ಬೀಜ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ-ಕೃಷಿ ಸಚಿವ ಬಿ.ಸಿ.ಪಾಟೀಲ್

ಹಾವೇರಿ: : ಕಳಪೆ ಬಿತ್ತನೆ ಬೀಜ ದಾಸ್ತಾನು, ಮಾರಾಟ ಹಾಗೂ ಅನಧಿಕೃತವಾಗಿ ಬಿತ್ತನೆ ಬೀಜ ಗೊಬ್ಬರ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಕುರಿತಂತೆ ರಾಜ್ಯಾದ್ಯಂತ ವಿಶೇಷ ಅಭಿಯಾನ ಕೈಗೊಂಡು ಅಕ್ರಮಕ್ಕೆ ಕಡಿವಾಣ ಹಾಕಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.

ಹಾವೇರಿ ಪ್ರವಾಸಿ ಮಂದಿರದಲ್ಲಿ ಮುಂಗಾರು ಬಿತ್ತನೆ ಬೀಜ ಹಾಗೂ ಗೊಬ್ಬರದ ದಾಸ್ತಾನು ವ್ಯವಸ್ಥೆ ಕುರಿತಂತೆ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಕಳಪೆ ಬೀಜ ಕುರಿತಂತೆ ರಾಜ್ಯ ಸರ್ಕಾರ ದಿಟ್ಟ ಕ್ರಮಕೈಗೊಳ್ಳಲಾಗಿದೆ. ಹಾವೇರಿ, ರಾಣೇಬೆನ್ನೂರ, ಕೊಪ್ಪಳ, ಬೀದರಗಳಲ್ಲಿ ಬಿಡಿ ಬಿತ್ತನೆ ಬೀಜ ಮಾರಾಟ, ಅನಧಿಕೃತ ಬಿತ್ತನೆ ಬೀಜಗಳ ದಾಸ್ತಾನು, ನಕಲಿ ಬಿತ್ತನೆ ಬೀಜ ಹಾಗೂ ನಕಲಿ ಗೊಬ್ಬರಗಳ ಪತ್ತೆಮಾಡಿ ಕಠಿಣ ಕ್ರಮಕೈಗೊಳ್ಳಲಾಗಿದೆ. ಈ ವರ್ಷವೂ ಈ ಅಭಿಯಾನ ಮುಂದುವರೆದಿದೆ ಎಂದು ಹೇಳಿದರು.

ಬಿಡಿ ಬಿತ್ತನೆ ಬೀಜಗಳ ಮಾರಾಟ, ಅಕ್ರಮ ದಾಸ್ತಾನುಗಳ ಕುರಿತಂತೆ ಮಾಹಿತಿಗಳು ಬರುತ್ತಿವೆ. ದೂರುಗಳನ್ನು ಆಧರಿಸಿ ದಾಳಿಮಾಡಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಕೆಲಸಮಾಡುತ್ತಿದೆ. ರಾಜ್ಯಾದ್ಯಂತ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಎಲ್ಲಿ ಅಕ್ರಮ ಬಿತ್ತನೆ ಬೀಜ ಹಾಗೂ ಗೊಬ್ಬರ ಮಾರಾಟ ಚಟುವಟಿಕೆಗಳು ನಡೆಯುತ್ತಿವೆಯೋ ಅಲ್ಲಿ ನಿಗಾವಹಿಸಬೇಕು.

ಒಂದೊಮ್ಮೆ ರಾಜ್ಯ ಕೃಷಿ ವಿಚಕ್ಷಣದಳ ಅಕ್ರಮಗಳ ಪತ್ತೆಮಾಡಿದಲ್ಲಿ ಯಾವ ಏರಿಯಾದಲ್ಲಿ ಪತ್ತೆಯಾಗುತ್ತದೆಯೋ ಆ ಭಾಗದ ಕೃಷಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಬೀದರ ಮತ್ತು ಬಸವಕಲ್ಯಾಣದಲ್ಲಿ ರೂ.30 ಲಕ್ಷ ಮೊತ್ತದ 420 ಬ್ಯಾಗ್ ನಕಲಿ ಡಿಎಪಿ ಗೊಬ್ಬರವನ್ನು ಸೀಜ್ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ರೂ.14 ಲಕ್ಷ ವೆಚ್ಚದ 58 ಕ್ವಿಂಟಲ್ ನಕಲಿ ಬಿತ್ತನೆ ಬೀಜ ವಶಪಡಿಸಿಕೊಳ್ಳಲಾಗಿದೆ. ರಾಣೇಬೆನ್ನೂರಿನಲ್ಲಿ ರೂ.30 ಲಕ್ಷ ಮೊತ್ತದ 15400 ಕ್ವಿಂಟಲ್ ಮೆಕ್ಕಜೋಳ ಬಿತ್ತನೆ ಜೀಜವನ್ನು ಅನಧಿಕೃತ ದಾಸ್ತಾನುಮಾಡಿದ ಮಳಿಗೆ ಮೇಲೆ ದಾಳಿಮಾಡಿ ಸೀಜ್‌ಮಾಡಲಾಗಿದೆ. ಈ ಕಾರ್ಯ ರಾಜ್ಯಾದ್ಯಂತ ಮುಂದುವರೆಸಲಾಗುವುದು ಎಂದು ಹೇಳಿದರು.

