ಮುಂಡಗೋಡ: ವೈದ್ಯ ನಾರಾಯಣೋ ಹರಿಃ ಅಂತಾರೆ, ಅದ್ರಂತೆ ಮುಂಡಗೋಡ ತಾಲೂಕಿನಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆ ತಮ್ಮ ಜೀವ ಪಣಕ್ಕಿಟ್ಟು ಹಗಲು ರಾತ್ರಿ ಎನ್ನದೇ ಸೋಂಕಿತರ ಸೇವೆಯಲ್ಲಿ ಬಹುತೇಕ ವೈದ್ಯರುಗಳು ನಿರತರಾಗಿದ್ದಾರೆ.
ಇನ್ನು ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್ ಇಂಗಳೆ ಹಾಗೂ ಮತ್ತವರ ತಂಡ, ತಾಲೂಕಿನಲ್ಲಿ ಕೊರೋನಾ ನಿಯಂತ್ರಿಸುವಲ್ಲಿ ಇನ್ನಿಲ್ಲದ ಪರಿಶ್ರಮ ಪಟ್ಟಿದ್ದಾರೆ, ಪಡುತ್ತಿದ್ದಾರೆ.. ಮಹಾಮಾರಿಯನ್ನು ಕಟ್ಟಿ ಹಾಕುವಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದಾರೆ. ಆ ಕಾರಣಕ್ಕಾಗಿ ಪಬ್ಲಿಕ್ ಫಸ್ಟ್ ನ್ಯೂಸ್ ಟೀಂ ವತಿಯಿಂದ ತಾಲೂಕಿನ ವೈದ್ಯ ದೇವರುಗಳಿಗೆ ಹ್ಯಾಟ್ಸ್ ಅಪ್..
ಆದ್ರೆ ಈ ನಡುವೆಯೇ ತಾಲೂಕಿನಲ್ಲೊಂದು ಯಡವಟ್ಟಿನ ಘಟನೆ ನಡೆದಿದೆ. ಅದನ್ನ ನಾವಿಲ್ಲಿ ಹೇಳಲೇ ಬೇಕಿದೆ. ಯಾಕಂದ್ರೆ ಖುದ್ದು ನೊಂದವರೇ ಪಬ್ಲಿಕ್ ಫಸ್ಟ್ ನ್ಯೂಸ್ ಎದುರು ನೋವು ತೋಡಿಕೊಂಡಿದ್ದಾರೆ. ಹಾಗಾದ್ರೆ ಏನದು..?
ಅವನೊಬ್ಬ ಗುತ್ತಿಗೆ ವೈದ್ಯ..!
ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸ್ತಿರೋ ವೈದ್ಯರೊಬ್ಬರು ಯಡವಟ್ಟು ಮಾಡಿ, ಒಂದು ಬಡ ಕುಟುಂಬ ಕಣ್ಣೀರಲ್ಲಿ ಕೈದೊಳೆಯುವಂತೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ವೈದ್ಯನ ನಿರ್ಲಕ್ಷ ಹಾಗೂ ಬೇಜವಾಬ್ದಾರಿಯಿಂದ, ಐದೂವರೇ ವರ್ಷದ ಪುಟ್ಟ ಕಂದಮ್ಮ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಅಂದಹಾಗೆ, ಇದು ಸರ್ಕಾರಿ ವೈದ್ಯನ ಖಾಸಗಿ ದರ್ಬಾರ್..!
ನೊಂದ ಕುಟುಂಬಸ್ಥರು ಹೇಳೊ ಪ್ರಕಾರ, ಕಳೆದ ಸೋಮವಾರ ಅಂದ್ರೆ ಜೂನ್ 7 ನೇ ತಾರೀಖು, ಮುಂಡಗೋಡ ಸಮೀಪದಲ್ಲೇ ಇರುವ ಒಂದು ಪುಟ್ಟ ಗ್ರಾಮದಲ್ಲಿ ಐದೂವರೆ ವರ್ಷದ ಬಾಲಕಿಯೊಬ್ಬಳು ಜ್ಯೂಸ್ ಅಂತಾ ಭಾವಿಸಿ ಆಕಸ್ಮಿಕವಾಗಿ ತಿಳಿಯದೇ ಕಳೆನಾಶಕ ಕುಡಿದಿದ್ದಾಳೆ. ಹೀಗಾಗಿ ತಕ್ಷಣವೇ ಪೋಷಕರು ಮುಂಡಗೋಡಿನಲ್ಲಿ ಖಾಸಗಿ ಕ್ಲಿನಿಕ್ ನಡೆಸ್ತಿರೋ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರ ಬಳಿ ಬಾಲಕಿಯನ್ನ ಚಿಕಿತ್ಸೆಗಾಗಿ ಕರೆದು ತಂದಿದ್ದಾರೆ.
ಈ ವೇಳೆ ಆ ಡಾಕ್ಟರ್ ಬಾಲಕಿಗೆ ಡ್ರಿಪ್ಸ್ ಹಾಕಿ, ಚಿಕಿತ್ಸೆ ನೀಡಿದ್ದಾನೆ. ಅಂದಹಾಗೆ, ಪಾಲಕರು, ಡಾಕ್ಟರ್ ಹತ್ರ ಇದ್ದ ಎಲ್ಲಾ ಸಂಗತಿಗಳನ್ನೂ ಹೇಳಿದ್ದಾರೆ. ನಮ್ಮ ಮಗಳು ಜ್ಯೂಸ್ ಅಂತಾ ತಿಳಿದು ಕಳೆನಾಶಕ ದ್ರಾವಣ ಸೇವಿಸಿದ್ದಾಳೆ ಅನ್ನೋ ಎಲ್ಲ ಸಂಗತಿಗಳನ್ನೂ ಹೇಳಿದ್ದರು ಎನ್ನಲಾಗಿದೆ.
ನಿಜ ಅಂದ್ರೆ ಪುಟ್ಟ ಬಾಲಕಿಗೆ ಆ ವೈದ್ಯ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಸಂಬಂಧಿಸಿದ ಬೇರೆ ವೈದ್ಯರ ಬಳಿ ಕಳಿಸಬೇಕಿತ್ತು. ಆದ್ರೆ ಆ ವೈದ್ಯ ತನಗಿಷ್ಟ ಬಂದ ಚಿಕಿತ್ಸೆ ನೀಡಿ ಬಾಲಕಿಯನ್ನ ವಾಪಸ್ ಮನೆಗೆ ಕಳಿಸಿದ್ದಾನೆ. ಡಾಕ್ಟರ್ ಅಣತಿಯಂತೆ ಆ ನಂತರದಲ್ಲಿ ಬಾಲಕಿಯನ್ನ ಪಾಲಕರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಗೆ ಬಂದ ನಂತರ ಬಾಲಕಿಗೆ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ತೀವ್ರ ತರದಲ್ಲಿ ಸಮಸ್ಯೆ ಎದುರಾದಾಗ ಮತ್ತೆ ವಾಪಸು ಅದೇ ವೈದ್ಯನ ಬಳಿ ಕರೆದು ತಂದಿದ್ದಾರೆ.
ವಿಪರ್ಯಾಸ ಅಂದ್ರೆ ಆ ಹೊತ್ತಿನಲ್ಲೂ ಕೂಡ ಆ ವೈದ್ಯ ಮಹಾಶಯ, ಈ ಬಾಲಕಿಗೆ ಇಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಬೇರೆಡೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಿರಿ ಅಂತಾ ಹೇಳಲೇ ಇಲ್ಲವಂತೆ, ಬದಲಾಗಿ ಆತನೇ ಮತ್ತೆ ಚಿಕಿತ್ಸೆ ನೀಡಿ “ಏನೂ ಆಗಲ್ಲರೀ, ಆರಾಮಾಗ್ತಾಳೆ ಅಂತಾ ಭರವಸೆ ನೀಡಿ ಮತ್ತೆ ಮನೆಗೆ ಕಳಿಸಿದ್ದಾನೆ.
ಹಾಗೆ, ಮಂಗಳವಾರವೂ ಬಾಲಕಿಗೆ ಮತ್ತೆ ಚಿಕಿತ್ಸೆ ನೀಡಿದ್ದಾನೆ. ದುರಂತ ಅಂದ್ರೆ, ಬಾಲಕಿಯ ಆರೋಗ್ಯ ಹದಗೆಡುತ್ತಲೇ ಹೋಗಿದೆ.
ಹೀಗಾಗಿ, ಆತಂಕಗೊಂಡ ಪಾಲಕರಿಗೆ ಆ ಹೊತ್ತು ಏನು ಮಾಡಬೇಕು ಅಂತಾನೇ ಅರ್ಥವಾಗಿಲ್ಲ. ಹೀಗಾಗಿ, ಮತ್ತೆ ಬುಧವಾರ ಬಾಲಕಿಯನ್ನು ಮುಂಡಗೋಡಿನ ಮತ್ತೊಂದು ಖಾಸಗಿ ಆಸ್ಪತ್ರೆ ವೈದ್ಯರ ಬಳಿ ಕರದೊಯ್ದಿದ್ದಾರೆ. ನಡೆದ ಘಟನೆಯ ಸಂಪೂರ್ಣ ವಿವರವನ್ನು ಆ ವೈದ್ಯರಿಗೆ ಹೇಳಿದ್ದಾರೆ. ಆಗ ಆ ಪ್ರತಿಷ್ಟಿತ ಹಾಗೂ ಮುಂಡಗೋಡಿನ ಹಿರಿಯ ವೈದ್ಯರಾದ ಅವ್ರು, ನೀವು ಮೊದಲು ಬಾಲಕಿಯನ್ನ ಹುಬ್ಬಳ್ಳಿಯ ಕಿಮ್ಸ್ ಗೆ ಕರೆದುಕೊಂಡು ಹೋಗಿ, ಬಾಲಕಿಯನ್ನು ಸೋಮವಾರ ಘಟನೆ ನಡೆದ ತಕ್ಷಣವೇ ಕಿಮ್ಸ್ ಗೆ ಕರೆದುಕೊಂಡು ಹೋಗಬೇಕಿತ್ತು, ಆದ್ರೆ ಆ ವೈದ್ಯರು ಯಾಕೆ ಕಳಿಸಲಿಲ್ಲ..? ಬಾಲಕಿ ಕಳೆನಾಶಕದಂತಹ ವಿಷಕಾರಿ ದ್ರಾವಣ ಕುಡಿದು ಕ್ರಿಟಿಕಲ್ ಕಂಡೀಷನ್ ನಲ್ಲಿ ಇದ್ದಾಗಲೂ ಅವಳಿಗೆ ಸೂಕ್ತ ಹೆಚ್ಚಿನ ಚಿಕಿತ್ಸೆಗೆ ಯಾಕೆ ಕಳಿಸಿಲ್ಲ..? ಕಳೆನಾಶಕ ಸೇವಿಸಿ ಮೂರು ದಿನ ಆಗಿ ಹೋಗಿದೆ ಅಂತಾ ತರಾಟೆಗೆ ಪಡೆದಿದ್ದಾರೆ.
ಪಾಪ, ಹಳ್ಳಿಯ ಮುಗ್ದ ಪಾಲಕರಿಗೆ ಅದೇಲ್ಲ ಗೊತ್ತಾಗೋದಾದ್ರೂ ಹೇಗೆ ಅಲ್ಲವಾ..? ಹೀಗಾಗಿ, ತಕ್ಷಣವೇ ಬಾಲಕಿಯನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಸದ್ಯ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರೋ ಬಾಲಕಿ ಬೇಗ ಗುಣಮುಖವಾಗಬೇಕಿದೆ. ಇದು ನಮ್ಮೇಲ್ಲರ ಹಾರೈಕೆ.
ಅಂದಹಾಗೆ, ಇದೇಲ್ಲ ಸದ್ಯ ಆಸ್ಪತ್ರೆಯಲ್ಲಿರೊ ಬಾಲಕಿಯ ಪಾಲಕರು ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ತೋಡಿಕೊಂಡಿರೋ ಅಳಲು, ಆಕ್ರೋಶ, ಆರೋಪ.. ಮಗಳು ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ಮದ್ಯೆ ಹೋರಾಡ್ತಿದಾಳೆ. ಆ ಬಡ ಕುಟುಂಬ ಮಗಳನ್ನ ಬದುಕಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ಪಡ್ತಿದೆ. ಕಿಮ್ಸ್ ನ ವೈದ್ಯ ದೇವರುಗಳು ಮುತುವರ್ಜಿ ವಹಿಸಿ ಚಿಕಿತ್ಸೆ ನೀಡ್ತಿದಾರೆ.
ಆದ್ರೆ ಇದೇಲ್ಲದರ ಮದ್ಯೆ ಈ ಘಟನೆಯಲ್ಲಿ ಆ ವೈದ್ಯನ ಬೇಜವಾಬ್ದಾರಿ ತಿವ್ರ ಅನುಮಾನ ಮೂಡಿಸ್ತಿದೆ. ಅಲ್ದೆ ಐದೂವರೇ ವರ್ಷದ ಪುಟ್ಟ ಬಾಲಕಿ ಅಂತಹದ್ದೊಂದು ಅನಾಹುತ ಮಾಡಿಕೊಂಡಿದ್ದಾಳೆ, ಅದನ್ನ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತಜ್ಞ ವೈದ್ಯರ ಬಳಿ ಯಾಕೆ ಕಳಿಸಲಿಲ್ಲ..?
ಅಷ್ಟಕ್ಕೂ ಪಾಲಕರು ನಡೆದ ಎಲ್ಲಾ ಘಟನೆ ಹೇಳಿರುವಾಗಲೂ ಯಾಕೆ ವೈದ್ಯರು ಬೇಜವಾಬ್ದಾರಿ ತೋರಿದ್ರು..? ಬಾಲಕಿಯ ಪ್ರಾಣದ ಜೊತೆ ಆ ವೈದ್ಯ ಚೆಲ್ಲಾಟವಾಡಿದ್ದಾದ್ರೂ ಏಕೆ..? ಆತನೊಬ್ಬ ನಂಬಿಕೆಯ ವೈದ್ಯ ಅಂತಲೇ ಪಾಲಕರು ನಂಬಿಕೆ ಇಟ್ಟಿದ್ದು ತಪ್ಪಾ..? ಅದೂ ಹೋಗಲಿ ತಾನು ಸರ್ಕಾರದ ಸೇವೆಯಲ್ಲಿರೋನು ಕನಿಷ್ಟ ಪಕ್ಷ ಸೂಕ್ತ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡಿನ ತಾಲೂಕಾಸ್ಪತ್ರೆಗಾದ್ರೂ ಕಳಿಸಬಹುದಿತ್ತಲ್ಲವೇ..? ಆ ಡಾಕ್ಟರ್ ಅಂತಹ ರಿಸ್ಕ್ ತೆಗೆದುಕೊಂಡಿದ್ದಾದ್ರೂ ಯಾಕೆ..? ಇವೇಲ್ಲ ಪ್ರಶ್ನೆಗಳನ್ನು ಸಾಮಾನ್ಯವಾಗಿ ಪ್ರಜ್ಞಾವಂತರು ಕೇಳುತ್ತಿದ್ದಾರೆ.
ನಿಜ ಅಂದ್ರೆ ಕೊರೋನಾದಂತಹ ಕಠಿಣ ಸಂದರ್ಭದಲ್ಲಿ ವೈದ್ಯರುಗಳು ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ವೈದ್ಯರುಗಳನ್ನು ದೇವರ ಸಮಾನವಾಗೇ ಜನ ಗೌರವಿಸ್ತಾರೆ. ನಾವೂ ಕೂಡ ಗೌರವಿಸ್ತಿವಿ. ಆದ್ರೆ ಇಂತಹ ಕೆಲ ಡಾಕ್ಟರುಗಳ ಬೇಜವಾಬ್ದಾರಿ ಅನ್ನೋದು ಕಪ್ಪು ಚುಕ್ಕೆ ಅಲ್ಲವೇ..?
ಏನೇ ಆಗಲಿ, ಆ ಪುಟ್ಟ ಬಾಲಕಿ ಆದಷ್ಟು ಬೇಗ ಗುಣಮುಖವಾಗಬೇಕಿದೆ. ಹೀಗಾಗಿ, ಆ ಬಾಲಕಿಯ ಮೇಲೆ ಎಲ್ಲರ ಹಾರೈಕೆಯಿರಲಿ.
ಹಾಗೇನೆ, ಆ ವೈದ್ಯ ಮಹಾಶಯನೂ ಬುದ್ದಿ ಕಲಿಯಬೇಕಿದೆ. ಮತ್ತೊಮ್ಮೆ ಇಂತಹ ಅವಾಂತರ ಮಾಡಿಕೊಳ್ಳದೇ ಜವಾಬ್ದಾರಿ ತೋರಬೇಕಿದೆ. ಅದು ಅವನ ಖಾಸಗಿ ಕ್ಲಿನಿಕ್ ನಲ್ಲೇ ಆಗಿರಲಿ, ಅಥವಾ ಸರ್ಕಾರಿ ಆಸ್ಪತ್ರೆಯಲ್ಲೇ ಆಗಿರಲಿ. ಯಾಕಂದ್ರೆ ಜೀವ ಅಮೂಲ್ಯ ಅಲ್ವಾ..?
ಅದೇನೆ ಇದ್ರೂ, ಕಟ್ಟ ಕಡೆಗೆ ನಮ್ಮೇಲ್ಲರ ನಡುವೆ ಈ ಪ್ರಶ್ನೆ ಮಾತ್ರ ಹಾಗೇ ಉಳಿದಿದೆ.
ಏನಾದ್ರೂ ಹೆಚ್ಚು ಕಡಿಮೆಯಾಗಿ ಮಗುವಿನ ಪ್ರಾಣಕ್ಕೆ ಕುತ್ತು ಬಂದ್ರೆ ಯಾರು ಹೊಣೆ..?
ಹಾಗಾಗದಿರಲಿ.. ಇದೇ ನಮ್ಮ ಹಾರೈಕೆ..
ಬೇಗ ಗುಣಮುಖವಾಗಿ ಬಾ ಕಂದಾ..!!