ಮುಂಡಗೋಡ- ಸದ್ಯ ಗ್ರಾಮ ಪಂಚಾಯತಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ.. ಹೀಗಾಗಿ ತಾಲೂಕಿನಾಧ್ಯಂತ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ.. ಅಧಿಕೃತ ಪಕ್ಷದ ಚಿನ್ಹೆಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸದೇ ಇದ್ದರೂ, ಆಯಾ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸೋದಂತೂ ಸತ್ಯ..
ಅದ್ರಲ್ಲೂ ಮುಂಡಗೋಡ ತಾಲೂಕಿನ ಅಷ್ಟೂ ಗ್ರಾಮ ಪಂಚಾಯತಿಗಳಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲೇ ಬೇಕು, ಸಂಪೂರ್ಣ ಗ್ರಾಮ ಪಂಚಾಯತಿಗಳು ಕೇಸರಿಮಯವಾಗಲೇಬೇಕು ಅನ್ನೋ ಮಹತ್ವಾಕಾಂಕ್ಷೆಯಲ್ಲಿರೋ ಹೆಬ್ಬಾರ್ ಪಡೆಗೆ ತಾಲೂಕಿನಲ್ಲಿ ಒಂದಿಷ್ಟು ಪಕ್ಷದ ತಳಮಟ್ಟದ ಗೊಂದಲಗಳು ತೊಡರಾಗೋದು ಗ್ಯಾರಂಟಿ..
ಮೂಲ- ವಲಸಿಗರ ಕಿತ್ತಾಟ
ಅಸಲು, ಮುಂಡಗೋಡ ತಾಲೂಕಿನ ಬಿಜೆಪಿಯಲ್ಲಿ ಮೂಲ ವರ್ಸೆಸ್ ವಲಸಿಗರ ಕಿತ್ತಾಟ ಒಳಗೊಳಗೆ ಕುದಿಯುತ್ತಿರೋದು ಬಹಿರಂಗ ಸತ್ಯ..
ಅದ್ರಲ್ಲೂ ಕೆಲವು ಹಳ್ಳಿಗಳಲ್ಲಿ ತಲತಲಾಂತರದಿಂದ ಹಾವು ಮುಂಗುಸಿಯಂತಿದ್ದ ಕಾಂಗ್ರೆಸ್ ಬಿಜೆಪಿ ತಳಮಟ್ಟದ ಕಾರ್ಯಕರ್ತರು ಅಂತಹದ್ದೊಂದು ಜಿದ್ದನ್ನು ಇವತ್ತಿಗೂ ಉಳಿಸಿಕೊಂಡೇ ಬಂದಿದ್ದಾರೆ.. ಅಂತದ್ದರಲ್ಲಿ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ನಿಂದ ಬಿಜೆಪಿಗೆ ಏಕಾಏಕಿ ಜಂಪ್ ಆದಮೇಲೂ ಅವರನ್ನೇ ನಂಬಿದ್ದ “ಕೈ” ಕಾರ್ಯಕರ್ತರು ಸಂಪೂರ್ಣವಾಗಿ ಕಾಂಗ್ರೆಸ್ ಮನಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ.. ಅಲ್ದೆ, ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಇನ್ನೂ ಬಿಜೆಪಿಯ ಕಾರ್ಯಕರ್ತರೊಂದಿಗೆ ಮೈಚಳಿ ಬಿಟ್ಟು ಬೆರೆಯುವ ಸಂದರ್ಭಗಳೇ ಕೂಡಿಬಂದಿಲ್ಲ.. ಹೀಗಿರುವಾಗ, ಅದು ಹೇಗೆ ತಾನೇ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಲು ಸಾಧ್ಯ..? ಇಂತಹದ್ದೊಂದು ಪ್ರಶ್ನೆ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ನಿತ್ಯವೂ ಚರ್ಚೆ ಆಗುತ್ತಲೇ ಇದೆ..
