ಕಾರವಾರ- ಗ್ರಾಮ ಪಂಚಾಯತಿ ಚುನಾವಣೆಯಲ್ಲಿನ ಅವಿರೋಧ ಆಯ್ಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಅಂತಾ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ..
ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ ಮತ್ತು ಭಟ್ಕಳದಲ್ಲಿ ಮುಗಿದಿದೆ. ಇನ್ನು, ಎರಡನೇ ಹಂತದಲ್ಲಿ ಸಿದ್ದಾಪುರ, ಸಿರಸಿ, ಮುಂಡಗೊಡ, ಯಲ್ಲಾಪುರ, ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾಗಳಲ್ಲಿ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮವನ್ನು ಕೈಗೊಂಡಿದೆ ಅಂತಾ ಉತ್ತರ ಕನ್ನಡ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಅವಿರೋಧ ಆಯ್ಕೆ; ಹದ್ದಿನ ಕಣ್ಣು
ಇನ್ನು, ನಾಮಪತ್ರ ಪರಿಶೀಲನೆ ನಂತರ ಒಂದು ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾದಲ್ಲಿ ಚುನಾವಣೆಯ ಎಲ್ಲ ಪ್ರಕ್ರಿಯೆಗಳ ಮುಗಿದ ನಂತರ ಅವಿರೋಧ ಆಯ್ಕೆ ಮಾಡಲಾಗುತ್ತದೆ. ಆದರೆ ಚುನಾವಣಾ ಆಯೋಗವು ರಾಜ್ಯದ ಕೆಲವು ಭಾಗಗಳಲ್ಲಿ ಅವಿರೋಧ ಆಯ್ಕೆ ಸಂಬಂಧ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಮತ್ತು ಜಿಲ್ಲಾಧಿಕಾರಿಗಳಿಗೆ ಸರಿಯಾಗಿ ಪರಿಶೀಲಿಸಲು ಸೂಚಿಸಿದೆ.
ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ನಾಮಪತ್ರ ಪರಿಶೀಲನೆ ನಂತರ ಒಂದು ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಕೆಯಾದಲ್ಲಿ ಚುನಾವಣಾ ಎಲ್ಲಾ ಪ್ರಕ್ರಿಯೆಗಳ ನಂತರ ಅವಿರೋಧ ಆಯ್ಕೆ ಮಾಡಲಾಗುತ್ತದೆ.
ಆದರೆ ಅವಿರೋಧ ಆಯ್ಕೆ ಸಂಬಂಧ ಯಾರಾದರೂ ಆಮಿಷ ಒಡ್ಡುವುದು, ನಿಯಮ ಬಾಹಿರವಾದ, ಅಕ್ರಮ ವ್ಯವಹಾರವನ್ನು ಯಾರಾದರೂ ನಡೆಸುವುದು ಕಂಡು ಬಂದರೆ ಜಿಲ್ಲಾ ಚುನಾವಣಾ ಅಧಿಕಾಯಾಗಿ ಅಂತಹವರ ಮೇಲೆ ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಮಾಡಲಾಗುವುದು. ಈ ಬಗ್ಗೆ ಪೋಲಿಸ್ ಇಲಾಖೆಗೆ ಮತ್ತು ತಾಲ್ಲೂಕಿನ ಎಲ್ಲಾ ಮಾದರಿ ನೀತಿ ಸಂಹಿತೆ ತಂಡಗಳು ಈ ಬಗ್ಗೆ ತೀವ್ರ ನಿಗಾ ಇಡಲು ಸೂಚನೆ ನೀಡಲಾಗಿದೆ ಅಂತಾ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.