ಮಂತ್ರಾಲಯ: ಕೊರೋನಾ ಮಹಾಮಾರಿಯಿಂದಾಗಿ ಇಷ್ಟೂ ದಿನ ಬಂದ್ ಆಗಿದ್ದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ ಇಂದು ತೆರೆದಿದೆ. ದೇಶದ ಮೂಲೆ ಮೂಲೆಯಲ್ಲೂ ರಾಯರಿಗೆ ಕೋಟ್ಯಂತರ ಭಕ್ತರಿದ್ದು, ಸದ್ಯ ರಾಯರ ದರ್ಶನಕ್ಕೆ ಅವಕಾಶ ಸಿಕ್ಕಿದ್ದೇ ತಡ ಮಂತ್ರಾಲಯದ ಕಡೆ ಭಕ್ತರ ದಂಡೇ ಆಗಮಿಸುತ್ತಿದೆ.
ಲಾಕ್ ಡೌನ್ ಎಫೆಕ್ಟ್..
ಕೊರೊನಾ ಮಹಾಮಾರಿಯಿಂದಾಗಿ ತಲ್ಲಣಿಸಿದ್ದ ಕ್ಷೇತ್ರಗಳು ಈಗ ಚೇತರಿಸಿಕೊಳ್ಳುತ್ತಿವೆ. ಪ್ರಮುಖವಾಗಿ ಆಂಧ್ರಪ್ರದೇಶದಲ್ಲಿ ಮಿತಿಮೀರಿದ್ದ ಕೋವಿಡ್ ನಿಂದಾಗಿ ಅಲ್ಲಿಯ ಸರ್ಕಾರ ಸಂಪೂರ್ಣ ಲಾಕ್ ಡೌನ್ ಹೇರಲಾಗಿತ್ತು. ಇದ್ರಿಂದಾಗಿ ಮೇ1 ನೇ ತಾರೀಖಿನಿಂದ ಕರ್ನೂಲು ಜಿಲ್ಲೆಯ ಮಂತ್ರಾಲಯ ಮಂಡಲದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ ಸಂಪೂರ್ಣ ಬಂದ್ ಮಾಡಲಾಗಿತ್ತು. ಸದ್ಯ ಅಲ್ಲಿಯ ರಾಜ್ಯ ಲಾಕ್ ಡೌನ್ ಸಡಿಲಿಕೆ ಮಾಡಿದ್ದರಿಂದ ಇಂದು ರಾಯರ ದೇವಸ್ಥಾನದ ಒಳಗೆ ಭಕ್ತರು ಬರುವುದು, ಪೂಜಾ ಕೈಂಕರ್ಯ ಸಲ್ಲಿಸುವುದಕ್ಕೆ ಮಠದ ಆಡಳಿತ ಮಂಡಳಿ ತೀರ್ಮಾನಿಸಿದೆ.
ಕೋವಿಡ್ ನಿಯಮ ಪಾಲಿಸಲೇಬೇಕು..!
ರಾಯರಿಗೆ ದೇಶ ಹಾಗೂ ವಿದೇಶದಲ್ಲಿ ಅಪಾರ ಭಕ್ತಗಣ ಇದೆ. ಇದ್ರಿಂದ ಕೋವಿಡ್ ನಿಯಮ ಪಾಲಿಸುವುದಾದ್ರೆ ಮಾತ್ರ ಶ್ರೀಮಠಕ್ಕೆ ಅನುವು ಮಾಡಿಕೊಡಲಾಗುವುದು. ಸದ್ಯದ ಮಟ್ಟಿಗೆ ದೇವಸ್ಥಾನ ಪ್ರದಕ್ಷಿಣೆ ಹಾಕುವುದಕ್ಕೆ ನಿರ್ಬಂಧ ವಿಧಿಸಿದ್ದು, ಪರಿಮಳ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಹೊರಗಡೆಯಿಂದ ಬರುವ ಭಕ್ತರು ತಂಗಲು ವಸತಿ ಗೃಹಗಳಿವೆ. ದೇವಸ್ಥಾನದ ದ್ವಾರ ಬಾಗಿಲಿನಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ನಾಲ್ಕೈದು ದಿನದಲ್ಲಿ ಮಠದ ಆಡಳಿತ ವ್ಯವಸ್ಥೆಯಲ್ಲಿ ಮತ್ತಷ್ಟು ಬದಲಾವಣೆ ಮಾಡುವ ಚಿಂತನೆ ಇದೆ ಆದ್ರೆ ಸದ್ಯ ರಾಯರ ನೋಡಲು ಕರ್ನಾಟಕ, ಆಂಧ್ರ , ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಭಕ್ತರ ದಂಡೇ ಆಗಮಿಸುತ್ತಿದೆ.
ಕೊರೊನಾದಿಂದಾಗಿ 52 ದಿನ ರಾಯರ ದರ್ಶನದಿಂದ ದೂರ ಉಳಿದಿದ್ದ ಭಕ್ತರಿಗೆ ಸದ್ಯ ಮಠದ ಆಡಳಿತ ಮಂಡಳಿ ಅನುವು ಮಾಡಿಕೊಟ್ಟಿದೆ. ಆದ್ರೆ ರಾಯರ ಭಕ್ತರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯಗೊಳಿಸಿ ಕೋವಿಡ್ ನಿಯಮ ಪಾಲಿಸಿ ರಾಯರ ಕೃಪೆಗೆ ಪಾತ್ರರಾಗಬಹುದು