ರಾಜ್ಯದ ಮುಂಗಾರು ಬಿತ್ತನೆಗಾಗಿ ಬೀಜ ಹಾಗೂ ರಸಗೊಬ್ಬರಗಳ ಅವಶ್ಯಕತೆ , ಪೂರೈಕೆಗಳ ಕುರಿತಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆಯಾಗದಂತೆ ಎಲ್ಲ ಕ್ರಮಗಳನ್ನು ವಹಿಸಲಾಗಿದೆ.

ವಿಶೇಷವಾಗಿ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರದ ಅಭಾವ ಉಂಟಾಗದಂತೆ ಗೃಹ ಸಚಿವರೊಂದಿಗೆ ಸಭೆ ನಡೆಸಿ ಜಿಲ್ಲೆಯ ಮುಂಗಾರು ಸಿದ್ಧತೆಗಳ ಕುರಿತಂತೆ ಚರ್ಚಿಸಲಾಗಿದೆ. ಬೇಡಿಕೆಯಂತೆ ಜಿಲ್ಲೆಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಎಲ್ಲ ಕ್ರಮವಹಿಸಲಾಗುವುದು ಎಂದು ಹೇಳಿದರು.

ಯೂರಿಯಾ ಗೊಬ್ಬರದ ಹರಳು ಮಾದರಿಯ ಬದಲಿಗೆ ಲಿಕ್ವಿಡ್ ನ್ಯಾನೋ ಗೊಬ್ಬರ ಮಾರುಕಟ್ಟೆಗೆ ಬಂದಿದೆ. ಇಂದು ಹಿರೇಕೆರೂರಿನಲ್ಲಿ ಈ ಗೊಬ್ಬರವನ್ನು ಬಿಡುಗಡೆ ಮಾಡಿದ್ದೇನೆ. ಒಂದು ಚೀಲ ಗೊಬ್ಬರಕ್ಕೆ ಒಂದು ಲೀಟರ್ ನ್ಯಾನೋ ಯೂರಿಯಾ ಸಮವಾಗಿದೆ. ದರದಲ್ಲೂ ರೈತರಿಗೆ ಅನುಕೂಲವಾಗಲಿದೆ. ಬಳಕೆಯೂ ಸುಲಭವಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಡಿಎಪಿ, ಎಂ.ಒ.ಪಿ, ಕಾಂಪ್ಲೆಕ್ಸ್ ಯೂರಿಯಾ ಸೇರಿದಂತೆ ಈ ವರ್ಷ ಏಪ್ರಿಲ್‌ನಿಂದ ಮೇ ವರೆಗೆ 26,47,000 ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆ ಇದ್ದು, ಮೇ 21 ರ ಅಂತ್ಯಕ್ಕೆ 7,97,662 ಮೆಟ್ರಿಕ್ ಟನ್ ಬೇಡಿಕೆ ಇದೆ. ಜೂನ್ 3 ರವರೆಗೆ 64,1,300 ಮೆಟ್ರಿಕ್ ಪೂರೈಕೆಯಾಗಿದೆ. 12,56,540 ಮೆಟ್ರಿಕ್ ಟನ್ ದಾಸ್ತಾನಿದೆ ಎಂದು ತಿಳಿಸಿದರು.

ಈ ವೇಳೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ , ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷರು ಹಾಗೂ ಹಾವೇರಿ ಕ್ಷೇತ್ರದ ಶಾಸಕರಾದ ನೆಹರು ಓಲೇಕಾರ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಉಪಸ್ಥಿತರಿದ್ದರು.

error: Content is protected !!