ಬೆಂಗಳೂರು: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಇನ್ನೂ ಮೂರು ದಿನ ರಾಜ್ಯಾದ್ಯಂತ ಮಳೆ ಮುಂದುವರೆಯಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಇಂದು ಬೆಂಗಳೂರಿನಲ್ಲಿಯೂ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ನಿಗಾ ವಹಿಸಲು ಸಿಎಂ ಸೂಚನೆ
ಮಳೆಯಿಂದ ಕರ್ನಾಟಕದ 20 ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಿನ್ನೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿರುವ ಸಿಎಂ ಯಡಿಯೂರಪ್ಪ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ.

ಮತ್ತೆ ಪ್ರವಾಹದ ಭೀತಿ..!
ಕರ್ನಾಟಕ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದ 1,710 ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ. ಈ ಗ್ರಾಮಗಳತ್ತ ಹೆಚ್ಚಿನ ನಿಗಾ ವಹಿಸಲು ಸರ್ಕಾರ ಸೂಚಿಸಿದೆ. ಕಳೆದ ವರ್ಷದಂತೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿರುವುದರಿಂದ ಹೆಚ್ಚಿನ ಎಚ್ಚರ ವಹಿಸಲು ಆದೇಶಿಸಲಾಗಿದೆ.

ಕರಾವಳಿಯಲ್ಲಿ ರೆಡ್ ಅಲರ್ಟ್..!
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್​ ಘೋಷಿಸಲಾಗಿದೆ. ಕರಾವಳಿಯಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದ್ದು, ನಾಳೆಯಿಂದ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಣಕಲ್, ಕೊಟ್ಟಿಗೆಹಾರ, ಬಾಳೂರು, ಚಾರ್ಮಾಡಿ ಘಾಟ್​ನಲ್ಲಿ 39.58 ಸೆ.ಮೀ. ದಾಖಲಾಗಿದೆ. ಕರಾವಳಿಯಲ್ಲಿ ಗಂಟೆಗೆ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮಲೆನಾಡಲ್ಲಿ ಮಳೆ ಅಬ್ಬರ..!
ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ನೈಋತ್ಯ ಮಾನ್ಸೂನ್ ಅಬ್ಬರ ಹೆಚ್ಚಾಗಲಿದೆ. ಇದರಿಂದ ಬೆಂಗಳೂರಿನಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಹೊಸನಗರ, ತೀರ್ಥಹಳ್ಳಿ, ಸಾಗರ, ಸಿದ್ಧಾಪುರ, ಶಿರಸಿ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ತಾಲೂಕುಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಶರಾವತಿ, ತುಂಗಾ, ಭದ್ರಾ, ವರಾಹಿ, ವರದಾ, ಅಘನಾಶಿನಿ ನದಿಗಳು ತುಂಬಿ ಹರಿಯುತ್ತಿವೆ. ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಾಗಿರುವುದರಿಂದ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹದ ಭೀತಿ..!
ಉತ್ತರ ಕರ್ನಾಟಕದಲ್ಲೂ ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ ಜಿಲ್ಲೆಯ ಮಾರ್ಕಂಡೇಯ ನದಿಯಲ್ಲಿ ರೈತರೊಬ್ಬರು ಕೊಚ್ಚಿ ಹೋಗಿದ್ದಾರೆ. ಆತನಿಗಾಗಿ ಎಸ್​ಡಿಆರ್​ಎಫ್​ ತಂಡ ಶೋಧಕಾರ್ಯ ನಡೆಸಿದೆ. ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ತಗ್ಗು ಪ್ರದೇಶದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.

ಕೊಡಗಿನಲ್ಲೂ ಮಳೆ ಹೆಚ್ಚಾಗಿದ್ದು, ಸಾಕಷ್ಟು ಕಡೆ ಭೂಕುಸಿತಗಳಾಗಿವೆ. ಮಳೆಯಿಂದ ಇರ್ಪು, ಮಲ್ಲಳ್ಳಿ ಸೇರಿದಂತೆ ಅನೇಕ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿವೆ. ಶಿವಮೊಗ್ಗ, ಚಿಕ್ಕಮಗಳೂರಿನಲ್ಲೂ ಹಲವೆಡೆ ಮರ ಬಿದ್ದು, ಗುಡ್ಡ ಕುಸಿತದಿಂದ ರಸ್ತೆಗಳು ಬಂದ್ ಆಗಿವೆ. ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

error: Content is protected !!