ಕಾರವಾರ: ಭಾರತೀಯ ಐಎನ್‍ಎಸ್ ಕದಂಬ ನೌಕಾನೆಲೆಗೆ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿ ಸೀಬರ್ಡ್ ಯೋಜನೆಯ ಎರಡನೇ ಹಂತದ ಯೋಜನೆಯ ಬಗ್ಗೆ ಪರಿವಿಕ್ಷಣೆ ಮಾಡಿದ್ದಾರೆ.

ಗೋವಾ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಕಾರವಾರದ ಅರಗಾದಲ್ಲಿರುವ ಐಎನ್‍ಎಸ್ ಕದಂಬ ನೌಕಾನೆಲೆಗೆ ಗುರುವಾರ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರೊಂದಿಗೆ ಆಗಮಿಸಿದರು. ವೆಸ್ಟರ್ನ್ ನೇವಲ್ ಕಮಾಂಡ್ ಫ್ಲಾಗ್ ಆಫೀಸರ್ ಆಗಿರುವ ಕಮಾಂಡಿಂಗ್ ವೈಸ್ ಅಡ್ಮಿರಲ್ ಆರ್. ಹರಿಕುಮಾರ್ ಹಾಗೂ ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ರಿಯಲ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ನೌಕಾನೆಲೆ ಹ್ಯಾಲಿಪ್ಯಾಡ್‍ನಲ್ಲಿ ಕೇಂದ್ರ ಸಚಿವರನ್ನು ಸ್ವಾಗತಿಸಿದರು.

ಕಾಮಗಾರಿ ವೀಕ್ಷಣೆ..!
ಸೀಬರ್ಡ್ ಪ್ರವೇಶದ ಬಳಿಕ ನೌಕಾನೆಲೆಯ ಸುತ್ತಲೂ ತೆರಳಿ ವೀಕ್ಷಣೆ ನಡೆಸಿದ ಸಚಿವರು ಶಿಪ್ ರಿಪೇರ್ ಯಾರ್ಡ್ ಬಳಿ ಹಡಗುಗಳನ್ನು ಲಿಫ್ಟ್ ಮಾಡುವ ಸಾಮರ್ಥ್ಯದ ಪ್ರದರ್ಶನವನ್ನು ವೀಕ್ಷಿಸಿದರು. ಇಲ್ಲಿನ ವಿವಿಧ ಸೈಟ್‍ಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಸೀಬರ್ಡ್ ಯೋಜನೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಪ್ರಾಜೆಕ್ಟ್ ಸೀಬರ್ಡ್-2 ಭಾಗವಾಗಿ ಸಾಗರದಲ್ಲಿನ ಕಾರ್ಯಗಳು, ಮೂಲ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು. ಜೊತೆಗೆ ವಿವಾಹಿತ ನಾವಿಕರಿಗಾಗಿ ನಿರ್ಮಾಣ ಮಾಡಲಾಗಿರುವ ನೂತನ ವಸತಿಗೃಹಗಳ ಕಟ್ಟಡಕ್ಕೆ ಭೇಟಿ ನೀಡಿದರು. ಈ ವಸತಿಗೃಹಗಳು ಪರಿಸರ ಸ್ನೇಹಿಗಳಾಗಿದ್ದು ಉತ್ತಮ ನೀರಿನ ಪೂರೈಕೆ, ತ್ಯಾಜ್ಯಗಳನ್ನು ಸಂಗ್ರಹಿಸಲು ಕೈಗೊಂಡಿರುವ ವಿಧಾನಗಳು ಮೊದಲಾದ ಸುಧಾರಿತ ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು ಇವುಗಳ ಪರಿಶೀಲನೆಯನ್ನು ನಡೆಸಿದರು.

