ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರ ಸಂಕಷ್ಟ ತಂದಿದೆ. ನಿತ್ಯ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ರಾಜ್ಯದ ಬಹುತೇಕ ಗ್ರಾಮೀಣ ಭಾಗಕ್ಕೂ ಸೋಂಕು ಹೊಕ್ಕು ಹಿಂಡಿ ಹಿಪ್ಪೆ ಮಾಡಿದೆ. ಹೀಗಾಗಿ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 5 ಕ್ಕಿಂತ ಕಡಿಮೆ ಹಾಗೂ ಸಾವಿನ ಪ್ರಮಾಣ ಶೇಕಡಾ 1ಕ್ಕಿಂತ ಕಡಿಮೆಯಾಗುವರೆಗೂ ಲಾಕ್ ಡೌನ್ ಸೂಕ್ತ ಅಂತಾ ತಜ್ಞರ ಸಮಿತಿ ಸಲಹೆ ನೀಡಿದೆ.
ಸೋಮವಾರ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ 13.57 ರಷ್ಟಿದ್ದರೇ, ಮರಣ ಪ್ರಮಾಣ ಶೇಕಡಾ 2.47 ರಷ್ಟಿದೆ. ಈ ಪ್ರಮಾಣ ಶೇಕಡಾ 5 ಮತ್ತು 1 ಕ್ಕಿಂತ ಕಡಿಮೆ ಬರುವರೆಗೂ ಲಾಕ್ ಡೌನ್ ಮುಂದುವರಿಸುವುದು ಸೂಕ್ತ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ಹೇಳಿದೆ.
14 ತಜ್ಞರ ಸಮಿತಿ ರಾಜ್ಯದ ಪಾಸಿಟಿವಿಟಿ ಪ್ರಮಾಣ, ಸಾವು-ನೋವಿನ ಸಂಖ್ಯೆ, ಸಧ್ಯದ ಸ್ಥಿತಿ,ಲಾಕ್ ಡೌನ್ ಬಳಿಕ ಆದ ಬದಲಾವಣೆ ಎಲ್ಲವನ್ನು ಪರಿಶೀಲಿಸಿ ವರದಿ ಸಲ್ಲಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತಜ್ಞರು, ಯಾವ ರೀತಿ ಲಾಕ್ ಡೌನ್ ಮುಂದುವರಿಸಬೇಕೆಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಜೂನ್ 7 ಕ್ಕೆ ಲಾಕ್ ಡೌನ್ ಕೊನೆಗೊಳ್ಳುವ ವೇಳೆಗೆ ಪಾಸಿಟಿವಿಟಿ ರೇಟ್ ಶೇಕಡಾ 5 ಕ್ಕಿಂತ ಕಡಿಮೆಯಾಗುವುದು ಅನುಮಾನ. ಹೀಗಾಗಿ ಸರ್ಕಾರ ಇನ್ನು ಕನಿಷ್ಠ 2 ವಾರಗಳ ಕಾಲ ಲಾಕ್ ಡೌನ್ ಮುಂದುವರಿಸುವುದು ಸೂಕ್ತ ಎಂದಿದೆ.
ಹೀಗಾಗಿ ಲಾಕ್ ಡೌನ್ ಭವಿಷ್ಯ ಸದ್ಯ ಸಿಎಂ ಅಂಗಳದಲ್ಲಿದ್ದು, ಜೂನ್ 6 ರಂದು ಸಭೆ ನಡೆಸಿ ಸಿಎಂ ಅಂತಿಮ ತೀರ್ಮಾನ ಪ್ರಕಟಿಸೋ ಸಾಧ್ಯತೆಯಿದೆ.