ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್ಪೊರಾ ಪ್ರದೇಶದ ಹಂಜಿನ್ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧನೊಬ್ಬ ಹುತಾತ್ಮರಾಗಿದ್ದಾರೆ. ಹೀಗಾಗಿ ಉಕ್ಕಲಿ ಗ್ರಾಮದಲ್ಲಿ ಈಗ ದುಃಖ ಮಡುಗಟ್ಟಿದೆ.. ಹುತಾತ್ಮ ಯೋಧನ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ..

ಊರಿಗೇ ಊರೇ ಕಣ್ಣೀರಲ್ಲಿ..
ನಿಜ, ಉಕ್ಕಲಿ ಗ್ರಾಮದ ಜನರ ಹೃದಯ ಅಕ್ಷರಶಃ ಭಾರವಾಗಿದೆ. ಕಣ್ಣೇದುರೇ ಆಡಿ ಬೆಳೆದಿದ್ದ ಹುಡುಗ ದೇಶಸೇವೆಗಾಗಿ ಪ್ರಾಣವನ್ನೆ ಬಲಿ ಕೊಟ್ಟಿದ್ದಾನೆ. ಒಂದು ಕಡೆ ದೇಶಕ್ಕಾಗಿ ಹುತಾತ್ಮನಾದ ಯೋಧನ ಹೆಮ್ಮೆಯ ಆನಂದ ಭಾಷ್ಪ ಸುರಿಯುತ್ತಿದ್ದರೆ ಮತ್ತೊಂದೆಡೆ, ಆ ಯೋಧನ ಪುಟ್ಟ ಪುಟ್ಟ ಎರಡು ಕಂದಮ್ಮಗಳ ಮುಗ್ದ ಮುಖ ನೋಡಿ ಕಣ್ಣೀರು ತನ್ನಿಂದ ತಾನೇ ಹರಿಯುತ್ತಿದೆ. ಹೌದು, ಉಕ್ಕಲಿ ಗ್ರಾಮದ ಮೂವತ್ತೈದು ವರ್ಷ ವಯಸ್ಸಿನ ಕಾಶಿರಾಯ ಶಂಕ್ರಪ್ಪ ಬೊಮ್ಮನಳ್ಳಿ ಎಂಬುವ ವೀರಯೋಧ ಹುತಾತ್ಮನಾಗಿದ್ದಾನೆ

ಹೇಗಾಯ್ತು..?
ಜುಲೈ 1 ನೇ ತಾರೀಖಿನಂದು ರಾತ್ರಿ ಕರ್ತವ್ಯದಲ್ಲಿದ್ದ ವೇಳೆ, ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭ ಕಾಶಿರಾಯಗೆ ಗುಂಡು ತಾಗಿ ಹುತಾತ್ಮರಾಗಿದ್ದಾರೆ. ಈ ಮಾಹಿತಿ ಯೋಧನ ಕುಟುಂಬಕ್ಕೆ, ಸೇನಾಧಿಕಾರಿಗಳು ತಿಳಿಸುತ್ತಿದ್ದಂತೆ, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ಕಾರ್ಮೋಡ ಕವಿದಿದೆ. ಇನ್ನು ವೀರಯೋಧನಿಗೆ ಎರಡು ಪುಟ್ಟ ಪುಟ್ಟ ಮಕ್ಕಳಿದ್ದು, ಪತ್ನಿ ಸಂಗೀತಾರವರ ಆಕ್ರಂಧನ ಮುಗಿಲು ಮುಟ್ಟಿದೆ. ತಾಯಿ ಶಾಂತಾಬಾಯಿ ಕಣ್ಣೀರು ಹರಿಸಿದ್ದಾರೆ..

