ಮುಂಡಗೋಡ: ಪಟ್ಟಣದಲ್ಲಿ ಮಳೆ ಬಂದ್ರೆ ಸಾಕು ಬಂಕಾಪುರ ರಸ್ತೆಯ ಜನ ಅಂಗೈಯಲ್ಲಿ ಜೀವ ಹಿಡಿದು ಬದುಕುವ ಸ್ಥಿತಿ ಇದೆ. ಪ್ರತೀ ವರ್ಷವೂ ಇಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ಹಿಡಿಶಾಪ ಹಾಕುವುದು ಬಿಟ್ಟರೆ ಬೇರೆ ಏನೂ ಮಾಡಲು ಸಾಧ್ಯವಾಗ್ತಿಲ್ಲ.
ಹೌದು ನಿನ್ನೆಯಿಂದ ತಾಲೂಕಿನಲ್ಲಿ ಭಾರೀ ಮಳೆಯಾಗ್ತಿದೆ. ಮುಂಡಗೋಡ ಪಟ್ಟಣದಲ್ಲೂ ಮಳೆರಾಯನ ಅರ್ಭಟ ನಿಂತಿಲ್ಲ. ಹೀಗಾಗಿ ಮಳೆರಾಯ ಮುಂಡಗೋಡ ಮಂದಿಗೆ ಇನ್ನಿಲ್ಲದ ಕಿರಿಕಿರಿ ತಂದಿಟ್ಟಿದ್ದಾನೆ.
ಅದ್ರಲ್ಲೂ ಪಟ್ಟಣದ ಬಂಕಾಪುರ ರಸ್ತೆಯ ಜನರ ಗೋಳು ಹೇಳತೀರದ್ದು. ಯಾಕಂದ್ರೆ ಇಲ್ಲಿ ಒಂದು ಜೋರು ಮಳೆ ಬಂದ್ರೆ ಸಾಕು ರಸ್ತೆಯೆಲ್ಲ ಕೆರೆಯಂತಾಗತ್ತೆ. ರಸ್ತೆಯಲ್ಲಿನ ಮಳೆಯ ನೀರು ಮನೆಗಳಿಗೆ ನುಗ್ಗತ್ತೆ, ಇನ್ನು ಈ ರಸ್ತೆಯಲ್ಲಿ ಸಂಚರಿಸೋ ವಾಹನ ಸವಾರರ ಪಾಡು ದೇವರಿಗೇ ಪ್ರೀತಿ. ಹೀಗಾಗಿ ಎದ್ನೊ ಬಿದ್ನೊ ಅಂತಾ ಅಂಗೈಯಲ್ಲಿ ಜೀವ ಹಿಡಿದು ಓಡಾಡುವ ಪರಿಸ್ಥಿತಿ ಇಲ್ಲಿನ ನಾಗರೀಕರದ್ದು.
ಅಯ್ಯೋ ಇದು ಯಾವಾಗ್ಲೂ ಇದ್ದಿದ್ದೇ ಗೋಳು..!
ಅಂದಹಾಗೆ, ಇದು ನಿನ್ನೆ ಮೊನ್ನೆಯ ಪ್ರಶ್ನೆಯಲ್ಲ. ಪ್ರತೀ ವರ್ಷವೂ ಮಳೆಗಾಲದಲ್ಲಿ ಇಲ್ಲಿನ ಜನ್ರ ಗೋಳು ಇದು. ಯಾವಾಗ ಮಳೆ ಬರತ್ತೊ ಅವಾಗ ಈ ರಸ್ತೆ ಅಕ್ಷರಶಃ ಕೆರೆಯಂತಾಗತ್ತೆ. ಮೊಣಕಾಲಿನವರೆಗೂ ನೀರು ತುಂಬಿಕೊಂಡು ವಾಹನ ಸವಾರರಿರಲಿ, ಯಾವೊಬ್ಬ ನರಪಿಳ್ಳೆಗೂ ನಡೆದಾಡಲೂ ಆಗದ ಸ್ಥಿತಿ ನಿರ್ಮಾಣವಾಗಿರತ್ತೆ. ಹೀಗಾಗಿ, ಎಷ್ಟೂ ಅಂತಾ ಹೇಳೋದಪ್ಪ ಇಲ್ಲಿನ ಅಧಿಕಾರಿಗಳಿಗೆ ಅಂತಾ ಜನ ರೋಸಿ ಹೋಗಿದ್ದಾರೆ.
ಇನ್ನು ಬಂಕಾಪುರ ರಸ್ತೆಯ ಅಕ್ಕಪಕ್ಕದ ಮನೆಗಳಿಗೂ ನುಗ್ಗುವ ಈ ಮಳೆ ನೀರು, ಮನೆ ಮಂದಿಗೇಲ್ಲ ಕಿರಿಕಿರಿ ಉಂಟು ಮಾಡತ್ತೆ. ಸಾಕಷ್ಟು ಪರದಾಡುವ ಸ್ಥಿತಿ ನಿರ್ಮಿಸಿ ಬಿಡತ್ತೆ. ಎಷ್ಟೋ ಅಂಗಡಿಗಳಿಗೆ ನುಗ್ಗುವ ನೀರು ಹೈರಾಣಾಗಿಸುತ್ತೆ. ಹೀಗಾಗಿ ಎಲ್ಲೀದ್ದೀರಪ್ಪಾ ಅಧಿಕಾರಿಗಳೇ..? ಎನ್ನುವ ಆಕ್ರೋಶದ ಪ್ರಶ್ನೆ ಎಬ್ಬಿಸತ್ತೆ.
