ಬೆಂಗಳೂರು:ರಾಜ್ಯದಲ್ಲಿ ಸಧ್ಯಕ್ಕೆ ಕಾಲೇಜುಗಳನ್ನು ಮಾತ್ರ ಆರಂಭಿಸಲು ಚಿಂತನೆ ನಡೆಸಲಾಗಿದ್ದು, 18 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಿದ ನಂತರ ಕಾಲೇಜುಗಳು ಆರಂಭವಾಗಲಿದೆ.
ಆದರೆ, 18 ವರ್ಷದ ಕೆಳಿಗಿನ ಮಕ್ಕಳಿಗೆ ಲಸಿಕೆ ಬಾರದಿರುವುದರಿಂದ 10ನೇ ತರಗತಿಯವರೆಗೆ ಆರಂಭಿಸುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಡಾ.ದೇವಿ ಪ್ರಸಾದ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ವರದಿ ಸ್ವೀಕರಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ತಜ್ಞರ ಸಮಿತಿ ಹಲವಾರು ಸಲಹೆಗಳನ್ನು ನೀಡಿದೆ. 3ನೇ ಅಲೆ ಮಕ್ಕಳಿಗೆ ಹೆಚ್ಚಾಗಿ ಕಾಡುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ. ಮಕ್ಕಳ ತೀವ್ರ ನಿಗಾ ಘಟಕ, ಮಕ್ಕಳ ಆಸ್ಪತ್ರೆ ಸ್ಥಾಪನೆ ಕುರಿತು ಸಲಹೆ ನೀಡಿದೆ. ಪರಿಣಿತರ ಸಲಹೆ ಪಡೆದು ಇನ್ನಷ್ಟು ಕ್ರಮ ಕೈಗೊಳ್ಳುವಂತೆ ಹೇಳಿದೆ. ವೈದ್ಯಕೀಯ ಸಂಘಟನೆಗಳ, ಕಾರ್ಪೋರೇಟ್ ಸಂಸ್ಥೆಗಳ, ಸಾರ್ವಜನಿಕರ ಸಹಯೋಗ ಪಡೆಯುವಂತೆ ತಿಳಿಸಿದೆ. ಅಪೌಷ್ಠಿಕತೆ ನಿವಾರಣೆ ಮತ್ತು ಆಸ್ಪತ್ರೆಗಳಿಗೆ ಮನೋವೈದ್ಯರ ಸೇವೆ ಪಡೆಯಲು ಸಲಹೆ ನೀಡಿದೆ. ಆಮ್ಲಜನಕ ಕೊರತೆ ನಿವಾರಣೆಗೂ ಸಲಹೆ ನೀಡಿದೆ ಎಂದು ತಿಳಿಸಿದರು.

ವ್ಯಾಕ್ಸಿನೇಶನ್ ನಂತರ ಕಾಲೇಜು ಆರಂಭ..!
ಈಗ ಸರಕಾರ ತೆಗೆದುಕೊಂಡಿರುವ ಕ್ರಮಗಳು ಸರಿಯಾಗಿವೆ ಎಂದು ಸಮಿತಿ ಹೇಳಿದೆ. ಹಂತ ಹಂತವಾಗಿ ಕಾಲೇಜುಗಳನ್ನು ಆರಂಭಿಸುವಂತೆ ತಿಳಿಸಿದೆ. 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಿಸಿ ಕಾಲೇಜು ಆರಂಭಿಸಬಹುದು. ವ್ಯಾಕ್ಸಿನೇಶನ್ ಆದ ನಂತರ ಶಾಲಾ, ಕಾಲೇಜು ಆರಂಭಿಸಬಹುದು ಎಂದು ತಿಳಿಸಿದೆ ಎಂದು ಹೇಳಿದರು.

1ರಿಂದ 10 ತರಗತಿ ಬಗ್ಗೆ ಚರ್ಚೆಯಿಲ್ಲ..!
ಕೋವಿಡ್ ನಂತರದ ಆರೋಗ್ಯ ಸಮಸ್ಯೆಗೆ ಕ್ರಮವಾಗಬೇಕು. ಲಸಿಕೆ ಅಭಿಯಾನ ತೀವ್ರವಾಗಬೇಕು ಎಂದೂ ಸಲಹೆ ನೀಡಿದೆ. ಹಾಗಾಗಿ 1 ರಿಂದ 10ನೇ ತರಗತಿ ಆರಂಭಿಸುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

error: Content is protected !!