ಕಾರವಾರ- ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇನ್ನಿಲ್ಲದ ಅಕ್ರಮಗಳು ನಡಿಯತ್ತೆ.. ಹಣ, ಹೆಂಡ, ಸೀರೆ ಅದು ಇದು ಅಂತಾ ಆಮೀಷಗಳನ್ನ ಒಡ್ಡಿ ಮತದಾರರನ್ನ ಸೆಳೆಯುವ ಅಡ್ಡದಾರಿಗಳನ್ನೂ ಅಭ್ಯರ್ಥಿಗಳು ಹಿಡಿಯುತ್ತಾರೆ.. ಸತ್ಯ ಅಂದ್ರೆ ಕೆಲವು ಹಳ್ಳಿಗಳಲ್ಲಿ ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆಯಾಗಲು ಹರಾಜು ನಡೆಸುವ ಹೀನ ಸಂಸ್ಕೃತಿಯೂ ನಡೆಯುತ್ತಿದೆ.. ಇಷ್ಟಿಷ್ಟು ಹಣ ಕೊಟ್ರೆ ಮುಗೀತು, ಆತ ಚುನಾವಣೆಗೆ ಸ್ಪರ್ಧಿಸದೇ ಅವಿರೋಧವಾಗಿ ಆಯ್ಕೆಯಾಗಿ ಬಿಡುತ್ತಾನೆ.. ಅಲ್ಲಿ ಯಾರ ಹತ್ರ ಹಣ ಇದೆಯೋ ಅವನೇ ಸದಸ್ಯನಾಗಿ ಬಿಡ್ತಾನೆ.. ಅಂತಹ ಹಣವನ್ನು ದೇವಸ್ಥಾನಗಳಿಗೋ ಅಥವಾ ಇನ್ನಿತರ ಗ್ರಾಮದ ಸಂಸ್ಥೆಗಳಿಗೋ ಉಪಯೋಗಿಸಿಕೊಳ್ಳುವ ವ್ಯವಸ್ಥೆಯನ್ನ ಕೆಲವು ಗ್ರಾಮಗಳಲ್ಲಿ ಮಾಡಿಕೊಳ್ಳಲಾಗಿರತ್ತೆ.. ಹೀಗಾಗಿ ಇಂತಹ ಪ್ರಜಾತಂತ್ರ ವಿರೋಧಿ ಪದ್ದತಿಗೆ ಕಡಿವಾಣ ಹಾಕಲು ರಾಜ್ಯ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ..

ಹಾಗೆ ನಿಯಮಗಳ ವಿರುದ್ಧವಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹರಾಜು ಹಾಕಿದರೆ ಅಂಥವರನ್ನು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಗಡಿಪಾರು ಮಾಡಲು ಚುನಾವಣಾ ಆಯೋಗ ಮುಂದಾಗಿದೆ.

ಚುನಾವಣಾ ಆಯೋಗದ ಕಟ್ಟುನಿಟ್ಟಿನ ಎಚ್ಚರಿಕೆಯ ನಡುವೆಯೂ ರಾಜ್ಯದ ನಾನಾ ಕಡೆ ಗ್ರಾಪಂ ಅಭ್ಯರ್ಥಿಗಳನ್ನು ಬಹಿರಂಗವಾಗಿಯೇ ಹರಾಜು ಹಾಕುತ್ತಿರುವುದು ಮರುಕಳುಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು, ಹರಾಜು ಹಾಕುವವರು ಹಾಗೂ ಹರಾಜಿನ ಮೂಲಕ ಆಯ್ಕೆಯಾಗಿರುವವರನ್ನು ಗಡಿಪಾರು ಮಾಡಲು ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.

ರಾಜ್ಯದ ನಾನಾ ಕಡೆ ಸುಮಾರು 5 ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ವರೆಗೂ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳನ್ನು ಸಂತೆಯಲ್ಲಿ ಕುರಿ, ಕೋಳಿ, ಎತ್ತುಗಳಂತೆ ರಾಜಾರೋಷವಾಗಿ ಹರಾಜು ಹಾಕುತ್ತಿದ್ದಾರೆ.

ಅಭ್ಯರ್ಥಿಗಳು ಮತ್ತು ಗ್ರಾಮಸ್ಥರ ನಡುವಿನ ಒಡಂಬಡಿಕೆ, ಬೆದರಿಕೆ, ಆಮಿಷಗಳಿಂದಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗ್ರಾಮಸ್ಥರು, ದೇವಸ್ಥಾನಗಳು, ಶಾಲೆಗಳು, ಕುಡಿಯುವ ನೀರಿನ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ಈ ರೀತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಮತ್ತೊಬ್ಬ ಅಧಿಕಾರಿ. ಅಂತಹ ಹರಾಜಿಗೆ ಸಾಕ್ಷಿಯಾದರೆ, ಅವರು ತಮ್ಮ ಪಂಚಾಯಿತಿ ರಿಟರ್ನಿಂಗ್ ಆಫೀಸರ್ ಅಥವಾ ತಹಸಿಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಬೇಕು. ರಾಜ್ಯದಲ್ಲಿ ಇಲ್ಲಿಯವರೆಗೆ ಕನಿಷ್ಠ 25 ಘಟನೆಗಳು ವರದಿಯಾಗಿವೆ. ಅವುಗಳಲ್ಲಿ ಹೆಚ್ಚಿನವು ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಕಲಬುರ್ಗಿ, ಬೀದರ್, ಮಂಡ್ಯ, ಬಳ್ಳಾರಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನಡೆದಿವೆ ಎಂದಿದ್ದಾರೆ.

ಚುನಾವಣೆಗೆ ಮೊದಲೇ ಗ್ರಾಮ ಪಂಚಾಯಿತಿ ಚುನಾವಣೆ ಸೀಟುಗಳು ಹರಾಜಾಗಿವೆ. ಆದರೆ ಇಂತಹ ಅಭ್ಯರ್ಥಿಗಳನ್ನು ಪಂಚಾಯಿತಿ ಸರಹದ್ದಿನಿಂದ ಗಡಿಪಾರು ಮಾಡಿ ಚುನಾವಣೆ ಮುಗಿದ ನಂತರ ಅನರ್ಹಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಹಣ ಕೊಟ್ಟು ಅವಿರೋಧವಾಗಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಆಯೋಗ ಪ್ರಸ್ತಾಪ ಮಾಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಕಾಯ್ದೆ ಹಾಗೂ ಜನ ಪ್ರಾತಿನಿಧ್ಯ ಕಾಯ್ದೆ ಮೂಲಕ ಕಾನೂನು ಉಲ್ಲಂಘನೆ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

error: Content is protected !!