ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ. ಭಾರೀ ಗಾಳಿ ಮಳೆಗೆ ಮಲೆನಾಡು ಭಾಗ ಸಂಪೂರ್ಣ ತತ್ತರಿಸಿದೆ. ಹೀಗಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಎಲ್ಲೇಲ್ಲಿ..?
ಜಿಲ್ಲೆಯ ಸಿದ್ದಾಪುರ, ಶಿರಸಿ, ಯಲ್ಲಾಪುರ, ದಾಂಡೇಲಿ, ಮುಂಡಗೋಡ ಭಾಗಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿಲ್ಲ. ಕಳೆದ 3 ದಿನಗಳಲ್ಲಿ ಸಿದ್ದಾಪುರ ತಾಲೂಕು ಒಂದರಲ್ಲೇ ಸುಮಾರು 375 ಮಿಲಿಮಿಟರ್ ಮಳೆ ದಾಖಲಾಗಿದೆ. ಅದ್ರಲ್ಲೂ ನಿನ್ನೆ ರಾತ್ರಿಯಿಂದ ಸಿದ್ದಾಪುರದಲ್ಲಿ 142.4 ಮಿಲಿಮಿಟರ್ ಮಳೆ ದಾಖಲಾಗಿದೆ.
ಧರೆಗುರುಳಿದ ವಿದ್ಯುತ್ ಕಂಬಗಳು..!
ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮುಂದುವರೆದ ಭಾರೀ ಮಳೆ ಗಾಳಿಯ ಪರಿಣಾಮವಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಗಾಳಿ ಮಳೆಯ ಅಬ್ಬರಕ್ಕೆ ಹಲವು ಕಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಹೀಗಾಗಿ, ಬಹುತೇಕ ಕಡೆ ವಿದ್ಯುತ್ ಸಂಪರ್ಕ ಇಲ್ಲದಾಗಿದೆ.
ಕೆರೆಯಂತಾಗಿವೆ ಗದ್ದೆಗಳು..!
ಇನ್ನು ಭಾರೀ ಮಳೆಯ ಕಾರಣಕ್ಕೆ ಜಿಲ್ಲೆಯ ಮುಂಡಗೋಡ, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ ಭಾಗಗಳಲ್ಲಿ ಅನ್ನದಾತನಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ. ಈಗಷ್ಟೇ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದ ರೈತನಿಗೆ ಭಾರೀ ಮಳೆಯಿಂದ ಆತಂಕ ಶುರುವಾಗಿದೆ. ಇನ್ನು ಗದ್ದೆಗಳು ಮಳೆಯ ನೀರಿನಿಂದ ಆವೃತವಾಗಿದ್ದು ಅಕ್ಷರಶಃ ಕೆರೆಯಂತಾಗಿವೆ.
ಹಾನಿಯಾಗಿದ್ದೇಷ್ಟು..?
ಇನ್ನು ಜಿಲ್ಲೆಯ ಸಿದ್ದಾಪುರದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು, ಕಳೆದ 3 ದಿನಗಳಿಂದ ಮಳೆಯ ಅಬ್ಬರದ ಪ್ರಮಾಣ ಶತಕದ ಗಡಿ ದಾಟಿದೆ. ಪರಿಣಾಮ, ಸಿದ್ದಾಪುರ ತಾಲೂಕಿನ ಬೇಡ್ಕಣಿಯಲ್ಲಿ ಭೂಮಿ ಬಿರುಕು ಬಿಟ್ಟಿದೆ. ಹೀಗಾಗಿ, ಬೇಡ್ಕಣಿಯ ಆಂಜನೇಯ ದೇವಾಲಯದ ಸುತ್ತ ಕಟ್ಟಿದ್ದ ಕಾಂಪೌಂಡ್ ಗೋಡೆ ಕುಸಿದು ಚರಂಡಿಯೊಳಗೆ ಬಿದ್ದಿದೆ.
ಇನ್ನು ಮುಂಡಗೋಡ ತಾಲೂಕಿನ ಹಲವು ಕಡೆ ಮಳೆಯ ಅಬ್ಬರಕ್ಕೆ ಹಾನಿಯಾಗಿದೆ. ತಾಲೂಕಿನ ಸನವಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ಮೇಲೆ ಮನೆಯ ಮೇಲ್ಚಾವಣಿ ಬಿದ್ದು ಟ್ರಾಕ್ಟರ್ ಸಂಪೂರ್ಣ ಜಖಂಗೊಂಡಿದೆ.