ಬಿಜೆಪಿಗೆ ಪಾಕಿಸ್ತಾನದ ಹೆಸ್ರು ಹೇಳದಿದ್ರೆ ರಾಜಕಾರಣ ಮಾಡಲು ಆಗಲ್ಲ: ಬಿ.ಕೆ.ಹರಿಪ್ರಸಾದ್ ಟೀಕೆ..!

ಕಾರವಾರ:ಬಿಜೆಪಿಗೆ ಪಾಕಿಸ್ತಾನದ ಹೆಸರು ಹೇಳದಿದ್ದರೆ ಒಂದು ದಿನವೂ ರಾಜಕಾರಣ ಮಾಡಲಾಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.

ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ನ ಪ್ರಮುಖರಾದ ಮಾಜಿ ಸಿಎಂ ಸಿದ್ದರಾಮಯ್ಯ, ದಿಗ್ವಿಜಯ ಸಿಂಗ್, ಜಮೀರ್ ಇವರು ಯಾರೂ ಕೂಡ ಪಾಕಿಸ್ತಾನಕ್ಕೆ ಹೋಗಿಲ್ಲ. ಅಲ್ಲದೇ ಅಲ್ಲಿ ಹೋಗೋ ಮನಸ್ಸೂ ಕೂಡ ಅವರಿಗಿಲ್ಲ. ಆದರೆ ಪಾಕಿಸ್ತಾನದ ಆಮಂತ್ರಣವೇ ಇಲ್ಲದೇ ಅಲ್ಲಿ ಹೋಗಿ ಬಿರಿಯಾನಿ ತಿಂದು ಬಂದವರು ಪ್ರಧಾನಿ ಮೋದಿ. ಇದಕ್ಕಿಂತ ಹೆಚ್ಚಿನ ಅವಮಾನ ದೇಶಕ್ಕಿಲ್ಲ ಎಂದರು.

ಬಿಜೆಪಿಯವರು ಮನಮೋಹನ್ ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎಂದರು. ಆದರೆ ಎಲ್ಲಿಯವರೆಗೆ ಉಗ್ರವಾದ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲ ಎಂದು ಖಡಾ ಖಂಡಿತವಾಗಿ ಹೇಳಿದವರು ಮನಮೋಹನ್ ಸಿಂಗ್. ಆದರೆ 56 ಇಂಚಿನ ಎದೆ ಇರುವವರು ಮುಷರಫ್ ಮೊಮ್ಮಗಳ ಜನ್ಮ ದಿನಾಚರಣೆಗೆ ಹೋಗಿದ್ದರು ಎಂದು ಟೀಕಿಸಿದರು.

ಇನ್ನು ಇದುವರೆಗೆ 300 ರೈತರು ಸತ್ತಿದ್ದಾರೆ. ಲಕ್ಷಾಂತರ ಜನ ಕೋವಿಡ್ಗೆ ಬಲಿಯಾಗಿದ್ದಾರೆ. ಯಾರಿಗಾದರೂ ಒಂದು ದಿನ ಕಣ್ಣೀರು ಸುರಿಸಿದಾರೆಯಾ ಎಂದು ಪ್ರಶ್ನಿಸಿದ ಅವರು ಅಂಬಾನಿಗೆ ಮೊಮ್ಮಗಳು ಹುಟ್ಟಿದ್ದಾಳೆಂದು ನೋಡಲು ಮುಂಬೈಗೆ ಹೋಗಿದ್ದ ಇಂತಹ ಪ್ರಧಾನಿ ನಮಗೆ ಬೇಕೆ ಎಂದು ಕಿಡಿ ಕಾರಿದರು.

ಇದೇ ಮೋದಿಯವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹೀಯಾಳಿಸಿದ್ದರು. ಮೌನಿ ಬಾಬಾ, ಪೆಟ್ರೋಲ್ ಬೆಲೆ ಏರುತ್ತಿದ್ದರೂ ಕೇಂದ್ರದಲ್ಲಿ ಅಸಮರ್ಥ ಸರ್ಕಾರವಿದೆ ಎಂದಿದ್ದರು. ಸ್ಮøತಿ ಇರಾನಿ ಬದನೆಕಾಯಿ, ಸೋರೆಕಾಯಿ ಹಾರಗಳನ್ನು ಹಾಕಿಕೊಂಡು ಬೆಲೆ ಏರಿಕೆ ಎಂದು ಪ್ರತಿಭಟನೆ ಮಾಡಿದ್ದರು. ಪ್ರತಿಯೊಬ್ಬರೂ ಅಂದು ಪ್ರತಿಭಟನೆ ಮಾಡಿದ್ದರು.

