ಮುಂಡಗೋಡ : ಅವನು ಹೆಂಡತಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ, ನೀನಿಲ್ಲದೇ ನಾನಿಲ್ಲ, ನನಗೆ ನೀನು; ನಿನಗೆ ನಾನು ಅಂತಿದ್ದ, ಆದ್ರೆ ಆತನ ಬಾಳಲ್ಲಿ ಅದು ಹಾಗಾಗಲೇ ಇಲ್ಲ.
ಆದ್ರೆ, ತವರಿಗೆ ಹೋದ ತನ್ನ ಹೆಂಡ್ತಿ ವಾಪಸ್ ಬರಲೇ ಇಲ್ಲ ಅಂತಾ ಪತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವರಾಜ್ ಬರಮಣ್ಣ ಕುರಿಯವರ್ ಎಂಬುವವನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಈಗಷ್ಟೇ 36 ವರ್ಷಕ್ಕೆ ಕಾಲಿಟ್ಟಿದ್ದ, ಹೀಗಾಗಿ, ವಯಸ್ಸಲ್ಲದ ವಯಸ್ಸಲ್ಲೇ ದುರಂತ ಅಂತ್ಯ ಕಂಡಿದ್ದಾನೆ. ಅಂದಹಾಗೆ, ಈ ಘಟನೆ ನಡೆದಿರೋದು ಮುಂಡಗೋಡ ತಾಲೂಕಿನ ಚೌಡಳ್ಳಿಯಲ್ಲಿ.
ದೀಪಾವಳಿಗೇ ಹೋದವಳು..!
ಕುಟುಂಬಸ್ಥರು ದೂರಿನಲ್ಲಿ ದಾಖಲಿಸಿರೋ ಪ್ರಕಾರ, ಈತನ ಪತ್ನಿ ಕಳೆದ ವರ್ಷ ದೀಪಾವಳಿ ಹಬ್ಬಕ್ಕೆ ಅಂತಾ ತವರಿಗೆ ಹೋಗಿದ್ಲು. ಆ ನಂತರ, ವಾರ ಆಯ್ತು, ತಿಂಗಳಾಯ್ತು, ವರ್ಷವೇ ಆಗುತ್ತ ಬಂದ್ರೂ ಪತ್ನಿ ಮಾತ್ರ ಗಂಡನ ಮನೆ ಕಡೆ ಮುಖ ಮಾಡಲಿಲ್ಲವಂತೆ. ಹೀಗಾಗಿ ಪತ್ನಿ ಮರಳಿ ಬಾರದಿರೋ ಕಾರಣಕ್ಕೆ ಪತಿ ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದಾನೆ.
ಅವತ್ತು ಜುಲೈ 1
ಹಾಗೇ ಪತ್ನಿ ಮನೆಗೆ ವಾಪಸ್ ಬಾರದೇ ತವರಲ್ಲೇ ಉಳಿದ ಕಾರಣಕ್ಕೆ ಚೌಡಳ್ಳಿ ಗ್ರಾಮದ ಬಸವರಾಜ, ಕಳೆದ ಜುಲೈ 1 ರಂದು ರಾತ್ರಿ ವೇಳೆ ವಿಷ ಸೇವಿಸಿದ್ದಾನೆ. ಹೀಗಾಗಿ, ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ. ಹಾಗಂತ, ಕುಟುಂಬಸ್ಥರು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಒಟ್ನಲ್ಲಿ, ಪತ್ನಿಯ ಬರುವಿಕೆಗಾಗಿ ಕಾದು ಕಾದು ಬಸವಳಿದು ಹೋದ ಪತಿರಾಯ, ಆಕೆಯ ನೆನಪಲ್ಲೇ ದುರಂತ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸ. ಇನ್ನು ಕೇಸು ದಾಖಲಿಸಿಕೊಂಡಿರೋ ಮುಂಡಗೋಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.