ಉಡುಪಿ: ಕಾಲಿಗೆ ಚಕ್ರ ಸಿಕ್ಕಿಸಿಕೊಂಡು ಓಡಾಡುವ ನಾಯಿ ಮರಿಯ ವಿಡಿಯೋವೊಂದು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಸಂತೋಷದ ಹಿಂದಿನ ಸಂಕಟದ ಕಥೆ ರೋಚಕ ವಾಗಿದೆ.

ತನ್ನ ಹಿಂದಿನ ಎರಡು ಕಾಲುಗಳನ್ನು ಮುರಿದುಕೊಂಡಿದ್ದ ಈ ನಾಯಿಮರಿಗೆ ಮರುಜೀವ ಸಿಕ್ಕಿದ್ದೇ ಒಂದು ಆಸಕ್ತಿಯ ವಿಚಾರ.ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ, ಹೊಸಂಗಡಿ ಕೆಪಿಸಿಎಲ್ ಘಟಕದ ಆವರಣದಲ್ಲಿ ಪುಟ್ಟ ನಾಯಿಮರಿಯೊಂದು ಘಾಸಿಕೊಂಡು ಬಿದ್ದಿತ್ತು.

ಬೈಕ್ ಚಕ್ರದಲ್ಲಿ ಸಿಲುಕಿ ಕಾಲು ನುಜ್ಜು ಗುಜ್ಜು‌.!
ಯಾರೋ ಬೈಕ್ ಹಾಯಿಸಿದ ಪರಿಣಾಮ ನಾಯಿಮರಿಯ ಹಿಂಬದಿಯ ಎರಡು ಕಾಲುಗಳು ಸಂಪೂರ್ಣ ಜಜ್ಜಿ ಹೋಗಿತ್ತು. ಅಸಹಾಯಕ ಸ್ಥಿತಿಯಲ್ಲಿ ಅಲ್ಲೇ ರಸ್ತೆ ಬದಿಯಲ್ಲಿ 15ದಿನಗಳಿಂದ ಬಿದ್ದುಕೊಂಡಿತ್ತು. ಸ್ಥಳೀಯ ನಿವಾಸಿ ಹಾಗೂ ಕೆಪಿಸಿಎಲ್ ನಲ್ಲಿ ಉದ್ಯೋಗ ಮಾಡುವ ಕೆ.ರಾಮಸ್ವಾಮಿ ಹಾಗೂ ವೀಣಾ ದಂಪತಿ ಪುತ್ರಿಯಾದ ಪ್ರಿಯಾ ಎಂ.ಆರ್ ಈ ಅಸಹಾಯಕ ನಾಯಿಯನ್ನು ಗಮನಿಸಿದ್ದಾರೆ. ಪಕ್ಕಕ್ಕೆ ಹೋದ ಆಕೆ ನಾಯಿಯ ಸ್ಥಿತಿ ನೋಡಿ ಮಮ್ಮಲ ಮರುಗಿದ್ದಾರೆ.

ಹಿಂದೆ ಹಿಂದೆ ಬಂದಿತ್ತು..!
ಈ‌ ಮರಿ ಕುಂಟು ಕಾಲಿನಲ್ಲೇ ಅವರನ್ನು ಹಿಂಬಾಲಿಸಿಕೊಂಡು ಮನೆಯ ವರೆಗೂ ಬಂದಿದೆ. ಇದರಿಂದ ಅವರ ಮನ ಕರಗಿದೆ. ವೈದ್ಯರನ್ನು ಕರೆಸಿ ನಾಯಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ನಾಯಿ ಬದುಕುವ ಸಾಧ್ಯತೆ ಇಲ್ಲ ಎಂದು ವೈದ್ಯರು ತಿಳಿಸಿದರು. ಸಂಪೂರ್ಣ ಇನ್ಫೆಕ್ಷನ್ ಗೆ ತುತ್ತಾಗಿದ್ದ ಎರಡೂ ಕಾಲುಗಳಿಗೆ ಮತ್ತೆ ಜೀವ ತರುವುದು ಅಸಾಧ್ಯವಾಗಿತ್ತು.

ಪ್ರಾಣಿ ಪ್ರೀತಿ..! ಫಲಿಸಿತು ಪ್ಲಾನ್..!!
ಬೀದಿ ನಾಯಿಗಳನ್ನು ಕಂಡರೆ ಮೊದಲೇ ಪ್ರಿಯಾಗೆ ಎಲ್ಲಿಲ್ಲದ ಪ್ರೀತಿ . ಹಿಂದಿನಿಂದಲೂ ಅನೇಕ ಬೀದಿನಾಯಿಗಳನ್ನು ಈಕೆ ಆರೈಕೆ ಮಾಡಿದರು .ನಾಯಿ ಮತ್ತೆ ಹಿಂದಿನಂತೆ ಓಡಾಡಬೇಕಲ್ಲ ಎಂದು ಆಲೋಚಿಸಿದ ರಾಮಸ್ವಾಮಿ, ಅವರು ಪ್ಲಾನ್ ಮಾಡಿದ್ದಾರೆ. ಆನ್ಲೈನ್ನಲ್ಲಿ ಎರಡು ಪುಟ್ಟ ಚಕ್ರಗಳನ್ನು ತರಿಸಿಕೊಂಡಿದ್ದಾರೆ. ಬಳಿಕ ಪಿವಿಸಿ ಪೈಪ್ ಗೆ ಈ ಪುಟ್ಟಪುಟ್ಟ ಗಾಲಿಗಳನ್ನು ಜೋಡಿಸಿ ನಾಯಿಯ ಹಿಂದಿನ ಎರಡು ಕಾಲುಗಳ ಚಲನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಈ ಕೃತಕ ಕಾಲು ನಿರ್ಮಾಣವಾದ ನಂತರ ಸತ್ತೆ ಹೋದಂತಿದ್ದ ಆ ಪುಟ್ಟ ನಾಯಿ ಮತ್ತೆ ಲವಲವಿಕೆಯಿಂದ ಓಡಾಡಿಕೊಂಡಿದೆ. ಬದುಕಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದ ನಾಯಿ ಎಲ್ಲೆಂದರಲ್ಲಿ ಓಡಾಡುತ್ತಾ ಖುಷಿ ಖುಷಿಯಾಗಿದೆ.
ಇದೇ ಅಲ್ವಾ ಮಾನವೀಯತೆ ಅಂದ್ರೆ..!

error: Content is protected !!