ಲಾಡ್..

ಅವಾಗ್ಲೆ ಎದ್ದು ಕುಳಿತ್ರು ನೋಡಿ ದೇಶಪಾಂಡೆ..!
ಅಯ್ಯೊ, ಇಂತಹದ್ದೊಂದು ಭೇಟಿ, ಮಾತುಕತೆಯ ವಿಷಯ ಯಾವಾಗ ಆರ್.ವಿ.ದೇಶಪಾಂಡೆಯವರ ಕಿವಿಗೆ ಬಿತ್ತೋ ಎದ್ನೊ ಬಿದ್ನೋ ಅಂತಾ ಓಡಿ ಬಂದಿದ್ರು ದೇಶಪಾಂಡೆ. ಯಾಕಂದ್ರೆ, ಈಗಾಗಲೇ ಮುಂದಿನ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರಕ್ಕೆ ತಮ್ಮ ಸುಪುತ್ರ ಪ್ರಶಾಂತ್ ದೇಶಪಾಂಡೆಯವರನ್ನೇ ಕಣಕ್ಕಿಳಿಸಲು ಇನ್ನಿಲ್ಲದ ತಯಾರಿ ಶುರುವಿಟ್ಟಿರೋದ್ರಿಂದ ಸಂತೋಷ ಲಾಡ್ ತೋಡರಾಗಬಹುದು ಅನ್ನೋದು ದೇಶಪಾಂಡೆಯವರಿಗೆ ಕನ್ಫರ್ಮ ಆಗಿತ್ತು. ಅದಿಕ್ಕೆ ಸಂತೋಷ “ಲಾಡು”ವಿನ ಸಿಹಿ ಕ್ಷೇತ್ರಕ್ಕೆ ಸಿಗದಂತೆ ನೋಡಿಕೊಂಡರಂತೆ ದೇಶಪಾಂಡೆ. ಅದ್ರ ಜೊತೆ ಇಲ್ಲಿನ ಮುಖಂಡರುಗಳಿಗೂ ಖಡಕ್ಕಾಗಿ ಅಂತಹದ್ದೊಂದು ಸಂದೇಶ ರವಾನಿಸಿದ್ರು. ಹೀಗಾಗಿ, ಭರವಸೆಯ “ಕೈ” ಸಿಕ್ಕ ಖುಶಿಯಲ್ಲಿದ್ದ ಮುಂಡಗೋಡ ಕಾಂಗ್ರೆಸ್ ಗೆ ಒಂದಿಷ್ಟು ಹಿನ್ನಡೆಯಾಯ್ತು ಅನ್ನೋದು ಕೆಲವರ ಅಭಿಪ್ರಾಯ.

