ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಅಬ್ಬರ ಜೋರಾಗಿದೆ. ಈ ನಡುವಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಾ, ಇಲ್ಲಾ ರದ್ದಾಗುತ್ತಾ ಅನ್ನೋ ಗೊಂದಲ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿಂದು ಸುಪ್ರೀಂ ಕೋರ್ಟ್ ಪರೀಕ್ಷೆಯ ಭವಿಷ್ಯ ನಿರ್ಧಾರ ಮಾಡಲಿದೆ.
ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬೇಕೇ ಬೇಡವೇ ಅನ್ನೋ ಕುರಿತು ಕೇಂದ್ರ ಸರಕಾರ ಕಳೆದ ವಾರ ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಸಭೆ ನಡೆಯಿತು. ಸಭೆಯಲ್ಲಿ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರು ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಶಿಕ್ಷಣ ಇಲಾಖೆ ಜೂನ್ ತಿಂಗಳಿನಲ್ಲಿಯೇ ಸಿಬಿಎಸ್ಇ ಹಾಗೂ ಐಸಿಎಸ್ಇ ಸಿಲೆಬಸ್ ನ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದಾಗಿ ಘೋಷಣೆಯನ್ನು ಮಾಡಿದೆ.
ದೇಶದಲ್ಲಿ ಕೊರೊನಾ ವೈರಸ್ ಸೋಂಕು ಮಿತಿಮೀರಿರುವ ಹೊತ್ತಲ್ಲೇ ಪರೀಕ್ಷೆ ನಡೆಸುವುದಕ್ಕೆ ಕೇಂದ್ರ ಸರಕಾರ ಮುಂದಾಗುತ್ತಿದ್ದಂತೆಯೇ ವಕೀಲರಾದ ಮಮತಾ ಶರ್ಮಾ ಎಂಬವರು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಡೆಸಿರುವ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಇಂದು ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಸಾಧ್ಯತೆಯಿದೆ.
ಒಂದೊಮ್ಮೆ ಸುಪ್ರೀಂ ಕೋರ್ಟ್ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ರೆ ನಾಳೆ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ಜೂನ್ ಅಂತ್ಯದಲ್ಲಿ ಕೇಂದ್ರ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಲಿದೆ. ಒಂದೊಮ್ಮೆ ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದಾಗುತ್ತಾ ಅನ್ನೋ ಕುತೂಹಲವೂ ಮೂಡಿದಿದೆ. ಒಟ್ಟಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಒಂದೆಡೆ ಭಯ, ಇನ್ನೊಂದೆಡೆ ಗೊಂದಲಕ್ಕೆ ಸಿಲುಕಿದ್ದಾರೆ.