ಕಾರವಾರ: ಕರ್ನಾಟಕದಿಂದ ಹೊಟ್ಟೆ ಪಾಡಿಗಾಗಿ ದುಡಿಯಲು ಗೋವಾಕ್ಕೆ ಹೋಗಿದ್ದ ಒಂದೇ ಕುಟುಂಬದ ಮೂವರು ಗೋವಾದಲ್ಲೇ ನೇಣಿಗೆ ಶರಣಾಗಿರೋ ಮನಕಲುಕುವ ಘಟನೆ ನಡೆದಿದೆ. ಗೋವಾದ ಜುವಾರಿ ನಗರದ ಎಂಇಎಸ್ ಕಾಲೇಜಿನ ಆವರಣದ ಬಾಡಿಗೆ ಮನೆಯೊಂದರಲ್ಲಿ ಘಟನೆ ನಡೆದಿದ್ದು ಇಡೀ ಗೋವಾ ಕನ್ನಡಿಗರನ್ನು ಬೆಚ್ಚಿ ಬೀಳಿಸಿದೆ.

ಹೊಟ್ಟೆಪಾಡಿಗಾಗಿ ಹೋಗಿದ್ರು..!
ಕಳೆದ ಹಲವು ವರ್ಷಗಳಿಂದೇ ಕೂಲಿ ಮಾಡಿ ಬದುಕುವ ಉದ್ದೇಶದಿಂದ ಗೋವಾದಲ್ಲೇ ಬದುಕು ಸಾಗಿಸುತ್ತಿದ್ದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಗ್ರಾಮದ ಹುಲಗಪ್ಪ ಅಂಬಿಗೇರ(35), ಪತ್ನಿ ದೇವಮ್ಮ ಅಂಬಿಗೇರ(28) ಹಾಗೂ 29 ವರ್ಷದ ಸಹೋದರ ಗಂಗಪ್ಪ ಅಂಬಿಗೇರ ಎಂಬುವರೇ ನೇಣಿಗೆ ಶರಣಾದ ದುರ್ದೈವಿಗಳು ನೇಣಿನ ನಿರ್ಧಾರ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

 

ಘಟನೆ ಏನು..?
ಕಳೆದ 4-5 ದಿನಗಳಿಂದಷ್ಟೇ ಗೊವಾದ ಜುವಾರಿ ನಗರದ ಶಮಶುದ್ದಿನ್ ಎಂಬ ಮಾಲೀಕನ ಮನೆಯಲ್ಲೇ ದುರ್ದೈವಿಗಳು ವಾಸವಿದ್ದರು, ಮಾಲೀಕ ಶಮಶುದ್ದಿನ್ ನೇಣಿಗೆ ಶರಣಾದವರ ಮೇಲೆ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟ ಬಂಗಾರ ಹಾಗೂ ಹಣದ ಒಟ್ಟು ಮೊತ್ತ ಸುಮಾರು 15 ಲಕ್ಷ ರೂಗಳನ್ನು ದೇವಮ್ಮ ಎಂಬುವಳು ಕಳ್ಳತನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದ ಎನ್ನಲಾಗಿದೆ. ಮಾಲೀಕನು ಕಳ್ಳತನ ಮಾಡಿದ್ದಾರೆ ಎನ್ನುವ ವಿಷಯ ವರ್ನಾ ಠಾಣೆಯ ಪೋಲೀಸರ ಗಮನಕ್ಕೆ ತಂದ ಹಿನ್ನಲೆ ಪೋಲೀಸರು ಶರಣಾದ ದುರ್ದೈವಿಗಳಿಗೆ ಕಿರುಕುಳ ನೀಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದ್ದು, ಇದಕ್ಕೆ ಮನನೊಂದ ಮೂವರು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.


