ಮುಂಡಗೋಡ: ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ವಡಗಟ್ಟಾ-ಅಗಡಿ ರಸ್ತೆ ಬಂದ್ ಆಗಿದೆ. ಮುಂಡಗೋಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಅನ್ನದಾತರ ಆಕ್ರೋಶದ ಕಟ್ಟೆಯೊಡೆದಿದೆ.

ಆಗಿದ್ದೇನು..?
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ರೈತರು ಆಕ್ರೋಶಗೊಂಡಿದ್ದಾರೆ. ಈಗಾಗಲೇ ತಮ್ಮ ಗದ್ದೆಗಳಲ್ಲಿ ಬೀಜ ಬಿತ್ತಿ, ಇನ್ನೇನು ಮೊಳಕೆ ಒಡೆದು ಸಸಿಯಾಗುವ ಹಂತದಲ್ಲಿರುವಾಗಲೇ ಭಾರೀ ಮಳೆಯ ಕಾರಣಕ್ಕೆ ಇನ್ನಿಲ್ಲದ ಆತಂಕ ಶುರುವಾಗಿದೆ‌.

ಅರಶಿಣಗೇರಿ ಕೆರೆ ಕಾಲುವೆ ಫುಲ್‌.!
ಈ ಮದ್ಯೆ, ಅರಶಿಣಗೇರಿ ಕೆರೆಯಿಂದ ರೈತರ ಜಮೀನುಗಳಿಗೆ ಸಂಪರ್ಕಿಸೋ ಕಾಲುವೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯ ನೀರು ಹರಿದು ಬರುತ್ತಿದೆ. ಹಾಗೆ ಹರಿದು ಬರುವ ನೀರು ಹುನಗುಂದ ಗ್ರಾಮದ ದೇಶಪಾಂಡೆ ನಗರದಲ್ಲಿ ಬಂದು ನಿಲ್ಲುತ್ತಿದೆ. ಯಾಕಂದ್ರೆ, ರಸ್ತೆಗೆ ಅಡ್ಡಲಾಗಿ ಕಟ್ಟಿರೋ ಚಿಕ್ಕ ಸಿಡಿ ಸಂಪೂರ್ಣ ಕುಸಿತಗೊಂಡಿದೆ. ಆ ಕಾರಣಕ್ಕೆ ಕಾಲುವೆಯಿಂದ ಹರಿದು ಬರುವ ಅಪಾರ ಪ್ರಮಾಣದ ನೀರು ರೈತರ ಗದ್ದೆಗಳಿಗೆ ಹೊಕ್ಕಿದೆ. ಹೀಗಾಗಿ ರೈತರ ಜಮೀನುಗಳು ಅಕ್ಷರಶಃ ಕೆರೆಗಳಂತಾಗಿ ಮಾರ್ಪಟ್ಟಿವೆ. ಈ ಕಾರಣಕ್ಕಾಗಿ ರೈತರ ಆಕ್ರೋಶದ ಕಟ್ಟೆಯೊಡೆದಿದೆ.

ರೈತನ ಬೆಳೆ ಹಾನಿಗೆ ಯಾರು ಹೊಣೆ..?
ಕಷ್ಟಪಟ್ಟು ಬೆವರು ಹರಿಸಿ ದುಡಿದು ಬಿತ್ತಿದ್ದ ಬೀಜ ನೀರು ಪಾಲಾಗುವ ಆತಂಕ ಎದುರಾಗಿದೆ. ಹೀಗಾಗಿ, ಕಾಲುವೆಯ ನೀರು ಸರಾಗವಾಗಿ ಹೋಗಲು ಅಡ್ಡವಾಗಿದ್ದ ಪೈಪ್ ಒಡೆದು ಮುಚ್ಚಿ ಹೋದ ಕಾರಣ, ಆ ಪೈಪ್ ನ್ನು ಅಗೆದು ಮಣ್ಣು ತೆಗೆಯಲಾಗಿದೆ. ಹೀಗಾಗಿ ನೀರು ಸರಾಗವಾಗಿ ಹೋಗುವಂತೆ ಮಾಡಲಾಗಿದೆ. ಇನ್ನು ನಿನ್ನೆಯಿಂದಲೂ ಇಲ್ಲಿನ ರೈತರ ಗದ್ದೆಗಳಿಗೆ ನೀರು ಹೊಕ್ಕು ರೈತರಿಗೆ ಹಾನಿಯಾಗಿದೆ. ಹಾಗೆ ಆಗಿರೋ ಹಾನಿಗೆ ಪರಿಹಾರ ನೀಡಿ ಅಂತಾ ರೈತರು ಆಗ್ರಹಿಸ್ತಿದಾರೆ.

ರಸ್ತೆ ಬಂದ್..!
ಇನ್ನು, ಅನ್ನದಾತರು ಹೀಗೆ ರಸ್ತೆಯಲ್ಲಿ ಹುದುಗಿ ಹೋಗಿದ್ದ ಪೈಪ್ ಅಗೆದು ತೆಗೆದಿರೋ ಕಾರಣಕ್ಕೆ ವಡಗಟ್ಟಾ ಅಗಡಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಒಡೆದು, ಮುಚ್ಚಿ ಹೋಗಿದ್ದ ಪೈಪ್ ದುರಸ್ತಿ ಮಾಡದೇ ನಿರ್ಲಕ್ಷ ವಹಿಸಿದ್ದ ಅಧಿಕಾರಿಗಳಿಗೆ ಅನ್ನದಾತರೇ ಎಚ್ಚರಿಕೆಯ ಪಾಠ ಕಲಿಸಿದ್ದಾರೆ.

ಎಲ್ಲಿದ್ದೀರಿ PWD ಅಧಿಕಾರಿಗಳೇ..?
ಈ ಪ್ರಶ್ನೆ ಇಡೀ ಮುಂಡಗೋಡ ತಾಲೂಕಿನ ಜನ ಕೇಳ್ತಿದಾರೆ. ಯಾಕಂದ್ರೆ, ಕಳೆದ ಒಂದೂವರೇ ವರ್ಷಗಳಿಂದ ಈ ವಡಗಟ್ಟಾ ಅಗಡಿ ರಸ್ತೆಯ ಗೋಳು ಈಗಾಗಲೇ ಎಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುವ ಜನ ಹಿಡಿಶಾಪ ಹಾಕಿಯೇ ಸಂಚರಿಸುವಂತಾಗಿದೆ. ಅದ್ರಲ್ಲೂ ದೇಶಪಾಂಡೆ ನಗರದಲ್ಲಿ ಹೀಗೆ ಪೈಪ್ ಒಡೆದು ಬಿದ್ದಿರೊ ಗುಂಡಿಯಲ್ಲಿ ಅದೇಷ್ಟೊ ವಾಹನ ಸವಾರರು ಎದ್ದು,ಬಿದ್ದು ಹೋಗಿದ್ದಾರೆ. ಇಷ್ಟೇಲ್ಲ ಆದ್ರೂ ಯಾವೊಬ್ಬ ಅಧಿಕಾರಿಗಳೂ ಈ ಬಗ್ಗೆ ಗಮನ ಹರಿಸಿಲ್ಲ.

ಈಗ ವಡಗಟ್ಟಾ ಅಗಡಿ ರಸ್ತೆ ಬಂದ್ ಆಗಿದೆ, ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ..? ಕಾದು ನೋಡಬೇಕಿದೆ.

 

error: Content is protected !!