ಅಭ್ಯರ್ಥಿಗಳ ಆಯ್ಕೆಯೇ ಸವಾಲು
ಇನ್ನು ಮುಂಡಗೋಡ ತಾಲೂಕಿನ ಕೆಲ ಹಳ್ಳಿಗಳಲ್ಲಿ ಬಿಜೆಪಿಯಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ಕಣಕ್ಕಿಳಿಸೋದೇ ಸವಾಲಿನ ಕೆಲಸವಾಗಿದೆ.. ಯಾಕಂದ್ರೆ, ಇಲ್ಲಿ ಕಳೆದ ಎರಡು ವರ್ಷದಿಂದ, ಅಂದ್ರೆ ಇನ್ನೇನು ಗ್ರಾಮ ಪಂಚಾಯತಿ ಚುನಾವಣೆಗಳು ಹತ್ತಿರವಾಯ್ತು ಅನ್ನೋವಾಗ್ಲೇ ಸಾಕಷ್ಟು ಹುರಿಯಾಳುಗಳು ಈ ಸಾರಿ ನಾನೂ ಒಂದು ಕೈ ನೋಡಿಯೇ ಬಿಡ್ತಿನಿ ಅಂತಾ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಎಲ್ಲಾ ಗ್ರೌಂಡ್ ವರ್ಕ್ ಮಾಡುತ್ತಲೇ ಬಂದಿದ್ರು.. ಆದ್ರೆ, ಅಂತವರ ಆಸೆಗಳಿಗೆ ಬಹುತೇಕ ಈ ಹಳಬರು- ಹೊಸಬರ ನೆಲೆಯಲ್ಲಿ ಪಕ್ಷದಲ್ಲಿ ಅವಕಾಶ ಸಿಗೋದೇ ಒಂಥರಾ ಕಷ್ಟ ಕಷ್ಟ ಎನ್ನುವಂತಾಗಿದೆ.. ಕಾರಣ, ಹಳಬರು ಹೊಸಬರ ನಡುವೆ ನಿಮಗಿಷ್ಟು, ನಮಗಿಷ್ಟು ಅನ್ನೋ ಹೊಂದಾಣಿಕೆ ಅನಿವಾರ್ಯವಾಗಿದೆ.. ಹೀಗಾಗಿ, ಅವಕಾಶವಂಚಿತರ ಸಿಟ್ಟು, ಹತಾಸೆ ಬಿಜೆಪಿಗೆ ಮುಳುವಾಗತ್ತಾ..? ಕಾದು ನೋಡಬೇಕಿದೆ..
ವಿ.ಎಸ್.ಪಾಟೀಲರದ್ದೇ ಒಂದು ಪಡೆ..
ನಿಜ ಅಂದ್ರೆ, ಇಡೀ ಯಲ್ಲಾಪುರ ಮತಕ್ಷೇತ್ರದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ರಿಗೆ ತನ್ನದೇ ಆದ ಒಂದು ಪಡೆ ಇದ್ದೇ ಇದೆ.. ಹೀಗಾಗಿ ಅಂತಹ ದೂಸರಾ ಪಡೆಯನ್ನ ಪಾಟೀಲರು, ಮೂಲ ವಲಸಿಗರ ಹೆಸರಲ್ಲಿ ಗಟ್ಟಿಗೊಳಿಸಿಕೊಳ್ಳುವ ಅನಿವಾರ್ಯವೂ ಇದೆ.. ಅಸಲಿಗೆ, ಇವತ್ತಿಗೂ ವಿ.ಎಸ್.ಪಾಟೀಲರಿಗೆ ಮುಂಡಗೋಡ ತಾಲೂಕಿನ ಕೆಲವು ಗ್ರಾಮಗಳಲ್ಲಿ ತಮ್ಮದೇ ಆದ ಒಂದು ಟೀಂ ಬೆನ್ನಿಗಿದೆ.. ಹೀಗಾಗಿ ಈ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತನ್ನ ಬೆನ್ನಿಗಿದ್ದವರಿಗೆ ಹೇಗಾದ್ರೂ ಸರಿ ಒಂದು ಚಾನ್ಸ್ ಕೊಡಿಸಲೇ ಬೇಕು ಅನ್ನೋ ಹಠವೂ ಇವ್ರಿಗೆ ಇದೆ.. ಈ ಕಾರಣಕ್ಕಾಗೇ ಹೆಬ್ಬಾರ್ ಸಾಹೇಬ್ರು ತಳಮಟ್ಟದ ರಾಜಕೀಯ ಮಜಲುಗಳನ್ನ ಅಳೆದು ತೂಗಿ ನಿರ್ಧರಿಸಬೇಕಾದ ಅವಶ್ಯಕತೆಯಿದೆ..
