ಕ್ರಿಕೆಟ್ ನಲ್ಲಿ “ವಿರಾಟ” ಪರ್ವ ಕೊನೆಯಾಗತ್ತಾ..? ನಾಯಕತ್ವ ಬದಲಾಗತ್ತಾ..?

ವಿರಾಟ್ ಕೊಹ್ಲಿ..
ವಿಶ್ವ ಕ್ರಿಕೆಟ್ ನ ಅಪ್ರತಿಮ ಆಟಗಾರ. ಬ್ಯಾಟ್ಸ್ ಮೆನ್ ಆಗಿ ಕ್ರೀಸ್ ಗೆ ಅಂಟಿಕೊಂಡು ನಿಂತ್ರೆ ಸುನಾಮಿಯಂತೆ ರನ್‍ಗಳು ಹರಿದುಬರುತ್ತೆ. ಎದುರಾಳಿಯ ಸವಾಲು ಎಷ್ಟೇ ಇರಲಿ, ಬ್ಯಾಟ್ ಝಳಪಿಸಲು ಶುರು ಮಾಡಿದ್ರೆ ಚೇಸಿಂಗ್ ಗಾಡ್. ಇನ್ನು ಫಿಟ್ ನೆಸ್ ಬಗ್ಗೆ ಹೇಳುವುದೇ ಬೇಡ. ಮಿಂಚಿನ ಗತಿಯಲ್ಲಿ ಓಡಾಡುತ್ತಾ ಚುರುಕಿನ ಫೀಲ್ಡಿಂಗ್ ಮೂಲಕ ಗಮನ ಸೆಳೆಯುತ್ತಾರೆ. ಆಕ್ರಮಣಕಾರಿ ಪ್ರವೃತ್ತಿ, ಹೋರಾಟ ಛಲ, ಗೆಲ್ಲಲೇಬೇಕು ಅನ್ನೋ ಹಠ ಹಾಗೂ ಸೋಲನ್ನು ಒಪ್ಪಿಕೊಳ್ಳದಂತಹ ಮನಸ್ಥಿತಿಯ ಆಟಗಾರ. ಒಬ್ಬ ಆಟಗಾರನಾಗಿ ವಿರಾಟ್ ಕೊಹ್ಲಿಯವರಲ್ಲಿ ಯಾವುದೇ ಒಂದು ತಪ್ಪನ್ನು ಹುಡುಕಲು ಸಾಧ್ಯವಿಲ್ಲ.

ನಾಯಕನಾಗಿ ಮಿಂಚಲೇ ಇಲ್ಲ..!
ಆದ್ರೆ ನಾಯಕನಾಗಿ ವಿರಾಟ್ ಕೊಹ್ಲಿ ಇಷ್ಟವಾಗುವುದಿಲ್ಲ. ನಾಯಕತ್ವದ ಗುಣಗಳಿದ್ರೂ ವಿರಾಟ್ ಕೊಹ್ಲಿ ಸತತವಾಗಿ ಎಡವುತ್ತಿದ್ದಾರೆ. ತನ್ನ ಮನೋಭಾವನೆ ಮತ್ತು ತೆಗೆದುಕೊಳ್ಳುವ ನಿರ್ಧಾರಗಳಿಂದ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ತಾನೊಬ್ಬ ವಿಶ್ವದ ಶ್ರೇಷ್ಠ ತಂಡದ ನಾಯಕ ಎಂಬುದನ್ನು ಮರೆತುಬಿಡುತ್ತಾರೆ. ಒಬ್ಬ ಆಕ್ರಮಣಕಾರಿಯಾಗಿ ಆಟಗಾರನಾಗಿ ಕಾಣುತ್ತಾರೆ ಹೊರತು ಒಬ್ಬ ನಾಯಕನಾಗಿ ವಿರಾಟ್ ಕಾಣುವುದಿಲ್ಲ.