ಪತ್ನಿಗೆ ವಿಡಿಯೊ ಕಾಲ್ ಮಾಡಿದ್ದೇ ಕೊನೆ..!
ಯಸ್, ಗುಂಡಿನ ದಾಳಿಯಲ್ಲಿ ದೇಸಕ್ಕಾಗಿ ಪ್ರಾಣ ಅರ್ಪಿಸೋ ದಿನವೇ ರಾತ್ರಿ ಯೋಧ ಕಾಶಿರಾಯ್ ತನ್ನ ಪತ್ನಿ ಸಂಗೀತಾಗೆ ವಿಡಿಯೊ ಕಾಲ್ ಮಾಡಿದ್ದಾರೆ. ವಿಡಿಯೊ ಕಾಲ್ ನಲ್ಲೇ ಮಕ್ಕಳನ್ನೂ ಕಣ್ತುಂಬ ನೋಡಿದ್ದಾರೆ. ತಾಯಿಯ ಜೊತೆಗೂ ಮಾತನಾಡಿದ್ದಾರೆ. ಆದ್ರೆ ದುರಂತ ಅಂದ್ರೆ ಅವತ್ತೇ ಉಗ್ರರ ಜೊತೆ ಹೋರಾಡಿ ಗುಂಡಿಗೆ ಬಲಿಯಾಗಿದ್ದಾರೆ.

ಇಬ್ಬರು ಉಗ್ರರನ್ನೂ ಚೆಂಡಾಡಿದ್ದ..!
ಅಸಲು, ವೀರಯೋಧ ಕಾಶಿರಾಯ್ ಜುಲೈ ಒಂದರಂದು ನಡೆದಿದ್ದ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದ. ಆ ನಂತರದಲ್ಲಿ ಅದ್ಹೇಗೋ ಗೊತ್ತಿಲ್ಲ. ರಾಕ್ಷಸ ಉಗ್ರರಿಂದ ಚಿಮ್ಮಿ ಬಂದ ಗುಂಡುಗಳು ವೀರಯೋಧನ ಎದೆಗೆ ಹೊಕ್ಕಿವೆ. ಆದ್ರೂ ವೀರಸೇನಾನಿ ಉಗ್ರರ ಮೇಲೆ ಗುಂಡಿನ ದಾಳಿ ಬಿಟ್ಟಿಲ್ಲ. ಕೊನೆ ಕ್ಷಣದವರೆಗೂ ಹೋರಾಡಿಯೇ ಪ್ರಾಣ ಬಿಟ್ಟಿದ್ದಾನೆ.

ಸ್ನೇಹಿತರ ಕಂಬನಿ..
ಇನ್ನು, ವೀರಯೋಧ ಕಾಶಿರಾಯನ ಜೊತೆಯಲ್ಲೇ ಕಾರ್ಯನಿರ್ವಹಿಸಿದ್ದ ಪ್ರಾಣಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಸೇನೆಯಲ್ಲಿ ಜೊತೆಯಾಗೇ ದೇಶ ರಕ್ಷಣೆಯ ಕರ್ತವ್ಯ ನಿರ್ವಹಿಸಿದ್ದ ಬಾಗಲಕೋಟೆ ಜಿಲ್ಲೆಯ ಸಿದ್ದು ಗೆಳೆಯನನ್ನು ನೆನಪಿಸಿ ಕಣ್ಣೀರು ಹಾಕಿದ್ದಾರೆ.

ರವಿವಾರ ಮದ್ಯಾಹ್ನ ಅಂತ್ಯಕ್ರಿಯೆ..!
ಅಂದಹಾಗೆ, ಹುತಾತ್ಮ ಯೋಧ ಕಾಶಿರಾಯ ಬೊಮ್ಮನಳ್ಳಿ, ಪಾರ್ಥಿವ ಶರೀರ ಇಂದು ಶ್ರೀನಗರದಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿದೆ. ನಾಳೆ ಬೆಳಿಗ್ಗೆ ಅಂದ್ರೆ ರವಿವಾರ, ಬೆಳಗಾವಿಯಿಂದ ಯೋಧನ ಪಾರ್ಥೀವ ಶರೀರ ಸ್ವಗ್ರಾಮ ಉಕ್ಕಲಿಗೆ ತಲುಪೋ ನಿರೀಕ್ಷೆ ಇದೆ. ಈಗಾಗಲೇ ಸ್ವಗ್ರಾಮದಲ್ಲಿ ಯೋಧನ ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರವಿವಾರ ಮದ್ಯಾಹ್ನ 1 ಗಂಟೆಯ ನಂತರ ಸರ್ಕಾರಿ ಸಕಲ ಗೌರವಗಳೊಂದಿಗೆ ವೀರಯೋಧನ ಅಂತ್ಯಕ್ರಿಯೆ ನಡೆಯಲಿದೆ.

 

error: Content is protected !!