ಕೈ ಪಡೆಯ ಹಕೀಕತ್ತೇ ಬೇರೆ..
ಅಂದಹಾಗೆ, ಮುಂಡಗೋಡ ತಾಲೂಕಿನಲ್ಲಿ ಕೈ ಪಡೆಯ ಲೆಕ್ಕಾಚಾರಗಳು ಈ ಬಾರಿ ಬೇರೇಯದ್ದೇ ರೀತಿಯಲ್ಲಿದೆ.. ಯಾವಾಗ, ಮುಂಡಗೋಡ ಪಾಲಿನ ಕಾಂಗ್ರೆಸ್ ಕೋಟೆಯ ಮಹಾರಾಜ ಶಿವರಾಮ್ ಹೆಬ್ಬಾರ್ ಬಿಜೆಪಿಗೆ ಸೇರ್ಪಡೆಗೊಂಡ್ರೊ ಅವತ್ತೇ ಇಲ್ಲಿನ ಕಾಂಗ್ರೆಸ್ ಒಂಥರಾ ಹಾಳೂರಿನಂತಾಗಿದೆ..ನಿಜ ಅಂದ್ರೆ ಈಗಲೂ ತಾಲೂಕಿನ ಕಾಂಗ್ರೆಸ್ ಪಡಸಾಲೆಯಲ್ಲಿ ಗಟ್ಟಿ ನಾಯಕರಿದ್ದಾರೆ.. ಎಚ್.ಎಂ.ನಾಯ್ಕ, ಕೃಷ್ಣ ಹಿರೇಹಳ್ಳಿ ಸೇರಿದಂತೆ ಹಲವರು ಪಕ್ಷದ ನಿಷ್ಟೆಯಲ್ಲಿ ಗಟ್ಟಿಗೊಂಡಿದ್ದಾರೆ.. ಹೀಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಅಭ್ಯರ್ಥಿಗಳ ಆಯ್ಕೆ ಬಹುತೇಕ ನಿರಾಯಾಸವಾಗಿದೆ.. ಬಿಜೆಪಿಯೊಳಗಿನ ಹಳಬರು – ಹೊಸಬರ ಕಿತ್ತಾಟದಲ್ಲಿಯೇ ಲಾಭ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್, ತುದಿಗಾಲಲ್ಲಿ ನಿಂತು ಕಾಯ್ತಿದೆ..
ಒಟ್ನಲ್ಲಿ, ಗ್ರಾಮ ಪಂಚಾಯತಿ ಚುನಾವಣೆ ಅನ್ನೋದು ಮುಂಡಗೋಡ ಬಿಜೆಪಿ ಪಾಳಯಕ್ಕೆ ಪ್ರತಿಷ್ಠೆಯ ಪ್ರಶ್ನೆಯಾದ್ರೆ, ಕಾಂಗ್ರೆಸ್ ಗೆ ಮತ್ತೆ ಆಕ್ಸಿಜನ್ ನೀಡಬಹುದಾ ಅನ್ನೋದೇ ಕುತೂಹಲಕ್ಕೆ ಕಾರಣವಾಗಿದೆ..ಇನ್ನೇನು ಕೆಲವೇ ದಿನ ಕಾಯಬೇಕಷ್ಟೇ..