ಏಟಿಗೆ ಎದುರೇಟು..!
ಮಾತಿಗೆ ಮಾತು.. ಏಟಿಗೆ ಎದುರೇಟು.. ಇದು ವಿರಾಟ್ ಕೊಹ್ಲಿಯ ಸ್ವಭಾವ. ಎದುರಾಳಿ ತಂಡದ ಆಟಗಾರರ ವಿರುದ್ಧ ಸದಾ ಕಿಡಿ ಕಾರುತ್ತಲೇ ಇರೋ ವಿರಾಟ್ ಕೊಹ್ಲಿ ಸಹ ಆಟಗಾರರ ಆತ್ಮಬಲವನ್ನು ಹೆಚ್ಚಿಸುತ್ತಾರೆ. ಆದ್ರೆ ತಾಳ್ಮೆ ಕಳೆದುಕೊಳ್ಳುತ್ತಾರೆ. ತಂಡದ ಗೇಮ್ ಪ್ಲಾನ್ ಅನ್ನು ಸರಿಯಾದ ಹಾದಿಯಲ್ಲಿ ತೆಗೆದುಕೊಂಡು ಹೋಗುವಲ್ಲಿ ವಿಫಲವಾಗುತ್ತಿದ್ದಾರೆ. ವಿರಾಟ್ ಮುಖದಲ್ಲಿ ಯಾವಾಗಲೂ ಕ್ರೌರ್ಯದ ಭಾವನೆಗಳಿರುತ್ತವೆ. ತಾಳ್ಮೆ, ಸಂಯಮ ಮತ್ತು ಶಾಂತ ಚಿತ್ತತೆಯ ಮುಖಭಾವ ಇರೋದು ತುಂಬಾನೇ ಕಮ್ಮಿ. ಹೀಗಾಗಿ ವಿರಾಟ್ ಕೊಹ್ಲಿ ಗೆ ತನ್ನನ್ನು ತಾನೇ ಕಂಟ್ರೋಲ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ತಂಡವನ್ನು ಕಂಟ್ರೋಲ್ ಮಾಡೋದು ಕಷ್ಟವಾಗುತ್ತಿದೆ.

ಯಶಸ್ಸೂ ಕಡಿಮೆಯಿಲ್ಲ..!
ಇನ್ನು ನಾಯಕನಾಗಿ ವಿರಾಟ್ ಕೊಹ್ಲಿ ಯಶಸ್ಸು ಸಾಧಿಸಿದ್ದಾರೆ ಎಂಬುದು ಅಷ್ಟೇ ಸತ್ಯ. ತನ್ನ ಏಕಾಂಗಿ ಹೋರಾಟ ಹೊತೆಗೆ ತಂಡದ ಸಾಂಘಿಕ ಆಟವೂ ಕೂಡ ಟೀಮ್ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದೆ. ಆದ್ರೂ ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆ ಹಲವಾರು ಟೇಕೆಗಳು ಕೇಳಿ ಬರುತ್ತಿವೆ.

ನಾಯಕತ್ವದ ಪ್ರಶ್ನೆ..?
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಸೋಲಿನ ನಂತರ ವಿರಾಟ್ ಕೊಹ್ಲಿಯ ನಾಯಕತ್ವವನ್ನು ಪ್ರಶ್ನೆ ಮಾಡಲಾಗುತ್ತಿದೆ. ಹಾಗಂತ ಇದು ಭಾರತ ಕ್ರಿಕೆಟ್ ತಂಡದಲ್ಲಿ ಹೊಸತೇನೋ ಅಲ್ಲ. ಬಹಳ ಹಿಂದಿನಿಂದಲೂ ಮಹತ್ತರವಾದ ಪಂದ್ಯಗಳಲ್ಲಿ ಸೋತಾಗ ಮೊದಲು ಸ್ಥಾನ ಕಳೆದುಕೊಳ್ಳುವುದು ತಂಡದ ನಾಯಕನೇ. ಸುನೀಲ್ ಗವಾಸ್ಕರ್, ಕಪಿಲ್ ದೇವ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅಷ್ಟೇ ಯಾಕೆ, ಎರಡು ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದ ಮಹೇಂದ್ರ ಸಿಂಗ್ ಧೋನಿಯ ನಾಯಕತ್ವಕ್ಕೂ ಕುತ್ತು ಬಂದಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. ಇದಕ್ಕೆ ವಿರಾಟ್ ಕೊಹ್ಲಿ ಸೇರ್ಪಡೆಯಷ್ಟೇ.
ಇನ್ನೊಂದೆಡೆ ಟೀಮ್ ಇಂಡಿಯಾದ ಯಶಸ್ವಿ ನಾಯಕರ ಲೀಸ್ಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಸೌರವ್ ಗಂಗೂಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅಂಕಿ ಅಂಶಗಳ ಪ್ರಕಾರ ಸೌರವ್ ಗಂಗೂಲಿ ಮತ್ತು ಧೋನಿಗಿಂತ ವಿರಾಟ್ ಕೊಹ್ಲಿ ನಾಯಕನಾಗಿ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ. ಆದ್ರೆ ನಾಯಕತ್ವದ ಸ್ವಭಾವ, ತಂಡವನ್ನು ಮುನ್ನಡೆಸುವ ರೀತಿಯಲ್ಲಿ ವಿರಾಟ್ ಹಿನ್ನಡೆ ಅನುಭವಿಸುತ್ತಿದ್ದಾರೆ.

