ಇಂದೂರು ಜಿಪಂ ಕ್ಷೇತ್ರ: ಹೈ ವೊಲ್ಟೇಜ್ ಅಖಾಡದಲ್ಲಿ ಯಾರಿಗೆ ಒಲಿಯತ್ತೆ ಬಿಜೆಪಿ ಟಿಕೆಟ್..?

ಮುಂಡಗೋಡ: ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆಯ ಅಭ್ಯರ್ಥಿಗಳ ಮೀಸಲಾತಿ ಪಟ್ಟಿ ಹೊರಬಿದ್ದಿದೆ. ಇದ್ರೊಂದಿಗೆ ತಾಲೂಕಿನಲ್ಲಿ ಮತ್ತೊಮ್ಮೆ ಚುನಾವಣೆಯ ಬಿಸಿ ಬಿಸಿ ಚರ್ಚೆಗಳು ಶುರುವಾಗಿದೆ. ಇನ್ನೇನು ಚುನಾವಣೆ ಹತ್ತಿರವಾಗ್ತಿದೆ. ಹೀಗಾಗಿ ಮುಂಡಗೋಡ ತಾಲೂಕಿನ 3 ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ಈ ಬಾರಿ ಅಭ್ಯರ್ಥಿಗಳು ಯಾರಪ್ಪಾ ಅನ್ನೋ ಪೀಕಲಾಟಕ್ಕೆ ಎರಡೂ ರಾಜಕೀಯ ಪಕ್ಷಗಳೂ ಚರ್ಚೆ ಆರಂಭಿಸಿವೆ. ಅದ್ರಲ್ಲೂ ಆಡಳಿತಾರೂಢ ಬಿಜೆಪಿ ಪಾಲಿಗೆ ಸಧ್ಯದ ಜಿಪಂ ಹಾಗೂ ತಾಲೂಕು ಪಂಚಾಯತ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಒಂದಿಷ್ಟು ತಲೆ ನೋವಾಗಿ ಪರಿಣಮಿಸೋದ್ರಲ್ಲಿ ಎರಡು ಮಾತಿಲ್ಲ.

ಇಂದೂರು ಕ್ಷೇತ್ರ ಪವರ್ ಫುಲ್..!
ಇಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಸಧ್ಯ ಚರ್ಚೆಯಲ್ಲಿರೋ ಪವರ್ ಪುಲ್, ಹೈ ವೊಲ್ಟೇಜ್ ಕ್ಷೇತ್ರ.. ಇಲ್ಲಿ ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ರೋಚಕ ಹಣಾಹಣಿಯಲ್ಲಿ ಗೆಲುವಿನ ಪತಾಕೆ ಹಾರಿಸಿದ್ದವರು ರವಿಗೌಡ ಪಾಟೀಲ್. ಅವತ್ತು ಶಿವರಾಮ್ ಹೆಬ್ಬಾರ್ ಆಶೀರ್ವಾದ ಹಾಗೂ ಸ್ಥಳೀಯ ಮಟ್ಟದಲ್ಲಿದ್ದ ವರ್ಚಸ್ಸು ರವಿಗೌಡ ಪಾಟೀಲರಿಗೆ ಗೆಲುವಿನ ದಡಕ್ಕೆ ತಂದು ನಿಲ್ಲಿಸಿತ್ತು. ಪಕ್ಷೇತರ ಅಭ್ಯರ್ಥಿ ಸಿದ್ದು ಹಡಪದ ವಿರುದ್ಧ 1500 ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಬಂದಿದ್ರು.

ಸಿದ್ದು ಹಡಪದ

ಬಿಜೆಪಿ 3 ನೇ ಸ್ಥಾನಕ್ಕೆ..
ಇನ್ನು ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆಂಜೋಡಿ ಗಲಬಿ ಕಳೆದ ಚುನಾವಣೆಯಲ್ಲಿ ಸೋಲು ಅನಿಭವಿಸಿದ್ದರು. ಸಿದ್ದು ಹಡಪದ ಮತ್ತು ಕೆಂಜೋಡಿ ಗಲಬಿ ನಡುವೆ ಟಿಕೆಟ್ ಫೈಟ್ ನಡೆದು, ಮಾಜಿ ಶಾಸಕ ವಿ.ಎಸ್.ಪಾಟೀಲ್ ರ ಕೃಪಾಶೀರ್ವಾದದಿಂದ ಕೆಂಜೋಡಿ ಗಲಬಿ ಟಿಕೆಟ್ ದಕ್ಕಿಸಿಕೊಂಡಿದ್ರು. ಆದ್ರೆ ಫಲಿತಾಂಶದಲ್ಲಿ ಮಾತ್ರ ಕೆಂಜೋಡಿ ಗಲಬಿ ಮೂರನೇ ಸ್ಥಾನಕ್ಕೆ ಬಂದು ನಿಂತಿದ್ರು. ಅದು ಬೇರೆ ಮಾತು.

