ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲೂ ಕೊರೋನಾ 3 ನೇ ಅಲೆಯ ಭೀತಿ ಶುರುವಾಗಿದೆ. ಕೊರೋನಾ ಸೋಂಕು ಇಷ್ಟು ದಿನ ವಯಸ್ಕರಿಗೆ, ವೃದ್ಧರಿಗಷ್ಟೇ ಅನ್ನುವಂತಿತ್ತು, ಆದ್ರೆ ಇದೀಗ ಮಕ್ಕಳಲ್ಲೂ ಹೆಚ್ಚಿನ ಸೋಂಕು ಕಾಡತೊಡಗಿದ್ದು ಜಿಲ್ಲೆಯಲ್ಲಿ ಈ ವರೆಗೆ 5338 ಮಕ್ಕಳಲ್ಲಿ ಪಾಸಿಟಿವ್ ಪತ್ತೆಯಾಗಿದೆ.

ಯಾವ ತಾಲೂಕಲ್ಲಿ ಎಷ್ಟು..?
ಜಿಲ್ಲೆಯಲ್ಲಿ ಮಕ್ಕಳಲ್ಲಿ ಈ ವರೆಗೆ ಕಾರವಾರ-387, ಅಂಕೋಲ- 319, ಕುಮಟಾ-511, ಭಟ್ಕಳ- 338, ಹಳಿಯಾಳ- 728, ಜೋಯಿಡಾ- 296, ಹೊನ್ನಾವರ- 568, ಮುಂಡಗೋಡು- 491, ಸಿದ್ದಾಪುರ-498, ಶಿರಸಿ-681,ಯಲ್ಲಾಪುರ- 527 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.

ಮೊದಲ ಅಲೆಗಿಂತ ಹೆಚ್ಚು..!
ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 3800 ಮಕ್ಕಳಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಒಂದು ಮಗು ಮೃತಪಟ್ಟಿತ್ತು. ಆದರೇ ಈ ಬಾರಿ ಅತೀ ಹೆಚ್ಚು ಪಾಸಿಟಿವ್, ಮಕ್ಕಳಲ್ಲಿ ಕಂಡುಬಂದಿದ್ದರೂ ಅದೃಷ್ಟವಶಾತ್ ಯಾವುದೇ ಮಕ್ಕಳಿಗೆ ಪ್ರಾಣಾಪಾಯವಾಗಿಲ್ಲ.

ಈಗ 10 ದಿನದಲ್ಲಿ 216..!
ಜಿಲ್ಲೆಯಲ್ಲಿ ಸರ್ಕಾರಿ ದಾಖಲೆ ಪ್ರಕಾರ 1ರಿಂದ 18 ವರ್ಷದ 391,519 ಜನ ಮಕ್ಕಳಿದ್ದಾರೆ. ಇದರಲ್ಲಿ ಕಳೆದ 10 ದಿನಗಳ ಅಂತರದಲ್ಲಿ 216 ಮಕ್ಕಳಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದೆ. ಜಿಲ್ಲೆಯ ಶಿರಸಿ ಮತ್ತು ಹಳಿಯಾಳದಲ್ಲಿ ಮಕ್ಕಳ ಸೋಂಕಿನ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

ಅಪೌಷ್ಟಿಕತೆಯ ಮಕ್ಕಳೇ ಟಾರ್ಗೆಟ್..!
ಜಿಲ್ಲೆಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬಂದಿದ್ದು ಹಲವು ಮಕ್ಕಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಅವರ ಸರ್ವೇ ಮಾಡಲಾಗಿದೆ. ಜಿಲ್ಲೆಯಲ್ಲಿ ಆರು ವರ್ಷದ ಒಳಗಿನ 1,06,263 ಮಂದಿ ಮಕ್ಕಳು ಇದ್ದು ಈ ಪೈಕಿ 184 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.

ಪೌಷ್ಟಿಕ ಆಹಾರ ಪೂರೈಕೆ..!
4142 ಮಕ್ಕಳು ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿದ್ದು ಇಂತಹ ಮಕ್ಕಳ ಆರೈಕೆಗೆ ಮೆಡಿಕಲ್ ಕಿಟ್ ನ್ನು ಜಿಲ್ಲಾ ಪಂಚಾಯತ್ ವತಿಯಿಂದ ಸಿದ್ಧಪಡಿಸಿ ಮೊದಲ ಹಂತದಲ್ಲಿ 1500 ಕಿಟ್ ಗಳನ್ನು ನೀಡಲಾಗಿದೆ. ಈ ವಾರದಲ್ಲಿ ಉಳಿದ ಮಕ್ಕಳಿಗೂ ನೀಡಲು ಸಿದ್ದತೆ ನಡೆದಿದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಮೊದಲ ಹಂತವಾಗಿ ಮಲ್ಟಿವಿಟಾಮಿನ್, ಪ್ಯಾರಾಸಿಟಾಮಲ್, ಜಿಂಕ್-ಐಯಾನ್ ಸಿರಪ್ ಹಾಗೂ ಪ್ರೋಟೀನ್ ಪೌಡರ್ ಸೇರಿದಂತೆ ಉಸಿರಾಟಕ್ಕೆ ಅನುಕೂಲವಾಗುವ ಚ್ಯವನಪ್ರಾಶವನ್ನು ಒಳಗೊಂಡ ಕಿಟ್ ನ್ನು ವಿತರಿಸಲಾಗಿದೆ.

ಸಿದ್ಧತೆ ಏನೇನು..?
ಜೊತೆಗೆ ಪ್ರತಿತಿಂಗಳು ಆದ್ಯತೆಯ ಮೇರೆಗೆ ಸಾಧಾರಣ ಅಪೌಷ್ಠಿಕತೆ ಹೊಂದಿರುವ ಮಕ್ಕಳಿಗೂ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮೂಲಕ ಕಿಟ್ ನ್ನು ಮಕ್ಕಳಿಗೆ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮಕ್ಕಳಿಗಾಗಿ ಆಕ್ಸಿಜನ್ ಬೆಡ್ ವ್ಯವಸ್ಥೆಯ ಕೋವಿಡ್ ಸೆಂಟರ್ ಸಹ ತೆರೆಯಲಾಗುತಿದ್ದು ಸಿದ್ದತೆ ನಡೆದಿದೆ.
ಅಂತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಪದ್ಮಾವತಿ ಮಾಹಿತಿ ನೀಡಿದ್ದಾರೆ.

error: Content is protected !!