ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿಡುತ್ತಿದ್ದಾನೆ‌. ಎಲ್ಲೆಂದರಲ್ಲಿ ಮಳೆ ಮಳೆ ಮಳೆ. ಹೀಗಾಗಿ ಮಳೆಯ ಅವಾಂತರಗಳು ಒಂದೆಡೆಯಾದ್ರೆ, ಮತ್ತೊಂದೆಡೆ ಅದೇ ಮಳೆಯಿಂದ ಉತ್ತರ ಕನ್ನಡದ ಮಲೆನಾಡಿನ ಪ್ರಕೃತಿ ಸೌಂದರ್ಯ ಕಣ್ಮನ ಸೆಳೆಯುತ್ತಿದೆ.

ಪಶ್ಚಿಮ ಘಟ್ಟದ ರಮಣೀಯತೆ..!
ಅಂದಹಾಗೆ, ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳನ್ನ ನೋಡೋದೇ ಒಂದು ರೀತಿಯ ಆನಂದ. ಪಶ್ಚಿಮ ಘಟ್ಟಗಳ ಸಾಲು ಹಸಿರನ್ನು ಹೊದ್ದು ನೋಡುಗರ ಮನ ಸೆಳೆಯುತ್ತದೆ. ಅದೇ ರೀತಿ ಜಲಪಾತಗಳ ಜಿಲ್ಲೆ ಉತ್ತರ ಕನ್ನಡ ಈ ಪಶ್ಚಿಮ ಘಟ್ಟಗಳ ಸಾಲಿನಲ್ಲೇ ಬರೋದ್ರಿಂದ ಜಲಪಾತಗಳ ವೈಭವ ಸವಿಯೋದೇ ಒಂಥರಾ ಖುಷಿ.

ಜಲಪಾತಗಳ ಹಾಲುನೊರೆ..!
ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿರೋ ಜಲಪಾತಗಳು ರಾಜ್ಯದಲ್ಲೇ ಅಧಿಕ. ಇಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತಿದ್ರೆ ಒಂದೊಂದು ಜಲಪಾತಗಳು ಒಂದೊಂದು ರೀತಿಯ ವೈಚಿತ್ರ್ಯವನ್ನ ಸೃಷ್ಟಿಸುತ್ತವೆ. ಅದೇ ರೀತಿ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಜಲಪಾತ ಇದೀಗ ಮೈದುಂಬಿ ಹರಿಯುತ್ತಿದೆ.

ಬೇಡ್ತಿ ನದಿಯಿಂದ ನಿರ್ಮಾಣವಾಗಿರೋ ಈ ಜಲಪಾತ ಸುಮಾರು 200 ಮೀಟರ್ ಎತ್ತರದಿಂದ ಧುಮುಕುತ್ತದೆ. ಯಲ್ಲಾಪುರದಿಂದ 17 ಕಿಲೋಮೀಟರ್ ದೂರದಲ್ಲಿರೋ ಈ ಜಲಪಾತವನ್ನ ಈ ಸಮಯದಲ್ಲಿ ನೋಡೋದು ಉತ್ತಮ.

ಇದೀಗ ಮಲೆನಾಡು ಭಾಗಗಳಲ್ಲಿ ಮಳೆಯಾಗ್ತಿರೋದ್ರಿಂದ ಮಳೆಗಾಲ ಪ್ರಾರಂಭವಾದ ಕೇವಲ ಒಂದೇ ವಾರದಲ್ಲಿ ಜಲಪಾತ ತುಂಬಿ ಹರಿಯುತ್ತಿದೆ.

error: Content is protected !!