“ಪ್ರಶಾಂತಣ್ಣ” ಬಂದ್ರು ದಾರಿ ಬಿಡಿ..!
ಯಲ್ಲಾಪುರ ಮುಂಡಗೋಡ ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನಿಲ್ಲದ ಗೊಂದಲದಲ್ಲಿದೆ‌. ಬಲಿಷ್ಟ ನಾಯಕತ್ವದ ಕೊರತೆಯಲ್ಲಿದೆ. ತನು, ಮನ, ಧನದಿಂದ ಸಂಪೂರ್ಣ ಸಾಥ್ ನೀಡಬಲ್ಲ ಬಲಿಷ್ಟ ನಾಯಕನೊಬ್ಬನಿಗಾಗಿ ದಾರಿ ಕಾಯ್ತಿದೆ. ಹೀಗಿರೋವಾಗ್ಲೆ ಸಧ್ಯ ಕ್ಷೇತ್ರಕ್ಕೆ ಪ್ರಶಾಂತ್ ದೇಶಪಾಂಡೆ ಎಂಟ್ರಿಯಾಗುತ್ತಿದ್ದಾರೆ. ಚುನಾವಣೆ ಇನ್ನೂ ಎರಡು ವರ್ಷವಿದೆ. ಅಷ್ಟೊತ್ತಿಗಾಗಲೇ ಗರಬಡಿಸಿ ಬಂದಿರೋ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪುನರುಜ್ಜೀವನಗೊಳಿಸೋ ಪ್ಲಾನ್ ರೆಡಿಯಾಗಿದೆ‌. ಬರುವ ಎರಡು ವರ್ಷದ ಅವಧಿಯಲ್ಲಿ ಸೊರಗಿ ಹೋಗಿರೋ ಕಾಂಗ್ರೆಸ್ ಗೆ ದಷ್ಟಪುಷ್ಟ ಮಾಡಲು ಟಾನಿಕ್ ನೀಡೋಕೆ ದೇಶಪಾಂಡೆಯವರು ಪ್ಲಾನ್ ಹಾಕಿಕೊಂಡಿದ್ದಾರೆ. ಅದರ ಭಾಗವಾಗೇ, ಪ್ರಶಾಂತ್ ದೇಶಪಾಂಡೆ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಒಂದಿಷ್ಟು “ಕೊಡುಗೆಗಳ” ಕಾರ್ಯಕ್ರಮ ಹಮ್ಮಿಕೊಂಡಿದ್ರು. ದೇಶಪಾಂಡೆ ರೂಡಸೆಟಿ ಮೂಲಕ ಹಳ್ಳಿ ಹಳ್ಳಿಗಳಲ್ಲೂ ಕಿಟ್ ಅದು ಇದೂ ಅಂತಾ ಕೊಡುಗೆಗಳನ್ನ ನೀಡಿದ್ರು. ಈ ಮೂಲಕ ತಮ್ಮ ಇರುವಿಕೆಯ ಸಂದೇಶ ರವಾನಿಸಿದ್ದರು.

ಇದು “ಫಸ್ಟ್” ಇನ್ಫಾರ್ಮೇಶನ್ ರಿಪೋರ್ಟ್..
ಇನ್ನು ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ದೇಶಪಾಂಡೆಯವರ ಸುಪುತ್ರನಾಗಿ, ಅವರದ್ದೇ ಗರಡಿಯಲ್ಲಿ ಪಳಗಿರೋ ಪ್ರಶಾಂತ್ ದೇಶಪಾಂಡೆಯವ್ರಿಗೆ ಬಹುಶಃ ಯಲ್ಲಾಪುರ ಮುಂಡಗೋಡ ಕ್ಷೇತ್ರದ ಬಗ್ಗೆ ಅರಿವಿದೆ ಅನಿಸತ್ತೆ. ತಮ್ಮ ತಂದೆ ಆರ್.ವಿ‌.ದೇಶಪಾಂಡೆಯವರನ್ನು ಇವತ್ತಿಗೂ ಆರಾಧಿಸೋ ದೊಡ್ಡದೊಂದು ಪಡೆಯೇ ಮುಂಡಗೋಡ ತಾಲೂಕಿನಲ್ಲಿದೆ. ಇವತ್ತಿಗೂ ಇಲ್ಲಿನ ಕೆಲವು ಗ್ರಾಮಗಳಲ್ಲಿ “ದೇಶಪಾಂಡೆ ಸಾಹೇಬ್ರು” ಅಂದ್ರೆ ಅಪ್ಪಿ ಆಲಂಗಿಸೋ ಜನರಿದ್ದಾರೆ. ಆದ್ರೆ ಅದನ್ನೇಲ್ಲ ತಂದೆಯ ರೀತಿಯಲ್ಲೇ ಹಳ್ಳಿಗರ ಭಾವನೆಗಳಿಗೆ ಪ್ರಶಾಂತ್ ದೇಶಪಾಂಡೆ ಸ್ಪಂಧಿಸಬೇಕಿದೆ.