ಕೆಂಜೋಡಿ ಗಲಬಿ

ಆದ್ರೆ, ಪಕ್ಷಕ್ಕಾಗಿ ಹಗಲಿರುಳೂ ಶ್ರಮಿಸಿದ್ದ ಸಿದ್ದು ಹಡಪದ್ ಗೆ ಇಂದೂರು ಕ್ಷೇತ್ರದಲ್ಲಿ ಟಿಕೆಟ್ ನೀಡಲೇ ಇಲ್ಲ ಅನ್ನೋ ಆರೋಪಗಳೂ ಕೇಳಿ ಬಂದಿದ್ದವು. ಮಾಜಿ ಶಾಸಕ ವಿ.ಎಸ್.ಪಾಟೀಲ್ ರೇ ಸಿದ್ದು ಹಡಪದ್ ಗೆ ಟಿಕೆಟ್ ಸಿಗದಂತೆ ನೋಡಿಕೊ‌ಂಡಿದ್ದರು ಅನ್ನೋ ಆರೋಪಗಳೂ ಕೇಳಿ ಬಂದಿದ್ದವು. ಹೀಗಾಗಿ ಅವತ್ತು ಟಿಕೇಟ್ ಸಿಗದ ಕಾರಣ ಬಿಜೆಪಿಯಲ್ಲಿ ಬಂಡಾಯವೆದ್ದು, ಪಕ್ಷೇತರನಾಗಿ ಕಣಕ್ಕಿಳಿದಿದ್ದ ಸಿದ್ದಪ್ಪ ಹಡಪದ ನಿರೀಕ್ಷೆಗೂ ಮೀರಿ ಠಕ್ಕರ್ ಕೊಟ್ಟಿದ್ರು, ಬಿಜೆಪಿಯನ್ನೇ ಹಿಂದುಳಿಸಿ ಎರಡನೇ ಸ್ಥಾನಕ್ಕೆ ಬಂದಿದ್ರು. ಹೀಗಾಗಿ, ಇಂದೂರು ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಬಿಜೆಪಿ ತೀವ್ರ ಮುಖಭಂಗ ಎದುರಿಸಿತ್ತು.

ಸದ್ಯ “ಸಾಮಾನ್ಯ” ಮೀಸಲಾತಿ..!
ಯಸ್, ಇಂದೂರು ಜಿಲ್ಲಾ ಪಂಚಾಯತ ಕ್ಷೇತ್ರದ ಮೀಸಲಾತಿ ಪ್ರಕಟವಾಗಿದೆ‌. ಈ ಬಾರಿ “ಸಾಮಾನ್ಯ” ವರ್ಗಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು ಅಕಾಂಕ್ಷಿಗಳ ಹಿಂಡೇ ಎರಡೂ ಪಕ್ಷಗಳ ಬಾಗಿಲು ತಟ್ಟುವ ಸಾಧ್ಯತೆಯಿದೆ.‌ ಅದ್ರಲ್ಲೂ ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಪೀಕಲಾಟ ತಂದಿಡೋದ್ರಲ್ಲಿ ಎರಡು ಮಾತಿಲ್ಲ.