ಆದರೆ ಈಗ, ರೂಪಾಯಿ ಬೆಲೆ ಕುಸಿಯುತ್ತಿದೆ ಎಂದು ಕೇಳಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬೆಲೆ ಏರುತ್ತಿದೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಪೆಟ್ರೋಲ್ ಬೆಲೆ ಏರುತ್ತಿದೆ ಎಂದರೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನಿರ್ಧಾರವಾಗುತ್ತೆ ಎಂದು ಹೇಳುತ್ತಾರೆ. ಬೆಲೆ ಏರಿಕೆ ತಡೆಯಲಾಗಿಲ್ಲ ಎಂದರೆ ಅದಕ್ಕೆ ನೆಹರು, ಕಾಂಗ್ರೆಸ್ ಕಾರಣ ಎನ್ನುತ್ತಾರೆ. ಈ ಮಟ್ಟದಲ್ಲಿ ಸರ್ಕಾರ ಬೇಜವಾಬ್ದಾರಿಯಲ್ಲಿದೆ. ಅದಕ್ಕೆ ಈ ಸರ್ಕಾರದ ಅಂತ್ಯಕ್ರಿಯೆ ಬೇಗ ಆಗಬೇಕಿದೆ ಎಂದರು.

ಬಿಜೆಪಿಯ ಬದಲಾವಣೆಗಳನ್ನು ಅವರ ಪಕ್ಷದಲ್ಲಿದ್ದವರು ಯಾರೂ ಮಾಡುವುದಿಲ್ಲ. ಬಿಜೆಪಿಯ ಅಧ್ಯಕ್ಷನನ್ನು ನೇಮಕ ಮಾಡುವುದು ನಾಗಪುರ ಯೂನಿವರ್ಸಿಟಿ (ಆರ್ಎಸ್ಎಸ್). ಬಿಜೆಪಿ ಎನ್ನುವುದು ಆರ್ಎಸ್ಎಸ್ನ ಒಂದು ರಾಜಕೀಯ ಘಟಕ. ಯಾರು ಅಧ್ಯಕ್ಷರಾಗಬೇಕು, ಯಾರು ಪದಾಧಿಕಾರಿಗಳಾಗಬೇಕು ಎನ್ನುವುದನ್ನು ಬಿಜೆಪಿ ತೀರ್ಮಾನ ಮಾಡುವುದಿಲ್ಲ. ಸಂಘದ ಸಂಚಾಲಕರು ಅದನ್ನು ತೀರ್ಮಾನ ಮಾಡುತ್ತಾರೆ. ಅವರ ನಿರ್ದೇಶನದ ಮೇರೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಬದಲಾವಣೆ ಆಗುತ್ತದೆ. ಕಾಂಗ್ರೆಸ್ಸಿನಲ್ಲಿ ಹಾಗಲ್ಲ. ಸುಮಾರು 11 ಸಾವಿರ ಪ್ರದೇಶ ಕಾಂಗ್ರೆಸ್ ಕಮಿಟಿ ಸದಸ್ಯರಿದ್ದಾರೆ. ಇವರ ಅನಿಸಿಕೆಯಲ್ಲಿ ನಾವು ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ ಎಂದರು.

ವರದಿಗಾರರಿಂದ ದೇಶ ಉಳಿದಿದೆ.

ಹೆಚ್ಚಿನ ಮಾಧ್ಯಮಗಳ ಮಾಲೀಕರು ಪೆಟ್ರೋಲ್ ಕಂಪನಿಗಳ ಮಾಲೀಕರಾಗಿದ್ದಾರೆ. ಹೀಗಾಗಿ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಿದ ಸಂದರ್ಭಗಳಲ್ಲಿ ಅದು ಯಾವುದೇ ಮಾಧ್ಯಮಗಳಲ್ಲಿ ಬರದಂತೆ ನೋಡಿಕೊಳ್ಳಲಾಗುತ್ತದೆ. ದೇಶ ಉಳಿದಿರುವುದು ವರದಿಗಾರರಿಂದ. ಇವರನ್ನು ಯಾರೂ ಖರೀದಿ ಮಾಡಲಿಕ್ಕಾಗಿಲ್ಲ ಎಂದು ಖುಷಿಯಾಗುತ್ತದೆ. ಆದರೆ ಕಂಪನಿಗಳನ್ನೆಲ್ಲ ಖರೀದಿ ಮಾಡಿದ್ದಾರೆ. ನಾವು ಹಲವಾರು ಕಡೆ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುವಾಗ ಮಾಧ್ಯಮಗಳ ಮಾಲೀಕರು ಇದಕ್ಕೆ ಅಡಚಣೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕ ಸತೀಶ ಸೈಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ವಕ್ತಾರ ಕೆ. ಶಂಭು ಶೆಟ್ಟಿ, ದಿಲೀಪ್ ನಾಯ್ಕ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.

error: Content is protected !!