ಇದು ನಮ್ಮ ಕಳಕಳಿಯಷ್ಟೇ..!
ಇನ್ನು ಬಹುಮುಖ್ಯವಾಗಿ, ಮುಂಡಗೋಡ ತಾಲೂಕಿನಲ್ಲಿ ಕಾಂಗ್ರೆಸ್ ಗಟ್ಟಿಯಾಗಬೇಕೆಂದ್ರೆ ಸಾಕಷ್ಟು ಕನಸುಗಳನ್ನು ಹೊತ್ತು ಏನೂ ಮಾಡಲಾಗದೇ “ವೇದಿಕೆ ನಾಯಕರ” ಅಂಬೋಣಗಳ ಮುಂದೆ ಹೈರಾಣಾಗಿರೋ ಯುವ ಪಡೆಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಯುವಕರ ಟೀಂ ಗೆ ಶಕ್ತಿ ತುಂಬಬೇಕಿದೆ. ಇನ್ನೇನು ಕಾರ್ಯಕ್ರಮ ಶುರುವಾಗತ್ತೆ ಅನ್ನೊವಷ್ಟರಲ್ಲಿ ಬಂದು, ವೇದಿಕೆ ಏರೋ ನಾಯಕರೆನಿಸಿಕೊಂಡವರಿಗೂ ಮೈಮುರಿದು ಕೆಲಸ ಮಾಡುವಂತೆ ತಾಕೀತು ಮಾಡಬೇಕಿದೆ. ರಾತ್ರಿ ಚೀಯರ್ಸ್ ಹೇಳೋವಾಗ ಒಂದು ಪಾರ್ಟಿ, ಬೆಳಿಗ್ಗೆ ಭಾಷಣ ಬಿಗಿಯೋವಾಗ ಮತ್ತೊಂದು ಪಾರ್ಟಿ ಅನ್ನೋ ಮನಸ್ಥಿತಿಗಳನ್ನ ಹದ್ದು ಬಸ್ತಿನಲ್ಲಿಡಬೇಕಿದೆ. ಅಂತವರಿಂದ ಕಾಂಗ್ರೆಸ್ ನ್ನು ರಕ್ಷಿಸಬೇಕಿದೆ. ಪಕ್ಷ ಅಕ್ಷರಶಃ ಕೋಮಾ ಸ್ಥಿತಿಗೆ ಜಾರಿದಾಗಲೂ ಕೈ ಬಿಡದೇ ಹಗಲೂ ರಾತ್ರಿ ಪಕ್ಷಕ್ಕಾಗಿ ದುಡಿದಿರೋ ಮಂದಿಗೆ ಬೆಲೆ ಸಿಗಬೇಕಿದೆ. ಇದೇಲ್ಲ ಸಧ್ಯ ಯಲ್ಲಾಪುರ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಯಾರೇ ಸ್ಪರ್ಧಿಸಲಿ ಅಂತವರು ಮಾಡಲೇಬೇಕಾದ ಜರೂರತ್ತುಗಳು.
ಅದು ಪ್ರಶಾಂತ್ ದೇಶಪಾಂಡೆಯವರಾದ್ರೂ ಸರಿ, ಇನ್ಯಾರಾದ್ರೂ ಸರಿ..

ಅಂದಹಾಗೆ, ಇಷ್ಟೊತ್ತು ಇದೇಲ್ಲವನ್ನೂ ಹೇಳಿದ್ದು ಖಂಡಿತ ನಾವಲ್ಲವೇ ಅಲ್ಲ, ಬದಲಾಗಿ, ಇದೇಲ್ಲ ಮುಂಡಗೋಡ ಕಾಂಗ್ರೆಸ್ಸಿನ ಕೆಲವು ನೊಂದ ಕಟ್ಟಾಳುಗಳ ಕಳಕಳಿಯಷ್ಟೇ..

************

ಹನುಮಾಪುರದ ಶ್ರೀಗಳು ಲಿಂಗೈಕ್ಯ..! ಹೇಗಿತ್ತು ಗೊತ್ತಾ ಮಠದ ಅಂಗಳದಲ್ಲಿ ಭಕ್ತರ ರೋಧನ..? ಸುದ್ದಿ ನೋಡಲು ಇಲ್ಲಿನ ಕೆಂಪು ಅಕ್ಷರಗಳನ್ನು ಕ್ಲಿಕ್ ಮಾಡಿ..

error: Content is protected !!