ರಕ್ಷಣಾ ಸಚಿವರ ಮಾತುಗಳೇನು..?
ಬಳಿಕ ಐಎನ್‍ಎಸ್ ಕದಂಬ ಮುಖ್ಯ ಕಚೇರಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನೌಕಾಪಡೆಯ ಅಧಿಕಾರಿಗಳು, ನಾವಿಕರೊಂದಿಗೆ ಮಾತನಾಡಿ ಅವರು ಭವಿಷ್ಯದಲ್ಲಿ ದೇಶದ ಸುರಕ್ಷತೆಯ ವಿಷಯದಲ್ಲಿ ಎಲ್ಲದಕ್ಕಿಂತ ಮಿಗಿಲಾಗಿ ನೌಕಾಸೇನೆಯೇ ಪ್ರಮುಖ ಪಾತ್ರ ವಹಿಸಲಿದೆ. ಭಾರತೀಯ ನೌಕಾಪಡೆಯ ಕುರಿತು ಎಷ್ಟು ಮಾತನಾಡಿದರೂ ಅದು ಕಡಿಮೆ. ಕಳೆದ ಹಲವಾರು ವರ್ಷಗಳಿಂದ ತಾನು ಈ ಬಗ್ಗೆ ಗಮನಿಸುತ್ತಿದ್ದೇನೆ. ಕಾರವಾರದ ನೌಕಾನೆಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇಡೀ ವಿಶ್ವಕ್ಕೆ ಭಾರತೀಯ ನೌಕಾಪಡೆಯ ಕೊಡುಗೆ ಬಹಳ ಇದೆ. ಇದಕ್ಕೆ ನಮ್ಮ ಸಾಮರ್ಥ್ಯವನ್ನು ನಾವೇ ಅರಿತುಕೊಳ್ಳುವ ಅವಶ್ಯಕತೆ ಇದೆ. ಕೆಲವೊಮ್ಮೆ ನಾವು ಹೇಗಿದ್ದೇವೆ? ನಮ್ಮ ಸಾಮರ್ಥ್ಯವೇನು ಎನ್ನುವುದನ್ನು ನಾವೇ ಮರೆತು ಬಿಡುತ್ತೇವೆ. ನಾವು ಚಿಕ್ಕವರಿದ್ದೇವೆ, ವಿಶ್ವದಲ್ಲಿ ದೊಡ್ಡ ದೊಡ್ಡ ತಾಕತ್ತುಗಳಿವೆ, ಅವರ ಎದುರು ನಾವು ಹೇಗೆ ನಿಲ್ಲಲು ಸಾಧ್ಯ, ಈ ತರಹದ ಯೋಚನೆಗಳು ಬರುತ್ತವೆ.
ಆದರೆ ನಮ್ಮಲ್ಲಿ ಉತ್ಸಾಹ, ಆತ್ಮ ವಿಶ್ವಾಸವಿದ್ದರೆ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಲು ಸಾಧ್ಯ. ಯುದ್ಧಗಳು ನಡೆದಾಗ ಕೇವಲ ಶಸ್ತ್ರಗಳಿಂದ ಕಾರ್ಯವಾಗುವುದಿಲ್ಲ. ನಮ್ಮಲ್ಲಿನ ಉತ್ಸಾಹ, ಆತ್ಮವಿಶ್ವಾಸದಿಂದ ಸಾಧ್ಯವಾಗುತ್ತದೆ. ಈ ರೀತಿ ಈ ಹಿಂದೆಯೂ ಹಲವು ಘಟನೆಗಳು ನಡೆದಿವೆ ಎಂದರು.