ರವಿಗೌಡ್ರು ಸ್ಪರ್ಧಿಸಲ್ವಂತೆ..!
ಸಾಮಾನ್ಯ ವರ್ಗಕ್ಕೆ ಮೀಸಲಾತಿ ಪ್ರಕಟವಾಗಿದ್ದೇ ತಡ ಇಂದೂರು ಜಿಪಂ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರವಿಗೌಡ ಪಾಟೀಲ್, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ‌. ಹೀಗಾಗಿ, ಈ ಬಾರಿ ಬಿಜೆಪಿಯಿಂದ ರವಿಗೌಡ ಪಾಟೀಲರೇ ಸ್ಪರ್ಧಿಸ್ತಾರಾ..? ಅನ್ನೋ ಪ್ರಶ್ನೆ ಎದುರಾಗಿತ್ತು. ಆದ್ರೆ ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿರೋ ರವಿಗೌಡರು, ಈ ಬಾರಿ ನಾನು ಸ್ಪರ್ಧಿಸಲ್ಲ ಬೇರೆಯವರಿಗೆ ಅವಕಾಶ ಮಾಡಿಕೊಡ್ತಿನಿ ಅಂದಿದ್ದಾರೆ ಪಾಟೀಲ್.

ಯಾವಾಗ, ರವಿಗೌಡ ಪಾಟೀಲರು ನಾನು ಈ ಬಾರಿ ಸ್ಪರ್ಧಿಸಲ್ಲ ಅಂತಾ ತೀರ್ಮಾನಿಸಿದ್ದಾರೆ ಅನ್ನೊ ಸಂಗತಿ ಹೊರಬಿದ್ದಿದೆಯೊ, ಅವಾಗ್ಲೆ ಇಂದೂರು ಕ್ಷೇತ್ರದಲ್ಲಿ ಒಂದಿಷ್ಟು ಬಿರುಸಿನ ಚಟುವಟಿಕೆಗಳು ತೆರೆ ಮರೆಯಲ್ಲೇ ನಡೆಯುತ್ತಿವೆ.

ಕೆಂಜೋಡಿ ಗಲಬಿಗೇ ಮತ್ತೆ ಮಣೆ..?
ಇಂದೂರು ಕ್ಷೇತ್ರಕ್ಕೆ ಈ ಬಾರಿ ಕೆಂಜೋಡಿ ಗಲಬಿಯವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಅವ್ರನ್ನೇ ಅಭ್ಯರ್ಥಿಯನ್ನಾಗಿಸಲು ಒಂದು ಬಣ ತೆರೆಮರೆಯಲ್ಲೇ ಕಳೆದ ಮೂರು ವರ್ಷಗಳಿಂದಲೂ ಭರ್ಜರಿ ಪ್ಲಾನ್ ಮಾಡಿಕೊಂಡಿದೆ ಅನ್ನೋ ಮಾತುಗಳು ಕೇಳಿಬಂದಿವೆ. ಇವ್ರಿಗೆ ರವಿಗೌಡರ ಕೃಪಾಕಟಾಕ್ಷವೂ ಇದೆ ಎನ್ನಲಾಗ್ತಿದೆ‌. ಆದ್ರೆ ಹಾಗೇನಾದ್ರೂ ಕೆಂಜೋಡಿ ಗಲಬಿಯವರಿಗೇ ಪಕ್ಷ ಮಣೆ ಹಾಕಿದ್ರೆ ಸಿದ್ದು ಹಡಪದ ಬೆಂಬಲಿಗರಿಗೆ ಸಹ್ಯವಾಗತ್ತಾ..? ಹಾಗೊಂದು ವೇಳೆ ಸಿದ್ದು ಹಡಪದ ಸಿಡಿದು ನಿಂತ್ರೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಸಾಧ್ಯವಾಗತ್ತಾ..? ಇವೇಲ್ಲ ಪ್ರಶ್ನೆಗಳು ಸದ್ಯ ಕ್ಷೇತ್ರದಲ್ಲಿ ಚರ್ಚಿತವಾಗ್ತಿದೆ.