ಏನು ಮಾಡ್ತಿದಾರೆ ಅಧಿಕಾರಿಗಳು..?
ಪ್ರತೀ ವರ್ಷವೂ ಮಳೆ ಬಂದಾಗ ಇಲ್ಲಿನ ನಿವಾಸಿಗಳಿಗೆ ಇಷ್ಟೇಲ್ಲ ಕಿರಿ ಕಿರಿ ಮಾಡಿದ್ರೂ ಯಾವೊಬ್ಬ ಅಧಿಕಾರಿಗಳೂ ಈ ಬಗ್ಗೆ ಶಾಶ್ವತ ಕ್ರಮಕ್ಕೆ ಮುಂದಾಗ್ತಿಲ್ಲ ಅನ್ನೋದು ಇಲ್ಲಿನ ನಿವಾಸಿಗಳ ಆರೋಪ.
ಮೊನ್ನೆ ತಾನೇ ಶಿರಸಿ ಉಪವಿಭಾಗಾಧಿಕಾರಿ ಮಳೆಗಾಲದ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಇಲ್ಲಿನ ಅಧಿಕಾರಿಗಳ ಜೊತೆ ಸಭೆ ಮಾಡಿ ಹೋಗಿದ್ರು. ಆದ್ರೆ ಮಳೆಗಾಲ ಇನ್ನೂ ಪೂರ್ತಿಯಾಗಿ ಕಾಲಿಟ್ಟಿಲ್ಲ, ಅಷ್ಟರಲ್ಲೇ ಇಷ್ಟೇಲ್ಲ ಅವಾಂತರಗಳು ಎದುರಾಗುತ್ತಿವೆ.
ಯಾಕೆ ಈ ಸಮಸ್ಯೆ..?
ಅಷ್ಟಕ್ಕೂ ಬಂಕಾಪುರ ರಸ್ತೆಯಲ್ಲಿ ಮಳೆ ಬಂದಾಗ ಇಡಿ ಮಳೆಯ ನೀರು ರಸ್ತೆಯ ಮೇಲೆ ನಿಂತು, ಇಷ್ಟೇಲ್ಲ ರಂಪಾಟ ಆಗಲು ಕಾರಣವಾದ್ರೂ ಏನು..? ಇದಕ್ಕೆಲ್ಲ ಉತ್ತರ ಬಹುಶಃ ಸಂಬಂಧಪಟ್ಟ ಅಧಿಕಾರಿಗಳಿಗೂ ಗೊತ್ತಿಲ್ಲವೇನೋ..? ಯಾಕಂದ್ರೆ, ಸಮಸ್ಯೆ ಬಂದಾಗಲಷ್ಟೇ ಬಂದು ನೋಡಿಕೊಂಡು ಭರವಸೆ ನೀಡಿ ಹೋಗುವ ಚಾಳಿ ಮುಂದುವರೆದಿದೆ. ಬಿಟ್ರೆ, ಅದು ಯಾಕೆ ಹಾಗಾಗ್ತಿದೆ..? ಕಾರಣವೇನು..? ಏನು ಕ್ರಮ ಕೈಗೊಂಡ್ರೆ ಸಮಸ್ಯೆ ಶಾಶ್ವತವಾಗಿ ಬಗೆಹರಿಯತ್ತೆ ಅನ್ನೋದನ್ನ ಕನಿಷ್ಟ ಯಾರೂ ಯೋಚಿಸ್ತಿಲ್ಲವೇನೋ..?
ಜನಪರ ತಹಶೀಲ್ದಾರರೇ ಗಮನಿಸಿ..!
ನಿಜ, ಮುಂಡಗೋಡ ಮಟ್ಟಿಗೆ ಜನಪರವಾಗಿ ಕೆಲಸ ಮಾಡುವ ತಹಶೀಲ್ದಾರರವರು ಸಿಕ್ಕಿದ್ದು ಇದೇ ಮೊದಲು ಅನ್ನಬಹುದೇನೋ. ಶ್ರೀಧರ್ ಮುಂದಲಮನಿ ಅನ್ನೋ ಉತ್ಸಾಹಿ ತಹಶೀಲ್ದಾರರು ನಮ್ಮ ಮುಂಡಗೋಡಿಗೆ ಸಿಕ್ಕಿದ್ದು ನಮ್ಮೇಲ್ಲರ ಪುಣ್ಯ ಅಂತಾ ಇಡೀ ತಾಲೂಕಿನ ಮಂದಿ ಭಾವಿಸಿದ್ದಾರೆ. ಅವ್ರೂ ಕೂಡ ಹಗಲು, ರಾತ್ರಿ ತಾಲೂಕಿನ ಏಳ್ಗೆಗಾಗಿ ಶ್ರಮಿಸ್ತಿದಾರೆ. ಆದ್ರೆ ಇಂತಹ ಸಮಸ್ಯೆಗಳು ಬಹುತೇಕ ಅವ್ರ ಎದುರು ಹೋಗುವುದೇ ಇಲ್ಲ ಅನಿಸತ್ತೆ. ಹೋಗಿದ್ದಿದ್ರೆ ಇಂತಹ ಸಮಸ್ಯೆಗಳಿಗೆ ಯಾವತ್ತೋ ಮುಕ್ತಿ ಸಿಕ್ಕಿರೋದು.
ತಹಶೀಲ್ದಾರ್ ಸಾಹೇಬರೇ ದಯವಿಟ್ಟು ಒಮ್ಮೆ ಗಮನಿಸಿ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿ. ಇದು ಇಡೀ ಮುಂಡಗೋಡಿಗರ ಒಕ್ಕೊರಲು.