ಕಾರವಾರದ ನೇವಲ್ ಬೇಸ್ ಕೇವಲ ಭಾರತದ ಮಾತ್ರವಲ್ಲದೇ ಏಷ್ಯಾದ ಅತೀ ದೊಡ್ಡ ನೌಕಾನೆಲೆಯಾಗಿ ರೂಪುಗೊಳ್ಳಬೇಕಾಗಿದೆ. ಇತರ ನೇವಲ್ ಬೇಸ್‍ಗಳಿಗಿಂತ ಕಾರವಾರದ ಐಎನ್‍ಎಸ್ ಕದಂಬ ನೌಕಾನೆಲೆಯು ವಿಶೇಷವಾದದ್ದಾಗಿದೆ. ದೇಶದ ಮೊದಲ ಸೀ ಲಿಫ್ಟ್ ವಿಧಾನವನ್ನು ಇಲ್ಲಿ ಇಂದು ವೀಕ್ಷಿಸಿದ್ದೇನೆ. ಇದರಿಂದಾಗಿ ನಮ್ಮ ನೌಕಾ ಹಡಗುಗಳ ನಿರ್ವಹಣೆ ಉತ್ತಮವಾಗಿ ನಡೆಯಲು ಸಾಧ್ಯವಾಗಲಿದೆ. ವೈಮಾನಿಕ ಸಮೀಕ್ಷೆಯ ಮೂಲಕ ಪ್ರಾಜೆಕ್ಟ್ ಸೀಬರ್ಡ್‍ನ್ನು ವೀಕ್ಷಿಸುತ್ತಿರುವಾಗ ಇದರ ಭವಿಷ್ಯವೂ ಕಂಡಿದೆ. ನೌಕಾನೆಲೆಯ ಭವಿಷ್ಯವು ಉಜ್ವಲವಾಗಲಿದ್ದು ಇದರ ಕ್ರೆಡಿಟ್ ಇಲ್ಲಿನ ಎಲ್ಲಾ ನೌಕಾಪಡೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಲ್ಲುತ್ತದೆ ಎಂದರು.

ಕೋವಿಡ್ ತೀವ್ರವಾಗಿದ್ದ ಸಂದರ್ಭದಲ್ಲಿ ಭಾರತೀಯ ನೌಕಾಪಡೆ ಕೈಗೊಂಡಿರುವ ಕಾರ್ಯಗಳು ಅಸಾಮಾನ್ಯವಾಗಿವೆ. ಇಡೀ ದೇಶದಲ್ಲಿ ಆಮ್ಲಜನಕ ಬೇಕು ಎಂದು ಕೇಳಿ ಬರುತ್ತಿತ್ತು. ಜನರಿಗೆ ಒಟ್ಟಾರೆಯಾಗಿ ಎಲ್ಲಿಂದಲಾದರೂ ಆಮ್ಲಜನಕ ದೊರೆಯಬೇಕು ಎಂದು ಅಂದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಹೊರದೇಶಗಳಿಂದ ಆಕ್ಸಿಜನ್ ಕಂಟೇನರ್‍ಗಳನ್ನು ಹೊತ್ತು ಭಾರತಕ್ಕೆ ತಲುಪಿಸುವಲ್ಲಿ ನೌಕಾಪಡೆಯ ಪಾತ್ರ ಮಹತ್ವದ್ದಾಗಿದೆ. ಬೇರೆ ದೇಶಗಳಲ್ಲಿಯೂ ಈ ವಿಷಯದಲ್ಲಿ ಭಾರತೀಯ ನೌಕಾಪಡೆಯನ್ನು ಪ್ರಶಂಸಿಸಲಾಗಿದೆ ಎಂದರು.
ರಕ್ಷಣಾ ವಿಷಯದಲ್ಲಿಯೂ ಭಾರತ ಆತ್ಮನಿರ್ಭರವಾಗಲಿದೆ. ನೌಕಾಪಡೆಗೆಂದು ಒಟ್ಟೂ 46 ಹಡುಗುಗಳು ಹಾಗೂ ಜಲಾಂತರ್ಗಾಮಿಗಳು ಸಿದ್ಧವಾಗುತ್ತಿದ್ದು ಇವುಗಳಲ್ಲಿ 40 ಭಾರತದಲ್ಲಿಯೇ ನಿರ್ಮಾಣವಾಗುತ್ತಿವೆ. ಭಾರತವೂ ಪ್ರತಿ ವಿಷಯದಲ್ಲಿಯೂ ಆತ್ಮ ನಿರ್ಭರವಾಗಬೇಕು ಎಂಬುದನ್ನು ಪ್ರಧಾನಿಗಳು ಪ್ರತಿ ಬಾರಿ ಹೇಳುತ್ತಾರೆ. ಈ ಬಗ್ಗೆ ಸರ್ವ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಟಾಪ್ 3 ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

 

error: Content is protected !!