ಸೋಲುಗಳೂ ಮರೆತಿಲ್ಲ..!
ಅಂದಹಾಗೇ ವಿರಾಟ್ ನಾಯಕನಾಗಿ ಇಲ್ಲಿಯವರೆಗೆ ಯಾವುದೇ ಐಸಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿಲ್ಲ.
2017ರಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಪಾಕ್ ವಿರುದ್ಧ ಸೋಲು ಅನುಭವಿಸಿತ್ತು. ಅದೇ ರೀತಿ 2019ರ ಏಕದಿನ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ನಲ್ಲೂ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದೆ. ಈ ಮೂರು ಪ್ರತಿಷ್ಠಿತ ಟೂರ್ನಿಗಳಲ್ಲಿ ನಾಯಕನಾಗಿ ತಂಡಕ್ಕೆ ಗೆಲುವು ದಕ್ಕಿಸಿಕೊಡಲು ವಿರಾಟ್ ವಿಫಲರಾಗಿದ್ದಾರೆ.

ಐಪಿಎಲ್ ನಲ್ಲೂ ವಿಫಲ..!
ಇನ್ನೊಂದೆಡೆ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಆರ್ ಸಿಬಿ ತಂಡದ ಸಾರಥಿಯಾಗಿದ್ದಾರೆ. ಆದ್ರೆ ಪ್ರಶಸ್ತಿ ಗೆಲ್ಲಲು ಸತತಾಗಿ ವಿಫಲರಾಗುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವಿರಾಟ್ ಕೊಹ್ಲಿಯವರ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವಿರಾಟ್ ಕೊಹ್ಲಿಯವರನ್ನು ಆರ್ ಸಿಬಿ ಮತ್ತು ಟೀಮ್ ಇಂಡಿಯಾ ತಂಡದ ನಾಯಕತ್ವದಿಂದ ಕೆಳಗಿಳಿಸಬೇಕು ಅನ್ನೋ ಕೂಗು ಕೂಡ ಕೇಳಿಬರುತ್ತಿದೆ.

ತಂಡದಲ್ಲಿ ಭಿನ್ನಾಭಿಪ್ರಾಯ..?
ಇನ್ನು ತಂಡದ ಆಯ್ಕೆಯಲ್ಲಿ ವಿರಾಟ್ ಕೊಹ್ಲಿಗೆ ಸಂಪೂರ್ಣವಾದ ಸ್ವಾತಂತ್ರ್ಯವಿದೆ. ಕೋಚ್ ರವಿಶಾಸ್ತ್ರಿ ಮತ್ತು ವಿರಾಟ್ ನಡುವಿನ ಬಾಂಧವ್ಯವೂ ಚೆನ್ನಾಗಿದೆ. ಆಯ್ಕೆ ಸಮಿತಿಯ ಜೊತೆ ಚರ್ಚೆ ಮಾಡಿ ತಂಡವನ್ನು ಆಯ್ಕೆ ಮಾಡಿಕೊಳ್ಳುವಂತಹ ಅಧಿಕಾರವೂ ವಿರಾಟ್ ಗಿದೆ. ಆದ್ರೆ ತಂಡದ ಆಟಗಾರರ ವಿಶ್ವಾಸವನ್ನು ಪಡೆದುಕೊಳ್ಳಲು ವಿರಾಟ್ ಗೆ ಸಾಧ್ಯವಾಗುತ್ತಿಲ್ಲ. ಈ ನಡುವೆ, ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಸೋಲಿನ ನಂತರ ವಿರಾಟ್ ಕೊಹ್ಲಿಯವರ ಪ್ರತಿಕ್ರಿಯೆಯನ್ನು ಗಮನಿಸಿದ್ದಾಗ ಎಲ್ಲೋ ಒಂದು ಕಡೆ ತಂಡದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ತಂಡದ ಅಂತಿಮ ಹನ್ನೊಂದರ ಬಳಗದ ಆಯ್ಕೆ ವಿರಾಟ್ ಹೇಳಿದಂತೆ ಆಗುತ್ತಿಲ್ಲ ಅಂತ ಅನ್ನಿಸುತ್ತಿದೆ.

ಅದೇನೇ ಇರಲಿ, ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಸೋಲಿನ ನಂತರ ವಿರಾಟ್ ಕೊಹ್ಲಿಯ ನಾಯಕತ್ವಕ್ಕೆ ಅಪತ್ತು ಬಂದಿದೆ. ಬಹುಶಃ ಮುಂದಿನ ದಿನಗಳಲ್ಲಿ ಟೆಸ್ಟ್ ತಂಡಕ್ಕೆ ಅಜಿಂಕ್ಯಾ ರಹಾನೆ, ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಟಿ-ಟ್ವೆಂಟಿ ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಿ ಆಯ್ಕೆಯಾದ್ರೂ ಅಚ್ಚರಿ ಏನಿಲ್ಲ.

error: Content is protected !!