ಸಿದ್ದು ಹಡಪದ ಹೇಳೋದೇನು..?
“ಪಕ್ಷಕ್ಕಾಗಿ ನಾನು ಇದುವರೆಗೂ ಸಾಕಷ್ಟು ಶ್ರಮ ಪಟ್ಟಿದ್ದಿನಿ, ನಂಗೆ ಟಿಕೆಟ್ ಕೊಡತ್ತೆ ಅನ್ನೋ ಭರವಸೆ ಇದೆ‌. ಆದ್ರೆ ಪಕ್ಷ ಏನು ತೀರ್ಮಾನ ತಕ್ಕೊಳ್ಳತ್ತೋ ಅದಕ್ಕೆ ನಾನು ಬದ್ಧನಾಗಿರ್ತಿನಿ, ಹೆಬ್ಬಾರ್ ಸಾಹೇಬರ ಮೇಲೆ ನಂಗೆ ವಿಶ್ವಾಸವಿದೆ” ಇದಿಷ್ಟು ಮಾತು ಸಿದ್ದು ಹಡಪದ ಹೇಳ್ತಾರೆ. ಆದ್ರೆ, ಎರಡು ಬಾರಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಪರಾಭವಗೊಂಡಿರೋ ಸಿದ್ದು ಹಡಪದ್ ಈ ಬಾರಿ ತಣ್ಣಗಾಗ್ತಾರಾ..? ಸಿದ್ದು ಹಡಪದ್ ತಣ್ಣಗಾದ್ರೂ ಅವರ ಅಪಾರ ಬೆಂಬಲಿಗರು ಸುಮ್ನೆ ಇರ್ತಾರಾ..? ಇದೇಲ್ಲ ಪ್ರಶ್ನೆಗಳು ಸಧ್ಯ ಕ್ಷೇತ್ರದ ಪಡಸಾಲೆಯಲ್ಲಿ ಚರ್ಚಿತವಾಗ್ತಿದೆ.

ಗ್ರೌಂಡ್ ವರ್ಕ್..
ಅಂದಹಾಗೆ, ಇನ್ನೇನು ಚುನಾವಣೆ ಘೋಷಣೆ ಆಗೇ ಆಗತ್ತೆ ಅನ್ನೋದು ಕನ್ಫರ್ಮ್ ಆಗುತ್ತಲೇ ಕ್ಷೇತ್ರದಲ್ಲಿ ಕೆಲ ಟಿಕೆಟ್ ಆಕಾಂಕ್ಷಿಗಳು ಗ್ರೌಂಡ್ ವರ್ಕ್ ಶುರುವಿಟ್ಟಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಈಗಾಗಲೇ ಚುನಾವಣೆಯ ರಂಗ ತಾಲೀಮುಗಳೂ ಶುರುವಾಗಿದೆ. ಇಂದೂರು ಕ್ಷೇತ್ರದಲ್ಲಿ ಬರೋ ಬಾಚಣಕಿ, ಅರಶಿಣಗೇರಿ, ನಂದಿಕಟ್ಟಾ, ಅಗಡಿ, ಹುನಗುಂದ, ಅತ್ತಿವೇರಿ, ಹುಲಿಹೊಂಡ, ಬಸಾಪುರ, ಕೆಂದಲಗೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಿದ್ದು ಹಡಪದ ಹವಾ ಕೊಂಚ ಜಾಸ್ತಿಯಿದೆ. ಸಿದ್ದು ಹಡಪದ ಬಗ್ಗೆ ಅನುಕಂಪ ಇದೆ. ಕಳೆದ ಎರಡು ಬಾರಿ ಕೂದಲೆಳೆ ಅಂತರದಲ್ಲಿ ಸೋಲು ಅನುಭವಿಸಿರೋ ಕಾರಣಕ್ಕೆ ಈ ಬಾರಿ ಹೇಗಾದ್ರೂ ಸರಿ ಸಿದ್ದಣ್ಣನನ್ನು ಗೆಲ್ಲಿಸೋಣ ಅನ್ನೋ ಹುಮ್ಮಸ್ಸಿನಲ್ಲಿ ಬೆಂಬಲಿಗರಿದ್ದಾರೆ. ಆದ್ರೆ ಪಕ್ಷದ ತೀರ್ಮಾನದ ಮೇಲೆ ಇಲ್ಲಿ‌ನ ಅಷ್ಟೂ ಫಲಿತಾಂಶ ನಿಂತಿದೆ. ಇದು ಸಧ್ಯದ ಪರಿಸ್ಥಿತಿ.

ಅದೇನೇ ಆಗ್ಲಿ, ಈ ಬಾರಿ ಇಂದೂರು ಜಿಲ್ಲಾ ಪಂಚಾಯತ ಚುನಾವಣೆ ಕಣ ರಣರೋಚಕವಾಗೋದು ಮಾತ್ರ ಪಕ್ಕಾ..!!

error: Content is protected !!