ಉಕ್ಕಲಿ; ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್ಪೊರಾ ಪ್ರದೇಶದ ಹಂಜಿನ್ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಹುತಾತ್ಮ ಯೋಧನ ಅಂತ್ಯಸಂಸ್ಕಾರ ಉಕ್ಕಲಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು..
ಉಗ್ರರ ಗುಂಡಿಗೆ ಎದೆಯೊಡ್ಡಿದ ವೀರಯೋಧನ ಪಾರ್ಥೀವ ಶರೀರ ಹುಟ್ಟೂರಿಗೆ..!
ಮನೆ ಮಗನ ಪಾರ್ಥೀವ ಶರೀರ ಕಂಡ ಇಡೀ
ಊರಿಗೇ ಊರೇ ಕಣ್ಣೀರಲ್ಲಿ..!!
ನಿಜ, ಉಕ್ಕಲಿ ಗ್ರಾಮದ ಜನರ ಹೃದಯ ಇಂದು ಅಕ್ಷರಶಃ ಭಾರವಾಗಿತ್ತು. ಯಾಕಂದ್ರೆ ಕಣ್ಣೇದುರೇ ಆಡಿ ಬೆಳೆದಿದ್ದ ಹುಡುಗ ದೇಶಸೇವೆಗಾಗಿ ಪ್ರಾಣವನ್ನೆ ಬಲಿ ಕೊಟ್ಟಿದ್ದ. ಒಂದು ಕಡೆ ದೇಶಕ್ಕಾಗಿ ಹುತಾತ್ಮನಾದ ಯೋಧನ ಹೆಮ್ಮೆಯ ಆನಂದ ಭಾಷ್ಪ ಸುರಿಯುತ್ತಿದ್ದರೆ ಮತ್ತೊಂದೆಡೆ, ಆ ಯೋಧನ ಪುಟ್ಟ ಪುಟ್ಟ ಎರಡು ಕಂದಮ್ಮಗಳ ಮುಗ್ದ ಮುಖ ನೋಡಿ ಕಣ್ಣೀರು ತನ್ನಿಂದ ತಾನೇ ಹರಿಯುತ್ತಿತ್ತು.. ಹೌದು, ಉಕ್ಕಲಿ ಗ್ರಾಮದ ಮೂವತ್ತೈದು ವರ್ಷ ವಯಸ್ಸಿನ ಕಾಶಿರಾಯ ಶಂಕ್ರಪ್ಪ ಬೊಮ್ಮನಳ್ಳಿ ಎಂಬುವ ವೀರಯೋಧ ಹುತಾತ್ಮನಾಗಿ ಇಂದು ಯೋಧನ ಪಾರ್ಥೀವ ಶರೀರ ಹುಟ್ಟೂರು ಉಕ್ಕಲಿಗೆ ಆಗಮಿಸಿತ್ತು..
ಮನೆ ಮಗನ ನೋಡಲು ಮುಗಿಬಿದ್ದ ಜನ..!
ಉಕ್ಕಲಿ ಗ್ರಾಮಕ್ಕೆ ಹುತಾತ್ಮ ಯೋಧನ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೆ ಇಡೀ ಗ್ರಾಮಸ್ಥರು ಯೋಧನ ಪಾರ್ಥೀವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತರು.. ಕುಟುಂಬಸ್ಥರ ಆಕ್ರಂಧನವಂತೂ ಮುಗಿಲು ಮುಟ್ಟಿತ್ತು.. ಹುತಾತ್ಮ ಯೋಧನ ಪತ್ನಿ ಸಂಗೀತಾ ತನ್ನ ಪತಿಯ ಪಾರ್ಥೀವ ಶರೀರದ ಮೇಲೆ ತಲೆಯಿಟ್ಟು ರೋಧಿಸುತ್ತಿರೋ ದೃಷ್ಯ ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು..
ಮೆರವಣಿಗೆಯುದ್ದಕ್ಕೂ ಜೈಘೋಷ..!
ಇನ್ನು, ಗ್ರಾಮದ ಹೊರವಲಯದಿಂದಲೇ ಮೆರವಣಿಗೆ ಮೂಲಕ ಗ್ರಾಮಕ್ಕೆ ಎಂಟ್ರಿಯಾದ ಪಾರ್ಥೀವ ಶರೀರಕ್ಕೆ, ರಸ್ತೆಯ ಅಕ್ಕ ಪಕ್ಕ ನಿಂತಿದ್ದ ಸಾವಿರಾರು ದೇಶಭಕ್ತರು ಜೈಕಾರಗಳಿಂದ ಶೃದ್ದಾಂಜಲಿ ಸಲ್ಲಿಸಿದ್ರು.. ತಮ್ಮಊರಿನ ಹೆಮ್ಮೆಯ ಸುಪುತ್ರನಿಗೆ ಗೌರವ ನಮನ ಸಲ್ಲಿಸಿದ್ರು..
ಅಂತಿಮ ದರ್ಶನ..!
ಉಕ್ಕಲಿಯ ಸರ್ಕಾರಿ ಗಂಡುಮಕ್ಕಳ ಶಾಲೆಯ ಆವರಣದಲ್ಲಿ ಹುತಾತ್ಮ ಯೋಧನ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ದೇಶಭಕ್ತರು ಸರತಿ ಸಾಲಲ್ಲಿ ನಿಂತು ಹೆಮ್ಮೆಯ ಯೋಧನ ಅಂತಿಮ ದರ್ಶನ ಪಡೆದ್ರು. ಮಿಲಿಟರಿ ಪಡೆಗಳು ಹುತಾತ್ಮ ಯೋಧನ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿದ್ರು. ಹಲವು ಮುಖಂಡರು ಅಂತಿಮ ದರ್ಶನ ಪಡೆದ್ರು..
ಸೇನೆ, ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ..!
ಸಾರ್ವಜನಿಕರ ಅಂತಿಮ ದರ್ಶನದ ಬಳಿಕ, ಹುತಾತ್ಮ ಯೋಧನ ಪಾರ್ಥೀವ ಶರೀರವನ್ನು ಉಕ್ಕಲಿ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಸರ್ಕಲ್ ನಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು.. ಉಕ್ಕಲಿ ವಿರಕ್ತಮಠದ ಸಂಗನಬಸವ ಶ್ರೀಗಳ ಸಾನಿಧ್ಯದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿವಿದಾನ ನೇರವೇರಿಸಲಾಯಿತು.. ಸೇನಾ ಪಡೆಗಳಿಂದ ಗೌರವ ನಮನ ಸಲ್ಲಿಸಲಾಯಿತು.. ಅಲ್ದೇ ವಿಜಯಪುರ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧನ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ್ರು, ದೇಶ ಪ್ರೇಮಿಗಳು ಜೈಘೋಷಗಳೊಂದಿಗೆ ಅಂತಿಮ ಸಂಸ್ಕಾರದ ಅಂತಿಮ ಕ್ಷಣಗಳನ್ನು ಕಣ್ತುಂಬಿಕೊಂಡ್ರು.