ಹೋರಾಟಗಾರರ ಎಚ್ಚರಿಕೆ..!
ವಿನಾ ಕಾರಣ ಕಳ್ಳತನ ಆರೋಪದ ಹಿನ್ನಲೆಯಲ್ಲಿ ಪೋಲೀಸರ ದಬ್ಬಾಳಿಕೆ ಹಾಗೂ ದೌರ್ಜನ್ಯದಿಂದ ನೇಣಿಗೆ ಶರಣಾದ ನೊಂದ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಕಾರಣೀಭೂತರಾದ ಪೋಲೀಸರ ವಿರುದ್ದ ಕ್ರಮ ಜರುಗಿಸಬೇಕು, ಇಂತಹ ಘಟನೆಗಳು ಕನ್ನಡಿಗರ ಮೇಲೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ವಿಷಯ ತಿಳಿದ ಅಖಿಲ ಕರ್ನಾಟಕ ಗೋವಾ ಕನ್ನಡಿಗರ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದಣ್ಣ ಮೇಟಿ, ಅರಜ್ ಸಂಸ್ಥೆಯ ರಂಜನ್ ಸಲೋಮನ್, ಅರಣ್ ಪಾಂಡೆ, ಇಪ್ತಿಯಾರ ಸೈಯ್ಯದ, ನ್ಯಾಯವಾಧಿಗಳಾದ ಅಲ್ಬಟಿನಾ, ಜುವಾರಿ ನಗರದ ಕನ್ನಡ ಹೋರಾಟ ಸಮಿತಿಯ ಅಧ್ಯಕ್ಷರ ಶಿವಾನಂದ ಬಿಂಗಿ ಪೋಲೀಸ ಮೇಲಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ದೌರ್ಜನ್ಯ ದರ್ಪ ತೋರಿದ ಪೋಲೀಸರನ್ನು ಅಮಾನತ್ತಗೊಳಿಸಬೇಕು ಒಂದು ವೇಳೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಜುವಾರಿ ಪೋಲೀಸ್ ಠಾಣೆ ಮುಂದೆ ಇಡೀ ಗೋವಾದ ಕನ್ನಡಿಗರು ಸೇರಿ ನೇಣಿಗೆ ಶರಣಾದವರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.


ಕುಟುಂಬದ ಆಕ್ರಂದನ:
ಅತ್ತ ಗೋವಾ ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ಸುದ್ದಿ ತಿಳಿಯುತ್ತಿದ್ದಂತೆ ಸೂಲ್ತಾನಪೂರ ಗ್ರಾಮದಲ್ಲಿ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು. ಸಣ್ಣ ಮಕ್ಕಳನ್ನು ಬಿಟ್ಟು ಹೋಗ್ಯಾರೋ ಯಪ್ಪೊ ಏನು ಮಾಡೋದು ಈ ಮಕ್ಕಳ ಗತಿ ಏನಪ್ಪೋ ಎಂದು ಈಡಿ ಗ್ರಾಮದ ಜನರೆ ಮನೆಯಲ್ಲಿ ಸೇರಿ ಕಣ್ಣಿರು ಸುರಿಸುತಿದ್ದರು. ಇನ್ನು ಗಂಗಪ್ಪ ಅಂಬೀಗೇರ ಯುವಕನ ಮದುವೆ ಕೂಡ ಕಳೆದ ಎರಡು ತಿಂಗಳ ಹಿಂದಷ್ಟೆ ಆಗಿದ್ದು ಲಾಕ್ ಡೌನ ಮುಗಿದ ತಕ್ಷಣ ಬಂದು ಕರಕೊಂಡು ಹೋಗ್ತಿನಿ ಅಂತ ಹೇಳಿ ತವರು ಮನೆಯಲ್ಲಿ ಪತ್ನಿಯನ್ನು ಬಿಟ್ಟು ಹೋಗಿದ್ದ. ಹೀಗಾಗಿ ಸಾವಿಗೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೇಸ್ ದಾಖಲು..!
ಘಟನೆಗೆ ಸಂಬಂಧಸಿದಂತೆ ಗೋವಾದ ಜುವಾರಿ ನಗರದ ವರ್ನಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿದ್ದಣ್ಣ ಮೇಟಿ ಹಾಗೂ ಶಿವಾನಂದ ಬಿಂಗಿ ತಿಳಿಸಿದ್ದಾರೆ.

error: Content is protected !!