ಬೆಂಗಳೂರು: ಜೂನ್ 21ರಿಂದ 16 ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಜಾರಿಗೊಳಿಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ 16 ಜಿಲ್ಲೆಗಳಲ್ಲಿ ಸೋಮವಾರದಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದ್ದು, 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸುತ್ತಿರುವುದಾಗಿ ತಿಳಿಸಿದರು.
ಎಲ್ಲಿ ಅನ್ ಲಾಕ್..?
ಬೆಳಗಾವಿ, ಉತ್ತರ ಕನ್ನಡ, ಬೆಂಗಳೂರು ನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ರಾಯಚೂರು, ಬಾಗಲಕೋಟೆ, ಮಂಡ್ಯ, ರಾಮನಗರ, ತುಮಕೂರು, ಗದಗ, ಕಲಬುರ್ಗಿ, ಹಾವೇರಿ, ಯಾದಗಿರಿ, ಬೀದರ್, ಕೋಲಾರ ಸೇರಿದಂತೆ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗುತ್ತಿದ್ದು, ಬೆಳಿಗ್ಗೆ 6ಗಂಟೆಯಿಂದ ಸಂಜೆ 5ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಈ ಜಿಲ್ಲೆಗಳಲ್ಲಿ ಲಾಕ್ ಡೌನ್..!
ಮೈಸೂರಿನಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇದ್ದು, ಈಗಿರುವ ಕಠಿಣ ಕ್ರಮ ಮುಂದುವರೆಯಲಿದೆ. ಹಾಸನ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ವಿಜಯಪುರ ಸೇರಿದಂತೆ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯಲಿದೆ.