ಹುಲಿಹೊಂಡ ಗ್ರಾಮದಲ್ಲಿ ಮರಕ್ಕೆ ಬಡಿದ ಸಿಡಿಲು: ಮರದ ಕೆಳಗೆ ನಿಂತಿದ್ದ 9 ಜನರಿಗೆ ಗಾಯ..!

ಮುಂಡಗೋಡ- ತಾಲೂಕಿನಲ್ಲಿ ಮಳೆಯ ಅವಾಂತರಗಳು ಶುರುವಾಗಿದೆ. ಶುಕ್ರವಾರ
ತಾಲೂಕಿನ ಹುಲಿಹೊಂಡ ಗ್ರಾಮದ ಗದ್ದೆಯಲ್ಲಿ ಮರಕ್ಕೆ ಸಿಡಿಲು ಬಡಿದಿದೆ. ಪರಿಣಾಮ, ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದ 9 ಜನರಿಗೆ ಸಿಡಿಲಿನ ಶಾಖ ತಟ್ಟಿ ಚಿಕ್ಕ ಪುಟ್ಟ ಗಾಯವಾದ ಘಟನೆ ನಡೆದಿದೆ.

ಹುಲಿಹೊಂಡ ಗ್ರಾಮದ ರಾಮಪ್ಪ ಬಸಪ್ಪ ಕಬ್ಬೇರ್ ಎಂಬುವವರು ತಮ್ಮ ಜಮೀನಿನಲ್ಲಿ ನಿನ್ನೆ ಶುಕ್ರವಾರ ಗೋವಿನ ಜೋಳ ಬೀಜ ಬಿತ್ತನೆ ಮಾಡುತ್ತಿದ್ದರು. ಈ ವೇಳೆ ಮಳೆ ಬಂದ ಕಾರಣ ಮಳೆಯ ಹನಿಯಿಂದ ತಪ್ಪಿಸಿಕೊಳ್ಳಲು ಬೀಜ ಬಿತ್ತನೆಯಲ್ಲಿ ತೊಡಗಿದ್ದ 9 ಜನರು ಮರದ ಕೆಳಗೆ ಆಶ್ರಯ ಪಡೆದಿದ್ದಾರೆ. ಆದ್ರೆ ಅದೇ ವೇಳೆ ನಿಂತಿದ್ದ ಮರಕ್ಕೆ ಸಿಡಿಲು ಬಡಿದಿದೆ. ಸಿಡಿಲಿನ ರಭಸಕ್ಕೆ ಬಹುತೇಕರು ಮೂರ್ಚೆ ಹೋಗಿದ್ದಾರೆ. ಹೀಗಾಗಿ ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಇನ್ನು ಘಟನೆಯಲ್ಲಿ ಅನಿತಾ ಪರಸಪ್ಪ ಕಬ್ಬೇರ್ ಎಂಬುವವರಿಗೆ ಹೆಚ್ಚಿನ ಗಾಯವಾಗಿದ್ದು, ಸಮೀಪದ ಬಮ್ಮಿಗಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರದೊಯ್ಯಲಾಗಿತ್ತು. ಅವ್ರು ಸದ್ಯ ಚೇತರಿಸಿಕೊಂಡಿದ್ದಾರೆ.

ಮುಂಡಗೋಡ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.